ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸರೆ ಬಡಾವಣೆಗೆ ಶೀಘ್ರ ಮೂಲಸೌಕರ್ಯ

Last Updated 14 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಸರೆ ಯೋಜನೆಗಳಲ್ಲಿ ನೀಡಲಾಗಿರುವ ಮನೆಗಳಲ್ಲಿ ನೆರೆ ಸಂತ್ರಸ್ತರು ವಾಸ ಮಾಡತೊಡಗಿದರೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಶೀಘ್ರವೇ ಕಲ್ಪಿಸಿಕೊಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಆಸರೆ ಯೋಜನೆಯಡಿ ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮದಲ್ಲಿ ನಿರ್ಮಿಸಲಾದ ಮನೆಗಳನ್ನು ಭಾನುವಾರ ನೆರೆ ಸಂತ್ರಸ್ತರಿಗೆ ವಿತರಿಸಿ ಅವರು ಮಾತನಾಡಿದರು.ಆಸರೆ ಮನೆಗಳಲ್ಲಿ ಫಲಾನುಭವಿಗಳು ವಾಸ ಮಾಡಲಾರಂಭಿಸಿದರೆ, ಮೂಲಸೌಕರ್ಯಗಳನ್ನು  ಒದಗಿಸುವಲ್ಲಿ ಸರ್ಕಾರ ವಿಳಂಬ ಮಾಡುವುದಿಲ್ಲ ಎಂದರು.

ಅಮರಗೋಳ ಗ್ರಾಮದಲ್ಲಿ ಪ್ರತಿ ಆಸರೆ ಮನೆಗೆ 1.30 ಲಕ್ಷ ರೂಪಾಯಿ ವ್ಯಯಿಸಲಾಗಿದೆ. ಶೌಚಾಲಯ, ಸ್ನಾನದ ಕೋಣೆ, ಪ್ಲಾಸ್ಟರಿಂಗ್ ಕೆಲಸಗಳಿಗಾಗಿ ಪ್ರತಿ ಮನೆಗೆ ಇನ್ನೂ 10 ಸಾವಿರ ರೂಪಾಯಿ ಹಣ ನೀಡಬೇಕೆಂಬ ಕೋರಿಕೆ ಇದೆ. ಈ ಹೆಚ್ಚುವರಿ 15 ಲಕ್ಷ ರೂಪಾಯಿಯನ್ನು ಮೂರ್ನಾಲ್ಕು ದಿನಗಳಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದೂ ಅವರು ಹೇಳಿದರು.

ಆಸರೆ ಯೋಜನೆ ಒಂದು ಮೈಲಿಗಲ್ಲು. ಪ್ರವಾಹಕ್ಕೆ ತುತ್ತಾದವರಿಗೆ ಈ ಹಿಂದಿನ ಸರ್ಕಾರಗಳು ಪರಿಹಾರವನ್ನು ಮಾತ್ರ ನೀಡಿದರೆ, ಬಿಜೆಪಿ ಸರ್ಕಾರ ಮನೆ ಕಟ್ಟಿಕೊಡುತ್ತಿದೆ. ಈ ಕಾರ್ಯದಲ್ಲಿ ದಾನಿಗಳೂ ಕೈಜೋಡಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ ಹೇಳಿದರು.

ಜಿಲ್ಲೆಯ ಆಸರೆ ಬಡಾವಣೆಗಳಲ್ಲಿ ಕುಡಿಯುವ ನೀರು ಸೌಕರ್ಯ ಕಲ್ಪಿಸಲು ಇಲಾಖೆ 40 ಲಕ್ಷ ರೂಪಾಯಿ ಒದಗಿಸಿದೆ. ರಸ್ತೆ, ಚರಂಡಿ ಮುಂತಾದ ಮೂಲಸೌಕರ್ಯ ಕಲ್ಪಿಸಲು ಹಣ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

‘ಬೆಣ್ಣೆ, ತುಪರಿ ಮೊದಲಾದ ಹಳ್ಳಗಳಿಗೆ ಪ್ರವಾಹ ಬಂದು ಈ ಹಿಂದಿನಿಂದಲೂ ಜನರು ಸಾಕಷ್ಟು ಸಂಕಷ್ಟ ಅನುಭವಿಸಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯ ಬಂದು 63 ವರ್ಷಗಳಲ್ಲಿ ಆಗದ ಈ ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರವನ್ನು ನಾವು ಒಂದೇ ವರ್ಷದಲ್ಲಿ ಮಾಡಿದ್ದೇವೆ’ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಮಲಪ್ರಭಾ ನದಿ ಕೊನೆಭಾಗದ 10 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 40 ಕೋಟಿ ರೂಪಾಯಿಯ ಯೋಜನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳುವುದಾಗಿ ಅವರು ತಿಳಿಸಿದರು.

ಎನ್‌ಜಿಇಎಫ್ ಅಧ್ಯಕ್ಷ ಷಣ್ಮುಖ ಗುರಿಕಾರ, ಜಿ.ಪಂ. ಅಧ್ಯಕ್ಷ ಅಡಿವೆಪ್ಪ ಮನಮಿ, ಬೆಳವಟಗಿ ಗ್ರಾ.ಪಂ. ಅಧ್ಯಕ್ಷ ನಿಂಗಪ್ಪ ಜಗಾಪುರ, ಜಿಲ್ಲಾಧಿಕಾರಿ ದರ್ಪಣ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT