ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ:ಬಡ್ಡಿ ದರ ಹೆಚ್ಚಳ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ 12ನೇ ಬಾರಿ ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು  ಶೇ 0.25ರಷ್ಟು ಹೆಚ್ಚಿಸಿದೆ.

ಅಲ್ಪಾವಧಿ ಬಡ್ಡಿ ದರ ಹೆಚ್ಚಳದ ಹಿನ್ನೆಲೆಯಲ್ಲಿ, ಗೃಹ, ವಾಣಿಜ್ಯ, ವಾಹನ ಮತ್ತು ಕಾರ್ಪೊರೇಟ್ ಸಾಲಗಳು ಇನ್ನಷ್ಟು ತುಟ್ಟಿಯಾಗಲಿವೆ. ಈಗಾಗಲೇ ಸಾಲ ಪಡೆದವರ ಮಾಸಿಕ ಕಂತುಗಳು (ಇಎಂಐ) ಹೆಚ್ಚಲಿದೆ.

ಕಳೆದ ಮಾರ್ಚ್ 2010ರಿಂದ 12ನೇ ಬಾರಿ ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೆಯ ಬಾರಿ `ಆರ್‌ಬಿಐ~ ಬಡ್ಡಿ ದರ ಏರಿಕೆ ಮಾಡಿದೆ. ಆಹಾರ ಹಣದುಬ್ಬರ ದರ ಗರಿಷ್ಠ ಮಟ್ಟ ತಲುಪಿರುವುದು ಮತ್ತು ಜಾಗತಿಕ ಸಂಗತಿಗಳು ಪ್ರತಿಕೂಲವಾಗಿರುವ  ಹಿನ್ನೆಲೆಯಲ್ಲಿ  ಬಡ್ಡಿ ದರ ಏರಿಕೆ ಅನಿವಾರ್ಯ ಎಂದು `ಆರ್‌ಬಿಐ~ ತನ್ನ ಮಧ್ಯಂತರ ತ್ರೈಮಾಸಿಕ ಹಣಕಾಸು ಪರಾಮರ್ಷೆಯಲ್ಲಿ ಅಭಿಪ್ರಾಯಪಟ್ಟಿದೆ.

ಪರಿಷ್ಕೃತ ದರದಂತೆ ಬ್ಯಾಂಕುಗಳು `ಆರ್‌ಬಿಐ~ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರ `ರೆಪೊ~ ಶೇ 8.25 ಮತ್ತು `ರಿವರ್ಸ್ ರೆಪೊ~ ದರ  ಶೇ 7.25ರಷ್ಟಾಗಿದೆ. ಈ ತಿಂಗಳಾಂತ್ಯಕ್ಕೆ ಬ್ಯಾಂಕುಗಳು ತಮ್ಮ ಪರಿಷ್ಕೃತ ಬಡ್ಡಿ ದರಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. 

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಆಗಸ್ಟ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಆಹಾರ ಹಣದುಬ್ಬರ ದರ (ಡಬ್ಲ್ಯುಪಿಐ) ಶೇ 9.2ರಿಂದ ಶೇ 9.8ಕ್ಕೆ ಏರಿಕೆ ಕಂಡಿದೆ. `ಆರ್‌ಬಿಐ~ ಹಲವು ಬಾರಿ ಬಡ್ಡಿ ದರ ಏರಿಕೆ ಮಾಡಿದ್ದರೂ, ಆಹಾರ  ಹಣದುಬ್ಬರ ದರ ಎರಡಂಕಿಯಿಂದ ಹಿತಕರ ಮಟ್ಟಕ್ಕೆ ಇಳಿಯದಿರುವುದು ಆತಂಕ ಹೆಚ್ಚಿಸಿದೆ.

`ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧ ಅವಧಿಯಲ್ಲಿ ಹಣದುಬ್ಬರ ದರ ಹಿತಕರ ಮಟ್ಟಕ್ಕೆ ಇಳಿಯುವ ಭರವಸೆ ಇದೆ. `ಆರ್‌ಬಿಐ~ ಅನುಸರಿಸುತ್ತಿರುವ ಬಿಗಿ ವಿತ್ತೀಯ ನೀತಿ ಹಣದುಬ್ಬರ ಒತ್ತಡವನ್ನು ಗಣನೀಯವಾಗಿ  ತಗ್ಗಿಸಲಿದೆ ಎಂದು  ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT