ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಶ್ರತ್ ಎನ್‌ಕೌಂಟರ್ `ನಕಲಿ'

ಸಿಬಿಐ ಆರೋಪಪಟ್ಟಿ: ಮೋದಿಗೆ ಮತ್ತೊಂದು ಕಂಟಕ
Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ಒಂಬತ್ತು ವರ್ಷಗಳ ಹಿಂದೆ ಇಶ್ರತ್ ಜಹಾನ್ ಸೇರಿದಂತೆ ನಾಲ್ವರನ್ನು ಕೊಂದು ಹಾಕಲು ಗುಜರಾತ್ ಪೊಲೀಸರು ನಡೆಸಿದ ಗುಂಡಿನ ಚಕಮಕಿ (ಎನ್‌ಕೌಂಟರ್) `ನಕಲಿ' ಎಂದು ಸಿಬಿಐ ಹೇಳಿದೆ.

ಇಲ್ಲಿಯ ಹೆಚ್ಚುವರಿ ಮುಖ್ಯ ಮಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಿಬಿಐ ಬುಧವಾರ ಸಲ್ಲಿಸಿದ ಮೊದಲ ಆರೋಪಪಟ್ಟಿಯಲ್ಲಿ ಈ ವಿಷಯ ದೃಢಪಡಿಸಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಮತ್ತೊಂದು ಕಂಟಕ ಎದುರಾಗಿದೆ.

19 ವರ್ಷದ ಇಶ್ರತ್ ಜಹಾನ್ ಯಾವುದೇ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರಲಿಲ್ಲ, ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲೀಕ ಜಾವೇದ್ ಶೇಕ್ ಹಾಗೂ ಇತರ ಇಬ್ಬರ ಜತೆ ಅಹಮದಾಬಾದ್‌ಗೆ ಹೊರಟಿದ್ದಳು ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿರುವ, ಸದ್ಯ ತಲೆಮರೆಸಿಕೊಂಡಿರುವ ಅಂದಿನ ಡಿಜಿಪಿ ಪಿ.ಪಿ. ಪಾಂಡೆ ಮತ್ತು ಸೇವೆಯಿಂದ ಅಮಾನತುಗೊಂಡಿರುವ ಡಿಐಜಿ (ಅಪರಾಧ ತಡೆ) ಡಿ.ಜಿ. ವಂಜಾರ ಸೇರಿದಂತೆ ಏಳು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಸದ್ಯ ವಂಜಾರ ನ್ಯಾಯಾಂಗ ಬಂದನದಲ್ಲಿದ್ದಾರೆ.  ಜಿ.ಎಲ್. ಸಿಂಘಾಲ್, ತರುಣ್ ಬರೋಟ್, ಎನ್.ಕೆ. ಅಮಿನ್, ಜೆ.ಜಿ. ಪಾರ್ಮಾರ್ ಮತ್ತು ಅನಾಜು ಚೌಧರಿ ಪಟ್ಟಿಯಲ್ಲಿರುವ ಇತರ ಅಧಿಕಾರಿಗಳು.

ನ್ಯಾಯಾಲಯಕ್ಕೆ ಖುದ್ದು ಹಾಜರಾದ ಸಿಬಿಐನ ಉಪ ವರಿಷ್ಠಾಧಿಕಾರಿ ಜಿ.ಕಲೈಮಣಿ ಆರೋಪಪಟ್ಟಿ ಸಲ್ಲಿಸಿದರು. 2004ರ ಜೂನ್ 15ರಂದು ಗುಜರಾತ್ ಪೊಲೀಸರು ಮತ್ತು ರಾಜ್ಯ ಗುಪ್ತಚರ ಇಲಾಖೆ ಜಂಟಿಯಾಗಿ ಈ ನಕಲಿ ಎನ್‌ಕೌಂಟರ್ ನಡೆಸಿವೆ ಎಂದು ತಿಳಿಸಿದರು. ಆರೋಪಪಟ್ಟಿಯಲ್ಲಿ ಹೆಸರಿಸಲಾದ ಎಲ್ಲ ಏಳು ಪೊಲೀಸ್ ಅಧಿಕಾರಿಗಳ ಪಾತ್ರ ತನಿಖೆಯ ವೇಳೆ ಸಾಬೀತಾಗಿದೆ ಎಂದು ಹೇಳಿದರು.

ಪ್ರಕರಣ ನಡೆದಾಗ ಗುಜರಾತ್ ಗುಪ್ತಚರ ಇಲಾಖೆಯಲಿದ್ದ ಹಾಲಿ ಕೇಂದ್ರ ಗುಪ್ತದಳ (ಐ.ಬಿ) ವಿಶೇಷ ನಿರ್ದೇಶಕ ರಾಜಿಂದರ್ ಕುಮಾರ್ ಹಾಗೂ ಇತರ ಆರೋಪಿ ಅಧಿಕಾರಿಗಳಾದ ಪಿ.ಮಿತ್ತಲ್, ಎಂ.ಕೆ. ಸಿನ್ಹಾ ಮತ್ತು ರಾಜೀವ್ ವಾಂಖೇಡೆ ಅವರ ಪಾತ್ರದ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಈ ಅಧಿಕಾರಿಗಳ ವಿರುದ್ಧವೂ ನ್ಯಾಯಾಲಯಕ್ಕೆ ಪೂರಕ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಸಿಬಿಐ ತಿಳಿಸಿದೆ.

ಇಶ್ರತ್ ಕುಟುಂಬ ಹರ್ಷ
ಮುಂಬೈ ವರದಿ: ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಇಶ್ರತ್ ಜಹಾನ್ ಕುಟುಂಬ, ಈ ಸಂಚಿನ ಪ್ರಮುಖ ರೂವಾರಿಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನೇ ಆರೋಪಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಆರೋಪಪಟ್ಟಿಯಲ್ಲಿ ಏನಿದೆ?: ಮುಂಬೈನಿಂದ ಅಹಮದಾಬಾದ್‌ಗೆ ಹೊರಟಿದ್ದ ಇಶ್ರತ್ ಮತ್ತು ಜಾವೇದ್ ಶೇಕ್ ಇಬ್ಬರನ್ನೂ ಗುಜರಾತ್ ಪೊಲೀಸರು ನಕಲಿ ಎನ್‌ಕೌಂಟರ್ ನಡೆಸುವ ಮೂರ‌್ನಾಲ್ಕು ದಿನಗಳ ಮೊದಲು ಆನಂದ ಜಿಲ್ಲೆಯ ವಸಾದ್ ಎಂಬಲ್ಲಿ ಜೂನ್ 12ರಂದು ವಶಕ್ಕೆ ಪಡೆದಿದ್ದರು.  ತೋಟದ ಮನೆಯೊಂದಕ್ಕೆ ಕರೆದೊಯ್ದು ಅಕ್ರಮವಾಗಿ ಕೂಡಿ ಹಾಕಲಾಗಿತ್ತು.   ಝೀಶನ್ ಜೋಹರ್  ಮತ್ತು ಅಮ್ಜದಲಿ ಅಕ್ಬರಲಿ ರಾಣಾ ಅವರನ್ನು ಎನ್‌ಕೌಂಟರ್‌ಗೆ 2 ತಿಂಗಳ ಮೊದಲೇ  ವಶಕ್ಕೆ ಪಡೆಯಲಾಗಿತ್ತು. ಜೋಹರ್‌ನನ್ನು ಅಹಮದಾಬಾದ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕೂಡಿ ಹಾಕಲಾಗಿತ್ತು. ಮತ್ತೊಬ್ಬನನ್ನು ಗಾಂಧಿನಗರದ ಅರ‌್ಹಾಮ್ ತೋಟದ ಮನೆಯಲ್ಲಿ ಕೂಡಿ ಹಾಕಲಾಗಿತ್ತು.

ಅಪರಾಧ ವಿಭಾಗದ ಡಿಐಜಿಯಾಗಿದ್ದ ಡಿ.ಜಿ. ವಂಜಾರ ತಮ್ಮ ಅಹಮದಾಬಾದ್ ಕಚೇರಿಯಲ್ಲಿ ಅಧಿಕಾರಿಗಳ ಗುಪ್ತಸಭೆ ನಡೆಸಿ ಮೂವರನ್ನು ಕೊಲ್ಲುವ ಬಗ್ಗೆ ಸಂಚು ರೂಪಿಸಿದ್ದರು. ಇಶ್ರತ್ ಕೊಲ್ಲುವ ಬಗ್ಗೆ ಈ ಸಭೆಯಲ್ಲಿ ಯಾವ ನಿರ್ಧಾರಕ್ಕೂ ಬಂದಿರಲಿಲ್ಲ.

2004ರ ಜೂನ್ 15ರಂದು ಗುಜರಾತ್ ಪೊಲೀಸರು ಮೂವರನ್ನು ಅಕ್ರಮವಾಗಿ ಕೂಡಿಟ್ಟಿದ್ದ ತೋಟದ ಮನೆಯಿಂದ ಜಾವೇದ್ ಶೇಕ್‌ಗೆ ಸೇರಿದ ನೀಲಿ ಬಣ್ಣದ ಇಂಡಿಕಾ ಕಾರಿನಲ್ಲಿ ಕರೆದೊಯ್ದಿದ್ದರು. ನಂತರ ಎನ್‌ಕೌಂಟರ್ ನಡೆಸಲು ಸೂಕ್ತ ಸ್ಥಳಕ್ಕಾಗಿ ಹುಡುಕುತ್ತಾ ಹೊರಟರು. ಆಗ ಅಹಮದಾಬಾದ್ ಮತ್ತು ಗಾಂಧಿನಗರದ ನಡುವಿನ ನಿರ್ಜನ ರಸ್ತೆಯನ್ನು ಎನ್‌ಕೌಂಟರ್ ನಡೆಸಲು ಆಯ್ಕೆ ಮಾಡಿಕೊಂಡರು.

ಅಮ್ಜದಲಿ ಅಕ್ಬರಲಿ ರಾಣಾನನ್ನು ಪ್ರತ್ಯೇಕ ವಾಹನದಲ್ಲಿ ಸ್ಥಳ ಕರೆತರಲಾಗಿತ್ತು. ಮುಂಚೆಯೇ ರೂಪಿಸಿದ ಸಂಚಿನಂತೆ  ನಾಲ್ವರನ್ನೂ ಕಣ್ಣುಕಟ್ಟಿ ಸ್ಥಳಕ್ಕೆ ತರಲಾಗಿತ್ತು. ನಿರ್ಜನ ರಸ್ತೆಯ ಕೋಟಾಪುರ ಎಂಬಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT