ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆ ನಡೆದಿಲ್ಲ

Last Updated 15 ಆಗಸ್ಟ್ 2012, 19:25 IST
ಅಕ್ಷರ ಗಾತ್ರ

ಬೆಂಗಳೂರು: `ನಗರವೂ ಸೇರಿದಂತೆ ರಾಜ್ಯದ ಹಲವೆಡೆ ವಾಸಿಸುತ್ತಿರುವ ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆ ನಡೆಯುತ್ತಿದೆ ಎಂಬ ವಿಷಯ ಸತ್ಯಕ್ಕೆ ದೂರವಾಗಿದೆ~ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವ್ ಹೇಳಿದರು.

ಬುಧವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶಾನ್ಯ ರಾಜ್ಯದವರೇ ಆದ ಪಚಾವ್ ಅವರು, `ಅಸ್ಸಾಂ ಮತ್ತು ಮುಂಬೈನಲ್ಲಿ ಗಲಭೆ ನಡೆದಿರುವುದರಿಂದ ಅಲ್ಲಿನ ಜನ ಭಯಭೀತರಾಗಿದ್ದಾರೆ. ಇದೇ ವೇಳೆ ನಗರದಲ್ಲಿ ವಾಸವಾಗಿರುವ ಈಶಾನ್ಯ ರಾಜ್ಯಗಳ ಜನರ ಮೇಲೆ ಒಂದು ಸಮುದಾಯದವರು ಹಲ್ಲೆ ನಡೆಸುತ್ತಿದ್ದಾರೆ ಎಂದು ಕೆಲವು ಕಿಡಿಗೇಡಿಗಳು ಎಸ್‌ಎಂಎಸ್, ಫೇಸ್‌ಬುಕ್ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವದಂತಿ ಹಬ್ಬಿಸಿದ್ದಾರೆ. ಇದರಿಂದ ಆತಂಕಗೊಂಡಿರುವ ಈಶಾನ್ಯ ರಾಜ್ಯಗಳ ಜನ ನಗರ ತೊರೆದು ಹೋಗುತ್ತಿದ್ದಾರೆ. ಆದರೆ, ಅವರಿಗೆ ಹಲ್ಲೆ ನಡೆಸಿರುವ ಒಂದು ಪ್ರಕರಣವೂ ನಗರದಲ್ಲಿ ನಡೆದಿಲ್ಲ~ ಎಂದರು.

ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮಾತನಾಡಿ, `ಬೆಂಗಳೂರು ಶಾಂತಿ ಪ್ರಿಯ ನಗರ. ಇಲ್ಲಿಯವರೆಗೂ ನಗರದಲ್ಲಿ ಅಂತಹ ಘಟನೆಗಳು ನಡೆದಿಲ್ಲ. ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಉದ್ಯೋಗಿಗಳು ಸೇರಿದಂತೆ ಈಶಾನ್ಯ ಭಾಗದ ಸಾಕಷ್ಟು ಜನ ನಗರದಲ್ಲಿದ್ದಾರೆ.
 
ಆದ್ದರಿಂದ ಅವರು ವಾಸವಾಗಿರುವ ಸ್ಥಳಗಳಲ್ಲಿ ನಾನೂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತು ನಡೆಸಲಿದ್ದೇವೆ. ಈಗಾಗಲೇ ನಗರದಲ್ಲಿರುವ ಈಶಾನ್ಯ ರಾಜ್ಯಗಳ ಜನರನ್ನು ಸಂಪರ್ಕಿಸಿ ರಕ್ಷಣೆಯ ಭರವಸೆ ನೀಡಿದ್ದೇವೆ. ಆದರೂ ಕೆಲವರು ತಮ್ಮ ರಾಜ್ಯಗಳಿಗೆ ಹಿಂದಿರುಗುತ್ತಿರುವುದು ಕಂಡು ಬರುತ್ತಿದೆ~ ಎಂದರು.

`ಗಾಳಿ ಸುದ್ದಿಯಿಂದ ಗೊಂದಲಬೇಡ~

`ಹಲ್ಲೆಯ ವದಂತಿ ಹಬ್ಬಿರುವ ಸಂಬಂಧ ಉನ್ನತ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಗಾಳಿ ಸುದ್ದಿಗೆ ಹೆದರಿ ಈಶಾನ್ಯ ಭಾಗದ ಜನ ನಗರದಿಂದ ಹೋಗಬೇಕಾಗಿಲ್ಲ. ಈಗಾಗಲೇ ಡಿಸಿಪಿ ಡಿಸೋಜಾ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದೇವೆ. ಇಂತಹ ವದಂತಿ ನಿಮ್ಮ ಕಿವಿಗೆ ಬಿದ್ದಲ್ಲಿ ಡಿಸೋಜಾ ಅವರ ಮೊಬೈಲ್ ಸಂಖ್ಯೆಗೆ (9480801020) ಕರೆ ಮಾಡಿ ಮಾಹಿತಿ ನೀಡಬಹುದು. ಜತೆಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಅಥವಾ ಡಿಜಿ ನಿಯಂತ್ರಣ ಕೊಠಡಿಗೂ ಕರೆ ಮಾಡಿ ಮಾಹಿತಿ ನೀಡಬೇಕು. ವದಂತಿ ಹಬ್ಬಿಸಿದವರ ಸುಳಿವು ಸಿಕ್ಕರೆ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು~
 -ಲಾಲ್ ರೋಕುಮ ಪಚಾವ್,  ರಾಜ್ಯ ಪೊಲೀಸ್ ಮಹಾನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT