ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟ: ಹೊಸ ವರ್ಷದಲ್ಲೂ ತಲೆನೋವು

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕುಂಠಿತಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡುವುದು ಮತ್ತು ಡಾಲರ್ ಎದುರು ರೂಪಾಯಿ ಬೆಲೆ ಕಡಿಮೆಯಾಗುತ್ತಿರುವುದನ್ನು ತಡೆಯುವುದು 2012ರಲ್ಲಿಯೂ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಖ್ಯ ತಲೆನೋವು ಆಗಿರಲಿವೆ.

2011ರಲ್ಲಿ ವರ್ಷದುದ್ದಕ್ಕೂ ಸಮಸ್ಯೆಯಾಗಿಯೇ ಕಾಡಿದ ಹಣದುಬ್ಬರವು ಸದ್ಯಕ್ಕೆ ಏರಿಕೆಯಾಗುವುದನ್ನು ನಿಲ್ಲಿಸಿದ್ದರೂ  ಮುಂಬರುವ ದಿನಗಳಲ್ಲಿ ಯಾವ ತಿರುವು ತೆಗೆದುಕೊಳ್ಳಲಿದೆ ಎನ್ನುವುದನ್ನು ಊಹಿಸುವುದು ಕಷ್ಟ. ಜಾಗತಿಕ ವಿದ್ಯಮಾನಗಳ ಫಲವಾಗಿಯೇ ದೇಶಿ ಅರ್ಥ ವ್ಯವಸ್ಥೆಯ ಚಟುವಟಿಕೆಗಳು ಕುಂಠಿತಗೊಂಡಿವೆ. ಹೊಸ ವರ್ಷದಲ್ಲಿಯೂ ಅವುಗಳ ಪ್ರಭಾವ ಇದ್ದೇ ಇರುತ್ತದೆ. ಈ ಕಾರಣಕ್ಕೆ ಎರಡನೇ ಹಂತದ ಆರ್ಥಿಕ ಸುಧಾರಣಾ ಕ್ರಮಗಳ ಜಾರಿಗೆ ಸರ್ಕಾರ ದೃಢ ನಿರ್ಧಾರ ಮಾಡಿ ಹೂಡಿಕೆದಾರರ ಉತ್ಸಾಹ ಹೆಚ್ಚಿಸಬೇಕಾಗಿದೆ. ಎರಡನೇ ತಲೆಮಾರಿನ ಆರ್ಥಿಕ ಸುಧಾರಣೆಗಳಿಗೆ ಸರ್ಕಾರ ಈ ವರ್ಷ ಯಾವ ಧೋರಣೆ ಅನುಸರಿಸುತ್ತದೆ ಎನ್ನುವುದು ಇನ್ನೂ ಸ್ಪಷ್ಟಗೊಳ್ಳಬೇಕಾಗಿದೆ.

2011ರ ಆರಂಭವು ಸಕಾರಾತ್ಮಕವಾಗಿ ಆರಂಭಗೊಂಡಿತ್ತಾದರೂ ಆ ಉತ್ಸಾಹ ಅಲ್ಪಾವಧಿಯದಾಗಿತ್ತು. ಆರ್ಥಿಕ ವೃದ್ಧಿ ದರವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಇಳಿಯುತ್ತಲೇ ಸಾಗಿತ್ತು. ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಅಂಕಿ ಅಂಶಗಳು ಇನ್ನೂ ಪ್ರಕಟಗೊಂಡಿಲ್ಲವಾದರೂ, ಅವು ಕೂಡ ಆಶಾದಾಯಕವಾಗಿರುವುದಿಲ್ಲ ಎನ್ನುವ ಸಂಕೇತಗಳಿವೆ.

ನಿಧಾನಗತಿಯ ಆರ್ಥಿಕ ಬೆಳವಣಿಗೆಯಿಂದ ರೋಸಿ ಹೋದ ಉದ್ಯಮ ದಿಗ್ಗಜರು, ಕೇಂದ್ರ ಸರ್ಕಾರವು  ಸಕಾಲಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.  ಉದ್ಯಮಿಗಳು ಪದೇ ಪದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರೂ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT