ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಆರೋಗ್ಯಕ್ಕೆ ಯೋಗ, ಪ್ರಕೃತಿ ಚಿಕಿತ್ಸೆ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾನವ ಜೀವನದ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕರ ಸಾಧನೆಗೂ ಆಧಾರಭೂತವಾದುದು ಈ ಶರೀರ. ಯೋಗಾಸಕ್ತರಾದವರು ಚಿತ್ತವೃತ್ತಿ ನಿರೋಧದ ಮೂಲಕ  ಮಾನಸಿಕ, ಬೌದ್ಧಿಕ ಹಾಗೂ ಶಾರೀರಿಕ ಬಲಗಳನ್ನು ವೃದ್ಧಿಸಿಕೊಳ್ಳುತ್ತಾರೆ.
 
ಅನೇಕ ಶತಮಾನಗಳ ಅನುಭವದಿಂದ ದೇಹದ ಪ್ರತಿಯೊಂದು ಅಂಗಕ್ಕೂ, ಮಾಂಸಖಂಡಗಳಿಗೂ, ನರಗಳಿಗೂ, ಗ್ರಂಥಿಗಳಿಗೂ ವ್ಯಾಯಾಮ ಸಿಗುವಂತೆ ಆಸನಗಳನ್ನು ನಿಯೋಜಿಸಲಾಗಿದೆ. ಅವು ಒಳ್ಳೆಯ ದೇಹವನ್ನು ಬೆಳೆಸುತ್ತವೆ. ಕಷ್ಟದ ದಿನನಿತ್ಯದ ಸಾಧನೆಯಿಂದ ಮಾತ್ರ ಗಳಿಸಬಹುದಾದ ಆಸ್ತಿ ಅದು. ದೇಹ, ಮನಸ್ಸು ಮತ್ತು ಆತ್ಮಗಳ ಸಾಮರಸ್ಯದ ಅವಸ್ಥೆಯಿಂದ ದೈಹಿಕ, ಮಾನಸಿಕ ಶಾಂತಿ, ನೆಮ್ಮದಿಗಳ ಅರಿವುಗಳನ್ನು ಪಡೆಯುವುದೇ ನಿಜವಾದ ಆರೋಗ್ಯ.

ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ `ಯುಜ್~ ಎನ್ನುವುದರಿಂದ ಬಂದಿದ್ದು. ಅದು ಬಂಧಿಸು, ಕೂಡಿಸು, ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಪತಂಜಲಿ ಋಷಿಗಳ 196 ಸೂತ್ರಗಳ 2ನೇ ಸೂತ್ರದಲ್ಲಿ `ಯೋಗಃ ಚಿತ್ತ ವೃತ್ತಿ ನಿರೋಧಃ~ ಅಂದರೆ ಚಿತ್ತದ ವೃತ್ತಿಗಳನ್ನು, ಬಯಕೆಗಳನ್ನು ಸಂಪೂರ್ಣ ತಡೆ ಹಿಡಿದು ನಿಲ್ಲಿಸಿ ಏಕಾಗ್ರತೆ ಸಾಧಿಸುವುದೇ ಯೋಗವೆನಿಸುವುದು.

 ಪ್ರಾಚೀನಮುನಿ ಪತಂಜಲಿಯ ಪ್ರಕಾರ ಯೋಗದಲ್ಲಿ ಅಷ್ಟಾಂಗಗಳಿವೆ. ಅವು : 1. ಯಮ, 2. ನಿಯಮ, 3. ಯೋಗಾಸನ, 4. ಪ್ರಾಣಾಯಾಮ, 5. ಪ್ರತ್ಯಾಹಾರ 6. ಧಾರಣ 7. ಧ್ಯಾನ ಮತ್ತು 8. ಸಮಾಧಿ. ಇದೇ ಕಾರಣದಿಂದ ಇದನ್ನು ಅಷ್ಟಾಂಗ ಯೋಗವೆಂದು ಕರೆಯುವರು.
 ಈ ಅಷ್ಟಾಂಗ ಯೋಗದ ಮೂರನೇ ಮೆಟ್ಟಿಲೇ ಯೋಗಾಸನ. ಮನುಷ್ಯನಿಗೆ ಗಾಳಿ, ಬೆಳಕು, ನೀರು ಎಷ್ಟು ಮುಖ್ಯವೋ ಯೋಗವೂ ಅಷ್ಟೇ ಅನಿವಾರ್ಯ. ಇದು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ಇಂದಿನ ನಾಗರಿಕತೆಯ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಯೋಗ ಸಾಧನೆಯ ಅವಶ್ಯಕತೆ ಹೆಚ್ಚಿದೆ. ನಾವು ಉಪಯೋಗಿಸುವ ಆಹಾರ, ಪಾನೀಯ, ಉಸಿರಾಡುವ ಗಾಳಿ ಎಲ್ಲವೂ ಮಲಿನಗೊಂಡಿದ್ದು. ಪ್ರತಿಯೊಬ್ಬರೂ ರೋಗ ರುಜಿನಗಳಿಂದ ಬಳಲುವಂತಾಗಿದೆ. ಇವುಗಳಿಂದ ಸಾಧ್ಯವಿರುವಷ್ಟು ವಿಮುಕ್ತರಾಗಿ ಆರೋಗ್ಯವಂತರಾಗಿ, ದೀರ್ಘಾಯುಗಳಾಗಿ ಬದುಕಿ ಬಾಳಲು ಯೋಗಾಭ್ಯಾಸ, ಪ್ರಾಕೃತಿಕ ಚಿಕಿತ್ಸೆಯು ನಿರಂತರ ಅಗತ್ಯ.

ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಯೋಗಾಸನವೆಂಬುದು ಜಗತ್ತಿಗೆ ಭಾರತದ ದೊಡ್ಡ ಕೊಡುಗೆ ಆಗಿದೆ. ಯೋಗಾಭ್ಯಾಸದಿಂದ ಜೀರ್ಣಾಂಗಗಳ ಶಕ್ತಿ ವೃದ್ಧಿಗೊಳ್ಳುತ್ತದೆ. ಇದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಶರೀರ ಸ್ವಾಸ್ಥ್ಯಕ್ಕಾಗಿ, ಕೆಲವು ಯೋಗಾಸನಗಳನ್ನಾದರೂ ನಮ್ಮ ನಿತ್ಯ ಜೀವನದಲ್ಲಿ ಆಚರಣೆಯಲ್ಲಿಟ್ಟುಕೊಳ್ಳುವುದು ಎಲ್ಲರಿಗೂ ಕ್ಷೇಮ.
ಯೋಗಾಭ್ಯಾಸವನ್ನು ಗುರುವಿನ ಮಾರ್ಗದರ್ಶನವಿಲ್ಲದೆ ಕಲಿಯಬಾರದು.

 ಯೋಗಾಭ್ಯಾಸವೆಂದರೆ ಶುಷ್ಕ ಅಂಗ ಸಾಧನೆಯಲ್ಲ. ದೇಹವನ್ನು ಮೊದಲು ಹಿಡಿತಕ್ಕೆ ತಂದುಕೊಳ್ಳಬೇಕು.ಅದು ಶರೀರವನ್ನು ಕಾಂತಿಗೊಳಿಸುತ್ತದೆ.ಲವಲವಿಕೆ ತುಂಬುತ್ತದೆ. ಪಾಶ್ಚಾತ್ಯರೂ ಈಗೀಗ ಈ ಯೋಗದ ಬೆನ್ನು ಹತ್ತಿದ್ದಾರೆ. ಯೋಗ ಔಷಧಕ್ಕೊಂದು ಪರ್ಯಾಯ ರಾಮಬಾಣ.

ಸರ್ವತೋಮುಖವಾದ ಆರೋಗ್ಯದ ದೃಷ್ಟಿಯಿಂದ ಯೋಗಾಸನಗಳು ಹಾಗೂ ಪ್ರಾಕೃತಿಕ ಚಿಕಿತ್ಸೆ  ಎಂತಹ ಪವಾಡ ಸದೃಶ ಪರಿಣಾಮವನ್ನು ಉಂಟುಮಾಡುತ್ತವೆ ಎಂಬುದನ್ನು ಅನುಭವದಿಂದ ಸಿದ್ಧಿ ಮಾಡಿಕೊಂಡ ಅನೇಕ ವಿದೇಶಿ ಜಿಜ್ಞಾಸುಗಳು ಈಚೆಗೆ ಯೋಗದ ಕುರಿತು ಸಾಕಷ್ಟು ಸಾಧನೆ ಪ್ರಚಾರಾದಿಗಳನ್ನು ಕೈಗೊಂಡಿದ್ದಾರೆ.

ಔಷಧ ರಹಿತ ಚಿಕಿತ್ಸಾವಿಧಾನ 

ಪ್ರಕೃತಿ ಚಿಕಿತ್ಸೆ ಔಷಧರಹಿತ ಚಿಕಿತ್ಸಾ ವಿಧಾನವಾಗಿದೆ. ಔಷಧವನ್ನು ಆಹಾರ ಪ್ರಮಾಣದಲ್ಲಿ ಹಾಗೂ ಆಹಾರವನ್ನು ಔಷಧ ಪ್ರಮಾಣದಲ್ಲಿ ಸೇವಿಸುತ್ತಿರುವ ವಿಪರ್ಯಾಸದ ಈ ಆಧುನಿಕ ಕಾಲದಲ್ಲಿ  ನಿಸರ್ಗೋಪಚಾರದ ಚಿಕಿತ್ಸಾ ವಿಧಾನವನ್ನು ಜೀವನದಲ್ಲಿ ಅಳವಡಿಸುವುದು ಇಂದಿನ ಕಾಲದ ಅವಶ್ಯಕತೆಯಾಗಿದೆ. ನಿಸರ್ಗವು ಪಂಚಮಹಾಭೂತಗಳಿಂದ ರಚಿತವಾದಂತೆ ದೇಹವೂ ಸಹ ಪಂಚಮಹಾಭೂತಗಳಿಂದ ರಚಿಸಲ್ಪಟ್ಟಿದೆ ಎಂಬ ಸಿದ್ಧಾಂತದ ಮೇರೆಗೆ ಈ ಚಿಕಿತ್ಸಾವಿಧಾನವು ಮಹತ್ವವನ್ನು ಪಡೆದಿದೆ.

ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ವೈಜ್ಞಾನಿಕ ಶಿಸ್ತಿನಿಂದ ಅಧ್ಯಯನ ಮಾಡಿ ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸೆಯಿಂದ ಸಾಕಷ್ಟು ಪ್ರಯೋಜನವಿದೆಯೆಂಬ ತರ್ಕಬದ್ಧ ತೀರ್ಮಾನಕ್ಕೆ ಬಂದಿದ್ದಾರೆ. ಅದು ಮೂಲಭೂತ ದೈಹಿಕ ಕಾರ್ಯಾಚರಣೆಗಳನ್ನೇ ಸುಧಾರಿಸಬ್ಲ್ಲಲುದೆಂದು ಕಂಡುಕೊಂಡಿದ್ದಾರೆ.

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕುರಿತಾದ ಅಂತರರಾಷ್ಟ್ರೀಯ ಮಹಾಸಮ್ಮೇಳನವನ್ನು ಫೆಬ್ರವರಿ 9-13ರಂದು ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಹಾಗೂ ಅನೇಕ ಹೆಸರಾಂತ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಂಘಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನ, ಗಾಯತ್ರಿವಿಹಾರದಲ್ಲಿ ಆಯೋಜಿಸಲಾಗಿದೆ.

ದೇಶ ವಿದೇಶಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹತ್ವವನ್ನು ಸಾರುವುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರಕೃತಿ ಚಿಕಿತ್ಸೆ ವೈದ್ಯಪದ್ಧತಿಗೆ ಮಾನ್ಯತೆ ಪಡೆಯುವುದು ಇತ್ಯಾದಿ ಹಲವಾರು ವಿಚಾರಗಳು ಇಲ್ಲಿ ಚರ್ಚೆಯಾಗಲಿವೆ.

ಅಲ್ಲದೆ,  ಪ್ರಾತ್ಯಕ್ಷಿಕೆಗಳ ಮೂಲಕ ಸಹಜ ಆರೋಗ್ಯದ ರಕ್ಷಣೆಯ ಬಗೆಗೂ ಅರಿವು ಮೂಡಿಸಲಾಗುವುದು.

ಮೊಟ್ಟಮೊದಲ ಬಾರಿಗೆ ಆಯೋಜಿಸಲಾಗಿರುವ ಈ ಅಂತರರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಮ್ಮೇಳನ ಹಾಗೂ ಆರೋಗ್ಯ ಎಕ್ಸ್‌ಪೋ-2012 - ಆರೋಗ್ಯ ಕ್ಷೇತ್ರದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕುರಿತಂತೆ ವೈಜ್ಞಾನಿಕ ವಿಷಯ ವಿನಿಮಯಕ್ಕೆ ವೇದಿಕೆಯಾಗಲಿದೆ.

ಜೊತೆಗೆ ಇದು ಆಧುನಿಕ ಕಾಲದ  ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ವಿಧಾನ ಕಲ್ಪಿಸಲು ವೈದ್ಯರಿಗೆ, ಬೋಧಕರಿಗೆ, ವಿದ್ಯಾರ್ಥಿಗಳಿಗೆ ಚಿಂತಕರಿಗೆ ಮತ್ತು ರೋಗ್ಯ ಕ್ಷೇತ್ರದ ವಹಿವಾಟುದಾರರಿಗೆ  ಮಹತ್ವದ ಅಂತರರಾಷ್ಟ್ರೀಯ ವೇದಿಕೆಯೂ ಆಗಲಿದೆ.   
(ಲೇಖಕರು ಯೋಗ ಗುರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT