ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಶಸ್ತಿ ವಾಪಸ್ ಅಪಕ್ವ ನಡೆ’

2015ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚೌಧರಿ ಅಭಿಮತ
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ‘ಸಾಹಿತಿಗಳ ಪ್ರಶಸ್ತಿ ವಾಪಸಾತಿ ಚಳವಳಿ ಒಂದು ಅಪಕ್ವ ನಡೆ’ ಎಂದು 2015ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಗುಜರಾತಿ ಸಾಹಿತಿ ರಘುವೀರ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

‘ಪ್ರಶಸ್ತಿ ವಾಪಸ್ ಮಾಡುವ ಮೂಲಕ ಸಾಹಿತಿಗಳು ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು. ಆದರೆ ಇದು ಸರಿಯಾದ ಪ್ರತಿಭಟನಾ ಮಾರ್ಗವಲ್ಲ. ಸಾಹಿತಿಗಳು ತಮ್ಮ ಪ್ರತಿಭಟನೆ ಸೂಚಿಸಲು ಬೇರೆ ಹಲವು ಮಾರ್ಗಗಳಿದ್ದವು’ ಎಂದು ಹೇಳಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಚುನಾಯಿತಿ ಪ್ರತಿನಿಧಿಗಳ ರಾಜೀನಾಮೆಗೆ ಒತ್ತಾಯಿಸುವುದರ ಬದಲಿಗೆ ತಮ್ಮ ಅವಧಿ ಪೂರೈಸಲು ಅವರಿಗೆ ನಾವೆಲ್ಲರೂ ಅವಕಾಶ ನೀಡಬೇಕು’ ಎಂದು ಹೇಳಿದ್ದಾರೆ.

ಸಾಹಿತ್ಯ ಅಕಾಡೆಮಿ ತನ್ನ ಕೆಲಸ ಮಾಡಿದೆ: ‘ವಿಚಾರವಾದಿ ಬರಹಗಾರರ ಹತ್ಯೆಗೆ ಸಂತಾಪ ಸೂಚಿಸುವಲ್ಲಿ ಸಾಹಿತ್ಯ ಅಕಾಡೆಮಿ ಯಾವತ್ತೂ ಹಿಂಜರಿದಿಲ್ಲ’ ಎಂದು ರಘುವೀರ್ ಚೌಧರಿ ಹೇಳಿದ್ದಾರೆ.

‘ಅಕಾಡೆಮಿ ದೇಶವನ್ನು ನಡೆಸುವುದಿಲ್ಲ ಎಂಬುದನ್ನು ಪ್ರಶಸ್ತಿ ವಾಪಸ್‌ ಮಾಡುವುದಾಗಿ ಘೋಷಿಸಿದ ಸಾಹಿತಿಗಳು ಅರ್ಥಮಾಡಿಕೊಳ್ಳಬೇಕು. ಸಾಹಿತಿಗಳು ಮತ್ತು ವಿಚಾರವಾದಿಗಳ ಹತ್ಯೆ ವಿಚಾರದಲ್ಲಿ ಅಕಾಡೆಮಿ ತನ್ನ ಕರ್ತವ್ಯ ನಿರ್ವಹಿಸಿದೆ. ಪ್ರಶಸ್ತಿಗಳನ್ನು ವಾಪಸ್‌ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಎಲ್ಲರೂ ತಿಳಿದು ಕೊಳ್ಳಬೇಕು’ ಎಂದರು.

ಇಂಗ್ಲಿಷ್‌ ಮಾಧ್ಯಮದಲ್ಲೂ ಮಾತೃಭಾಷೆ: ಇನ್ನು, ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲೇ ನೀಡಬೇಕು. ಆಗ ಮಾತ್ರ ಹೊಸ ತಲೆಮಾರಿನವರಿಗೆ ನಮ್ಮ ಸಂಸ್ಕೃತಿ ಆಚಾರ–ವಿಚಾರಗಳು ತಿಳಿಯುತ್ತವೆ. ಪ್ರೌಢಶಿಕ್ಷಣದಲ್ಲಿ ಮಕ್ಕಳಿಗೆ ಇಂಗ್ಲಿಷ್ ಅನ್ನು ಪರಿಚಯಿಸಬಹುದು ಎಂದು ಗುಜರಾತಿ ಸಾಹಿತಿ ರಘುವೀರ್‌ ಅಭಿಪ್ರಾಯ ಪಟ್ಟಿದ್ದಾರೆ.

ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲೂ ಮಾತೃ ಭಾಷೆಯನ್ನು ಕಡ್ಡಾಯ ಮಾಡಬೇಕು. ಪ್ರಾಥಮಿಕದಿಂದ ಪ್ರೌಢಶಾಲಾ ಶಿಕ್ಷಣದವರೆಗೂ ತಮಿಳಿನಲ್ಲಿ ಶಿಕ್ಷಣ ನೀಡುವುದನ್ನು ತಮಿಳುನಾಡಿನಲ್ಲಿ ಕಡ್ಡಾಯ ಮಾಡಲಾಗಿದೆ. ಗುಜರಾತಿ ಭಾಷೆಯಿಂದ ದೂರ ಹೋಗುತ್ತಿರುವ ಮತ್ತು ಇಂಗ್ಲಿಷ್‌ ಅನ್ನು ಕೊಂಡಾಡುತ್ತಿರುವ ಜನ ಇರುವ ಇಲ್ಲೂ ಅಂತಹ ನೀತಿಯನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದ್ದಾರೆ.

ಸಾಹಿತಿ ರಘುವೀರ್‌ ಚೌಧರಿ
2015ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಗುಜರಾತಿ ಸಾಹಿತಿ ರಘುವೀರ್ ಚೌಧರಿ ಆಯ್ಕೆಯಾಗಿದ್ದಾರೆ ಎಂದು ಜ್ಞಾನಪೀಠ ಆಯ್ಕೆ ಸಮಿತಿಯು ಮಂಗಳವಾರ ಘೋಷಿಸಿದೆ.

ಈ ಮೂಲಕ ದೇಶದ ಅತ್ಯುನ್ನತ ಸಾಹಿತ್ಯ ಗೌರವ ಎಂದೇ ಪರಿಗಣಿಸಲಾಗುವ ಜ್ಞಾನಪೀಠ ಪ್ರಶಸ್ತಿ ಪಡೆದ 51ನೇ ಸಾಹಿತಿ ಹಾಗೂ ಗುಜರಾತಿನ ನಾಲ್ಕನೇ ಸಾಹಿತಿ ಎಂಬ ಹೆಗ್ಗಳಿಕೆಗೆ ರಘುವೀರ್‌ ಪಾತ್ರರಾಗಿದ್ದಾರೆ.

77ರ ಹರೆಯದ ರಘುವೀರ್‌ ಅವರ ಬರಹಗಳಿಗೆ ಹಲವು ಗೌರವಗಳು ಸಂದಿವೆ. ಅವರ ‘ಉಪರ್ವಾಸ್’ ಕಾದಂಬರಿಗೆ 1977ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅವರ ಬರಹಗಳಿಗೆ ‘ಕುಮಾರ್‌ ಚಂದ್ರಕಾ’ ಪುರಸ್ಕಾರ, ‘ಉಮಾ ಸ್ನೇಹರಶ್ಮಿ’ ಮತ್ತು ‘ರಂಜಿತ್‌ರಾಮ್ ಚಿನ್ನದ ಪದಕ’ದ ಗೌರವ ಸಂದಿದೆ.

ಸದ್ಯ ಅವರು ಪೌರಾಣಿಕ ಪಾತ್ರ ‘ಬಾಹುಬಲಿ’ಯನ್ನು ಆಧರಿಸಿದ ಕಾದಂಬರಿಯೊಂದನ್ನು ಬರೆಯುತ್ತಿದ್ದಾರೆ. ಇದು ಅಹಿಂಸೆಯನ್ನು ಬೋಧಿಸುವ ಕಾದಂಬರಿ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT