ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ: ಸ್ವಾಗತ

Last Updated 3 ಜನವರಿ 2014, 9:06 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಅವರು ನಿರ್ವ­ಹಿಸುವ ಕೆಲ ಚಟುವಟಿಕೆಗಳ ಆಧಾರದ ಮೇಲೆ ಪ್ರತಿ ತಿಂಗಳು ಕನಿಷ್ಠ ₨1,000- ಪ್ರೋತ್ಸಾಹಧನ ನಿಗದಿಪಡಿಸಿರು­ವು­ದನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಸ್ವಾಗತಿಸಿದೆ.

ಗ್ರಾಮೀಣ ಸ್ವಾಸ್ಥ್ಯ ಹಾಗೂ ಪೌಷ್ಟಿಕ ದಿನಗಳಿಗೆ ಹಾಜರಾಗಿದ್ದಕ್ಕೆ ₨200-, ಗ್ರಾಮೀಣ ಸ್ವಾಸ್ಥ್ಯ, ನೈರ್ಮಲ್ಯ ಹಾಗೂ ಪೌಷ್ಟಿಕ ಸಮಿತಿ ಸಭೆ ನಡೆಸಿದ್ದಕ್ಕಾಗಿ ₨150-, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಸಿಕ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ₨150-, ತಾಯಿ ಮತ್ತು ಮಗುವಿನ ಆರೈಕೆಗೆ ಸಂಬಂಧಿಸಿದಂತೆ ಎಲ್ಲ ಚಟುವಟಿಕೆಗಳ ದಾಖಲಾತಿಗಳನ್ನು ನಿರ್ವಹಿಸಿದ್ದಕ್ಕಾಗಿ ₨500 ಸೇರಿದಂತೆ- ಒಟ್ಟಾರೆಯಾಗಿ ಪ್ರತಿಯೊಬ್ಬ ಆಶಾ ಕಾರ್ಯಕರ್ತೆ­ಯರಿಗೂ ಕಡ್ಡಾಯ ಮಾಸಿಕ ₨1,000 ಕನಿಷ್ಠ ಕಾರ್ಯನಿರ್ವಹಣೆ ಪ್ರೋತ್ಸಾಹಧನ ಸಿಗುವಂತೆ ಮಾಡಿರು­ವುದು ಪ್ರೋತ್ಸಾಹದಾಯಕ ಎಂದು ಹೇಳಿದೆ.

ಇದರೊಂದಿಗೆ ಆಶಾ ಕಾರ್ಯಕರ್ತೆ­ಯರು ನಿರ್ವಹಿಸುವ ಜೆವೈಸಿ, ಎಚ್‌ಬಿಎನ್‌ಸಿ, ಲಸಿಕಾ ಕಾರ್ಯಕ್ರಮ ಇತ್ಯಾದಿ ಹಲವಾರು ಪ್ರಕರಣಗಳಿಗೆ ಇದುವರೆಗೂ ಪಡೆಯುತ್ತಿರುವ ಪ್ರೋತ್ಸಾಹಧನಗಳು ಹಾಗೂ ನಮ್ಮ ರಾಜ್ಯ ಸರ್ಕಾರಗಳು ಮ್ಯಾಚಿಂಗ್ ಗ್ರ್ಯಾಂಟ್‌ ಮೂಲಕ ನೀಡುವ ಸರಿಸಮ ಪ್ರೋತ್ಸಾಹಧನಗಳು ಮುಂದುವರಿ­ಯಲಿವೆ. ಅವುಗಳ ಜೊತೆಗೆ ಈ ಕಾರ್ಯನಿರ್ವಹಣೆ ಪ್ರೋತ್ಸಾಹಧನ­ವನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.

ಇದುವರೆಗೂ ಆಶಾ ಕಾರ್ಯಕರ್ತೆ­ಯರು ತಮ್ಮ ಕೆಲಸಗಳಿಗೆ ₨500 ರಿಂದ ₨1,500 ವರೆಗೆ ಪ್ರೋತ್ಸಾಹಧನ ಪಡೆಯುತ್ತಿದ್ದರು. ಆದರೆ, ಅವರ ಕಾರ್ಯಕ್ಷೇತ್ರದಲ್ಲಿ ಹೆರಿಗೆ ಪ್ರಕರಣ­ಗಳು ಹಾಗೂ ನವಜಾತ ಶಿಶುಗಳ ಸಂಖ್ಯೆ ಕಡಿಮೆಯಿದ್ದಲ್ಲಿ ಪ್ರೋತ್ಸಾಹ ಧನವೂ ಕಡಿಮೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಾಸಿಕ ವೇತನ ನಿಗದಿಪಡಿಸಬೇಕು ಎನ್ನುವ ಬೇಡಿಕೆ ಸಹಿತ ಈಗಿರುವ ಎಲ್ಲ ಚಟುವಟಿಕೆ­ಗಳಿಗೆ ಹಣವನ್ನು ಹೆಚ್ಚಿಸಬೇಕು, ಮತ್ತಿತರ ಸೌಕರ್ಯಗಳನ್ನು ನೀಡ­ಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆ­ಯರ ಸಂಘವು ಸತತವಾಗಿ ಸರ್ಕಾರ­ವನ್ನು ಒತ್ತಾಯಿಸುತ್ತ ಬಂದಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರದ ಆರೋಗ್ಯ ಸಚಿವರಿಗೆ ಆಲ್ ಇಂಡಿಯಾ ಯುಟಿ­ಯುಸಿ ಅಖಿಲ ಭಾರತ ಉಪಾಧ್ಯಕ್ಷ ಕೆ.ರಾಧಾಕೃಷ್ಣ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಆಶಾ ಕಾರ್ಯಕರ್ತೆಯರ ಸಂಘಟನೆಗಳ ಮುಖಂಡರ ನಿಯೋ­ಗವು ಮನವಿ ಸಲ್ಲಿಸಿತ್ತು. ಸುದೀರ್ಘ ಹೋರಾಟದ ಫಲವಾಗಿ ದೊರಕಿದ ವಿಜಯಕ್ಕೆ ಸಂಘವು ಕಾರ್ಯಕರ್ತೆ­ಯರನ್ನು ಹಾಗೂ ಸರ್ಕಾರವನ್ನು ಅಭಿನಂದಿಸುವುದಾಗಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ಸೋಮಶೇಖರ ಯಾದಗಿರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT