ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಎಲ್ಲರಿಗೂ ದುಡ್ಡು ಮುಖ್ಯ

Last Updated 25 ಜೂನ್ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: `ಭ್ರಷ್ಟಾಚಾರ ಸಮಸ್ಯೆಯನ್ನು ಹೋಗಲಾಡಿಸಲು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿದ್ದು, ಪಕ್ಷಭೇದ ಮರೆತು ಈ ಎಲ್ಲರೂ ಪ್ರಕ್ರಿಯೆಗೆ ಕೈಜೋಡಿಸಬೇಕು~ ಎಂದು ಕಾನೂನು ಸಚಿವರಾದ ಎಸ್.ಸುರೇಶ್‌ಕುಮಾರ್ ಅಭಿಪ್ರಾಯಪಟ್ಟರು.

ಭಾರತ ಯಾತ್ರಾ ಕೇಂದ್ರವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ, `ಭಾರತೀಯರಲ್ಲಿ ಸ್ವಾರ್ಥಪರತೆ, ಜವಾಬ್ದಾರಿರಹಿತ ನಡವಳಿಕೆ ಮತ್ತು ಭ್ರಷ್ಟಾಚಾರ~ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, `ಭ್ರಷ್ಟಾಚಾರ ಸಮಸ್ಯೆಯನ್ನು ಹೋಗಲಾಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ.
 
ಸುಮಾರು ಹದಿನೈದು ವರ್ಷಗಳ ಹಿಂದೆ ಪೋಷಕರಿಗೆ ತಮ್ಮ ಮಕ್ಕಳು ಏನಾಗಬೇಕು ಎಂದು ಕೇಳಿದರೆ ಡಾಕ್ಟರ್, ಎಂಜಿನಿಯರ್ ಎಂದು ಹೇಳುತ್ತಿದ್ದರು. ಆದರೀಗ, ಸಾಕಷ್ಟು ದುಡ್ಡು ತರುವ ವ್ಯಕ್ತಿಯಾಗಲಿ ಎಂದು ಬಯಸುತ್ತಿದ್ದಾರೆ. ಆದ್ದರಿಂದ ಎಲ್ಲರಿಗೂ ದುಡ್ಡು ಮುಖ್ಯವಾದಂತಿದೆ~ ಎಂದು ನುಡಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, `ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಅಣ್ಣಾ ಹಜಾರೆ ಸಾಮಾನ್ಯ ಮನುಷ್ಯರು. ಬಾಬಾ ರಾಮದೇವ್ ಯೋಗದಲ್ಲಿ ತೊಡಗಿಸಿಕೊಂಡಿದ್ದವರು. ಆದರೂ ಅವರ ಕರೆಗೆ ರಾಷ್ಟ್ರದ ಜನತೆ ಸ್ಪಂದಿಸಿದ ರೀತಿ, ಈ ಸಮಸ್ಯೆ ಹೋಗಬೇಕು ಎಂಬುದನ್ನು ಸೂಚಿಸುತ್ತದೆ~ ಎಂದರು.

`ಭಾರತ ಯಾತ್ರಾ ಕೇಂದ್ರದ ಸ್ಥಾಪಕ ಮಾಜಿ ಪ್ರಧಾನಿ ದಿ.ಚಂದ್ರಶೇಖರ್ ಅವರು, ಜನರ ಪ್ರಜ್ಞೆಯನ್ನು ಬಡಿದೆಬ್ಬಿಸಲು ದೇಶದಾದ್ಯಂತ ಯಾತ್ರೆ ನಡೆಸಿದರು. ಪ್ರಾಮಾಣಿಕವಾಗಿ ಬದುಕಿದ ಅವರಿಗೆ ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯಲು ಕೂಡ ಹಣವಿರಲಿಲ್ಲ. ಕೇಂದ್ರ ಸರ್ಕಾರವೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿತು~ ಎಂದು ಸ್ಮರಿಸಿದರು.

ಮಹಾರಾಷ್ಟ್ರದ ಮಾಜಿ ಸಚಿವ ಡಾ.ಬಾಯಿ ವೈದ್ಯ ಮಾತನಾಡಿ, `ಜಪಾನ್‌ನಲ್ಲಿ ಈಚೆಗೆ ಭೀಕರ ಭೂಕಂಪ ಸಂಭವಿಸಿದಾಗ ಅಲ್ಲಿನ ಸರ್ಕಾರ ಎಲ್ಲರಿಗೂ ಅಗತ್ಯ ವಸ್ತುಗಳನ್ನು ವಿತರಿಸಿತು. ಆದರೆ ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪ ಸಂಭವಿಸಿದಾಗ, ಭೂಕಂಪ ಪೀಡಿತರಿಗೆ ನೀಡಬೇಕೆಂದು ತಂದ ವಸ್ತುಗಳು ತಲುಪಬೇಕಾದವರಿಗೆ ತಲುಪಲಿಲ್ಲ. ಇದೊಂದು ಭ್ರಷ್ಟಾಚಾರದ ಮುಖ~ ಎಂದರು.

ಭಾರತ ಯಾತ್ರಾ ಟ್ರಸ್ಟ್‌ನ ಕಾರ್ಯದರ್ಶಿ ಸುಧೀಂದ್ರ ಬದೋರಿಯಾ, ಯಾತ್ರಾ ಕೇಂದ್ರದ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಬಿ.ಎಲ್.ಶಂಕರ್, ಪ್ರಧಾನ ಕಾರ್ಯದರ್ಶಿ ನಾಗರಾಜಮೂರ್ತಿ ಅವರು ಮಾತನಾಡಿದರು. ಕವಿಗಳಾದ ಎಲ್.ಎನ್.ಮುಕುಂದರಾಜ್, ಮಮತಾ ಸಾಗರ, ಪದ್ಮಾ ಅವರು ಕಾವ್ಯ ವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT