ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ದುಬಾರಿ: ಪವಾರ್ ಸ್ಪಷ್ಟನೆ

Last Updated 26 ಡಿಸೆಂಬರ್ 2010, 11:25 IST
ಅಕ್ಷರ ಗಾತ್ರ

ಅಹ್ಮದಾಬಾದ್ (ಪಿಟಿಐ): ಈರುಳ್ಳಿ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಸಚಿವಾಲಯದಿಂದ ಸ್ಪಷ್ಟನೆ ಬಯಸಿದ್ದಾರೆ ಎನ್ನುವ ವರದಿಗಳನ್ನು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ತಳ್ಳಿ ಹಾಕಿದ್ದಾರೆ.ಪ್ರಧಾನಿ ಸ್ಪಷ್ಟನೆ ಕೇಳಿರುವುದನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಕೃಷಿ ಸಚಿವಾಲಯಕ್ಕೆ  ಪ್ರಧಾನಿ ಕಚೇರಿಯಿಂದ ಯಾವುದೇ ಪತ್ರ ಬಂದಿಲ್ಲ ಎಂದು ಪವಾರ್ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಕೋರ್ ಬ್ಯಾಂಕಿಂಗ್ ಸೇವೆಯ ರಾಷ್ಟ್ರೀಯ ಉದ್ಘಾಟನಾ ಸಮಾರಂಭದ ನಂತರ ಅವರು  ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.ತರಕಾರಿಗಳ ಬೆಲೆಗಳು ದುಬಾರಿಯಾಗಲು ಆಹಾರ ಹಣದುಬ್ಬರದಲ್ಲಿನ ತೀವ್ರ ಏರಿಕೆಯೇ ಕಾರಣ. ಈ ವರ್ಷ ಸುರಿದ ಅಕಾಲಿಕ ಮಳೆಯಿಂದ ದೇಶದ ಅನೇಕ ಕಡೆಗಳಲ್ಲಿ ಬೆಳೆದು ನಿಂತ ಫಸಲು ನಾಶವಾಗಿದ್ದರಿಂದ ತರಕಾರಿಗಳ ಬೆಲೆಗಳು ದುಬಾರಿಯಾಗಿ ಪರಿಣಮಿಸಿವೆ. ಅನಿರೀಕ್ಷಿತ ಮಳೆಯು ಹವಾಮಾನ ಬದಲಾವಣೆಯ ಪರಿಣಾಮವೇ ಎನ್ನುವುದು ಮಾತ್ರ ನನಗೆ ಗೊತ್ತಿಲ್ಲ ಎಂದು ಶರದ್ ಪ್ರತಿಕ್ರಿಯಿಸಿದರು.

ಒಂದು ತಿಂಗಳ ಹಿಂದೆ ಈರುಳ್ಳಿ ಸೇರಿದಂತೆ ತರಕಾರಿಗಳ ಬೆಲೆಗಳು ಇಳಿಯಲಿವೆ ಎಂದು ಕೃಷಿ ಸಚಿವಾಲಯವು ಅಂದಾಜು ಮಾಡಿತ್ತು. ಆದರೆ, ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಈರುಳ್ಳಿ ಮತ್ತು ತರಕಾರಿಗಳು ಗಮನಾರ್ಹ ಪ್ರಮಾಣದಲ್ಲಿ ನಾಶವಾದವು. ಈ ತಿಂಗಳ ಬೇಡಿಕೆಯಲ್ಲಿ ಶೇ  40ರಷ್ಟು ಈರುಳ್ಳಿ ಪೂರೈಸುವ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಈರುಳ್ಳಿ ಪೂರೈಕೆ ಕುಸಿಯಿತು. ಗುಜರಾತ್, ರಾಜಸ್ತಾನ ಮತ್ತು ಉತ್ತರ ಪ್ರದೇಶಗಳೂ ಬೇರೆ ಸಮಯದಲ್ಲಿ ಈರುಳ್ಳಿ ಪೂರೈಸುವುದರಿಂದ ಈರುಳ್ಳಿ ಬೆಲೆ ಜನಸಾಮಾನ್ಯರ ಪಾಲಿಗೆ ಕೈಗೆಟುಕದ ಮಟ್ಟಕ್ಕೆ ಏರಿಕೆಯಾಯಿತು ಎಂದರು.

ರಫ್ತು ನಿಷೇಧ ಸೇರಿದಂತೆ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡ ಫಲವಾಗಿ ಪೂರೈಕೆ ಪರಿಸ್ಥಿತಿ ಸುಧಾರಿಸಿ ಈರುಳ್ಳಿ ಬೆಲೆಗಳು ಇಳಿಯುತ್ತಿವೆ. ಹೊಸ ಫಸಲು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದ್ದು ಪರಿಸ್ಥಿತಿಯಲ್ಲಿ ಇನ್ನಷ್ಟು ಸುಧಾರಣೆ ಕಂಡು ಬರಲಿದೆ ಎಂದರು.  ಸಕ್ಕರೆ ಬೆಲೆ: ಸದ್ಯಕ್ಕೆ ಸಕ್ಕರೆ ಬೆಲೆ ಪ್ರತಿ ಕೆಜಿಗೆ 27ರಿಂದ 28ರಷ್ಟು ಇದೆ.  ರೈತರಿಗೂ  ಸೂಕ್ತ ನ್ಯಾಯ ಸಿಗಬೇಕು ಮತ್ತು ಗ್ರಾಹಕರ ಹಿತಾಸಕ್ತಿಯೂ ರಕ್ಷಣೆಯಾಗಬೇಕು.ಈ ಎರಡರ ಮಧ್ಯೆ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ ಎಂದರು.ಟೊಮೆಟೊ ಬೆಲೆಗಳು ಏರಿಕೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಒಂದೊಂದೇ ತರಕಾರಿಯ ಬೆಲೆಗಳನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT