ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

Last Updated 18 ಫೆಬ್ರುವರಿ 2012, 6:40 IST
ಅಕ್ಷರ ಗಾತ್ರ

ಉಡುಪಿ: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ರಾಜೀನಾಮೆಯಿಂದ ತೆರವಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾ. 18ಕ್ಕೆ ಮುಹೂರ್ತ ನಿಗದಿಯಾಗಿದೆ. ಫೆ. 22ಕ್ಕೆ ಅಧಿಸೂಚನೆ ಪ್ರಕಟವಾಗಲಿದ್ದು, ಮಾರ್ಚ್‌ನಲ್ಲಿ ಕರಾವಳಿಯ ಸೆಕೆಯೊಂದಿಗೆ ಚುನಾವಣೆ ಕಾವೂ ಸೇರಿ ಇನ್ನಷ್ಟು `ಬಿಸಿ~ ಹೆಚ್ಚಿಸಲಿದೆ.

ಪ್ರಮುಖ ರಾಜಕೀಯ ಪಕ್ಷಗಳು 2-3ದಿನದಲ್ಲಿ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಕೆಲ ಅಭ್ಯರ್ಥಿಗಳ ಹೆಸರು ಚಲಾವಣೆಯಲ್ಲಿವೆ.

ಡಿ.ವಿ.ಸದಾನಂದ ಗೌಡ ಅವರು ಡಿ. 28ರಂದು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಕ್ಕೂ ಮೂರು ತಿಂಗಳು ಮುನ್ನ(ಆಗಸ್ಟ್) ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾದ ಆಕಸ್ಮಿಕ ಸನ್ನಿವೇಶದ ಬಳಿಕ ಈ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವ ಲೆಕ್ಕಾಚಾರ ಬಿಜೆಪಿ ಮತ್ತು ಕಾಂಗ್ರೆಸ್ ಪಾಳೆಯದಲ್ಲಿ ಪ್ರಾರಂಭವಾಗಿತ್ತು.

ಆದರೆ ಆರು ತಿಂಗಳು ಕಳೆದರೂ ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಯಾರಾಗಬೇಕು? ಎಂಬ ಲೆಕ್ಕಾಚಾರಕ್ಕೆ ತೆರೆ ಬಿದ್ದಿಲ್ಲ. ಈ ಕ್ಷಣದವರೆಗೂ ಮೂರ‌್ನಾಲ್ಕು ಹೆಸರು ಚಾಲ್ತಿಯಲ್ಲಿದ್ದು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

`ಇಲ್ಲಿ ಬಿಜೆಪಿ, ಕಾಂಗ್ರೆಸ್ ಮಾತ್ರವೇ ಪ್ರಬಲ ಪಕ್ಷಗಳು~ ಎಂಬ ಭಾವನೆಯಲ್ಲಿದ್ದ ಕರಾವಳಿ ಜನತೆಗೆ ಜೆಡಿಎಸ್ ಹೊಸ ಅಭ್ಯರ್ಥಿಯೊಬ್ಬರ ಹೆಸರನ್ನು ತೇಲಿ ಬಿಡುವ ಮೂಲಕ ದೊಡ್ಡ ಅಚ್ಚರಿಗೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಯುವ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ  ಮಧು ಬಂಗಾರಪ್ಪ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮಾತು ಕೇಳಿ ಬರುತ್ತಿದೆ. ಮಧು ಬಂಗಾರಪ್ಪ ಅಭ್ಯರ್ಥಿಯಾದರೆ ಬಿಲ್ಲವ (ಈಡಿಗ) ಮತಗಳನ್ನು ಸೆಳೆಯುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಿದ್ದೆಗೆಡಿಸುವ ಸಾಧ್ಯತೆ ಇವೆ.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಂಸದರಾಗಿದ್ದ ಕ್ಷೇತ್ರದ ಚುನಾವಣೆ ಇದಾಗಿರುವುದರಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದೆ. ಈ ಬಾರಿಯ ಚುನಾವಣೆ ಕಾಂಗ್ರೆಸ್‌ಗೆ ಸಹಕಾರಿಯಾಗುವ `ಹಲವು ಅಂಶ~ಗಳನ್ನು  ಕಾಂಗ್ರೆಸ್ ಮುಖಂಡರು ಮನದಟ್ಟು ಮಾಡಿಹೋಗಿದ್ದಾರೆ.
 
ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದ್ದು ಹೈಕಮಾಂಡ್ ಅಭ್ಯರ್ಥಿಯನ್ನು ಆಯ್ಕೆ ಅಂತಿಮಗೊಳಿಸಲಿದೆ. ಹಾಗೂ ಇತ್ತೀಚಿನ ಹಲವು ವಿದ್ಯಮಾನಗಳು ಕಾಂಗ್ರೆಸ್ಸಿಗರಲ್ಲಿ ಉತ್ಸಾಹ ಮೂಡಿಸಿವೆ. ರೇವ್ ಪಾರ್ಟಿ ನಂತರದ ವಿದ್ಯಮಾನಗಳು ಚುನಾವಣಾ ವಿಷಯವಾಗುತ್ತಿದ್ದರೂ ಆಚಾರ್ಯರ ನಿಧನ ಸ್ವಲ್ಪ ಮಟ್ಟಿಗೆ ಉತ್ಸಾಹ ಕುಂದಿಸಿದೆ.

ಬಿಜೆಪಿಗೆ ಆಚಾರ್ಯರ ಅನುಪಸ್ಥಿತಿ ಭೀತಿ: ಬಿಜೆಪಿ ಹಿರಿಯ ಮುಖಂಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ.ಎಸ್.ಆಚಾರ್ಯರ ನಿಧನದಿಂದ ಬಿಜೆಪಿ ಮುಖಂಡರು ಕಂಗೆಟ್ಟಿದ್ದಾರೆ. ಮನೆಯ ಹಿರಿಯಣ್ಣನನ್ನು ಕಳೆದುಕೊಂಡ ದುಃಖ ಅವರಲ್ಲಿದೆ. ಅಲ್ಲದೇ ಇತ್ತೀಚಿನ ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲಿನ ರೇವ್ ಪಾರ್ಟಿ ಪ್ರಕರಣದ ಕಾವು ಕೂಡ ಬಿಜೆಪಿಯನ್ನು ಕುಗ್ಗಿಸಿತ್ತು. ಜತೆಗೆ `ಬ್ಲೂಫಿಲಂ~ ವೀಕ್ಷಣೆ ಪ್ರಕರಣವೂ ಪೆಟ್ಟಿನ ಮೇಲೆ ಪೆಟ್ಟು ನೀಡಿದೆ. ಹಾಗೆಂದು ಆಚಾರ್ಯ ಅವರ ನಿಧನದ ಅನುಕಂಪದ ಅಲೆ ಕೂಡ ಬಿಜೆಪಿಗೆ `ಮತ~ವಾಗುವ ಸಾಧ್ಯತೆಗಳೂ ಇಲ್ಲದಿಲ್ಲ.

8 ವಿಧಾನಸಭಾ ಕ್ಷೇತ್ರ: ಉಡುಪಿ-ಚಿಕ್ಕಮಗಳೂರು ಜಿಲ್ಲೆ ಒಳಗೊಂಡ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 12.35 ಲಕ್ಷ.  ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರದ ಉಡುಪಿ ಕ್ಷೇತ್ರದ ಮತದಾರರ ಸಂಖ್ಯೆ 6.25 ಲಕ್ಷ,  ಶೃಂಗೇರಿ, ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಿಕ್ಕಮಗಳೂರಿನ ಮತದಾರರ ಸಂಖ್ಯೆ 6.08 ಲಕ್ಷ. 

ಉಡುಪಿ ಜಿಲ್ಲೆಯಲ್ಲಿ ಬಿಲ್ಲವರೇ ದೊಡ್ಡ ಸಂಖ್ಯೆ ಮತದಾರರು. ಇಲ್ಲಿಯ ಬಿಲ್ಲವರನ್ನೇ ಚಿಕ್ಕಮಗಳೂರಿನಲ್ಲಿ ಈಡಿಗರು ಎಂದು ಕರೆಯಲಾಗುತ್ತದೆ. ಹಾಗೆಯೇ ಈ ಭಾಗದ ಬಂಟರದು ಇಲ್ಲಿನ ಎರಡನೇ ಬಹುದೊಡ್ಡ ಸಮುದಾಯ. ಚಿಕ್ಕಮಗಳೂರಿನ ಒಕ್ಕಲಿಗ ಸಮುದಾಯ ಈ ಸಮುದಾಯದೊಂದಿಗೆ ಗುರುತಿಸಿಕೊಳ್ಳುತ್ತದೆ.

ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಬಹುತೇಕವಾಗಿ ಜಾತಿ ಆಧಾರದಲ್ಲಿಯೇ ನಡೆವ ಕಾರಣ `ಮತದಾರರು~ ಎನ್ನುವುದಕ್ಕಿಂತ ಯಾವ `ಜಾತಿಯ~ ಮತದಾರರು ಎನ್ನುವುದನ್ನೇ ಹೆಚ್ಚು ಲೆಕ್ಕಾಚಾರ ಮಾಡಲಾಗುತ್ತಿದೆ ಎನ್ನುವ ಮಾತು ಇಲ್ಲಿ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT