ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬಲಿಪಾಡ್ಯಮಿ:ಬಸದಿಯಲ್ಲಿ ಬಲಿ ಚಕ್ರವರ್ತಿ

Last Updated 27 ಅಕ್ಟೋಬರ್ 2011, 10:45 IST
ಅಕ್ಷರ ಗಾತ್ರ

ಬಾದಾಮಿ: ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಎಲ್ಲ ಹಬ್ಬಗಳಿಗಿಂತ ದೀಪಾವಳಿ ಹಬ್ಬ ವೈಶಿಷ್ಟ್ಯ  ಹೊಂದಿದೆ. ಅಮವಾಸ್ಯೆಯ ದಿನ ಮಹಿಳೆಯರು ಮನೆ-ಮನೆಗಳಲ್ಲಿ ಮತ್ತು ವರ್ತಕರು ತಮ್ಮ ಅಂಗಡಿ ಗಳಲ್ಲಿ ಲಕ್ಷ್ಮೀ ಆರಾಧನೆಯನ್ನು ಭಕ್ತಿ ಶ್ರದ್ಧೆಯಿಂದ ಕೈಗೊಂಡು ದೀಪ ಬೆಳಗಿಸುವರು.

ದೀಪಾವಳಿ ಅಮಾವಾಸ್ಯೆಯ ಮಾರನೆಯ ದಿನ ಬಲಿಪಾಡ್ಯಮಿ ಆಚರಿಸುವರು.ಉತ್ತರ ಕರ್ನಾಟಕದಲ್ಲಿ ಕೃಷಿಕರು ಮನೆಯಲ್ಲಿ ಮಹಿಳೆಯರು ಬೆಳಿಗ್ಗೆ ಮನೆಯ ಬಾಗಿಲುಗಳ ಪಕ್ಕದಲ್ಲಿ ಗೋವಿನ ಸಗಣಿ ಯಿಂದ ಪಾಂಡ ವರನ್ನು ನಿರ್ಮಿಸಿ ಚಿನ್ನದ ಕಿರೀಟ, ಛತ್ರಿ, ಚಾಮರ, ಬೆಳ್ಗೊಡೆಯ ಸಂಕೇತವಾಗಿ ಹೊನ್ನಂಬ್ರಿ ಗಿಡದ ಹೊನ್ನಿನ ಹೂವು,ಕೆಂಪು ಉತ್ರಾಣಿ,ಬಿಳಿಯ ಹೊನ್ನಿಯ ಹೂವಿನಿಂದ ಅಲಂಕಾರ ಕೈಕೊಂಡು ಐದುಜನ ಪಾಂಡವರಿಗೆ ದಾರ ಸುತ್ತಿ ಮೊಸರನ್ನು ನೈವೇದ್ಯ ಮಾಡಿ ಶ್ರದ್ಧೆ ಹಾಗೂ ಭಕ್ತಿಯಿಂದ ಆರಾಧಿಸುವರು.

ಬಲಿಪಾಡ್ಯೆಯ ದಿನ ಬಲಿಚಕ್ರವರ್ತಿಯು ಭೂ ಲೋಕಕ್ಕೆ ಆಗಮಿಸಿ ದೀಪಗಳ ಬೆಳಕನ್ನು ಕಂಡು ಆನಂದಪಡುವನೆಂಬ ಪೌರಾಣಿಕ ಹಿನ್ನೆಲೆಯಿದೆ.ಬಲಿಯ ತ್ಯಾಗದಿಂದ ವಾಮನ ರೂಪಿಯಾದ ತ್ರಿವಿಕ್ರಮನು ವರ್ಷದಲ್ಲಿ ಒಂದು ದಿನ ಭೂಮಂಡಲದಲ್ಲಿ ರಾಜ್ಯಭಾರ ಮಾಡುವಂತೆ ಅನುಗ್ರಹಿಸಿದ ಕಾರಣ ದೀಪಾವಳಿ ಪಾಡ್ಯಮಿಯ ದಿನ ಬಲಿಚಕ್ರವರ್ತಿಯ ಆರಾಧನೆ ಕೆಲವೆಡೆ ನಡೆಯುತ್ತಿದೆ.

ಬಲಿಚಕ್ರವರ್ತಿಯ ಪೌರಾಣಿಕ ಹಿನ್ನೆಲೆಯ ಕಥೆಯನ್ನು ಸಾರುವ ಸಾಂಪ್ರದಾಯಿಕ ಮೂರ್ತಿ ಶಿಲ್ಪವನ್ನು ಚಾಲುಕ್ಯರ ಕಾಲದ ಕಲಾವಿದರು ಇಲ್ಲಿನ ಎರಡು ಹಾಗೂ ಮೂರನೆಯ ಬಸದಿಯ ಕಲ್ಲಿನಲ್ಲಿ ಸುಂದರವಾಗಿ ಅರಳಿಸಿದ್ದಾರೆ. ಮಹಾವಿಷ್ಣು ವಾಮನ ಅವತಾರ ದಿಂದ ತ್ರಿವಿಕ್ರಮನಾಗಿ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದಸುಂದರ ಶಿಲ್ಪವನ್ನು ವೀಕ್ಷಿಸಬಹುದಾಗಿದೆ.

ರಕ್ಕಸರ ಗುಂಪಿಗೆ ರಾಜನಾದ ಬಲಿಚಕ್ರವರ್ತಿಯು ಪಾತಾಳ ಮತ್ತು ಭೂಲೋಕವನ್ನು ಜಯಿಸಿ , ಸ್ವರ್ಗ ಲೋಕ ವನ್ನು ಗೆಲ್ಲಬೇಕೆಂಬ ಆಸೆಯಿಂದ ಅಶ್ವಮೇಧ ಯಾಗವನ್ನು ಕೈಗೊಂಡಾಗ ದೇವಾನು ದೇವತೆಗಳು ತತ್ತರಿಸಿ ವಿಷ್ಣುವಿಗೆ ಮೊರೆಹೋಗುವರು.

ವಿಷ್ಣುವು ವಾಮನ ಅವತಾರ ತಾಳಿ ಯಾಗ ನಡೆಸಿದ ಸ್ಥಳಕ್ಕೆ ಆಗ ಮಿಸಿ ಮೂರು ಹೆಜ್ಜೆಯನ್ನಿರಿಸಲು ಸ್ಥಳವನ್ನು ಕೊಡು ಎಂದು ಬಲಿಗೆ ಕೇಳಿದಾಗ ಮಹಾದಾನಿಯಾಗಿದ್ದ ಬಲಿ ಚಕ್ರವರ್ತಿಯು ಜಾಗ ಕೊಡಲು ಒಪ್ಪಿದನು. ವಿಷ್ಣು ವಾಮನ ರೂಪಿಯಾಗಿ ಬಂದದ್ದು ಬಲಿಚಕ್ರವರ್ತಿಯ ಗುರು ಶುಕ್ರಾಚಾರ್ಯರಿಗೆ ತಿಳಿದು ನೀನು ಯಾವ ವಾಗ್ದಾನ ವನ್ನು ಮಾಡ ಬೇಡವೆಂದರೂ ಬಲಿಚಕ್ರವರ್ತಿ ಯು ಕೊಟ್ಟ ಮಾತಿಗೆ ತಪ್ಪದೇ ಧರ್ಮದ ಮಾರ್ಗದಿಂದ

ಹಿಂದೆ ಸರಿಯಲಿಲ್ಲ. ಕಮಂಡಲಿನಿಂದ ತೀರ್ಥವನ್ನು ಪ್ರೋಕ್ಷಿಸಿದಾಗ ವಾಮನ ಭೂಮಿ-ಆಕಾಶದೆತ್ತರಕ್ಕೆ ಬೆಳೆದು ಒಂದು ಹೆಜ್ಜೆ ಭೂಮಿಗೆ ಇನ್ನೊಂದು ಹೆಜ್ಜೆಯನ್ನು ಆಕಾಶದಲ್ಲಿಟ್ಟು ಮೂರನೆಯ ಹೆಜ್ಜೆ ಯನ್ನು ಬಲಿಯ ತಲೆಯ ಮೇಲಿಟ್ಟು ಪಾತಾಳಕ್ಕೆ ತಳ್ಳಿದ ಪೌರಾಣಿಕ ಹಿನ್ನೆಲೆಯ ಕಥೆಯ ಮೂರ್ತಿ ಶಿಲ್ಪವನ್ನು ಕಾಣಬಹುದಾಗಿದೆ.

ತ್ರಿವಿಕ್ರಮನ ಮೂರ್ತಿಯ ಮೇಲೆ ರಾಹು,ಕೇತು ಕೆಳಗೆ ಬಲಿಚಕ್ರವರ್ತಿಯ ಪತ್ನಿ ವಿಂದ್ಯಾವಳಿ,ಶುಕ್ರಾಚಾರ್ಯ ಹಾಗೂ ಬಲಿಯ ಮಗ ನಮೂಚಿಯು ತ್ರಿವಿಕ್ರಮನ ಬಲಗಾಲನ್ನು ಅಪ್ಪಿಕೊಂಡು ಹಿಡಿದದ್ದು,ಸೇನಾಪತಿಗಳು ಖಡ್ಗವನ್ನು ಎಸೆಯುವುದು ಮತ್ತು ಮಂತ್ರಿ ಪರಿವಾರ ಶಿಲ್ಪದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT