ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟಗೀತೆಗಳ ಫ್ರೀಡಂ ರೇಡಿಯೊ

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ತನ್ನದೇ ವಿಭಿನ್ನ ಶೈಲಿಯ ನಿರೂಪಣೆ, ಸಂಗೀತ, ಸಂಭಾಷಣೆ ಮೂಲಕ ಅಸ್ತಿತ್ವ ಸ್ಥಾಪಿಸಿಕೊಂಡಿರುವ ರೇಡಿಯೊ ಸಿಟಿ 91.1ಗೆ ಜುಲೈ 3ಕ್ಕೆ 11 ವರ್ಷ ತುಂಬಿದ ಸಂಭ್ರಮ. ತನ್ನ ಈ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ರೇಡಿಯೊ ಸಿಟಿ ತನ್ನದೇ ಇನ್ನೊಂದು ರೇಡಿಯೊ ಹೊರತಂದಿದೆ. ಅದೇ `ಫ್ರೀಡಂ~ ವೆಬ್ ಎಫ್‌ಎಂ.

`ಫ್ರೀಡಂ ರೇಡಿಯೊ~ ಹೆಸರಿನಲ್ಲಿ ತೆರೆಕಾಣಿಸಿರುವ ಈ ರೇಡಿಯೊವನ್ನು ಆನ್‌ಲೈನ್ ಮೂಲಕ ಕೇಳಬಹುದು. ಪ್ಲಾನೆಟ್ ರೇಡಿಯೊ ಡಾಟ್ ಕಾಂಗೆ ((planetradiocity.com) ಭೇಟಿ ಕೊಟ್ಟರೆ ಸಾಕು, ವಿಭಿನ್ನ ಸಂಗೀತದ ಸವಿ ಅನುಭವಿಸಬಹುದು.

ಜುಲೈ 3ರಂದು ಈ ಸಲುವಾಗಿ ಬೆಳಿಗ್ಗೆ 10ರಿಂದ 11ರವರೆಗೆ `ಫ್ರೀಡಂ ಅವರ್~ ಎಂದು ಐದು ಪಟ್ಟಣಗಳಲ್ಲಿ ವಿಶೇಷವಾದ ಐದು ಬ್ಯಾಂಡ್‌ಗಳ ಸಂಗೀತವನ್ನು ನೇರವಾಗಿ ಕೇಳಿಸುವ ಮೂಲಕ ಫ್ರೀಡಂ ರೇಡಿಯೊವನ್ನು ತೆರೆಕಾಣಿಸಲಾಯಿತು.

`ಫ್ರೀಡಂ ರೇಡಿಯೊ~ ಎಂದರೆ ಸ್ವಾತಂತ್ರ್ಯ ಸಂಗೀತ ಎಂದರ್ಥ. ಕೇಳುಗರಿಗೆ ಇಲ್ಲಿ ಸಂಗೀತದ ಹಲವಾರು ಆಯ್ಕೆಗಳಿವೆ. ಅಷ್ಟೇ ಅಲ್ಲ, ಇದರಲ್ಲಿ ಭಾಗವಹಿಸುವ ಬ್ಯಾಂಡ್‌ಗಳಿಗೂ ತಮ್ಮದೇ ಧಾಟಿಯ ಸಂಗೀತ ಪ್ರಸ್ತುತಪಡಿಸುವ ಪೂರ್ಣ ಸ್ವಾತಂತ್ರ್ಯವಿದೆ. ಈ ಮೂಲಕ `ಇಂಡಿ ಸಂಗೀತ~ಕ್ಕೆ ಮೀಸಲಾದ ಭಾರತದ ಮೊದಲ ರೇಡಿಯೋ ಇದು ಎಂದು ಹೇಳಿಕೊಂಡಿತು ರೇಡಿಯೊ ಸಿಟಿ ತಂಡ.

ಎಲೆಕ್ಟ್ರಾನಿಕಾ, ಜಾನಪದ, ರಾಕ್, ಸೂಫಿ ಮುಂತಾದ ಸಂಗೀತ ಪ್ರಕಾರಗಳನ್ನು ಹಿಂದಿ, ಇಂಗ್ಲಿಷ್, ಅಸ್ಸಾಂ, ಮಲೆಯಾಳಂ, ಬಂಗಾಳಿ, ಪಂಜಾಬಿ ಭಾಷೆಗಳಲ್ಲಿ ಕೇಳಬಹುದು.

ಈಗಷ್ಟೇ ಬೆಳವಣಿಗೆ ಕಾಣುತ್ತಿರುವ ಬ್ಯಾಂಡ್‌ಗಳು ಹಾಗೂ ಯುವ ಸಂಗೀತ ಬ್ಯಾಂಡ್‌ಗಳಿಗೆ ವೇದಿಕೆ ಕಲ್ಪಿಸುವ ಉಮೇದಿನಿಂದ ಈ `ಫ್ರೀಡಂ ಎಫ್‌ಎಂ~ ಹೊರತರಲಾಗಿದೆ ಎಂದು ತಂಡ ಹೇಳಿಕೊಂಡಿದೆ.

`ನಯೆ ದೋರ್ ಕಿ ನಯೀ ಧುನ್~ ಹಾಡಿನಿಂದ ಈ ಫ್ರೀಡಂ ರೇಡಿಯೊಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ರೇಡಿಯೊ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಿದ ನಂತರ `ಅಕ್ಸ್~ ಬ್ಯಾಂಡ್ ತನ್ನ ಮಧುರ ಸಂಗೀತದೊಂದಿಗೆ `ಹಮ್ ಸಬ್ ಹೈ ಯಹಾಂ~ ಹಾಡನ್ನು ಪ್ರಸ್ತುತಪಡಿಸಿತು.

ಇದೇ ರೀತಿ ಐದು ಜಿಲ್ಲೆಗಳಲ್ಲಿ `ಅಕ್ಸ್~, `ಹೈವೇ 61~, `ತತ್ವ~, `ಪ್ರತಿಜ್ಞಾ~, `ದೇಡ್ ಇಂಚ್ ಊಪರ್~ ಮುಂತಾದ ವಿಭಿನ್ನ ಬ್ಯಾಂಡ್‌ಗಳು ಈ ವೆಬ್ ಎಫ್‌ಎಂನಲ್ಲಿ ತಮ್ಮ ಸಂಗೀತದ ಅಭಿರುಚಿಯನ್ನು ಬಿಂಬಿಸಲಿವೆ. ಅಷ್ಟೇ ಅಲ್ಲದೆ, ಕವಿತಾ ಸೇಥ್, ಆಕಾಶ್ ದೀಪ್ ಗಗೋಯ್, ಜಾವೆದ್ ಬಷೀರ್ ಮತ್ತು ಮಹೇಶ್ ವಿನಾಯಕ್‌ರಾಮ್ ಮುಂತಾದ ಗಾಯಕರು ತಮ್ಮ ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ.

ಚಲನಚಿತ್ರ ಗೀತೆಗಳ ಹೊರತಾಗಿ ತಮ್ಮದೇ ಸ್ವಂತ ಶೈಲಿಯ ಸಂಗೀತವನ್ನು ಪ್ರಸ್ತುತಪಡಿಸಲು ಹೊರಟಿರುವವರಿಗೆ ಈ ಎಫ್‌ಎಂನಲ್ಲಿ ಪ್ರೇರಣೆ ಹೆಚ್ಚು. ಈಗಾಗಲೇ 200 ಬ್ಯಾಂಡ್‌ಗಳು ವೆಬ್ ಎಫ್‌ಎಂಗೆ ನೋಂದಾಯಿಸಿಕೊಂಡಿವೆ ಎಂದು ವಾಹಿನಿಯು ತಿಳಿಸಿದೆ.

“ಕಳೆದ 11 ವರ್ಷಗಳಿಂದ ರೇಡಿಯೊ ಸಿಟಿಯು ಕೇಳುಗರಿಂದ ಪ್ರಶಂಸೆ, ಪ್ರತಿಕ್ರಿಯೆ ಪಡೆದುಕೊಂಡಿದೆ. ಶ್ರೋತೃಗಳಿಗೆ ಸದಾ ವಿನೂತನ ಮತ್ತು ತಾಜಾ ಸಂಗೀತದ ಅನುಭವ ನೀಡುವುದೇ ನಮ್ಮ ಉದ್ದೇಶ. ಅದೆಷ್ಟೋ ಕಲಾವಿದರು ಬೆಳಕಿಗೆ ಬರದೆ ಅವರ ಸಂಗೀತ ಕಲೆ ಅಲ್ಲೇ ನಶಿಸಿಹೋಗುತ್ತಿದೆ. ಅಂತಹವರಿಗೆ ವೇದಿಕೆ ಒದಗಿಸಲೆಂದು 11ನೇ ಹುಟ್ಟುಹಬ್ಬದ ಸವಿನೆನಪಿಗೆ `ಫ್ರೀಡಂ ರೇಡಿಯೊ~ ತೆರೆಕಾಣಿಸಿದೆವು” ಎಂದರು ಎಫ್‌ಎಂ 91.1 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವಾ ಪುರೋಹಿತ್.

`ಈ ಅಂತರ್ಜಾಲ ರೇಡಿಯೊ ಪ್ರಪಂಚದಾದ್ಯಂತ ಇರುವ ಭಾರತೀಯರಿಗೆ ಇನ್ನಷ್ಟು ಹತ್ತಿರವಾಗಲಿದೆ. ನೂತನ ಸಂಗೀತಕ್ಕೆ ಹಾತೊರೆಯುತ್ತಿರುವ ಯುವಮನಸ್ಸುಗಳಿಗಂತೂ ಈ ಚಾನೆಲ್ ಅಚ್ಚುಮೆಚ್ಚಾಗಲಿದೆ. ಕೇಳುಗರ ಆಯ್ಕೆಗೆ ಇಲ್ಲಿ ಪ್ರಾಶಸ್ತ್ಯ. ಚಲನಚಿತ್ರ ಗೀತೆಗಳನ್ನು ಹೊರತುಪಡಿಸಿ ಇನ್ನಿತರ ಸಂಗೀತ ಪ್ರಕಾರಗಳಿಗೂ ಇಲ್ಲಿ ಆದ್ಯತೆ ಹೆಚ್ಚು~ ಎಂದವರು ಡಿಜಿಟಲ್ ಮೀಡಿಯಾ ಮತ್ತು ನ್ಯೂ ಬಿಸಿನೆಸ್ ವ್ಯಾಪಾರ ಮುಖ್ಯಸ್ಥೆ ರಚನಾ ಕನ್ವರ್.

ಹಲವು ಬ್ಯಾಂಡ್‌ಗಳ ಸಂಗೀತ ಕೇಳಿ ಅನುಭವಿಸುವ ಮನಸ್ಸು ನಿಮ್ಮದೂ ಆಗಿದ್ದರೆ www.planetradiocity.com ಗೆ ಭೇಟಿ ನೀಡಿ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT