ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ಉಚಿತ ಸೀಟು ನೀಡದಿದ್ದರೆ ಮಾನ್ಯತೆ ರದ್ದು!

Last Updated 14 ಡಿಸೆಂಬರ್ 2012, 6:55 IST
ಅಕ್ಷರ ಗಾತ್ರ

ಮೈಸೂರು: `ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳು ಶಿಕ್ಷಣ ಹಕ್ಕು ಕಾಯಿದೆಯಡಿ (ಆರ್‌ಟಿಇ) ಶೇ 25 ರಷ್ಟು ಸೀಟುಗಳನ್ನು ಬಡಮಕ್ಕಳಿಗೆ ಉಚಿತವಾಗಿ ನೀಡಬೇಕು. ಇಲ್ಲವಾದಲ್ಲಿ ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುವುದು' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಡಾ.ಅಜಯ್ ನಾಗಭೂಷಣ್ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, `ಸರ್ಕಾರಿ ಶಾಲೆಗಳ ಜತೆಗೆ ಖಾಸಗಿ ಶಾಲೆಗಳೂ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಆದ್ದರಿಂದ ಖಾಸಗಿ ಶಾಲೆಗಳು ಪಡೆಯುತ್ತಿರುವ ಪ್ರವೇಶ ಶುಲ್ಕದ ಬಗ್ಗೆ ಗಮನ ಹರಿಸಬೇಕು. ಶಿಕ್ಷಣ ಹಕ್ಕು ಕಾಯಿದೆಯಡಿ ಶೇ 25ರಷ್ಟು ಸೀಟುಗಳನ್ನು ಬಡಮಕ್ಕಳಿಗೆ ಉಚಿತವಾಗಿ ನೀಡುವಂತೆ ಆದೇಶಿಸಬೇಕು. ಯಾವುದಾದರೂ ಸಂಸ್ಥೆ ಆರ್‌ಟಿಇ ಕಾಯಿದೆ ವಿರೋಧಿಸಿದರೆ ಸೂಕ್ತ ಕ್ರಮ ಜರುಗಿಸಬೇಕು' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಕೆ.ಬಸವರಾಜು ಅವರಿಗೆ ಸೂಚಿಸಿದರು.

`ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿರುವ ಸೈಕಲ್‌ಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ. ಈ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳು, ಬಿಆರ್‌ಸಿ, ಸಿಆರ್‌ಸಿಗಳ ಗಮನಕ್ಕೆ ತಂದು ಶಿಕ್ಷಣ ಸ್ಥಾಯಿ ಸಮಿತಿಗೆ ವರದಿ ನೀಡಬೇಕು. ಕಳೆದ ಎರಡು ವರ್ಷಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ, ಖಾಲಿ ಇರುವ ಶಿಕ್ಷಕರ ಹುದ್ದೆ, ಮೂಲಸೌಕರ್ಯ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು' ಎಂದು ಡಿಡಿಪಿಐಗೆ ತಾಕೀತು ಮಾಡಿದರು.

ಪೀಠೋಪಕರಣಗಳ ವಿತರಣೆಗೆ ಬಗ್ಗೆ ಮಾಹಿತಿ ನೀಡಿದ ಅವರು, `ಈ ಸಂಬಂಧ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಲಭ್ಯವಿರುವ ರೂ. 91 ಲಕ್ಷ ಅನುದಾನ ಬಳಸಿ 12 ಸಾವಿರ ಡೆಸ್ಕ್ ಖರೀದಿಸಲು ಕ್ರಮವಹಿಸಲಾಗಿದೆ. ಅಲ್ಲದೆ, ಸರ್ಕಾರದ ಅನುಮೋದನೆ ಪಡೆಯಲಾಗಿದೆ. ಅದೇ ರೀತಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ' ಎಂದು ತಿಳಿಸಿದರು.

ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡ ನಿಲುವಳಿ ಮಂಡಿಸಿ, `ಕಳಪೆ ಗುಣಮಟ್ಟದಿಂದ ಕೂಡಿರುವ ಸೈಕಲ್‌ಗಳನ್ನು ವಾಪಸು ಪಡೆಯಬೇಕು. ಈ ಬಗ್ಗೆ ತನಿಖೆ ನಡೆಸಬೇಕು. ಸರ್ಕಾರಿ ಶಾಲೆಗಳು ಮುಚ್ಚದಂತೆ ಕ್ರಮ ವಹಿಸಬೇಕು' ಎಂದು ಒತ್ತಾಯಿಸಿದರು.

`ಜಿಲ್ಲೆಯ ಶೇ 90ರಷ್ಟು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ಐದು ವರ್ಷಗಳಲ್ಲಿ ಎಲ್ಲ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತವೆ. ಇನ್ನೊಂದೆಡೆ ಮೂಲ ಸೌಲಭ್ಯ ಒದಗಿಸುವಲ್ಲಿ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ವಹಿಸಬೇಕು, ಇಲ್ಲವಾದಲ್ಲಿ ಈಗಿರುವ ಶಾಲೆಗಳಲ್ಲಿ ಎಲ್.ಕೆ.ಜಿ/ಯು.ಕೆ.ಜಿ. ಆರಂಭಿಸಬೇಕು' ಎಂದು ಸಲಹೆ ನೀಡಿದರು.

ಇದಕ್ಕೆ ದನಿಗೂಡಿಸಿದ ಸಿ.ಟಿ.ರಾಜಣ್ಣ, `ಎಚ್.ಡಿ.ಕೋಟೆಯಲ್ಲಿ 118, ಪಿರಿಯಾಪಟ್ಟಣದಲ್ಲಿ 76 ಹಾಗೂ ತಿ.ನರಸೀಪುರದಲ್ಲಿ 43 ಶಿಕ್ಷಕರ ಹುದ್ದೆಗಳು ಖಾಲಿ ಇವೆ. 55 ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಇಲ್ಲ. ಆದ್ದರಿಂದ ಈ ಬಗ್ಗೆ ಕ್ರಮಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಸುಧಾ, ಎಂ.ಬಿ.ಸಿದ್ದೇಗೌಡ, ಎಂ.ರೇಣುಕಾ ನಾಗರಾಜು, ಎಚ್.ಆರ್.ಭಾಗ್ಯಲಕ್ಷಿ, ಕೆ.ಮಾರುತಿ, ಕೆ.ಮಹದೇವ ಇದಕ್ಕೆ ಬೆಂಬಲ ಸೂಚಿಸಿದರು.

ಇಲ್ಲೂ `ಕಾವೇರಿ'ದ ಚರ್ಚೆ
ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಕೆ.ಮಾರುತಿ ಮಾತನಾಡಿ, `ತಮಿಳುನಾಡಿಗೆ ಕಾವೇರಿ ನೀರು ಬಿಡುವುದರಿಂದ ಬೆಂಗಳೂರು, ಮೈಸೂರು ಜನತೆಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತದೆ. ಮಂಡ್ಯ ಜಿಲ್ಲೆಯ ರೈತರು ಬೆಳೆ ಬೆಳೆಯಲು ಪರದಾಡಬೇಕಾಗುತ್ತದೆ. ಆದ್ದರಿಂದ ಕಾವೇರಿ ಅಚ್ಚುಕಟ್ಟು ಪ್ರದೇಶ, ಕಬಿನಿ, ಹಾರಂಗಿ, ಹೇಮಾವತಿ, ನುಗು ಜಲಾಶಯದಿಂದ ಒಂದು ಹನಿ ನೀರನ್ನೂ ತಮಿಳುನಾಡಿಗೆ ಹರಿಸದಂತೆ ನಿರ್ಣಯ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಕೆ.ಮಹದೇವ, `ರಾಜ್ಯದಲ್ಲಿ ಅಂತರ್ಜಲ ಕುಸಿತ ಕಂಡಿದೆ. ತಮಿಳುನಾಡಿನಲ್ಲಿ ಅಂತರ್ಜಲದ ಮಟ್ಟ ಚೆನ್ನಾಗಿದ್ದು, 50 ರಿಂದ 60 ಅಡಿ ಬೋರ್‌ವೆಲ್ ಕೊರೆದರೆ ನೀರು ಲಭ್ಯವಾಗುತ್ತದೆ. ನಮ್ಮಲ್ಲಿ 800 ಅಡಿ ಕೊರೆದರೂ ನೀರು ಸಿಗುವುದಿಲ್ಲ. ಅಲ್ಲದೆ, ತಮಿಳುನಾಡಿನಲ್ಲಿ ಮಾನ್‌ಸೂನ್ ಮಳೆ ಆಗುತ್ತದೆ. ಈ ಎಲ್ಲ ಕಾರಣಗಳನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು' ಎಂದರು.

ಇದಕ್ಕೆ ಬೆಂಬಲ ಸೂಚಿಸಿದ ಸುನೀತಾ ವೀರಪ್ಪಗೌಡ, ಎಲ್.ಮಾದಪ್ಪ, ಚಿಕ್ಕಣ್ಣೇಗೌಡ, ಎಂ.ಪಿ.ಚಂದ್ರೇಶ್, ಎಂ.ರೇಣುಕಾ ನಾಗರಾಜು ಸರ್ಕಾರಕ್ಕೆ ಈ ಬಗ್ಗೆ ನಿರ್ಣಯ ಕಳುಹಿಸಬೇಕು ಎಂದು ಆಗ್ರಹಿಸಿದರು.

ಆಟ ನಿಲ್ಲದಾಟ.. ಓಟ ಬರೀ ಓಟ
ಮೈಸೂರು: `ಮರ್ಯಾದೆ'ಗೆ `ಮಾನ' ಸೇರಿಸಿದರೆ ನಾನೇನು ಮಾಡಲಿ? ನಾನು ಹೇಳಿದ್ದು `ಮರ್ಯಾದೆ' ಇಲ್ಲ ಎಂದಷ್ಟೆ!

-ಹೀಗೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡ ಗುಡುಗಿದಾಗ, ಕಾಂಗ್ರೆಸ್ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು. ಅವರ ವಿರುದ್ಧ ಘೋಷಣೆ ಕೂಗುತ್ತ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದರು.

ಸಂದರ್ಭ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸುನೀತಾ ವೀರಪ್ಪಗೌಡ, `ಜಿಲ್ಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿತರಿಸಿರುವ ಉಚಿತ ಸೈಕಲ್‌ಗಳು ಕಳಪೆಯಾಗಿವೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಈ ಬಗ್ಗೆ ನಿಲುವಳಿ ಮಂಡಿಸಿ ಸರ್ಕಾರಕ್ಕೆ ಕಳುಹಿಸಬೇಕು' ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಕೆ.ಮಾರುತಿ, `ರಾಜ್ಯ ಸರ್ಕಾರ ರಾತ್ರೋರಾತ್ರಿ ಕದ್ದು ಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿದೆ. ಇದರಿಂದ ಮಂಡ್ಯ, ಮೈಸೂರು ಜಿಲ್ಲೆ ರೈತರು ಕಂಗಾಲಾಗಿದ್ದಾರೆ. ಮೊದಲು ಈ ಬಗ್ಗೆ ನಿಲುವಳಿ ಮಂಡಿಸಬೇಕು' ಎಂದು ಹೇಳಿದರು.

ಖಾರವಾಗಿಯೇ ಮಾತಿಗಿಳಿದ ಸುನೀತಾ, `ಬೆಳಗಾವಿ ಯಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ನಿಮಗೆ `ಮರ್ಯಾದೆ' ಇದ್ದರೆ ಅಧಿವೇಶನದಲ್ಲಿ ಭಾಗವಹಿಸಬಾರ ದಿತ್ತು. ಅಲ್ಲಿ ಆಡಳಿತಾರೂಢ ಪಕ್ಷದೊಂದಿಗೆ ಒಳಒಪ್ಪಂದ ಮಾಡಿಕೊಂಡು, ಇಲ್ಲಿ ಕಾವೇರಿ ಬಗ್ಗೆ ಚರ್ಚೆ ನಡೆಸುವುದು ಸರಿಯಲ್ಲ' ಎಂದು ಕಿಡಿಕಾರಿದರು. ಇದರಿಂದ ಆಕ್ರೋಶ ಗೊಂಡ ಕಾಂಗ್ರೆಸ್ ಸದಸ್ಯರು ಮರ್ಯಾದೆ ಇಲ್ಲ ಪದ ಬಳಸಕೂಡದು. ಮೊದಲು ನೀವು ಕ್ಷಮೆಯಾಚಿಸಿ' ಎಂದು ಪಟ್ಟು ಹಿಡಿದು ಸಭೆ ಬಹಿಷ್ಕರಿಸಿದರು. ಇದರಿಂದಾಗಿ ಮುಕ್ಕಾಲು ಗಂಟೆ ಸಭೆಯಲ್ಲಿ ಮೌನ ಆವರಿಸಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ, ಮುನಿಸಿಕೊಂಡ ಕಾಂಗ್ರೆಸ್ ಸದಸ್ಯ ರನ್ನು ಸಭೆಗೆ ಕರೆತಂದರು.

ಆಗ ಮತ್ತೆ ಮಾತು ಮುಂದು ವರಿಸಿದ ಸುನೀತಾ, `ಕಳಪೆ ಸೈಕಲ್‌ಗಳ ಬಗ್ಗೆ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಸೈಕಲ್‌ಗಳನ್ನು ಶಿಕ್ಷಣ ಇಲಾ ಖೆಗೆ ವಾಪಸು ನೀಡಬೇಕು' ಎಂದು ಒತ್ತಾಯಿಸಿದರು. ಇದು ಕಾಂಗ್ರೆಸ್ ಸದಸ್ಯರ ಪಿತ್ತ ನೆತ್ತಿಗೇರಿಸಿತು. `ನೀವು ಮೊದಲು ಕ್ಷಮೆಯಾಚಿಸಿ; ಬಳಿಕ ಮಾತು ಮುಂದುವರಿಸಿ' ಎಂದು ಧರಣಿ ಕುಳಿತರು. `ಮಾನ ಮರ್ಯಾದೆ ಇಲ್ಲ ಎಂದರೆ ಏನರ್ಥ?' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಗಲಿಬಿಲಿಗೊಂಡ ಸುನೀತಾ, `ನಾನು ಹೇಳಿದ್ದು `ಮರ್ಯಾದೆ ಇಲ್ಲ' ಎಂದಷ್ಟೇ, ನೀವು `ಮಾನ' ಸೇರಿಸಿಕೊಂಡರೆ ನಾನೇನು ಮಾಡಲಿ. ಆದಾಗ್ಯೂ, ನನ್ನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ' ಎಂದರು.

ಜಿ.ಪಂ. ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ, `ಆಯಿತಲ್ಲ, ಅವರು ಕ್ಷಮೆಯಾಚಿಸಿದ್ದಾರೆ, ಚರ್ಚೆ ಆರಂಭಿಸಿ' ಎಂದು ಮನವಿ ಮಾಡಿದರು. ಆದರೆ, ಮತ್ತೆ ಓಟ ಆರಂಭಿಸಿದ ಕಾಂಗ್ರೆಸ್ ಸದಸ್ಯರು `ಕ್ಷಮೆಯಾಚಿಸಿದ್ದು ನಮಗೆ ಗೊತ್ತೇ ಆಗಿಲ್ಲ' ಎಂದು ಧರಣಿ ಮುಂದುವರಿಸಿದರು.

ಇಷ್ಟೊತ್ತಿಗೆ ಸುಸ್ತಾದಂತೆ ಕಂಡು ಬಂದ ಸುನೀತಾ, ಎರಡು ಬಾರಿ ಮೇಜಿಗೆ ಹಣೆ ಹಚ್ಚಿ, ಎರಡೂ ಕೈಮುಗಿದು ಕ್ಷಮಿಸಿ, ಕ್ಷಮಿಸಿ ಎಂದು ಕ್ಷಮೆಯಾಚಿಸಿದರು. ಕಾಂಗ್ರೆಸ್ ಸದಸ್ಯರು ನಗುಮೊಗದಿಂದ ತಮ್ಮ ತಮ್ಮ ಕುರ್ಚಿಗಳಲ್ಲಿ ಆಸೀನರಾಗಿ ಚರ್ಚೆ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT