ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ, ಹಣದುಬ್ಬರ ಮತ್ತೆ ಎರಡಂಕಿಗೆ

Last Updated 24 ಡಿಸೆಂಬರ್ 2010, 6:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಬಳಕೆದಾರರ  ಪಾಲಿಗೆ ಕೈಗೆಟುಕದ ಮಟ್ಟಕ್ಕೆ ಏರಿಕೆಯಾಗಿರುವ ಈರುಳ್ಳಿಯು,  ಆಹಾರ ಹಣದುಬ್ಬರವನ್ನು ಒಂದು ತಿಂಗಳ ನಂತರ  ಮತ್ತೆ ಎರಡಂಕಿ ದಾಟುವಂತೆ ಮಾಡಿದೆ.

ಡಿಸೆಂಬರ್ 11ಕ್ಕೆ ಕೊನೆಗೊಂಡ ವಾರದಲ್ಲಿ ಈರುಳ್ಳಿ, ಹಣ್ಣು, ತರಕಾರಿ, ಹಾಲು, ಮೊಟ್ಟೆ ಮತ್ತು ಮಾಂಸ ದುಬಾರಿಯಾಗಿದ್ದರಿಂದ ಸಗಟು ಬೆಲೆ ಆಧರಿಸಿದ ವಾರ್ಷಿಕ ಆಹಾರ ಹಣದುಬ್ಬರವು  ಎರಡಂಕಿಗೆ ಜಿಗಿದಿದೆ.

ಆಹಾರ ಬೆಲೆ ಏರಿಕೆಯು ಸತತ ಮೂರನೇ ವಾರವೂ ಏರಿಕೆಯಾದಂತೆ ಆಗಿದೆ. ಹಿಂದಿನ ವಾರದ ಶೇ 9.46ಕ್ಕೆ ಹೋಲಿಸಿದರೆ ಈ ವಾರ ಶೇ 12.13ಕ್ಕೆ ಏರಿಕೆಯಾಗಿದೆ. ನವೆಂಬರ್ 13ಕ್ಕೆ ಇದು ಶೇ 10.15ರಷ್ಟಿತ್ತು. ವಾರ್ಷಿಕ ಲೆಕ್ಕದ ಆಧಾರದಲ್ಲಿ ಈರುಳ್ಳಿ ಶೇ 33.48ರಷ್ಟು ಮತ್ತು ವಾರದ ಆಧಾರದಲ್ಲಿ ಶೇ 4.56ರಷ್ಟು ದುಬಾರಿಯಾಗಿದೆ. ಹಣ್ಣು ಮತ್ತು ಹಾಲು ಕ್ರಮವಾಗಿ ಶೇ 20.15 ಮತ್ತು 17.83ರಷ್ಟು ಹೆಚ್ಚಿದ್ದರೆ, ತರಕಾರಿಗಳು ಶೇ 15.54ರಷ್ಟು ದುಬಾರಿಯಾಗಿದೆ.

ಆಹಾರ ಹಣದುಬ್ಬರವು ಹಠಾತ್ತಾಗಿ ಏರಿಕೆಯಾಗಿರುವುದರಿಂದ, ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ತಿಂಗಳು ತನ್ನ ಹಣಕಾಸು ನೀತಿ ಪರಾಮರ್ಶಿಸುವಾಗ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಸಮಗ್ರ ಹಣದುಬ್ಬರವು ನಿರೀಕ್ಷಿಸಿದ ಪ್ರಮಾಣದಲ್ಲಿ ಇಳಿಕೆಯಾಗದ ಕಾರಣಕ್ಕೆ ಆರ್‌ಬಿಐ ಮುಂಬರುವ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಆಹಾರ ಹಣದುಬ್ಬರ ಹೆಚ್ಚಳದ ಬಗ್ಗೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಕಳವಳ ವ್ಯಕ್ತಪಡಿಸಿದ್ದು,   ಈರುಳ್ಳಿ ಬೆಲೆ ಏರಿಕೆಯೇ ಇದಕ್ಕೆ ಕಾರಣವಾಗಿದೆ. ಬೆಲೆ ಹೆಚ್ಚಳ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT