ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಪ್ರವಾಸೋದ್ಯಮ: ಖಾಸಗಿ ಸಂಸ್ಥೆಗಳಿಗೆ ಸಿ.ಎಂ ಮನವಿ

Last Updated 13 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯವನ್ನು ಆರೋಗ್ಯ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಖಾಸಗಿ ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಬೇಕು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬುಧವಾರ ಇಲ್ಲಿ ಕೋರಿದರು.

ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ `ಕ್ಲೌಡ್ ನೈನ್~ನ ದ್ವಿತೀಯ ತಾಯಿ ಹಾಗೂ ನವಜಾತ ಶಿಶುಗಳ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಖಾಸಗಿ ವಲಯದ ಆಸ್ಪತ್ರೆಗಳು ಅಂತರರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ವಿದೇಶಿಯರನ್ನೂ ಸೆಳೆಯಲು ಮುಂದಾಗಬೇಕು~ ಎಂದು ಸಲಹೆ ಮಾಡಿದರು.

ಕ್ಲೌಡ್‌ನೈನ್‌ನ ಮೊದಲ ಕೇಂದ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಶಿಶುಗಳ ಹೆರಿಗೆಯನ್ನು ಯಶಸ್ವಿಯಾಗಿ ನಡೆಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸದಾನಂದಗೌಡ, `ದ್ವಿತೀಯ ಕೇಂದ್ರದಲ್ಲಿ ಈ ಸಂಖ್ಯೆ ಒಂದು ಲಕ್ಷ ದಾಟಲಿ~ ಎಂದು ಹಾರೈಸಿದರು.

ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ ಮಾತನಾಡಿ, `ಪಾಕಿಸ್ತಾನದಿಂದಲೂ ರೋಗಿಗಳು ಚಿಕಿತ್ಸೆಗಾಗಿ ನಗರಕ್ಕೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಅಮೆರಿಕ ಸೇರಿದಂತೆ ಇತರೆ ಶ್ರೀಮಂತ ರಾಷ್ಟ್ರಗಳಿಂದಲೂ ರೋಗಿಗಳು ನಗರಕ್ಕೆ ಬರುವಂತಾಗಬೇಕು~ ಎಂದರು.

`ಕ್ಲೌಡ್‌ನೈನ್~ನ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಕಿಶೋರ್‌ಕುಮಾರ್, `ಜಯನಗರದ ಪ್ರಥಮ ಕೇಂದ್ರದಲ್ಲಿ ತಾಯಿಯ ಉತ್ತಮ ಆರೈಕೆ ಮೂಲಕ ಯಶಸ್ವಿಯಾಗಿ 10 ಸಾವಿರ ಶಿಶುಗಳ ಹೆರಿಗೆ ಮಾಡಿಸಲಾಗಿದೆ. ಆಸ್ಪತ್ರೆಯಲ್ಲಿ ಮಾತೃ ಸಾವಿನ ಪ್ರಮಾಣ ಶೂನ್ಯವಾಗಿದ್ದು, 24 ವಾರಗಳ ಅವಧಿಪೂರ್ವ ಶಿಶುಗಳಿಂದ 500 ಗ್ರಾಂ ತೂಕದ ಮಗುವರೆಗೆ ಶೇ 99.83ರಷ್ಟು ಮಕ್ಕಳನ್ನು ಉಳಿಸಲಾಗಿದೆ~ ಎಂದು ಹೆಮ್ಮೆಯಿಂದ ಹೇಳಿಕೊಂಡರು.

`ಸದ್ಯದಲ್ಲಿಯೇ ನಗರದ ಮಲ್ಲೇಶ್ವರದಲ್ಲಿ ಮತ್ತೊಂದು ಕೇಂದ್ರವನ್ನು ಆರಂಭಿಸುವ ಗುರಿ ಹೊಂದಲಾಗಿದ್ದು, ಹಂತ-ಹಂತವಾಗಿ ದೇಶದ ವಿವಿಧೆಡೆ ನಮ್ಮ ಸೇವೆಯನ್ನು ವಿಸ್ತರಿಸುವ ಯೋಜನೆಯಿದೆ~ ಎಂದು ಅವರು ಪ್ರಕಟಿಸಿದರು.

ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಸಂಸದರಾದ ಜಿ.ಎಂ. ಸಿದ್ದೇಶ್ವರ, ಪಿ.ಸಿ. ಮೋಹನ್, ಸುರೇಶ್ ಅಂಗಡಿ, ಜನಾರ್ದನಸ್ವಾಮಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಅರವಿಂದ್ ಶೆಣೈ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT