ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೆಸ್ಸೆಸ್, ಶ್ರೀರಾಮಸೇನೆಗೆ ಪಾಕ್ ಮೇಲೆ ಪ್ರೀತಿ

Last Updated 24 ಜನವರಿ 2012, 8:15 IST
ಅಕ್ಷರ ಗಾತ್ರ

ತುಮಕೂರು : ಹಿಂದೂಸ್ತಾನದ ಪವಿತ್ರ ಭೂಮಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿ ಸುವಷ್ಟರ ಮಟ್ಟಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಆರ್‌ಎಸ್‌ಎಸ್, ಶ್ರೀರಾಮಸೇನೆಯವರು ಹಿಂದೂಸ್ತಾನ ತೊರೆದು ಪಾಕಿಸ್ತಾನಕ್ಕೆ ಹೋಗಲಿ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಿಜ್ವಾನ್ ಹರ್ಷದ್ ಕಿಡಿಕಾರಿದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕ ಸೋಮವಾರ ನಗರದಲ್ಲಿ ಆಯೋಜಿಸಿದ್ದ `ಯುವ ಸಂಘರ್ಷ~ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಾಟ ಪ್ರಕರಣವನ್ನು ಕೇವಲ ಒಂದು ಸರಳ ಎಫ್‌ಐಆರ್ ದಾಖಲಿಸಿ ಈ ಸರ್ಕಾರ ಕೈಬಿಟ್ಟಿದೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ರಾಮ, ದೇಶ ಪ್ರೇಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರ, ಜನರ ನಡುವೆ ಕೋಮುಭಾವನೆ ಬಿತ್ತುವ ಮೂಲಕ ದ್ವೇಷದ ಸಮಾಜ ಸೃಷ್ಟಿಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ. ಸುಳ್ಳು, ವಿಶ್ವಾಸಘಾತುಕ ರಾಜಕಾರಣ ಮಾಡುತಿರುವ ಬಿಜೆಪಿ ಸರ್ಕಾರದ ವಿರುದ್ಧ ಯುವ ಸಮೂಹ ಬಂಡೇಳಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ, ಇದು ಇದೇ ಕೊನೆ ಸಲವೂ ಆಗಬೇಕು. ಗಣಿ, ಭೂ ಹಗರಣದಲ್ಲಿ ಮುಳುಗಿರುವ ಸರ್ಕಾರದ ನಾಯಕರೆಲ್ಲರನ್ನೂ ಜೈಲಿಗೆ ಕಳುಹಿಸುವವರೆಗೂ ಯುವ ಕಾಂಗ್ರೆಸ್ಸಿಗರು ವಿಶ್ರಮಿಸುವುದಿಲ್ಲ ಎಂದು ಹೇಳಿದರು.

ಯುವಕರನ್ನು ಬಿಜೆಪಿ ಸರ್ಕಾರ ನಿರ್ಲಕ್ಷ್ಯಿಸಿದಷ್ಟು ಬೇರೆ ಯಾವ ಸರ್ಕಾರವು ನಿರ್ಲಕ್ಷ್ಯಿಸಿಲ್ಲ. ವರ್ಷಕ್ಕೆ ಒಂದು ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ, ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಒಂದು ಸಾವಿರ ಉದ್ಯೋಗವನ್ನು ಸೃಷ್ಟಿಸಿಲ್ಲ. ಭರವಸೆ ಈಡೇರಿಸದ ಸರ್ಕಾರವನ್ನು ಏಕೆ ಬೆಂಬಲಿಸಬೇಕೆಂದು ಯುವಕರು ಪ್ರಶ್ನಿಸಬೇಕಾಗಿದೆ ಎಂದರು.

ಕೃಷಿ ಬಜೆಟ್‌ನಂತೆ ಯುವ ಬಜೆಟ್ ಮಂಡಿ ಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಕೃಷಿ ಬಜೆಟ್ ಮಂಡಿಸಿ ರೈತರ ಮೇಲೆ ಗೋಲಿಬಾರ್ ಮಾಡಿದಂತೆ ಮಾಡುವುದಾದರರೆ ಯುವ ಬಜೆಟ್‌ಅನ್ನು ಮುಖ್ಯಮಂತ್ರಿ ಮಂಡಿಸುವುದೇ ಬೇಡ ಎಂದು ಆಗ್ರಹಿಸಿದರು.

 ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾರಾಜಣ್ಣ ಮಾತನಾಡಿ, ಯುವಕರಿಗೆ ಯಾವ ಸವಲತ್ತು, ಮಾರ್ಗದರ್ಶನವನ್ನು ಸರ್ಕಾರ ನೀಡಿದೆ ಎಂದು ಕೇಳಬೇಕಾಗಿದೆ ಎಂದರು.

ನಿರುದ್ಯೋಗ ಭತ್ಯೆ ಕೊಡುವುದಾಗಿ ನಂಬಿಸಿ ಮೋಸ ಮಾಡಿದಲ್ಲದೆ, ಗುತ್ತಿಗೆ ಆಧಾರದ ಉದ್ಯೋಗ ಜಾರಿ ಮಾಡುವ ಮೂಲಕ ಯುವಕರ ಶೋಷಣೆಯಲ್ಲೂ ತೊಡಗಿರುವ ಸರ್ಕಾರಕ್ಕೆ ಯುವಕರು ಛೀಮಾರಿ ಹಾಕಬೇಕು ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫೀ ಅಹಮದ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಒಬ್ಬರ ಕಾಲು ಮತ್ತೊಬ್ಬರು ಎಳೆಯುವ ಪ್ರವೃತ್ತಿ ಬಿಡಬೇಕು. ಜಿಲ್ಲೆಯಲ್ಲಿ ತನ್ನ ಗತಕಾಲದ ವೈಭವ ಮತ್ತೆ ಕಾಣಬೇಕು ಎಂದು ಆಶಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮರ್ಥ ಅಧ್ಯಕ್ಷರಾಗಿದ್ದಾರೆ. ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಪಡಿಸಲು ಯುವ ಕಾಂಗ್ರೆಸ್ಸಿಗರು ಪಣತೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕರಾದ ಆರ್.ನಾರಾಯಣ್, ಕೆ.ಷಡಕ್ಷರಿ, ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಕೆ.ಮಲ್ಲಣ್ಣ, ಯುವ ಕಾಂಗ್ರೆಸ್ ತುಮಕೂರು ಉಸ್ತುವಾರಿ ಗೋಪಾಲನಾಯಕ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನಯಾಜ್ ಅಹಮದ್, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜೇಶ್, ಜಿ.ಪಂ. ಸದಸ್ಯೆ ಶಾಂತಲಾ ರಾಜಣ್ಣ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT