ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್:ಹೊಸ್ನೀಮುಬಾರಕ್ ಸಂಪುಟ ರದ್ದು, ಭುಗಿಲೆದ್ದ ಪ್ರತಿಭಟನೆ

Last Updated 29 ಜನವರಿ 2011, 18:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ): 30 ವರ್ಷಗಳ ತಮ್ಮ ನಿರಂಕುಶ ಆಡಳಿತದ ವಿರುದ್ಧ ದೇಶದಾದ್ಯಂತ ಭುಗಿಲೆದ್ದಿರುವ ಜನರ ಆಕ್ರೋಶಕ್ಕೆ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಶನಿವಾರ ಭಾಗಶಃ ಮಣಿದಿದ್ದಾರೆ. ತಮ್ಮ ಇಡೀ ಸಂಪುಟವನ್ನು ವಜಾಗೊಳಿಸಿರುವ ಅವರು, ನಾಳೆಯಿಂದಲೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಪ್ರಕಟಿಸಿದ್ದಾರೆ. ಆದರೆ, ತಮ್ಮ ರಾಜೀನಾಮೆ ಬೇಡಿಕೆಯನ್ನು ಇದೇ ಸಂದರ್ಭದಲ್ಲಿ ಅವರು ಸಾರಾಸಗಟಾಗಿ ತಳ್ಳಿಹಾಕಿರುವುದು ಜನರನ್ನು ಕೆರಳಿಸಿದೆ.

ಆಡಳಿತ ಸುಧಾರಣೆ, ನ್ಯಾಯಾಂಗದಲ್ಲಿ ಸ್ವಾಯತ್ತತೆ, ಜನತೆಗೆ ಹೆಚ್ಚಿನ ಸ್ವಾತಂತ್ರ್ಯ, ನಿರುದ್ಯೋಗ- ಬಡತನ ನಿವಾರಣೆ, ಜನರ ಜೀವನ ಮಟ್ಟ ಸುಧಾರಣೆ, ಬಡಜನರ ಏಳಿಗೆಗೆ ಕ್ರಮ ಇತ್ಯಾದಿ ಭರವಸೆಗಳನ್ನು ಅವರು ನೀಡಿದ್ದಾರೆ.

ಆದರೆ ಇದ್ಯಾವುದೂ ಮುಬಾರಕ್ ಅವರ ‘ಅಧಿಕಾರ ದಾಹ’ದ ವಿರುದ್ಧ ಕಳೆದ ಮಂಗಳವಾರದಿಂದ ತೀವ್ರ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಸಮಾಧಾನಗೊಳಿಸಲು ಸಫಲವಾಗಿಲ್ಲ. 82 ವರ್ಷದ ಅಧ್ಯಕ್ಷರ ಹೇಳಿಕೆ ಹೊರಬಿದ್ದ ಬಳಿಕವೂ ಸಾವಿರಾರು ಪ್ರತಿಭಟನಾಕಾರರು ಕರ್ಫ್ಯೂವನ್ನೂ ಲೆಕ್ಕಿಸದೆ ರಾಜಧಾನಿ ಕೈರೊ, ಅಲೆಕ್ಸಾಂಡ್ರಿಯ ಮತ್ತು ಸೂಯೆಜ್ ನಗರಗಳಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ಹಲವಾರು ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು.

ತಮ್ಮ ನಿಗ್ರಹಕ್ಕಾಗಿ ಅಧ್ಯಕ್ಷರು ಕರೆಸಿರುವ ಸೈನಿಕರನ್ನೂ ತಮ್ಮೊಂದಿಗೆ ಕೈಜೋಡಿಸುವಂತೆ ಅವರು ಆಹ್ವಾನಿಸುತ್ತಿದ್ದ ದೃಶ್ಯ ಈ ಸಂದರ್ಭದಲ್ಲಿ ಕಂಡುಬಂತು. ಅಲ್ಲದೆ ರಾಜಧಾನಿಯ ಹಲವಾರು ಸರ್ಕಾರಿ ಕಚೇರಿಗಳಲ್ಲಿ ಲೂಟಿ ನಡೆದಿದ್ದಾಗಿಯೂ ವರದಿಗಳು ತಿಳಿಸಿವೆ. ಪ್ರತಿಭಟನೆ ಆರಂಭವಾದಾಗಿನಿಂದ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಹಿಂಸಾಚಾರಕ್ಕೆ ಈವರೆಗೆ 27 ಮಂದಿ ಬಲಿಯಾಗಿದ್ದಾರೆ. 

ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ನಿರ್ಬಂಧಿಸಲು ಅಧಿಕಾರಿಗಳು ಸ್ಥಗಿತಗೊಳಿಸಿದ್ದ ದೂರಸಂಪರ್ಕ ಸೇವೆ ಶನಿವಾರ ಭಾಗಶಃ ಪುನರಾರಂಭವಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ಈಜಿಪ್ಟ್ ವಾಯುಯಾನ ಸಂಸ್ಥೆ’ ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನವರೆಗೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತ್ತು.

ಹಲವು ವಿದೇಶಿ ವಿಮಾನಗಳ ಸಂಚಾರ ಸಹ ರದ್ದುಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ದೇಶದ ಫುಟ್ಬಾಲ್ ಒಕ್ಕೂಟ ಶನಿವಾರ ಹಮ್ಮಿಕೊಂಡಿದ್ದ ಎಲ್ಲ ಪಂದ್ಯಗಳನ್ನೂ ಭದ್ರತಾ ಕಾರಣದಿಂದ ಮುಂದೂಡಿದೆ.

ಸೌದಿ ದೊರೆ ಬೆಂಬಲ
ರಿಯಾದ್ (ಎಎಫ್‌ಪಿ):
ಈಜಿಪ್ಟ್ ಅಧ್ಯಕ್ಷರಿಗೆ ಸೌದಿ ದೊರೆ ಅಬ್ದುಲ್ಲ ಅವರ ಬೆಂಬಲ ದೊರೆತಿದೆ. ಹೋಸ್ನಿ ಮುಬಾರಕ್ ಅವರಿಗೆ ದೂರವಾಣಿ ಕರೆ ಮಾಡಿ ಅವರು ಸಾಂತ್ವನ ಹೇಳಿದ್ದಾರೆ.  ಕೆಲ ಶಕ್ತಿಗಳು ಈಜಿಪ್ಟ್‌ನ ಸ್ಥಿರತೆ ಮತ್ತು ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿವೆ ಎಂದು ಟೀಕಿಸಿರುವ ಅಬ್ದುಲ್ಲ, ಸೌದಿ ಅರೇಬಿಯಾವು ಸರ್ಕಾರ ಮತ್ತು ಜನತೆಯ ಬೆಂಬಲಕ್ಕಿದೆ ಎಂದಿದ್ದಾರೆ.

ಒಬಾಮ ಮನವಿ
ವಾಷಿಂಗ್ಟನ್(ಪಿಟಿಐ): ಈಜಿಪ್ಟಿಯನ್ನರ ಹಕ್ಕುಗಳನ್ನು ಗೌರವಿಸುವಂತೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಹೋಸ್ನಿ ಮುಬಾರಕ್ ಅವರಿಗೆ ಶನಿವಾರ ದೂರವಾಣಿ ಮೂಲಕ ಕರೆ ನೀಡಿದ್ದಾರೆ.

ದೇಶದಲ್ಲಿ ಸುಧಾರಣೆ ತರುವ ತಮ್ಮ ಭರವಸೆಯನ್ನು ಮುಬಾರಕ್ ಅವರು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ದೇಶಕ್ಕೆ ಅವೆುರಿಕದ ಅನುದಾನ ಸ್ಥಗಿತಗೊಳಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮುನ್ನೆಚ್ಚರಿಕೆ: ಈಜಿಪ್ಟ್ ಪ್ರಯಾಣವನ್ನು ರದ್ದುಪಡಿಸುವಂತೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಲೆಬನಾನ್ ಮತ್ತು ಟ್ಯುನೀಷಿಯಾಗಳು ತಮ್ಮ ಪ್ರಜೆಗಳಿಗೆ ಸೂಚನೆ ನೀಡಿವೆ.

ಬ್ರಿಟನ್ ಅನುಕಂಪ
ಲಂಡನ್ (ಎಎಫ್‌ಪಿ): ಈಜಿಪ್ಟ್ ಪ್ರತಿಭಟನಾಕಾರರ ಬೇಡಿಕೆಗಳು ನ್ಯಾಯಬದ್ಧವಾಗಿವೆ ಎಂದು ಬೆಂಬಲ ಸೂಚಿಸಿರುವ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹಾಗ್, ಹಿಂಸಾಚಾರ ಮಾತ್ರ ಕಳವಳಕಾರಿಯಾಗಿದ್ದು ಅದನ್ನು ತ್ಯಜಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಪ್ರಧಾನಿ ಡೇವಿಡ್ ಕ್ಯಾಮೆರಾನ್ ಹೇಳಿಕೆ ನೀಡಿ ‘ಈಜಿಪ್ಟ್‌ನಲ್ಲಿ ತುರ್ತು ಸುಧಾರಣೆಯ ಅಗತ್ಯವಿದೆ. ಜನರ ಹಕ್ಕುಗಳ ರಕ್ಷಣೆ ಆಗಬೇಕಿದೆ’ ಎಂದಿದ್ದಾರೆ.

ಹುಸಿ ಬಾಂಬ್ ಕರೆ
ಅಥೆನ್ಸ್ (ಎಎಫ್‌ಪಿ): ಕೈರೊಗೆ ಹೊರಟಿದ್ದ ಈಜಿಪ್ಟ್ ವಾಯುಯಾನ ಸಂಸ್ಥೆಗೆ ಸೇರಿದ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಕರೆ ಹಿನ್ನೆಲೆಯಲ್ಲಿ, ಇಲ್ಲಿಂದ ಹೊರಟ ಕೂಡಲೇ ವಿಮಾನವನ್ನು ಶನಿವಾರ ತುರ್ತಾಗಿ ಕೆಳಗಿಳಿಸಲಾಯಿತು. ಎಲ್ಲ 251 ಪ್ರಯಾಣಿಕರೂ ಸುರಕ್ಷಿತವಾಗಿರುವುದಾಗಿ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT