ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾಳಜಿ ಅಗತ್ಯ: ವೀರೇಂದ್ರ ಹೆಗ್ಗಡೆ

Last Updated 19 ಜುಲೈ 2013, 11:07 IST
ಅಕ್ಷರ ಗಾತ್ರ

ಕಡೂರು: ಮನುಷ್ಯನ ಆರೋಗ್ಯದಲ್ಲಿ ಶುದ್ಧ ಕುಡಿಯುವ ನೀರು ಪ್ರಮುಖ ಪಾತ್ರ ವಹಿಸುತ್ತಿದ್ದು ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಕಡೂರು ಪಟ್ಟಣದ ಹಳೇ ಎಪಿಎಂಸಿ ಆವರಣದಲ್ಲಿ ಪುರಸಭೆ ಮತ್ತು ಎಪಿಎಂಸಿ ಸಹಯೋಗದೊಂದಿಗೆ ನಿರ್ಮಿಸಿದ ನೂತನ ಶುದ್ಧಗಂಗಾ ಘಟಕವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

`ದೇಶದ 213 ಜಿಲ್ಲೆಗಳ ಸುಮಾರು 23ಕೋಟಿ ಜನರು ಫ್ಲೋರೈಡ್‌ಯುಕ್ತ ನೀರು ಬಳಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಶುದ್ಧ ನೀರಿನಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳೂ ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. ನಾವು ಬಳಸುವ ನೀರಿನ ಮೂಲಗಳನ್ನೂ ನಾವು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು ಇದಕ್ಕೆ ಕಾರಣವಾಗಿದೆ.

ಈ ಹಿಂದೆ ನಾವು ಹಳ್ಳಿಗಳಿಗೆ ಭೇಟಿ ಇತ್ತರೆ ಸ್ವಸಹಾಯ ಸಂಘಗಳಿಗೆ ಸಹಾಯಹಸ್ತ ನೀಡುವಂತೆ, ದೇವಾಲಯ, ಸಮುದಾಯ ಭವನಗಳ ನಿರ್ಮಾಣಕ್ಕೆ ಸಹಾಯ ಒದಗಿಸುವಂತೆ ಬೇಡಿಕೆ ಬರುತ್ತಿತ್ತು. ಆದರೆ, ಇಂದು ಹಳ್ಳಿಗಳಲ್ಲಿ ಜಾಗೃತಿ ಉಂಟಾಗಿರುವ ದ್ಯೋತಕವಾಗಿ ಶುದ್ಧಗಂಗಾ ಘಟಕ ಸ್ಥಾಪಿಸುವಂತೆ ಬೇಡಿಕೆ ಬರುತ್ತಿದೆ' ಎಂದು ಹರ್ಷ ವ್ಯಕ್ತಪಡಿಸಿದರು.

ಶುದ್ಧಗಂಗಾ ಘಟಕ ಸ್ಥಾಪಿಸುವುದು ಕಷ್ಟವೇನಲ್ಲ, ಆದರೆ ನಿರ್ವಹಣೆ ಬಹಳ ಮುಖ್ಯ. ಸರ್ಕಾರ, ಶಾಸಕರು, ಸಂಸದರು ತಮ್ಮ ಅನುದಾನವನ್ನು ಯೋಜನೆಯ ಅನುಷ್ಠಾನಕ್ಕೂ ಬಳಸಿದರೆ ಹೆಚ್ಚು ಹೆಚ್ಚು ಘಟಕ ಸ್ಥಾಪಿಸಲು ಅನುಕೂಲವಾಗಲಿದೆ.

`ಪ್ರಜಾವಾಣಿ'ಯಲ್ಲಿ ಗುರುವಾರ ಸರ್ಕಾರಿ ಪ್ರಾಯೋಜಿತ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿಯೂ ಅವ್ಯವಹಾರ ನಡೆದಿದೆ ಎಂಬ ಸುದ್ದಿ ನಿಜಕ್ಕೂ ದುಃಖಕಾರಿ ಎಂದು ನುಡಿದ ಅವರು, ಹಳ್ಳಿಗಳು ಇಂದು ನಿಜಕ್ಕೂ ಪರಿವರ್ತನೆಯ ಕಡೆ ಸಾಗಿವೆ. ಮಹಿಳೆಯರು ಕುಟುಂಬದ ಆರ್ಥಿಕ ಶಿಸ್ತನ್ನು ನಡೆಸುವುದು ಮತ್ತು ಪುರುಷನಂತೆ ದುಡಿಯುವುದು ಕುಟುಂಬದಲ್ಲಿ ಬಲ ಮತ್ತು ಒಗ್ಗಟ್ಟನ್ನು ತರುತ್ತದೆ ಎಂದು ಆಶಿಸಿದರು.

ಜಿ.ಪಂ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಡೂರು ಪಟ್ಟಣಕ್ಕೆ ಇನ್ನೂ ಒಂದೆರಡು ಘಟಕ ಅಗತ್ಯವಿದೆ ಎಂದು ಕೋರಿಕೆ ಸಲ್ಲಿಸಿದರೆ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಎಲ್.ಎಚ್.ಮಂಜುನಾಥ್ ಈ ಬಾರಿ ಒಟ್ಟು 50ಘಟಕಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಡೂರು ಪುರಸಭೆ ಮುಖ್ಯಾಧಿಕಾರಿ ಕುಮಾರನಾಯ್ಕ, ಸದಸ್ಯರಾದ ಬಷೀರ್‌ಸಾಬ್,  ಲೋಕೇಶ್, ರೇಣುಕಾರಾಧ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT