ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸಂಸ್ಕೃತಿಗೆ ಗೌರವ; ಕಂದಾಚಾರ ನಿಯಂತ್ರಣ

Last Updated 25 ಫೆಬ್ರುವರಿ 2012, 5:15 IST
ಅಕ್ಷರ ಗಾತ್ರ

ದಾವಣಗೆರೆ: ಆಹಾರ ಸಂಸ್ಕೃತಿ ಬಗ್ಗೆ ನಮಗೆ ಗೌರವವಿದೆ. ಆದರೆ, ದೇವರು, ಧರ್ಮದ ಹೆಸರಿನಲ್ಲಿ `ಪ್ರಾಣಿ ಬಲಿ~ ನೀಡುವುದಕ್ಕೆ ನಮ್ಮ ವಿರೋಧ. ಕಾನೂನಿನ ಭಯದಿಂದ ಸಹಕರಿಸಬೇಡಿ ಆತ್ಮತೃಪ್ತಿಯಿಂದ ಸಹಕಾರ ನೀಡಿ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ ಕರೆ ನೀಡಿದರು.

ಜಿಲ್ಲಾಡಳಿತದ ವತಿಯಿಂದ `ಪ್ರಾಣಿ ಬಲಿ~ ನಿಷೇಧ ಕುರಿತು ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜನ ಜಾಗೃತಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಶಿರಸಿಯಲ್ಲೂ ಹಿಂದೆ `ಪ್ರಾಣಿ ಬಲಿ~ ನಡೆಯುತ್ತಿತ್ತು. ಇಂದು ಅಲ್ಲಿ ಕೋಣನ ರಕ್ತ ಸ್ವಲ್ಪ ಪಡೆದು ಚರಗ ಹಾಕುತ್ತಾರೆ. ಅದೇ ರೀತಿ ಇಲ್ಲೂ ಅನುಸರಿಸಿ. `ಪ್ರಾಣಿ ಬಲಿ~ ನಿಷೇಧ ಇಲ್ಲಿ ಯಶಸ್ವಿಯಾದರೆ ಕರ್ನಾಟಕಕ್ಕೆ ಮಾದರಿಯಾಗುತ್ತದೆ. ಮುಂದಿನ ಪೀಳಿಗೆಗೂ ಆದರ್ಶವಾಗುತ್ತದೆ. ಎರಡು ವರ್ಷದ ಬದಲು ಐದು ವರ್ಷಕ್ಕೊಮ್ಮೆ ಜಾತ್ರೆ ಮಾಡಿ, ಸಿಹಿ ಮಾಡಿ ಹಬ್ಬ ಮಾಡಿ ಎಂದು ಸಲಹೆ ನೀಡಿದರು.

ದೇವಿಯ ಮೆರವಣಿಗೆ ಇನ್ನಷ್ಟು ಅದ್ದೂರಿಯಾಗಿ ಮಾಡಲು ರಥೋತ್ಸವ ಆಚರಣೆ ಜಾರಿಗೆ ತನ್ನಿ ಒಳ್ಳೆಯ ರಥ ನಿರ್ಮಿಸಿ, ಅದಕ್ಕೆ ಜಿಲ್ಲಾಡಳಿತದ ಸಹಕಾರ ಕೊಡಿಸುತ್ತೇವೆ. ತಾವು ಅದಕ್ಕೆ ಹಣ ನೀಡುತ್ತೇವೆ. ಜನರೂ ನೀಡುತ್ತಾರೆ. ಮುಂದಿನ ಬಾರಿಯಿಂದ ರಥೋತ್ಸವ ನಡೆಸಿ. ಸಾಹಿತ್ಯ, ಸಂಗೀತ, ಸಂಸ್ಕೃತಿ ಬಿಂಬಿಸೋಣ. ಇಷ್ಟೆಲ್ಲ ಹೇಳಿದ ಮೇಲೂ ಕೋಣ ಕಡಿಯುತ್ತೇವೆ ಎಂದರೆ ಅದು ಧರ್ಮಕ್ಕೆ ಹಾಗೂ ಗುರುವಿಗೆ ಬಗೆದ ದ್ರೋಹ ಎಂದರು.

ಬೇವಿನ ಉಡುಗೆ, ದೇವದಾಸಿ ಇಂತಹ ಪದ್ಧತಿಗಳು ಮುಂದುವರಿದ ಜನಾಂಗ ತೀಟೆಗಾಗಿ ಮಾಡಿಕೊಂಡ ಪದ್ಧತಿಗಳು. ಅದರ ಬಗ್ಗೆ ಹಿಂದುಳಿದ ವರ್ಗಗಳು ಜಾಗೃತಿ ವಹಿಸಬೇಕು. `ಪ್ರಾಣಿ ಬಲಿ~ ಕೊಡುವುದೇ ಆದರೆ, ಇಲ್ಲೇ ಇರುತ್ತೇನೆ. ನನ್ನನ್ನೇ ಬಲಿ ಕೊಡಿ ಎಂದು ಕೋರಿದರು.

ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಯಾವುದೇ ಆಚರಣೆಯಲ್ಲಿ ಇಚ್ಛೆ ಹಾಗೂ ಬದ್ಧತೆ ಇರಬೇಕು. ಕಾನೂನು ಭಯದಿಂದ `ಪ್ರಾಣಿ ಬಲಿ~ ನಿಲ್ಲಿಸದೇ ಮನಸ್ಸಿನಿಂದ ಮಾಡಿ. ಆಹಾರ ಸಂಸ್ಕೃತಿ ಹೆಸರಲ್ಲೂ ಪ್ರಾಣಿ ಹಿಂಸೆ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಮಾತನಾಡಿ, ಹೈಕೋರ್ಟ್ ನಿರ್ದೇಶನದಂತೆ ಜಾತ್ರೆಯ ಹೆಸರಲ್ಲಿ `ಪ್ರಾಣಿ ಬಲಿ~ ನಿಷೇಧ ಕಡ್ಡಾಯ. ಈ ಬಗ್ಗೆ ಪ್ರಾಣಿ ದಯಾ ಸಂಘ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ದಾವಣಗೆರೆ ದುರ್ಗಮ್ಮನ ದೇವಸ್ಥಾನ ಮಂಡಳಿಯನ್ನು ಅದಕ್ಕೆ ಹೊಣೆ ಮಾಡಿದೆ. ಹಾಗಾಗಿ, ಯಾವುದೇ ಕಾರಣಕ್ಕೂ `ಪ್ರಾಣಿ ಬಲಿ~ಗೆ ಅವಕಾಶ ನೀಡುವುದಿಲ್ಲ. `ಪ್ರಾಣಿ ಬಲಿ~ ಕೊಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಮೇಯರ್ ಎಚ್.ಎನ್. ಗುರುನಾಥ್ ಮಾತನಾಡಿ, ನೀರು, ವಿದ್ಯುತ್ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿದ್ದೇವೆ ಎಂದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಡಿ.ಎನ್. ಜಗದೀಶ್ ಮಾತನಾಡಿ, ವಿದ್ಯುತ್ ಸಮಸ್ಯೆಯಿಂದ ನೀರು ಸಂಗ್ರಹಕ್ಕೆ ಸಮಸ್ಯೆಯಾಗಿದೆ. ನಿರಂತರ ವಿದ್ಯುತ್ ನೀಡಲು ಬೆಸ್ಕಾಂಗೆ ಸೂಚನೆ ನೀಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್, ಪ್ರಭಾರ ಎಸ್‌ಪಿ ಬಿ.ಟಿ. ಚವಾಣ್, ನಗರ ಡಿವೈಎಸ್‌ಪಿ, ಚಂದ್ರಪ್ಪ, ದೇವಸ್ಥಾನ ಸಮಿತಿ ಸದಸ್ಯರಾದ ಬಡಗಿ ಕೃಷ್ಣಪ್ಪ, ಕೊಟ್ರಬಸಪ್ಪ, ಮರಿಯಪ್ಪ, ವಿಚಾರವಾದಿಗಳಾದ ಶಿವನಕೆರೆ ಬಸವಲಿಂಗಪ್ಪ, ಚನ್ನಬಸಪ್ಪ,  ಮುದೇಗೌಡ್ರು ಗಿರೀಶ್, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಸಿಪಿಐ ಎಚ್.ಕೆ. ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.

ದೇವಿಯ ಇಚ್ಛೆಯಂತೆ ಎಲ್ಲ ನಡೆಯಲಿದೆ
ನಮಗೆ `ಪ್ರಾಣಿ ಬಲಿ~ ನೀಡುವ ಇಚ್ಛೆ ಇಲ್ಲ. ಆದರೆ, ದೇವಿಯ ಆಜ್ಞೆಯಾದರೆ ಅದನ್ನು ನಿಲ್ಲಿಸುವುದು ಕಷ್ಟವಾಗುತ್ತದೆ ಎಂದು ದಲಿತ ಸಮಾಜದ ಮುಖಂಡ  ಎಲ್.ಎಚ್. ಹನುಮಂತಪ್ಪ ಹೇಳಿದರು.

ನಾವು ಬಸವಣ್ಣ, ಆಕಳು ಕಡಿಯುವುದಿಲ್ಲ. ಆದರೆ, ನಗರದ ಕೆಲ ಭಾಗಗಳಲ್ಲಿ ಹಸುಗಳನ್ನು ನಿತ್ಯವೂ ಕಡಿಯುತ್ತಾರೆ. ಅವರಿಗೆ ಪಾಲಿಕೆ ಪರವಾನಗಿಯನ್ನೂ ನೀಡಿದೆ. ಇಂತಹ ದ್ವಂದ್ವ ನಿಲುವು ಏಕೆ? ಅದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ ಎಂದು ಪ್ರಶ್ನಿಸಿದರು.

ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಬ್ಬದಿಂದ ಅವರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಅದಕ್ಕಾಗಿ ಹಬ್ಬವನ್ನು 2 ವರ್ಷದ ಬದಲು 5 ವರ್ಷಕ್ಕೊಮ್ಮೆ ಆಚರಿಸುವಂತೆ ಆಗಬೇಕು. ಆ ದೇವಿ ಜಿಲ್ಲಾಡಳಿತಕ್ಕೂ, ಈ ಸ್ವಾಮೀಜಿಗಳಿಗೂ ಒಳ್ಳೆಯದು ಮಾಡಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT