ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳುವರಿ ಕುಸಿತ: ಅಕ್ಕಿ ಬೆಲೆ ದಿಢೀರ್ ಏರಿಕೆ

Last Updated 22 ಜನವರಿ 2013, 19:59 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದ ಅನ್ನದ ಬಟ್ಟಲು, ಬತ್ತದ ಕಣಜ, ಸೋನಾ ಮಸೂರಿ ಅಕ್ಕಿ ಉತ್ಪಾದನೆ ಹೆಗ್ಗಳಿಕೆ ಖ್ಯಾತಿಯ ರಾಯಚೂರು ಜಿಲ್ಲೆಯ ಅಕ್ಕಿಗೆ ನೆರೆಯ ರಾಜ್ಯದ ಅಕ್ಕಿ ವ್ಯಾಪಾರಸ್ಥರು ಈ ವರ್ಷ ಮುಗಿ ಬಿದ್ದಿದ್ದು, ಇದರ ನೇರ ಪರಿಣಾಮ ಗ್ರಾಹಕರಿಗೆ ತಟ್ಟುತ್ತಿದೆ.

ರಾಯಚೂರು ನಗರದ ಮಾರುಕಟ್ಟೆಯಲ್ಲಿ ನಾಲ್ಕಾರು ದಿನಗಳ ಹಿಂದೆ ಒಂದು ಕೆ.ಜಿ ಅಕ್ಕಿ ಬೆಲೆ ರೂ 40, ರೂ 44, ರೂ 46  ಇತ್ತು. ಮಂಗಳವಾರ ಅದೇ ಅಕ್ಕಿ ಬೆಲೆ ರೂ 50ಗೆ ಏರಿದೆ.

ಪ್ರತಿ ವರ್ಷ ಈ ದಿನಗಳಲ್ಲಿ ಅಕ್ಕಿ ಮಾರುಕಟ್ಟೆಯಲ್ಲಿ `ಹಳೆಯ ಅಕ್ಕಿ ಮತ್ತು ಹೊಸ ಅಕ್ಕಿ' ಎಂಬ ಲೆಕ್ಕಾಚಾ ರ ಶುರುವಾಗುತ್ತದೆ. ಕಳೆದ ವರ್ಷ ಹಳೆಯ ಅಕ್ಕಿ ಒಂದು ಕೆ.ಜಿಗೆರೂ  34ರಿಂದರೂ  35 ಇತ್ತು (ಪ್ರತಿ ಕ್ವಿಂಟಲ್‌ಗೆರೂ  3,500). ಹೊಸ ಅಕ್ಕಿ ಪ್ರತಿರೂ  ಕೆ.ಜಿಗೆ 24  ಇತ್ತು (ಕ್ವಿಂಟಲ್‌ಗೆರೂ 2,400).  ಈ ವರ್ಷ ಹಳೆ ಅಕ್ಕಿ ಬೆಲೆರೂ  45, 48, 50  ಆಗಿದ್ದರೆ ಹೊಸ ಅಕ್ಕಿ,ರೂ  35ರಿಂದ ರೂ 36 ಬೆಲೆ ನಿಗದಿಪಡಿಸಲಾಗಿದೆ.

ಕಾರಣಗಳು
ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಈ ಬಾರಿ ಮಳೆ ಕಡಿಮೆ ಆಗಿ ಬತ್ತದ ಇಳುವರಿ ಕುಸಿದಿದೆ. ಅಲ್ಲಿನ ಅಕ್ಕಿ ಗಿರಣಿ ಮಾಲೀಕರು, ವ್ಯಾಪಾರಸ್ಥರು ರಾಜ್ಯದ ಬತ್ತದ ಕಣಜಕ್ಕೆ ಬತ್ತ, ಅಕ್ಕಿ ಖರೀದಿಗೆ ಧಾವಿಸುತ್ತಿದ್ದಾರೆ. ಬತ್ತ ಕಾಳು ಕಟ್ಟುವ ಹಂತದಲ್ಲಿ ಚಳಿ ಪ್ರಮಾಣ ಹೆಚ್ಚಾಗಿದ್ದರಿಂದ ಖರೀದಿಸಿದ ಬತ್ತದಲ್ಲಿ ಶೇ 50ರಷ್ಟು ನುಚ್ಚಾಗುತ್ತಿದೆ. ಈ ಶೇ 50ರಷ್ಟು ನುಚ್ಚಾದ ಅಕ್ಕಿ ನಷ್ಟ ತುಂಬಿಕೊಳ್ಳಲು ಅಕ್ಕಿ ವ್ಯಾಪಾರಸ್ಥರು, ಗಿರಣಿ ಮಾಲಿಕರು ಅಕ್ಕಿ ಬೆಲೆ ದುಪ್ಪಟ್ಟು ನಿಗದಿಪಡಿಸಿ ಮಾರಾಟ ಮಾಡುವುದು ಅನಿವಾರ್ಯ ಎಂಬುದು ಅಕ್ಕಿ ಗಿರಣಿ ಮಾಲಕರು, ವ್ಯಾಪಾರಸ್ಥರು ಹೇಳುವ ಮಾತು.

ಕಳೆದ ವರ್ಷ ಬತ್ತ ಪ್ರತಿ 75 ಕೆ.ಜಿಗೆ ರೂ 1000ದಿಂದ ರೂ 1100ವರೆಗೆ ಖರೀದಿ ಮಾಡಲಾಗುತ್ತಿತ್ತು. ಈ ವರ್ಷ 75 ಕೆ.ಜಿ ಬತ್ತಕ್ಕೆ  ರೂ 1600  ರೂ 1700 ಆಗಿದೆ. ತುಂಗಭದ್ರಾ ಎಡದಂಡೆ ನೀರಾವರಿ ಕಾಲುವೆಯಿಂದ ಸಮರ್ಪಕ ನೀರು ಪೂರೈಕೆ ಆಗದೇ ಇರುವುದು, ನೀರಿನ ಕೊರತೆಯಿಂದಾಗಿ ಕಳೆದ ವರ್ಷಕ್ಕಿಂತ ಶೇ 30ರಷ್ಟು ಬತ್ತದ ಇಳುವರಿ ರಾಯಚೂರು ಜಿಲ್ಲೆಯಲ್ಲಿ ಕಡಿಮೆ ಆಗಿದೆ ಎಂದು ಅಕ್ಕಿ ಗಿರಣಿ ಮಾಲಿಕರು ಹೇಳುತ್ತಾರೆ.

ಹೊರ ರಾಜ್ಯದ ಖರೀದಿ ಭರಾಟೆ
ತಮಿಳುನಾಡು ಮತ್ತು ಆಂಧ್ರಪ್ರದೇಶದ ಅಕ್ಕಿ ಗಿರಣಿ ಮಾಲೀಕರು, ಅಕ್ಕಿ ವ್ಯಾಪಾರಸ್ಥರು ಪ್ರತಿ ವರ್ಷ ಈ ಜಿಲ್ಲೆಗೆ ಬಂದು ಇಷ್ಟೊಂದು ಪ್ರಮಾಣದಲ್ಲಿ ಬಂದು ಬತ್ತ, ಅಕ್ಕಿ ಖರೀದಿ ಮಾಡುತ್ತಿರಲಿಲ್ಲ. ಅವರಿಗೆ ಅಗತ್ಯ ಬಿದ್ದರೆ, ಸ್ಯಾಂಪಲ್ ತರಿಸಿಕೊಂಡು ಖರೀದಿಗೆ ಮುಂದಾಗುತ್ತಿದ್ದರು. ಈ ಬಾರಿ ಆಯಾ ರಾಜ್ಯದಲ್ಲಿ ಮಳೆ ಕಡಿಮೆ ಕೊರತೆ ಕಾರಣದಿಂದ ಈ ವರ್ಷ ಇಲ್ಲಿಗೆ ಬಂದು ಬತ್ತ, ಅಕ್ಕಿ ಖರೀದಿಗೆ ಮುಂದಾಗಿದ್ದಾರೆ. ಇದರಿಂದ ರೈತರು ಬೆಳೆದ ಬತ್ತಕ್ಕೆ ಬೆಲೆ ದೊರಕಬಹುದು. ಆದರೆ, ಖರೀದಿದಾರರಿಗೆ, ಗ್ರಾಹಕರಿಗೆ ಬೆಲೆ ಬಿಸಿ ತಟ್ಟುತ್ತದೆ ಎಂದು  ರಾಯಚೂರು ಅಕ್ಕಿ ಗಿರಣಿ ಮಾಲಕರ ಸಂಘದ ಕಾರ್ಯದರ್ಶಿ ಮಾರಂ ತಿಪ್ಪಣ್ಣ ಹಾಗೂ ಕೋಶಾಧ್ಯಕ್ಷೆ ಸಾವಿತ್ರಿ ಪುರುಷೋತ್ತಮ `ಪ್ರಜಾವಾಣಿ'ಗೆ ವಿವರಿಸಿದ್ದಾರೆ.

ಪ್ರತಿ ದಿನ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಿಂದ 300ಕ್ಕೂ ಹೆಚ್ಚು ಅಕ್ಕಿ ಲೋಡ್‌ಗಳು ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಸರಬರಾಜು ಆಗುತ್ತದೆ. ಹಿಂದಿನ ವರ್ಷಗಳಲ್ಲಿ ಈ ಸಮಸ್ಯೆ ಇರಲಿಲ್ಲ.

ನಷ್ಟದ ಭೀತಿಯಿಂದ ಕೆಲ ಸ್ಥಳೀಯ ಅಕ್ಕಿ ವ್ಯಾಪಾರಸ್ಥರು, ಖರೀದಿದಾರರು ಬತ್ತ ಖರೀದಿಯನ್ನೇ ಸ್ಥಗಿತಗೊಳಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

`ಕಣಜ'ದಲ್ಲೇ ಗಂಗಾವತಿ ಸೋನಾ ದುಬಾರಿ
ಗಂಗಾವತಿ (ಕೊಪ್ಪಳ ಜಿ.): ಬತ್ತದ ಕಣಜ ಖ್ಯಾತಿಯ ತಾಲ್ಲೂಕಿನಲ್ಲಿ ಉತ್ಪಾದನೆಯಾಗುವ, ಸುವಾಸನೆ ಮತ್ತು ರುಚಿಗಳಿಂದಾಗಿ ಹೆಸರು ಮಾಡಿರುವ `ಗಂಗಾವತಿ ಸೋನಾ' ಈಗ ಸ್ಥಳೀಯ ಮಾರುಕಟ್ಟೆಯಲ್ಲೇ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ. ಈ ಬಾರಿ ದರ ಕೇಳಿಯೇ ಬೆಚ್ಚಿ ಬೀಳುವ ಸ್ಥಿತಿ ಎದುರಾಗಿದೆ.

ಹತ್ತು ದಿನಗಳ ಹಿಂದೆ ಇದ್ದ ಧಾರಣೆ ಹಾಗೂ ಈಗಿನ ಬೆಲೆ ಅಜಗಜಾಂತರ. ಒಂದು ಕಿಲೋ ಸೋನಾ ಮಸೂರಿಯ ಅಕ್ಕಿಯ ಧಾರಣೆ ಬರೋಬ್ಬರಿ ರೂ 8ರಿಂದ ರೂ 10 ಗಳಷ್ಟು ಏರಿದೆ.

ಮಾರುಕಟ್ಟೆಯಲ್ಲಿ ಹೊಸ ಅಕ್ಕಿ (ಸೆಪ್ಟೆಂಬರ್-ಅಕ್ಟೋಬರ್ ಹಂಗಾಮಿನ) ದರ ಕೆಲ ದಿನಗಳ ಹಿಂದೆ ರೂ 33ರಿಂದ 38 ಆಸುಪಾಸು ಇತ್ತು. ಈಗ ರೂ 44ರಿಂದ 48 ಗಳಿಗೆ ಏರಿಕೆಯಾಗಿದೆ. ರೂ 50ರ ಆಸುಪಾಸಿನಲ್ಲಿದ್ದ ಒಂದು ವರ್ಷ ಹಳೇ ಸೋನಾ ಮಸೂರಿ ಅಕ್ಕಿಯ ಬೆಲೆ ಈಗಾಗಲೇ ರೂ 60 ಗಳಷ್ಟಾಗಿದೆ.

ದುಬಾರಿಗೆ ಕಾರಣ
ಸೋನಾ ಮಸೂರಿ ಅಕ್ಕಿ ಗುಣಮಟ್ಟ, ಬೆಲೆಯನ್ನು ಆಯಾ ತಿಂಗಳ ಆಧಾರದ ಮೇಲೆ ವರ್ಗೀಕರಣ ಮಾಡಿ ನಿಗದಿ ಮಾಡಲಾಗುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಳ, ಎರಡನೇ ಅವಧಿಗೆ ನೀರು ದೊರೆಯದಿರುವುದು ಮತ್ತು ಇತರ ರಾಜ್ಯಗಳಲ್ಲಿನ ಫಸಲಿನ ಕೊರತೆ ಇತ್ಯಾದಿಗಳಿಂದಾಗಿ ದರ ಏರುಮುಖವಾಗಿದೆ.

6 ತಿಂಗಳ ಹಿಂದೆ ತಾಲ್ಲೂಕಿನಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿ ಪಡೆದ ಮುಂಗಾರು ಹಂಗಾಮಿನ ಇಳುವರಿಯ ಶೇ 70ರಷ್ಟು ಬತ್ತದ ಅಕ್ಕಿ ಈಗಾಗಲೇ ನೆರೆಯ ರಾಜ್ಯಗಳಿಗೆ ಪೂರೈಕೆಯಾಗಿದೆ. ಇಲ್ಲಿ ಉತ್ಪಾದನೆಯಾಗುವ ಗುಣಮಟ್ಟದ ಅಕ್ಕಿಗೆ ತಮಿಳುನಾಡು, ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ವರ್ತಕ ಮತ್ತು ಮಧ್ಯವರ್ತಿಗಳು ಹೊರ ರಾಜ್ಯಗಳಿಗೆ ಕಳುಹಿಸಲು ಮೊದಲ ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಾಗಾಣಿಕೆಗೆ ನಿರ್ಬಂಧ ಇಲ್ಲ
`ಮಳೆ ಮತ್ತು ನೀರಿನ ಕೊರತೆ ಬಹುತೇಕ ರಾಜ್ಯಗಳಲ್ಲಿ ಬೆಳೆ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಇಲ್ಲಿ ಉತ್ಪಾದನೆಯಾದ `ಸೋನಾ' ಅಕ್ಕಿಗೆ ಬೇಡಿಕೆ ಸಹಜವಾಗಿ ಬಂದಿದೆ. ಅಕ್ಕಿ ಸಾಗಾಣಿಕೆಗೆ ಸರ್ಕಾರದಿಂದ ಯಾವ ನಿರ್ಬಂಧವೂ ಇಲ್ಲ. ಹೀಗಾಗಿ ನೆರೆ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಸರಬರಾಜು ಆಗುತ್ತಿದೆ.  ಬೆಲೆ ಹೆಚ್ಚು ದೊರಕುವಲ್ಲಿ ಸಹಜವಾಗಿ ವರ್ತಕ, ರೈತರು ತಮ್ಮ ಉತ್ಪನ್ನ ಮಾರುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು.
- ಶಾಸಕ ಪರಣ್ಣ ಮುನವಳ್ಳಿ
(ಅಕ್ಕಿ ಗಿರಣಿ ಮಾಲಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT