ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಡಾನ್ ಗಾನಬಜಾನ...

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ನಗರದ ಒಂದು ಜನನಿಬಿಡ ರಸ್ತೆ. ಕೆಂಗಣ್ಣು ಬೀರಿ ನಿಲ್ಲಿಸಿದ ಕೆಂಪುದೀಪವನ್ನು ಬೈದುಕೊಳ್ಳುತ್ತಾ, ವಾಹನಗಳ ಸದ್ದಿಗೆ ಮುಖ ಸಿಂಡರಿಸುತ್ತಾ, ಕಾರಿನಿಂದ ಹೊರಗೆ ಕಣ್ಣು ಹರಿದವು. ಅಲ್ಲಿ ಫುಟ್‌ಪಾತ್‌ನಲ್ಲಿ ವ್ಯಕ್ತಿಯೊಬ್ಬ ನಿಂತಿದ್ದ. ಸಣ್ಣಗೆ ಕಂಪಿಸುತ್ತಿದ್ದ. ಮೈಕೈಯೆಲ್ಲ ಸಿಮೆಂಟ್ ದೂಳು. ಬಹುಶಃ, ದಿನವಿಡೀ ದುಡಿದು ದಣಿದಿರಬೇಕು. ಈ ವ್ಯಕ್ತಿ ಯಾಕೆ ನಿಂತಲ್ಲೇ ಮೈ ಅಲುಗಿಸುತ್ತಿದ್ದಾನೆ ಎಂದು ಕಣ್ಣು ಕಿರಿದಾಗಿಸಿಕೊಂಡು ನೋಡಿದರೆ, ಅವನ ಕಿವಿಗಳಿಂದ ಇಳಿಬಿದ್ದು ಜೇಬಿನಲ್ಲಿ ಮುಖ ಮರೆಸಿಕೊಂಡ ಕಪ್ಪನೆ ವೈರುಗಳು. ಓಹ್, ಆತ ಮೊಬೈಲ್‌ನಿಂದ ಹಾಡು ಕೇಳುತ್ತಿದ್ದಾನೆ! ಹಾಡು ಪಸಂದಿರಬೇಕು, ಅದರ ಲಯಕ್ಕೆ ತಕ್ಕಂತೆ ದೇಹದಲ್ಲಿ ಕಂಪನ.

ಮೇಲಿನ ಪ್ರಸಂಗ ಹೇಳಿದ್ದು ರಮೇಶ್ ಅರವಿಂದ್. ಅವರನ್ನೀಗ `ಡಾನ್ ರಮೇಶ್~ ಎಂದರೆ ಹೆಚ್ಚು ಸರಿಯಾದೀತು.

ರಮೇಶ್ ಮತ್ತೊಂದು ಪ್ರಸಂಗ ಹೇಳಿದರು. ಕಾರಿನಲ್ಲಿ ಹೋಗುವಾಗ ಎಫ್‌ಎಂ ರೇಡಿಯೊ ಕೇಳುವುದು ಅವರ ರೂಢಿ. ಜಾಕಿಗಳ ಮಾತು ಹಾಗೂ ಜಾಹೀರಾತು ತಪ್ಪಿಸುತ್ತ, ಚಾನೆಲ್‌ನಿಂದ ಚಾನೆಲ್‌ಗೆ ಜಿಗಿದು ಹಾಡನ್ನಷ್ಟೇ ಕೇಳುವುದು ಅವರಿಗಿಷ್ಟ. ಆದರೆ, ಅವತ್ತು ಹಾಡುಗಳ ನಡುವೆ ಜಾಕಿಗಳು ಮೂಗು ತೂರಿಸುತ್ತಲೇ ಇಲ್ಲ. ಪ್ರಸಾರವಾಗುತ್ತಿದ್ದ ಹಾಡುಗಳಂತೂ ಒಂದಕ್ಕಿಂತ ಒಂದು ಮಧುರ. `ಇದೇನು ಅದ್ಭುತ~ ಎಂದು ಉದ್ಗರಿಸಿದರೆ, ಡ್ರೈವರ್ ಹೇಳಿದ್ದು- `ಇವು ಎಫ್‌ಎಂ ಹಾಡುಗಳಲ್ಲ. ನನ್ನ ಮೊಬೈಲ್‌ನಿಂದ ಡೌನ್‌ಲೋಡ್ ಮಾಡಿದ ಹಾಡುಗಳು~.

ಈ ಪ್ರಸಂಗಗಳನ್ನು ರಮೇಶ್ ಹೇಳಿದ್ದು ಡಾನ್ ಗುಂಗಿನಲ್ಲಿ. ಹಾಂ, ಅದು `ನಮ್ಮಣ್ಣ ಡಾನ್~ ಚಿತ್ರದ ಗೀತೆಗಳ ಅನಾವರಣದ ಸಂದರ್ಭ. ಗೀತೆಗಳ ಬಿಡುಗಡೆ ಎಂದರೆ ಅಲ್ಲೊಂದು ಧ್ವನಿಮುದ್ರಿಕೆ (ಸೀಡಿ) ಅಥವಾ ಧ್ವನಿಸುರುಳಿ ಇರಬೇಕಷ್ಟೆ. ಆದರೆ, ಡಾನ್ ಬಳಗ ಅಂಥ ಯಾವ ಸರಕುಗಳನ್ನೂ ಇಟ್ಟುಕೊಂಡಿರಲಿಲ್ಲ. ಮೊಬೈಲಿನಿಂದ ಮೊಬೈಲಿಗೆ ಹಾಡು ಎನ್ನುವುದು ಅವರ ದಾರಿ.

`ನಮ್ಮಣ್ಣ ಡಾನ್~ ರಮೇಶ್ ಅರವಿಂದ್ ನಿರ್ದೇಶನದ ಹೊಸಚಿತ್ರ. ಕಥೆ ಮತ್ತು ಸಂಭಾಷಣೆಯೂ ಅವರದ್ದೇ (ನೆರವು: ಡಿ.ಬಿ.ಸಿ.ಶೇಖರ್). ನಿರ್ಮಾಪಕ ರವಿ ಜೋಶಿ ರಮೇಶ್ ಗೆಳೆಯರು. ಚಿತ್ರತಂಡದ ಎಲ್ಲರೂ ಗೆಳೆಯರೇ ಆದುದರಿಂದ ಡಾನ್ ಚಿತ್ರದ ಮೂಲಕ `ಗೀತ ಪ್ರಯೋಗ~ಕ್ಕೆ ರಮೇಶ್ ಮುಂದಾಗಿದ್ದಾರೆ. ಆಸಕ್ತ ಸಹೃದಯರು ಚಿತ್ರದಲ್ಲಿ ತಮಗಿಷ್ಟವಾದ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಪ್ರಯೋಗವಿದು. ಕನ್ನಡ ಸಿನಿಮಾಗಳ ಮಟ್ಟಿಗೆ ಇಂಥ ಪ್ರಯತ್ನ ಇದೇ ಮೊದಲು. ಡಾನ್ ಎಂದರೆ ತಮಾಷೇನಾ?
`ನಮ್ಮ ಚಿತ್ರದಲ್ಲಿರೋದು ಮೂರು ಗೀತೆಗಳು (ಸಂಗೀತ: ಮ್ಯಾಥ್ಯೂಸ್ ಮನು).

ಹಾಡುಗಳು ಕಡಿಮೆ ಇರೋದರಿಂದ ಸೀಡಿ ಮಾಡಬೇಕೆಂದರೆ ಮತ್ತೊಂದು ಸಿನಿಮಾದ ಗೀತೆಗಳನ್ನು ಆಶ್ರಯಿಸಬೇಕು. ಅಲ್ಲದೆ ನಮ್ಮ ಚಿತ್ರದ ಮೂರರಲ್ಲಿ ಮೂರೂ ಕೇಳುಗರಿಗೆ ಇಷ್ಟವಾಗುತ್ತದೆಂದು ಏನು ಗ್ಯಾರಂಟಿ? ಅವರು ತಮ್ಮಿಷ್ಟದ ಗೀತೆಯನ್ನಷ್ಟೇ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಮೊದಲ ಕೆಲವು ದಿನ ಐಡಿಯಾ ಮೂಲಕ ಈ ಸೇವೆಯನ್ನು ಪಡೆಯಬಹುದು. ಆಮೇಲೆ ಎಲ್ಲ ಮೊಬೈಲ್ ಕಂಪನಿಗಳ ಮೂಲಕವೂ ಡಾನ್ ಗೀತೆಗಳು ದೊರೆಯಲಿವೆ~ ಎಂದು ರಮೇಶ್ ವಿವರಿಸಿದರು.

`ನಮ್ಮಣ್ಣ ಡಾನ್~ ಚಿತ್ರದ ಗೀತೆಗಳನ್ನು ಡೌನ್‌ಲೋಡ್ ಪ್ರಕ್ರಿಯೆಯ ಸಂಕೇತವಾಗಿ ರಮೇಶ್ `ಹಾರ್ಟ್~ ಪದವನ್ನು ಆರಿಸಿಕೊಂಡಿದ್ದಾರೆ. ಏಛಿಚ್ಟಠಿ ಎನ್ನುವ ಇಂಗ್ಲಿಷ್ ಅಕ್ಷರಗಳನ್ನು ಬಳಸುವ ಮೂಲಕ ಗೀತೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ರಮೇಶ್ ಪ್ರಕಾರ, `ಸಿನಿಮಾಗೀತೆಗಳ ಪಾಲಿಗೆ ಮೊಬೈಲ್ ಭವಿಷ್ಯದಲ್ಲಿ ಅಕ್ಷಯಪಾತ್ರೆಯಿದ್ದಂತೆ. ಸರ್ವವ್ಯಾಪಿಯಾಗಿರುವ ಮೊಬೈಲ್ ಮೂಲಕ ಜನರನ್ನು ತಲುಪುವುದು ಸುಲಭ~.
www.facebook.com/NamAnnaDonಚಿತ್ರದ ವಿವರಗಳು ಲಭ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT