ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರುಷಿ ಹತ್ಯೆ: ರಾಜೇಶ್ ಮನವಿ ವಜಾ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ಗಾಜಿಯಾಬಾದ್ (ಪಿಟಿಐ): ತಮ್ಮ ಪುತ್ರಿ ಆರುಷಿ ಹತ್ಯೆ ಪ್ರಕರಣವನ್ನು ಮುಕ್ತಾಯಗೊಳಿಸಿದ ವರದಿಯೊಂದಿಗೆ  ಸಿಬಿಐ ಸಲ್ಲಿಸಿದ ದಾಖಲೆಗಳ ಪ್ರತಿಗಳನ್ನು ನೀಡಬೇಕೆಂದು ಕೋರಿ ರಾಜೇಶ್ ತಲ್ವಾರ್ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ತಳ್ಳಿ ಹಾಕಿದೆ.

ಈ ಪ್ರಕರಣದ ಕುರಿತು ಮುಂದಿನ ವಿಚಾರಣೆಯನ್ನು ಈ ತಿಂಗಳ 25ರಂದು ನಡೆಸುವುದಾಗಿ ಕೋರ್ಟ್ ಹೇಳಿದೆ.ಇದಕ್ಕೂ ಮೊದಲು ಕೋರ್ಟ್‌ನಲ್ಲಿ ಸಿಬಿಐ ಪರ ವಕೀಲ ಮತ್ತು ಹತ್ಯೆಗೊಳಗಾದ ಯುವತಿ ಆರುಷಿ ತಲ್ವಾರ್ ಪೋಷಕರ ಪರ ವಕೀಲರ ನಡುವೆ  ತೀವ್ರ ವಾಗ್ವಾದ ನಡೆಯಿತು. ತನಿಖೆ ಮುಕ್ತಾಯಗೊಳಿಸಿದ ವರದಿಯೊಂದಿಗೆ ಸಲ್ಲಿಸಿದ ದಾಖಲೆಗಳ ಪ್ರತಿಗಳನ್ನು ನೀಡಬೇಕೆಂಬ ಆರುಷಿ ಪೋಷಕರ ಮನವಿಯನ್ನು ಸಿಬಿಐ ತಿರಸ್ಕರಿಸಿದ್ದು ಮಾತಿನ ಚಕಮಕಿಗೆ ಕಾರಣವಾಯಿತು. ಆಗ ವಿಶೇಷ ಸಿಬಿಐ ನ್ಯಾಯಾಧೀಶರಾದ ಪ್ರೀತಿ ಸಿಂಗ್ ವಿಚಾರಣೆಯನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

‘ಈ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲ. ಉತ್ತರ ಪ್ರದೇಶ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದ್ದರಿಂದ ನ್ಯಾಯಾಲಯ ಬಿಡುಗಡೆ ಅಥವಾ ಖುಲಾಸೆ ಮಾಡುವವರೆಗೆ ತಾಂತ್ರಿಕವಾಗಿ ಮತ್ತು ಕಾನೂನು ಪ್ರಕಾರ ಆತ ಆರೋಪಿ’ ಎಂದು ಸಿಬಿಐ ಪರ ವಕೀಲ ಆರ್.ಕೆ. ಸೈನಿ ಹೇಳಿದರು.

ತಲ್ವಾರ್ ಅವರು ಹತ್ಯೆಗೀಡಾಗಿದ್ದ ತಮ್ಮ ಮನೆಗೆಲಸದವ ಹೇಮರಾಜ್ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹೇಳಿದರು.ತನಿಖೆ ಮುಕ್ತಾಯಗೊಳಿಸಿ ಸಿಬಿಐ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ನೀಡುವಂತೆ ಕೋರಿ ತಲ್ವಾರ್ ದಂಪತಿ ಜನವರಿ 11ರಂದು ಅರ್ಜಿ ಸಲ್ಲಿಸಿದ್ದರು. ತಲ್ವಾರ್ ಪರ ವಕೀಲ ಸತೀಶ್ ಅವರು ತಮ್ಮ ಕಕ್ಷಿದಾರನನ್ನು ಆರೋಪಿ ಎಂದು ಕರೆಯುವುದನ್ನು ಆಕ್ಷೇಪಿಸಿದರು.

‘ಈ ಹಂತದಲ್ಲಿ ನನ್ನ ಕಕ್ಷಿದಾರರನ್ನು ಆರೋಪಿ ಎಂದು ಕರೆಯುವುದು ಸರಿಯಲ್ಲ. ಈ ಹಂತದಲ್ಲಿ ಯಾರೂ ಆರೋಪಿಗಳಲ್ಲ ಎಂದು ಕೋರ್ಟ್ ಕಳೆದ ಸಲ ಹೇಳಿತ್ತು. ಮೊದಲ ಮಾಹಿತಿದಾರರಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಪ್ರಕರಣದ ದಿನಚರಿಯ ಮಾಹಿತಿಯನ್ನು ನಾವು ಕೇಳುತ್ತಿಲ್ಲ’ ಎಂದರು.

‘ನಮಗೆ ಬೇಕಿರುವುದು ಸಿಎಫ್‌ಎಸ್‌ಎಲ್‌ನಂತಹ ವರದಿಗಳು. ಅದರಿಂದ ನಾನು ನ್ಯಾಯಾಲಯಕ್ಕೆ ನೆರವು ನೀಡಲು ಸಾಧ್ಯ ಆಗಬಹುದು. ಅದು ಅಂತಹ ದೊಡ್ಡ ಜೋಡಿ ಕೊಲೆ. ಪ್ರಕರಣವನ್ನು ಹೇಗೆ ತಾನೆ ಮುಕ್ತಾಯಗೊಳಿಸಲು ಸಾಧ್ಯ. ಪ್ರಕರಣ ಕೊನೆಗೊಳ್ಳುವುದು ನನಗೆ ಬೇಕಿಲ್ಲ. ನ್ಯಾಯದ ದೃಷ್ಟಿಯಿಂದ ನಾನು ದಾಖಲೆಗಳನ್ನು ಕೇಳುತ್ತಿದ್ದೇನೆ’ ಎಂದು ಹೇಳಿದರು.

ಅಲ್ಲದೆ ಸಿಬಿಐ ಅಸಹಕಾರ ನಡವಳಿಕೆ ತೋರುತ್ತಿದೆ ಎಂದು ಆರೋಪಿಸಿದರು. ಈ ಮಧ್ಯೆ, ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಮೂವರು ಮನೆಕೆಲಸದವರ ಪರ ವಕೀಲ ಫತೇಚಂದ್ ಶರ್ಮಾ ಸಿಬಿಐ ಅನ್ನು ಬೆಂಬಲಿಸಿದರು. ರಾಜೇಶ್ ಅವರೂ  ಆರೋಪಿ ಆಗಿದ್ದಾರೆ. ಹಾಗಾಗಿ ಯಾವುದೇ ದಾಖಲೆಗಳನ್ನು ನೀಡಬಾರದು ಎಂದರು.‘ಮತ್ತಷ್ಟು ತನಿಖೆಗೆ ಕೋರ್ಟ್ ಆದೇಶ ನೀಡಬೇಕು ಮತ್ತು ದೋಷಾರೋಪಣಾ ಪಟ್ಟಿ ಸಲ್ಲಿಸಲು ಸಿಬಿಐಗೆ ಸೂಚಿಸಬೇಕು’ ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT