ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಯಂತ್ರವೂ ಕಲೆ

Last Updated 30 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಗ್ಯಾಲರಿ ಸುಮುಖದಲ್ಲಿ ಅ. 5ರ ವರೆಗೆ ಖ್ಯಾತ ಕಲಾವಿದ ಪರೇಶ್ ಮೈಥಿ ಅವರ ಅಪರೂಪದ ಚಿತ್ರಕಲಾಕೃತಿ, ಶಿಲ್ಪಗಳು ಹಾಗೂ ಯಂತ್ರದ ಬಿಡಿಭಾಗಗಳನ್ನು ಅಳವಡಿಸಿ ತಯಾರಿಸಿದ ಆಕರ್ಷಕ ಯಂತ್ರಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ.

ಈ ಕಲಾಕೃತಿಗಳೆಲ್ಲವೂ ಈಚೆಗೆ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಪ್ರದರ್ಶನಗೊಂಡಿದ್ದವು. ಅಲ್ಲಿನ ಕಲಾರಸಿಕರ  ಮೆಚ್ಚುಗೆಗೆ ಪಾತ್ರವಾಗಿದ್ದವು.
ಪರೇಶ್ ಅವರ ಚಿತ್ರಕಲಾಕೃತಿಗಳು, ಶಿಲ್ಪಗಳು ಹಾಗೂ ಯಂತ್ರಕಲಾಕೃತಿಗಳು ನೋಡುಗರಲ್ಲಿ ನೂರು ಭಾವವನ್ನು ಏಕಕಾಲದಲ್ಲಿ ಹುಟ್ಟಿಸುತ್ತದೆ.

ಕ್ಯಾನ್ವಾಸ್ ಮೇಲೆ ಮೈದಳೆದಿರುವ ಕಲಾಕೃತಿಗಳು ಗಂಡು-ಹೆಣ್ಣಿನ ನಡುವಿನ ಸಂಬಂಧದ ಸೂಕ್ಷ್ಮತೆಯನ್ನು ನವಿರಾಗಿ ಕಟ್ಟಿಕೊಡುತ್ತವೆ. ಇವರು ಗಂಡು, ಹೆಣ್ಣು ಹಾಗೂ ಅವರ ನಡುವೆ ಬೆಳೆಯುವ ವಿಭಿನ್ನ ಸಂಬಂಧಗಳನ್ನು ನಾನಾ ಆಯಾಮಗಳಲ್ಲಿ ಚಿತ್ರಿಸಿದ್ದಾರೆ.

ಅವರು ಗಂಡು ಹೆಣ್ಣಿನ ಅಂತರಂಗದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಭಾವನೆಗಳ ಅನಾವರಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ. ಮನುಷ್ಯ ಸಹಜ ಒಲವು, ಸಾಮೀಪ್ಯ, ಸಂತಸ, ದುಃಖ, ಖಿನ್ನತೆ ಎಲ್ಲವೂ ರೇಖೆಯಲ್ಲಿ ಸಮರ್ಥವಾಗಿ ರೂಪುಗೊಂಡಿವೆ. ಮನುಷ್ಯ ಸಂಬಂಧಗಳು ವ್ಯಾವಹಾರಿಕ ನೆಲೆಗಟ್ಟಿನಿಂದ ಹೊರಗೆ ಬಂದಾಗ ಮಾತ್ರ ಗಟ್ಟಿಗೊಳ್ಳುತ್ತವೆ ಎಂಬ ಅಂಶವನ್ನು ಇವರ ಕಲಾಕೃತಿಗಳು ಸಾರುತ್ತವೆ.

ಮೈಥಿ ತಮ್ಮ ಚಿತ್ರಕಲಾಕೃತಿಗಳ ರಚನೆಗೆ ಗಾಢ ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಭಾವನೆಗಳಲ್ಲಿ ರೋಮಾಂಚನ ಹುಟ್ಟಿಸುವ ಈ ಬಣ್ಣಗಳು ಹಾಗೂ ಚಿತ್ರಗಳಲ್ಲಿ ಅಡಗಿರುವ ನೆರಳು ಬೆಳಕಿನಾಟ ನೋಡುಗರಲ್ಲಿ ಅಚ್ಚರಿ ಹುಟ್ಟಿಸುತ್ತವೆ. ಇವು ಕಲಾವಿದನ ಮನಸ್ಸಿನಲ್ಲಿ ಮೆಚ್ಚುಗೆ ಮೂಡಿಸುವುದಷ್ಟೆ ಅಲ್ಲದೇ ಅವರ ಮನಸ್ಸಿನಲ್ಲಿ ಶಾಂತಿ ಮೂಡಿಸಲು ನೆರವಾಗುವಂತಿವೆ. ಕಂಚಿನಿಂದ ತಯಾರು ಮಾಡಿರುವ ಶಿಲ್ಪ ಅನೇಕ ಕಥೆ ಹೇಳುತ್ತದೆ.

ಮೈಥಿ ದೇಶದ ಹಲವೆಡೆ ಪ್ರದರ್ಶನ ನೀಡಿರುವುದರ ಜತೆಗೆ ಜರ್ಮನಿ, ಇಂಗ್ಲೆಂಡ್, ಅಮೆರಿಕ, ಸಿಂಗಪುರ ಮೊದಲಾದ ದೇಶಗಳಲ್ಲಿ ಪ್ರದರ್ಶನ ಏರ್ಪಡಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದ್ದಾರೆ. ದೇಶದ ಸಮಕಾಲೀನ ಚಿತ್ರ ಕಲಾವಿದರ ಸಾಲಿನಲ್ಲಿ ಎದ್ದು ನಿಲ್ಲುವಂತಹ ವ್ಯಕ್ತಿತ್ವ ಈ ಕಲಾವಿದನದ್ದು.

ಸ್ಥಳ: ಗ್ಯಾಲರಿ ಸುಮುಖ, 24/10, ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್ ಗಾರ್ಡನ್. ಬೆಳಿಗ್ಗೆ 10 ರಿಂದ ಸಂಜೆ 6. ಮಾಹಿತಿಗೆ: 2229 2230.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT