ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ಎಸ್‌ಬ್ಯಾಂಡ್ ಹಂಚಿಕೆ ಹಗರಣ

Last Updated 7 ಫೆಬ್ರುವರಿ 2011, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ತಂರಂಗಾಂತರ ಹಂಚಿಕೆ ಹಗರಣ ಸೃಷ್ಟಿಸಿದ ಕೋಲಾಹಲದಿಂದ ಚೇತರಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯಾಸ ಪಡುತ್ತಿರುವ ಬೆನ್ನಲ್ಲೇ ‘ಇಸ್ರೊ ಎಸ್-ಬ್ಯಾಂಡ್’ಬಹುಕೋಟಿ ಹಗರಣದ ಭೂತ ಅದರ ಹೆಗಲೇರಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಖಾಸಗಿ ಕಂಪೆನಿ ನಡುವೆ ನಡೆದ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದವೊಂದು ದೇಶದ ಬೊಕ್ಕಸಕ್ಕೆ ರೂ 2 ಲಕ್ಷ ಕೋಟಿ  ಮೊತ್ತದ ಹಾನಿ ಉಂಟು ಮಾಡಿದೆ ಎನ್ನಲಾಗಿದೆ.

ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ: ಇಸ್ರೊದ ವಾಣಿಜ್ಯ ವ್ಯವಹಾರದ ಅಂಗ ಸಂಸ್ಥೆ ‘ಆ್ಯಂಟ್ರಿಕ್ಸ್ ಕಾರ್ಪೊರೇಷನ್’ ಹಾಗೂ ಖಾಸಗಿ ಕಂಪೆನಿಯಾದ ದೇವಾಸ್ ಮಲ್ಟಿಮೀಡಿಯ ಸರ್ವಿಸ್ ನಡುವೆ ನಡೆದ ಒಪ್ಪಂದ ಈಗ ವಿವಾದವನ್ನು ಎಬ್ಬಿಸಿದ್ದು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ದೇವಾಸ್ ಮತ್ತು ಆ್ಯಂಟ್ರಿಕ್ಸ್ ನಡುವಿನ ಪ್ರಸ್ತುತ ಒಪ್ಪಂದ 2005ರ ಜನವರಿ 28ರಂದು ನಡೆದಿತ್ತು. 70 ಮೆಗಾ ಹರ್ಟ್ಸ್ ಎಸ್-ಬ್ಯಾಂಡ್ ಅತಿ ದುಬಾರಿ ತರಂಗಾಂತರವನ್ನು ಸುಮಾರು ಎರಡು ಲಕ್ಷ ಕೋಟಿ ಮೊತ್ತಕ್ಕೆ 20 ವರ್ಷಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು.

ಸಿಎಜಿ ವರದಿ: ಆ್ಯಂಟ್ರಿಕ್ಸ್ ಮತ್ತು ದೇವಾಸ್ ನಡುವಿನ ಎಸ್-ಬ್ಯಾಂಡ್ ತರಂಗಾಂತರ  ಹಂಚಿಕೆ ಒಪ್ಪಂದದ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಿದ ಮಹಾಲೇಖಪಾಲರು ‘2 ಲಕ್ಷ ಕೋಟಿ ರೂಪಾಯಿ ಮೊತ್ತದ ನಷ್ಟ’ದ ಬಗ್ಗೆ ಕೇಂದ್ರ ಸರ್ಕಾರಕ್ಕೆ  ವರದಿ ನೀಡಿದ್ದರು.

‘ಇಸ್ರೊದ ಅಂಗ ಸಂಸ್ಥೆ ಆ್ಯಂಟ್ರಿಕ್ಸ್ ಮತ್ತು ದೇವಾಸ್ ನಡುವಿನ ಬಹುಕೋಟಿ  ಮೊತ್ತದ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ವ್ಯವಹಾರವನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ, ಸಾರ್ವಜನಿಕ ಹಿತಾಸಕ್ತಿ ಕಾಯ್ದುಕೊಳ್ಳಲು ಏನೆಲ್ಲ ಬೇಕೊ ಅದೆಲ್ಲವನ್ನೂ ಸರ್ಕಾರ ಮಾಡುವುದು. ಈ ಬಗ್ಗೆ ಶೀಘ್ರವೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಇಲಾಖಾ ಪ್ರಕರಟಣೆ ತಿಳಿಸಿದೆ.

ಇಸ್ರೊದ ಮಾಜಿ ಅಧಿಕಾರಿಯೇ ಮಾಲೀಕ!: ಸ್ವಾರಸ್ಯಕರ ವಿಷಯವೆಂದರೆ ‘ದೇವಾಸ್’ ಸಂಸ್ಥೆಯು ಇಸ್ರೊದ ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಎಂ.ಜಿ.ಚಂದ್ರಶೇಖರ್ ಅವರ ಮಾಲೀಕತ್ವದಲ್ಲಿದೆ.

ಪ್ರತಿಪಕ್ಷಗಳ ಗದ್ದಲ:  ಬಾಹ್ಯಾಕಾಶ ಸೇವೆಗಳ ಸಂಸ್ಥೆಯ ಸ್ಪಷ್ಟನೆ ಹೊರಬೀಳುತ್ತಿದ್ದಂತೆಯೇ ಸೋಮವಾರ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು. ಪ್ರಧಾನಿ ಮನಮೋಹನ್ ಸಿಂಗ್ ಅವರು  ಈ ಬಗ್ಗೆ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದವು. ಬಾಹ್ಯಾಕಾಶ ಸೇವೆಗಳ ಸಂಸ್ಥೆ ಪ್ರಧಾನಿಯ ನೇರ ಅಧೀನದಲ್ಲಿರುವುದರಿಂದ ಪ್ರತಿಪಕ್ಷಗಳ ಪಟ್ಟು ಬಲವಾಗಿದೆ.

ಸಿಎಜಿ ಹೇಳಿಕೆ:  ಇಸ್ರೊ ಎಸ್-ಬ್ಯಾಂಡ್ ಹಂಚಿಕೆ  ಒಪ್ಪಂದ ಹಗರಣದ ಬಗ್ಗೆ ಸಿಎಜಿ ಸೋಮವಾರ ಹೇಳಿಕೆ ನೀಡಿ, ‘ಲೆಕ್ಕಪತ್ರ ಪರಿಶೋಧನೆ ಮಾಡಲಾಗಿದ್ದು, ಬೊಕ್ಕಸಕ್ಕೆ  ಸುಮಾರು 2ಲಕ್ಷ ಕೋಟಿ ಮೊತ್ತಕ್ಕಿಂತ ಹೆಚ್ಚಿನ ಹಾನಿಯಾಗಿದೆ. ಆದರೆ, ಮಾಧ್ಯಮಗಳಲ್ಲಿ ತಿಳಿಸಿರುವಂತೆ, ಲೆಕ್ಕ ಪರಿಶೋಧನೆ ಪೂರ್ಣಗೊಂಡಿಲ್ಲ’ ಎಂದು ತಿಳಿಸಿದೆ.

ಇಸ್ರೊ ಸ್ಪಷ್ಟನೆ
ಬೆಂಗಳೂರು (ಪಿಟಿಐ): ಆ್ಯಂಟ್ರಿಕ್ಸ್-ದೇವಾಸ್ ನಡುವಿನ ಬಹುಕೋಟಿ ‘ಎಸ್-ಬ್ಯಾಂಡ್’ ಹಂಚಿಕೆ ವಿವಾದವಾಗಿರುವುದರಿಂದ ಈ ಬಗ್ಗೆ ಬಾಹ್ಯಾಕಾಶ ಇಲಾಖೆ (ಡಿಒಎಸ್) ವಿವರಣೆ ನೀಡಲಿದೆ ಎಂದು ತಿಳಿಸಿದೆ. ಸಿಎಜಿ ನೀಡಿದ ‘ಲೆಕ್ಕಪರಿಶೋಧನೆ ಇನ್ನೂ ಪೂರ್ಣವಾಗಿಲ್ಲ’ ಎಂಬ ಹೇಳಿಕೆಗಳ ಬೆನ್ನಲ್ಲೇ ಬೆಂಗಳೂರಿನ ಇಸ್ರೊ ಕಚೇರಿ ಈ ವಿವರಣೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT