ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟದಂತೆ ಮರಳು ತೆಗೆಯುವಂತಿಲ್ಲ

ಪರಿಸರ ಇಲಾಖೆ ಅನುಮತಿ ಕಡ್ಡಾಯ: ಶೀಘ್ರ ಹೊಸನೀತಿ
Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನು ಮುಂದೆ ಇಷ್ಟ ಬಂದ ಕಡೆ ಮರಳು ತೆಗೆಯುವಂತಿಲ್ಲ!
ಇದು ಹೊಸದಾಗಿ ಜಾರಿಗೆ ಬರುವ ನಿಯಮ. ಇದಕ್ಕಾಗಿ ನಿಯಮ ರೂಪಿ­ಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಸಂಬಂಧ ನಿರ್ದಿಷ್ಟ ನಿಯಮ­ಗಳನ್ನು ರೂಪಿಸಲು ಲೋಕೋಪಯೋಗಿ ಖಾತೆ ಸಚಿವ ಡಾ.ಎಚ್‌.ಸಿ.­ಮಹದೇವಪ್ಪ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಶುಕ್ರವಾರ ನಡೆದ ಸಮಿತಿಯ ಸಭೆಯಲ್ಲಿ ಈ ವಿಷಯಗಳನ್ನು ಚರ್ಚಿಸಲಾಗಿದೆ.

ಸುಪ್ರೀಂಕೋರ್ಟ್‌ ನೇಮಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡ­ಳಿಯು ಮರಳು ಗಣಿಗಾರಿಕೆಗೂ ಇನ್ನು ಮುಂದೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಅಗತ್ಯ ಎಂದು ಆಗಸ್ಟ್‌ 5ರಂದು ಕೊಟ್ಟಿರುವ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಹಸಿರು ನ್ಯಾಯಮಂಡಳಿಯ ಆದೇಶ ಆಧಾರವಾಗಿ ಇಟ್ಟುಕೊಂಡು ಕೇಂದ್ರ ಸರ್ಕಾರ ಪರಿಸರ ನಿರ್ವಹಣೆಗಾಗಿ ಮಾದರಿ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಅದರ ಪ್ರತಿಯನ್ನು ಎಲ್ಲ ರಾಜ್ಯಗಳಿಗೂ ರವಾನಿಸಿದೆ. ಈ ಮಾರ್ಗದರ್ಶಿ ಸೂತ್ರಗಳನ್ನು ಆಧಾರ­ವಾಗಿ ಇಟ್ಟುಕೊಂಡು ನಿಯಮ ರೂಪಿಸಲು ಸಂಪುಟ ಉಪ ಸಮಿತಿ ಅಧಿಕಾರಿಗಳಿಗೆ ಸೂಚಿಸಿದೆ.

‘ಕಬ್ಬಿಣದ ಅದಿರು ಸೇರಿದಂತೆ ಪ್ರಮುಖ ಖನಿಜಗಳ ಗಣಿಗಾರಿಕೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಅಗತ್ಯ ಇದ್ದು, ಅದನ್ನು ಮರಳು, ಜಲ್ಲಿ ಗಣಿಗಾರಿಕೆಗೂ ಅನ್ವಯಿಸುವಂತೆ ಆದೇಶಿಸಲಾಗಿದೆ. ಈ ಕಾರಣಕ್ಕೆ ಹೊಸ ಮರಳು ನೀತಿ ಸ್ವಲ್ಪ ವಿಳಂಬ ಆಗಲಿದೆ’ ಎಂದು ಸಂಪುಟ ಉಪ ಸಮಿತಿ ಸದಸ್ಯರೂ ಆಗಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ಮರಳು ನೀತಿ ರಚಿಸಲು ನಾಲ್ಕೈದು ಬಾರಿ ಸಭೆ ಸೇರಿದ್ದ ಸಂಪುಟ ಉಪ ಸಮಿತಿ ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ನೋಡಿ ಶುಕ್ರವಾರ ಬೆಚ್ಚಿಬಿದ್ದಿದೆ. ಇದುವರೆಗೂ ನಡೆಸಿದ ಚರ್ಚೆಗಳಿಗೆ ಮಹತ್ವ ಇಲ್ಲದಂತೆ ಆಗಿದೆ. ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಹೊಸ ಮರಳು ನೀತಿ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದುವರೆಗೂ ಇದ್ದ ನಿಯಮಗಳ ಪ್ರಕಾರ ಮರಳು ಗಣಿಗಾರಿಕೆಗೆ ಪರಿಸರ ಇಲಾಖೆಯ ಅನುಮತಿ ಅಗತ್ಯ ಇರಲಿಲ್ಲ. ಮರಳು ಇದ್ದ ಕಡೆಯಲ್ಲ ಗಣಿಗಾರಿಕೆಗೆ ಅವಕಾಶ ನೀಡುತ್ತಾ ಬಂದಿದ್ದ ಸರ್ಕಾರಕ್ಕೂ ಈಗ ಕೈಕಟ್ಟಿದಂತಾಗಿದೆ.

ಅರಣ್ಯ ಮತ್ತು ಪರಿಸರ ಇಲಾಖೆ­ಯವರು ಎಲ್ಲದಕ್ಕೂ ಕೊಕ್ಕೆ ಹಾಕುತ್ತಾರೆ. ಅಂತಹವರಿಗೆ ಮರಳು, ಜಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ಅಧಿಕಾರ ಕೊಟ್ಟರೆ ಮತ್ತಷ್ಟು ಸಮಸ್ಯೆ ಆಗಲಿದೆ ಎನ್ನುತ್ತಾರೆ ಲೋಕೋಪ­ಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು. ತಮಿಳುನಾಡು ಮಾದರಿಯ ಮರಳು ನೀತಿ ರೂಪಿಸಲು ಹೊರಟ್ಟಿದ್ದ ಸರ್ಕಾರಕ್ಕೂ ಒಂದು ರೀತಿ ಹಿನ್ನಡೆಯಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT