ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಂಡವಳ್ಳಿ: ಚೆಲುವಿನ ರಂಗವಲ್ಲಿ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ದೂರಕ್ಕೆ ಪುಟ್ಟ ಪುಟ್ಟ ಗೂಡುಗಳಂತೆ ಕಾಣುವ ಈ ಗುಹಾಂತರ ದೇವಾಲಯ ಕೃಷ್ಣಾನದಿಯ ತಟದಲ್ಲಿದೆ. ಹಸಿರು ತುಂಬಿದ ಗುಡ್ಡದ ಮರೆಯಲ್ಲಿ ಅವಿತಂತೆ ಕಾಣುವ ಈ ಪರಿಸರ ಕಲಾಕೃತಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಗೆ ಸೇರಿದ ಉಂಡವಳ್ಳಿ ಗ್ರಾಮದಲ್ಲಿದೆ. ಈ ದೇಗುಲದ ಹೆಸರು ತ್ರಿಮೂರ್ತಿ ಗುಹಾಂತರ ದೇವಾಲಯ.

ನಾಲ್ಕನೇ ಶತಮಾನದಲ್ಲಿ ನಿರ್ಮಾಣವಾಗಿರುವ ಇದು ಭಾರತೀಯ ಗುಹಾಂತರ ದೇವಾಲಯ ಶೈಲಿಯ ಬಗ್ಗೆ ಹೆಮ್ಮೆ ಹುಟ್ಟಿಸುವಂತಿದೆ. ಬಂಡೆಯನ್ನು ಕೊರೆದು ಸೃಷ್ಟಿಸಿಯಾಗಿದೆ ಈ ಶಿಲಾವೈಭವ.

ಮರಳುಶಿಲೆಯಿಂದ ರಚಿತವಾಗಿರುವ ಈ ಗುಹೆಗಳಲ್ಲಿ ಸಾಕಷ್ಟು ದೇವಾಲಯಗಳಿವೆ.ಅವುಗಳಲ್ಲಿ ವಿಷ್ಣುವಿನ ಬೃಹತ್ ಮೂರ್ತಿ ಇರುವ ಗುಹೆಯೊಂದಿದೆ. ಅದು ನಾಲ್ಕು ಅಂತಸ್ತಿನದು.

ಅದರಲ್ಲಿಯೇ ಶಿವ ಮತ್ತು ಬ್ರಹ್ಮನ ವಿಗ್ರಹಗಳೂ ಇವೆ. ಅದರಿಂದ ಅದನ್ನು ತ್ರಿಮೂರ್ತಿಗಳ ಗುಹಾಂತರ ದೇವಾಲಯ ಎಂದು ಕರೆಯಲಾಗಿದೆ. ಗುಹೆಯೊಳಗೆ ವಿಷ್ಣುವಿನ ಸುಂದರ ಮೂರ್ತಿ ಅಲ್ಲದೇ, ಗೋಡೆಗಳ ಮೇಲೆಲ್ಲಾ ಶಿಲ್ಪ ವೈಭವ ತುಂಬಿಕೊಂಡಿದೆ.

ಇಲ್ಲಿನ ಮಂಟಪ, ಕಂಬ ಮತ್ತು ಗೋಡೆಗಳ ಮೇಲೆ ಸೂಕ್ಷ್ಮ ಕಲೆಗಳ ಚಿತ್ತಾರ ಇದೆ. ಕೊಂಚ ಬೌದ್ಧ ವಿಹಾರ ಮತ್ತು ಜೈನರ ಚೈತ್ಯವನ್ನು ಹೋಲುವಂಥ ಕಲೆ ಗೋಚರವಾಗುತ್ತದೆ. ಜೊತೆಗೆ ಗುಪ್ತರ ಕಾಲದ ಕಲಾ ಶೈಲಿಯನ್ನು ನೆನಪಿಸುವ ಕುರುಹುಗಳೂ ಕಾಣಸಿಗುತ್ತವೆ.

ಕುಶಲ ಕರ್ಮಿಗಳ ಕೈಯ್ಯಿಂದ ಅರಳಿರುವ ಈ ಸುಂದರ ಗುಹಾಂತರ ದೇವಾಲಯಗಳ ಊರು ವಿಜಯವಾಡಾದಿಂದ 6 ಕಿ.ಮೀ, ಗುಂಟೂರಿನಿಂದ 22 ಕಿ.ಮೀ ಮತ್ತು ಹೈದರಾಬಾದ್‌ನಿಂದ 280 ಕಿ.ಮೀ ದೂರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT