ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕ್ಕಟ್ಟಿನಲ್ಲಿ ಪಶ್ಚಿಮ ಘಟ್ಟ ತಪ್ಪಲಿನ ಜನತೆ

Last Updated 2 ಜನವರಿ 2012, 9:40 IST
ಅಕ್ಷರ ಗಾತ್ರ

 ಹೆಬ್ರಿ: ವಿಶ್ವವಿಡೀ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರೆ ಇಲ್ಲಿಗೆ ಸಮೀಪದ ಕಬ್ಬಿನಾಲೆ ಆಸುಪಾಸಿನ ಗ್ರಾಮಗಳ ಜನತೆ ಮಾತ್ರ ಆ ಸಂಭ್ರಮದ ಲವಲೇಶವೂ ಇಲ್ಲ.

ನಕ್ಸಲ್ ನಿಗ್ರಹ ಪಡೆಯ ಯೋಧರ ಬಿರುಸಿನ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲೇ ನಾಡ್ಪಾಲು ಗ್ರಾಮದ ತೆಂಗುಮಾರು ದಟ್ಟಾರಣ್ಯಕ್ಕೆ ಬುಟ್ಟಿ ಹೆಣೆಯಲು ಬೆತ್ತ ತರಲೆಂದು ಹೋಗಿದ್ದ ಮಲೆಕುಡಿಯ ಜನಾಂಗದ ಕಬ್ಬಿನಾಲೆ ಸದಾಶಿವ ಗೌಡ ಅವರನ್ನು ಅಪಹರಿಸಿ ಶಾಂತಾಬೋಳೆರಿ ಗುಡ್ಡೆಯ ಆಲದ ಮರದ ಬುಡದಲ್ಲಿ ಮರಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿ ಕೊಂದಿರುವುದು ನಾಡ್ಪಾಲು ಗ್ರಾಮದ ತಿಂಗಳಮಕ್ಕಿ ಪರಿಸರದ ಕಾಡಿನ ಅಂಚಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ನಕ್ಸಲರು ಕರಾವಳಿಯಲ್ಲಿ ಇದುವರೆಗೆ ಕೊಲೆ ಮಾಡಿದ್ದಾರೆ ಎನ್ನಲಾದ ವ್ಯಕ್ತಿಗಳಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢವಾಗಿದ್ದವರು. ಆದರೆ ಸದಾಶಿವ ಗೌಡ ಅವರಂತಹ ಕೆಳವರ್ಗದ ಜನರ ಸಮಸ್ಯೆಗೆ ಸ್ಪಂದಿಸಿ ಅನುಕಂಪಕ್ಕೆ ಗಿಟ್ಟಿಸುವ ತಂತ್ರ ನಡೆಸುತ್ತಿದ್ದ ನಕ್ಸಲರು ಕೆಳವರ್ಗದ ವ್ಯಕ್ತಿಯತ್ತಲೂ ಬಂದೂಕಿನ ನಳಿಕೆಯನ್ನು ಗುರಿ ಮಾಡಿರುವುದು ಸ್ಥಳೀಯರನ್ನು ಅಧೀರರನ್ನಾಗಿಸಿದೆ.

ಈ ಹಿಂದೆ ಮೆಣಸಿನಹಾಡ್ಯದ ಗಿರಿಜನ ಮುಖಂಡ ಶೇಷಯ್ಯ ಹತ್ಯೆ ಬಿಟ್ಟರೆ ನಕ್ಸಲರು ಜನಸಾಮಾನ್ಯರನ್ನು ಕೊಂದ ಘಟನೆ ನಡೆದಿರಲಿಲ್ಲ. ಕರಾವಳಿಯಲ್ಲಿ ನಕ್ಸಲರಿಂದ ಹತ್ಯೆಯಾದ ಕೇಶವ ಯಡಿಯಾಳ, ಭೋಜ ಶೆಟ್ಟಿ ಸ್ಥಳೀಯ ಮುಂದಾಳುಗಳಾಗಿದ್ದವರು.

`ನಕ್ಸಲರು ಬಂದಿದ್ದನ್ನು ಪೊಲೀಸರಿಗೆ ಹೇಳದಿದ್ದರೆ ಅವರು ಸುಮ್ಮನಿರುವುದಿಲ್ಲ. ಕಾರ್ಯಚರಣೆಗೆ ಸಹಕರಿಸುವುದಿಲ್ಲ ಎಂದು ಸ್ಥಳೀಯರನ್ನೇ ಗದರಿಸುತ್ತಾರೆ. ಹೇಳಿದರೆ ನಮ್ಮನ್ನು ನಕ್ಸಲರು ಬಿಡುವುದಿಲ್ಲ~ ಎಂದು ನಕ್ಸಲ್ ಪೀಡಿತ ಪ್ರದೇಶದ ನಿವಾಸಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಇಂದು ಸದಾಶಿವ ಗೌಡ. ಮುಂದೆ ನಾವು~ ಎಂದು ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. `ನಕ್ಸಲ್ ಸಮಸ್ಯೆಗೆ ಅಂತ್ಯ ಇಲ್ಲವೆ?~ ಎಂದು ಅವರು ಮರು ಪ್ರಶ್ನೆ ಹಾಕುತ್ತಾರೆ.

ನಕ್ಸಲ್ ಚಟುವಟಿಕೆಗೆ 10 ವರ್ಷ:
ಪಶ್ಚಿಮ ಘಟ್ಟದ ತಪ್ಪಲಿನ ಹಚ್ಚ ಹಸಿರಿನ ಹಾದಿಯಲ್ಲಿ ನಕ್ಸಲರ ಚಟುವಟಿಕೆ ಕಾಣಿಸಿಕೊಂಡು ಹತ್ತು ವರ್ಷಗಳೇ ಸಂದಿದೆ. 2000 ಇಸವಿ ವೇಳೆ ಪಶ್ಚಿಮ ಘಟ್ಟದ ತಪ್ಪಲಲ್ಲಿ  ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟದ ನೆಪದಲ್ಲಿ ನಕ್ಸಲರು ಕಾಣಿಸಿಕೊಂಡ ಬಗ್ಗೆ ಗುಸು ಗುಸು ಆರಂಭವಾಗಿತ್ತು.

ಸಶಸ್ತ್ರ ನಕ್ಸಲರ ಇರುವಿಕೆಗೆ ಪುರಾವೆ ದೊರಕಿದ್ದು 2002ರ ನವೆಂಬರ್ 6ರಂದು ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯ ಪ್ರದೇಶದಲ್ಲಿ ನಕ್ಸಲೀಯರ ತರಬೇತಿ ನಡೆಯುತ್ತಿದ್ದಾಗ ಬಂದುಕಿನಿಂದ ಆಕಸ್ಮಿಕವಾಗಿ ಹಾರಿದ್ದ ಗುಂಡೊಂದು ವೃದ್ಧೆ ಚೀರಮ್ಮ ಕಾಲಿಗೆ ತಗುಲಿದ ಬಳಿಕವಷ್ಟೆ. ಕಾರ್ಕಳ ತಾಲ್ಲೂಕಿನ ಈದು ಬಲ್ಯೊಟ್ಟುವಿನಲ್ಲಿ 2003 ನವೆಂಬರ್ 17ರಂದು ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕಿ ಹಾಜಿಮಾ ಮತ್ತು ಪಾರ್ವತಿ ಅವರು ಮೃತಪಟ್ಟ ನಂತರದ್ದು ನೆತ್ತರಿನ ಚರಿತ್ರೆ.

ಸದಾಶಿವ ಗೌಡ ಹತ್ಯೆ ಸೇರಿ ಇದುವರೆಗೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಕ್ಸಲರು 10 ಮಂದಿ ನಾಗರಿಕ ಬಲಿ ಪಡೆದಿದ್ದಾರೆ. ಮೂವರು ಪೊಲೀಸರು ನಕ್ಸಲರ ಜತೆಗಿನ ಕಾದಾಟದ ವೇಳೆ ಮೃತಪಟ್ಟಿದ್ದಾರೆ. ನಕ್ಸಲ್ ತಂಡದ 12 ಮಂದಿ ಕೂಡಾ ಬಲಿಯಾಗಿದ್ದಾರೆ. ಈ ಪೈಕಿ ಮೂವರು ನಾಗರಿಕರು (ಸೀತಾನದಿ ಭೋಜ ಶೆಟ್ಟಿ, ಸುರೇಶ ಶೆಟ್ಟಿ, ಸದಾಶಿವ ಗೌಡ) ಮೃತಪಟ್ಟಿದ್ದು ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಬುದು ವಿಶೇಷ. ಈ ರಕ್ತಪಾತಕ್ಕೆ ಕೊನೆ ಎಂದು ಎಂಬುದು ಸ್ಥಳೀಯ ನಾಗರಿಕರ ಪ್ರಶ್ನೆ?

ಪ್ರಬಲರಾದ ನಕ್ಸಲರು: ಮುಟ್ಲುಪಾಡಿಯ ಮೈರೋಳಿ ಕಾನನದಲ್ಲಿ 2010 ಮಾರ್ಚ್ 1ರಂದು ಪೊಲೀಸರ ಗುಂಡೇಟಿಗೆ ನಕ್ಸಲ್ ಕುತ್ಲೂರು ವಸಂತ ಯಾನೆ ಆನಂದ ಹತನಾದ ಬಳಿಕ ಈ ಪ್ರದೇಶದಲ್ಲಿ ನಕ್ಸಲರ ಓಡಾಟ ತೀರಾ ಕಡಿಮೆ ಆಗಿತ್ತು.

ನಕ್ಸಲರು ಕೂಡಾ ದುಸ್ಸಾಹಸಕ್ಕೆ ಕೈಹಾಕಿರಲಿಲ್ಲ. ಕುಂದಾಪು ತಾಲ್ಲೂಕು, ಶೃಂಗೇರಿ ತಾಲ್ಲೂಕಿನ ವಿವಿಧೆಡೆ ಹಾಗೂ ಕಾರ್ಕಳ ತಾಲ್ಲೂಕಿನ ನಾಡ್ಪಾಲು, ಕಬ್ಬಿನಾಲೆ ಮತ್ತು ಈದು, ಬೆಳ್ತಂಗಡಿ ತಾಲ್ಲೂಕಿನಲ್ಲಿ ಅಪರೂಪಕ್ಕೊಮ್ಮಮ್ಮೆ ನಕ್ಸಲರು ಕಾಣಿಸಿಕೊಂಡು ಕಣ್ಮರೆಯಾಗುತ್ತಿದ್ದರು. ಜುಲೈನಲ್ಲಿ ನಕ್ಸಲ್ ಹುತಾತ್ಮ ಸಪ್ತಾಹದಲ್ಲೂ ಸುಮ್ಮನಿದ್ದ ನಕ್ಸಲರು ಈದೀಗ ಕುಂದಾಪುರ ಮತ್ತು ಕಾರ್ಕಳ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದಾರೆ.
 
ಅಷ್ಟೇ ಅಲ್ಲ ಸದಾಶಿವ ಗೌಡ ಅವರ ಹತ್ಯೆ ನಡೆಸಿ `ಇದು ಎಚ್ಚರಿಕೆ ಮಾತ್ರ~ ಎಂದೂ ಪ್ರತಿಕ್ರಿಯಿಸಿದ್ದಾರೆ. ಸದಾಶಿವನ ಶವ ಪತ್ತೆಯಾದರೆ ಮರುದಿನವೇ ಪೊಲೀಸರ ಕಾರ್ಯಚರಣೆಯನ್ನು ಲೆಕ್ಕಿಸದೆ ಕಾರ್ಕಳದ ಮಾಳ ಪರಿಸರದಲ್ಲಿ ಮತ್ತು ಗುರುವಾರ ಶೃಂಗೇರಿ ಪರಿಸರದಲ್ಲಿ ಬ್ಯಾನರ್ ಕಟ್ಟಿದ್ದಾರೆ. ಈ ಬೆಳವಣಿಗೆ ನಕ್ಸಲರು ಮತ್ತೆ ಪ್ರಬಲರಾಗಿರುವುದನ್ನು ಸಾಬೀತು ಪಡಿಸಿದೆ. ಅಲ್ಲದೇ ಪಶ್ಚಿಮ ಘಟ್ಟದ ತಪ್ಪಲಿನ ಜನರ ಮನದಲ್ಲಿ ಮತ್ತಷ್ಟು ಭಯ ಹುಟ್ಟಿಸಲು ಕಾರಣವಾಗಿದೆ.

`ಎಲ್ಲವನ್ನು ಕಂಡು ಕೇಳಿ ಹೈರಾಣಾದ ಜನತೆ ಮಾತ್ರ ತಲೆ ಮೇಲೆ ಕೈಯಿಟ್ಟು ದಿಕ್ಕು ತೋಚದಂತಾಗಿ ಅಪರಿಚಿತರನ್ನು ಕಂಡರೆ ಭಯಪಟ್ಟು ದೂರ ಹೋಗುವ ಸ್ಥಿತಿ ನಿರ್ಮಾಣವಾಗಿದೆ, ಊರು ಬಿಡುವುದು ಸುಲಭದ ಮಾತಲ್ಲ,ಬದುಕು ಹೇಗೆ ಎಂಬುದೇ ಚಿಂತೆಯಾಗಿದೆ~ ಎಂದು ಕಬ್ಬಿನಾಲೆಯ ಶ್ರಿಕರ ಭಾರದ್ವಾಜ್ ಹೇಳುತ್ತಾರೆ.
ಸದಾಶಿವನ ಕೊಲೆ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
 

`ಪೊಲೀಸರಿಗೆ ಸವಾಲು~

`ಪೊಲೀಸ್ ಕಾರ್ಯಾಚರಣೆ ನಡುವೆಯೂ ನಕ್ಸಲರು ಅಲ್ಲಲ್ಲಿ ಕಾಣಿಸಿಕೊಳ್ಳುವುದು ಪೊಲೀಸರಿಗೆ ಸವಾಲು ಹಾಕಿದಂತೆ ಕಾಣುತ್ತಿದೆ~ ಎಂದು ನಾಡ್ಪಾಲಿನ ಜನತೆ ಭಯ ವ್ಯಕ್ತಪಡಿಸಿದರು.

`ಪೊಲೀಸರು ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ತಂತ್ರಜ್ಞಾನ ಬಳಸಿ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಇದು ತಕ್ಕಮಟ್ಟಿನ ಯಶಸ್ಸು ಸಾಧಿಸಿದೆ ಎಂದೂ ಎಎನ್‌ಎಫ್ ಅಧಿಕಾರಿಗಳು ಹೇಳಿಕೊಂಡಿದ್ದರು. ಇದಾದ ಬೆನ್ನಲ್ಲೇ ನಕ್ಸಲರು ನಾಗರಿಕರೊಬ್ಬರ ಹತ್ಯೆ ನಡೆಸಿ ಪ್ರತ್ಯುತ್ತರ ನೀಡಿದ್ದಾರೆ. ಎಎನ್‌ಎಫ್ ನೇತೃತ್ವ ವಹಿಸಿರುವ ಡಿಐಜಿ ಅಲೋಕ್ ಕುಮಾರ್ ಪಾಲಿಗೂ ಕಬ್ಬಿನಾಲೆಯ ಬೆಳವಣಿಗೆ ಸವಾಲೊಡ್ಡಿದೆ~ ಎಂಬುದು ಸ್ಥಳೀಯರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT