ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಗೋದಾಮು... ಅಲ್ಲಲ್ಲ ಶೌಚಾಲಯ!

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಮಗಳೂರು ತಾಲ್ಲೂಕಿನ ಬೆಳವಾಡಿ ಗ್ರಾಮದ ರಂಗಪ್ಪ ಎಂಬುವವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆಗ ಮುಖ್ಯಮಂತ್ರಿಗಳ ಒಂದು ದಿನದ ಉಪಯೋಗಕ್ಕಾಗಿ ರಂಗಪ್ಪ ಅವರ ಮನೆಗೆ ಸುಸಜ್ಜಿತ ಶೌಚಾಲಯ ಮತ್ತು ಸ್ನಾನದ ಕೋಣೆ ನಿರ್ಮಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಅತ್ತ ಹೋದ ಬಳಿಕ ಇತ್ತ ಆ ಶೌಚಾಲಯ ಗೋದಾಮಾಗಿ ಮಾರ್ಪಟ್ಟಿತು!

ಜಿಲ್ಲಾ ಕೇಂದ್ರ ಚಿಕ್ಕಮಗಳೂರು ನಗರಕ್ಕೆ ಸಮೀಪದಲ್ಲೇ ಅಂಬಳೆ ಎಂಬ ಗ್ರಾಮವಿದೆ. ಅಲ್ಲಿ ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನ ಮಹಿಳೆಯರು ಕೈಯಲ್ಲಿ ನೀರಿನ ಬಿಂದಿಗೆ ಹಿಡಿದು ಬೇಲಿ ಮರೆಗೆ ಹೋದರೆ, ಪುರುಷರು ಬೆಳ್ಳಂಬೆಳಿಗ್ಗೆ ಊರ ಮುಂದಿನ ಕೆರೆದಂಡೆ ಬದಿ `ಕೊಕ್ಕೊ~ ಆಡಲು ಕುಳಿತವರಂತೆ ಸಾಲಿಡಿದು ಬಹಿರ್ದೆಸೆಗೆ ಕೂರುತ್ತಾರೆ. ಇದನ್ನು ಕಂಡು, ರಸ್ತೆಯಲ್ಲಿ ಹಾದು ಹೋಗುವವರು ತಾವೇ ತಲೆ ತಗ್ಗಿಸಿಕೊಂಡು, ಮೂಗು ಮುಚ್ಚಿಕೊಂಡು ಹೋಗಬೇಕು. ಹೀಗೆ ಗ್ರಾಮದ ಬಹುತೇಕ ಮಂದಿ ರಸ್ತೆ ಬದಿಯೇ ಮಲ ವಿಸರ್ಜನೆ ಮಾಡಿ ಎದುರಿನ ಕೆರೆಯಲ್ಲಿ ತೊಳೆದುಕೊಂಡು ಒಂದಿನಿತೂ ನಾಚದೆ ಪ್ಯಾಂಟು, ಚೆಡ್ಡಿ ಏರಿಸಿಕೊಂಡು ಹೋಗುತ್ತಾರೆ. ಮತ್ತೆ ಅದೇ ನೀರಿನಲ್ಲಿ ಬಟ್ಟೆ ತೊಳೆಯಲು ಊರ ಮಹಿಳೆಯರು ಕೆರೆಗೆ ಬರುತ್ತಾರೆ. ದನಕರುಗಳಿಗೂ ಇದೇ ನೀರು ಕುಡಿಸಿ ಮೈ ತೊಳೆಯುತ್ತಾರೆ!

ಇಂತಹ ಪರಿಸ್ಥಿತಿ ರಂಗಪ್ಪ ಅವರ ಮನೆಗೆ ಅಥವಾ ಅಂಬಳೆ ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯಲ್ಲಿ ಅಡ್ಡಾಡಿದರೆ ಸಾಕು ಬಹಳಷ್ಟು ಹಳ್ಳಿಗಳಲ್ಲಿ ಶೌಚಾಲಯಗಳು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ, ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಹೀಗೆ ಯಾವುದೇ ವ್ಯತ್ಯಾಸವಿಲ್ಲದೆ ಎಲ್ಲರೂ ಬಹಿರ್ದೆಸೆಗೆ ಬಯಲು ಶೌಚಾಲಯವನ್ನೇ ಅವಲಂಬಿಸಿರುವ ಸಾಕಷ್ಟು ನಿದರ್ಶನಗಳು ಗೋಚರಿಸುತ್ತವೆ. ಸಂಪೂರ್ಣ ನೈರ್ಮಲ್ಯ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡಿರುವ ಅಲ್ಲಿನ ಬಹಳಷ್ಟು ಶೌಚಾಲಯಗಳು ಗೋದಾಮುಗಳಾಗಿ ಮಾರ್ಪಟ್ಟಿವೆ. ಕೃಷಿ ಯಂತ್ರೋಪಕರಣ ಇಡಲು, ಕುರಿ, ಮೇಕೆ, ದನ ಕರುಗಳನ್ನು ಕಟ್ಟಿ ಹಾಕಲು ಕೊಟ್ಟಿಗೆಗಳಾಗಿಯೂ ಬಳಕೆಯಾಗುತ್ತಿವೆ.

ಶರವೇಗದಲ್ಲಿ ಬೆಳೆಯುತ್ತಿರುವ ಮಧ್ಯಮ ನಗರಗಳಲ್ಲಿ ಒಂದೆನಿಸಿರುವ ಚಿಕ್ಕಮಗಳೂರು ಸುತ್ತಮುತ್ತಲಿನ ಹಳ್ಳಿಗಳನ್ನು ತನ್ನೊಡಲೊಳಕ್ಕೆ ಸೇರಿಸಿಕೊಳ್ಳುತ್ತಿದೆ. ಆದರೆ ಇಂತಹ ಹಳ್ಳಿಗಳು ಅತ್ತ ಹಳ್ಳಿಗಳಾಗಿಯೂ ಉಳಿಯದೆ, ಇತ್ತ ಪೂರ್ಣ ಪ್ರಮಾಣದಲ್ಲಿ ನಗರವಾಗಿಯೂ ಮಾರ್ಪಡದೆ ಅತಂತ್ರ ಸ್ಥಿತಿಯಲ್ಲಿಯೇ ಉಳಿಯುತ್ತಿವೆ. ನಗರ ಬೆಳೆಯುತ್ತಾ ಹಳ್ಳಿಯ ಸಮೀಪ ಬಂದಾಗ ಅಲ್ಲಿನ ಭೂಮಿಯ ಬೆಲೆ ಮಾತ್ರ ಗಗನಕ್ಕೇರುತ್ತಿದೆ. ಅದಕ್ಕೆ ತಕ್ಕಂತೆ ಜನರ ಜೀವನಮಟ್ಟ  ಸುಧಾರಣೆ ಕಾಣುತ್ತಿಲ್ಲ.

ಅಂಬಳೆಯಲ್ಲಿ ಯಾಕೀ ಪರಿಸ್ಥಿತಿ ಎಂದರೆ, `ಪ್ರತಿ ಕುಟುಂಬವೂ ಶೌಚಾಲಯ ಹೊಂದಬೇಕೆಂಬ ಆಶಯಕ್ಕೆ ಸ್ಥಳೀಯ ಪಂಚಾಯಿತಿಯಿಂದ ಉತ್ತಮ ಸ್ಪಂದನೆ ಇಲ್ಲ, ಹಾಗಾಗಿ ಗ್ರಾಮದಲ್ಲಿ ಆರೋಗ್ಯ, ನೈರ್ಮಲ್ಯದ ಅರಿವು ಮೂಡಿಲ್ಲ. ಈ ಪರಿಸ್ಥಿತಿ ಬಹಳ ವರ್ಷಗಳಿಂದ ಮುಂದುವರಿದುಕೊಂಡೇ ಬಂದಿದೆ. ಇಂದಿಗೂ ಅಂಬಳೆ ಗ್ರಾಮವಷ್ಟೇ ಅಲ್ಲ, ಅಂಬಳೆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲೂ ನೈರ್ಮಲ್ಯ ಸಾಧಿಸುವ ಗುರಿಯಲ್ಲಿ ಶೇ 53 ಮೀರಲು ಆಗಿಲ್ಲ. ಜಿಲ್ಲೆಯಲ್ಲಿ ಇನ್ನೂ 5 ಸಾವಿರ ಕುಟುಂಬಗಳು ಶೌಚಾಲಯಗಳನ್ನೇ ಹೊಂದಿಲ್ಲ~ ಎಂದು ವಿಷಾದಿಸುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು. ಈ ಎಲ್ಲ ಕುಟುಂಬಗಳಿಗೂ ಈ ವರ್ಷ ವಿವಿಧ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳಲು ಧನಸಹಾಯ ನೀಡುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಅವರು.

ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲ್ಲೂಕಿನ ಬಯಲು ಸೀಮೆ ಹಾಗೂ ಮೂಡಿಗೆರೆ ತಾಲ್ಲೂಕಿನ ಅರ್ಧ ಭಾಗದಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಮತ್ತು ನಿರ್ಮಿಸಿಕೊಂಡವನ್ನು ಬಳಸಲು ಜನರಿಂದ ಅಷ್ಟಾಗಿ ಸ್ಪಂದನೆ ಇಲ್ಲ. ಈ ನಾಲ್ಕು ತಾಲ್ಲೂಕುಗಳಲ್ಲಿ ನೈರ್ಮಲ್ಯ ಆಂದೋಲನಕ್ಕೆ ಹಿನ್ನಡೆಯಾಗಿದೆ. ಆದರೆ, ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿ ತಾಲ್ಲೂಕುಗಳಲ್ಲಿ ಶೌಚಾಲಯ ಬಳಕೆ ಉತ್ತಮವಾಗಿದೆ. ಜನರಲ್ಲಿ ಆರೋಗ್ಯ, ನೈರ್ಮಲ್ಯದ ಅರಿವು ಇದ್ದು, ತಮ್ಮ ಸುತ್ತಲಿನ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ.

ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇ 79.24ರಷ್ಟಿದೆ. ಸಾಕ್ಷರತೆ ಸಾಧಿಸಿದ ರಾಜ್ಯದ 10 ಮುಂಚೂಣಿ ಜಿಲ್ಲೆಗಳಲ್ಲಿ ಚಿಕ್ಕಮಗಳೂರು 8ನೇ ಸ್ಥಾನ ಪಡೆದಿದೆ. ಸಾಕ್ಷರತೆಗೆ ಹೋಲಿಸಿದರೆ ಈವರೆಗೂ ನೈರ್ಮಲ್ಯದಲ್ಲಿ ಹಿಂದುಳಿದಿತ್ತು. ಆದರೆ ಕಳೆದ ವರ್ಷ ರಾಜ್ಯದಲ್ಲಿ ನೈರ್ಮಲ್ಯ ಸಾಧನೆಯಲ್ಲಿ 5ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 3ನೇ ಸ್ಥಾನಕ್ಕೆ ಜಿಗಿದಿರುವುದು ಆಶಾದಾಯಕ ಬೆಳವಣಿಗೆ. ಜಿಲ್ಲೆಯಲ್ಲಿ ಶೇ 92ರಷ್ಟು ಕುಟುಂಬಗಳು ಶೌಚಾಲಯ ಹೊಂದಿವೆ. ಇದು ಜಿಲ್ಲಾ ಪಂಚಾಯಿತಿ ನೀಡುವ ಅಂಕಿ ಸಂಖ್ಯೆ. ಆದರೆ ವಾಸ್ತವದಲ್ಲಿ, ಅಸ್ತಿತ್ವದಲ್ಲಿರುವ ಶೌಚಾಲಯಗಳೆಲ್ಲವೂ ಬಳಕೆಯಾಗುತ್ತಿವೆಯೇ ಎನ್ನುವುದು ಯಕ್ಷ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT