ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಗಳ ಪ್ರೋತ್ಸಾಹಕ್ಕೆ ಯೋಜನೆ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮ ಕ್ಷೇತ್ರಕ್ಕೆ ಸರಿಹೊಂದಬಲ್ಲ ಶಿಕ್ಷಣ ಪಡೆದ ಯುವಜನರು ಸ್ವಂತ ಉದ್ದಿಮೆ ಸ್ಥಾಪಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಕೈಗಾರಿಕಾ ಇಲಾಖೆಯು `ಉದ್ಯಮಿಯಾಗು, ಉದ್ಯೋಗ ನೀಡು~ ಎಂಬ ಯೋಜನೆ ರೂಪಿಸುತ್ತಿದ್ದು, ಮುಂದಿನ ತಿಂಗಳು ಅದಕ್ಕೆ ಚಾಲನೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ ಆರ್.ನಿರಾಣಿ ತಿಳಿಸಿದರು.

ಕೈಗಾರಿಕಾ ಇಲಾಖೆಯ ವತಿಯಿಂದ ಪ್ರಾರಂಭಿಸಲಾದ ಹೊಸ ವೆಬ್‌ಸೈಟ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,ಸ್ಥಳೀಯ ವಾಣಿಜ್ಯ ಒಕ್ಕೂಟಗಳು ಮತ್ತು ಸರ್ಕಾರದ ಜಂಟಿ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮಅನುಷ್ಠಾನಕ್ಕೆ ತರಲಾಗುತ್ತದೆ~ ಎಂದರು.

ವಿಶ್ವ ಹೂಡಿಕೆದಾರರ ಸಮಾವೇಶದ ಮೂಲಕ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುವವರಿಗೆ ಅಗತ್ಯ ಪ್ರಮಾಣದ ಕುಶಲ ಮತ್ತು ಅರೆಕುಶಲ ಕಾರ್ಮಿಕರನ್ನು ಒದಗಿಸಲು ಸರ್ಕಾರವೇ ಕ್ರಮ ಕೈಗೊಳ್ಳಲಿದೆ. ಆಯಾ ಕೈಗಾರಿಕೆಗಳ ಅಗತ್ಯಕ್ಕೆ ಅನುಗುಣವಾದ ಕಾರ್ಮಿಕರನ್ನು ತಯಾರು ಮಾಡಲು ಯುವಕ, ಯುವತಿಯರಿಗೆ ಸರ್ಕಾರದ ವತಿಯಿಂದ ತರಬೇತಿ ನೀಡಲಾಗುವುದು. ತರಬೇತಿ ಪಡೆಯುವವರಿಗೆ ಸರ್ಕಾರವೇ ಶಿಷ್ಯವೇತನ, ಊಟ ಮತ್ತು ವಸತಿಯನ್ನು ಒದಗಿಸಲಿದೆ ಎಂದು ಸಚಿವರು ತಿಳಿಸಿದರು.

2010ನೇ ಸಾಲಿನಲ್ಲಿ ನಡೆದ ವಿಶ್ವ ಹೂಡಿಕೆದಾರರ ಸಮಾವೇಶದಲ್ಲಿ 3.92 ಲಕ್ಷ ಕೋಟಿ ರೂಪಾಯಿ ಮೊತ್ತದ ಹೂಡಿಕೆಯ ಅವಕಾಶವುಳ್ಳ 389 ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಈ ಪೈಕಿ 29 ಯೋಜನೆಗಳು ಅನುಷ್ಠಾನಕ್ಕೆ ಬಂದಿದ್ದು, 4,089 ಕೋಟಿ ರೂಪಾಯಿ ಹೂಡಿಕೆಯಾಗಿದೆ. ಉಳಿದ ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ವಿವರಿಸಿದರು. ಈ ವರ್ಷದ ಜೂನ್ 7 ಮತ್ತು 8ರಂದು ನಡೆಯುವ ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆ ಆರಂಭವಾಗಿದೆ. ಈ ಸಮಾವೇಶದ ಮೂಲಕ ಐದು ಲಕ್ಷ ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ಗುರಿ ಇದೆ. ಮೂಲಸೌಕರ್ಯ ಇಂಧನ, ಉನ್ನತ ಶಿಕ್ಷ ಮತ್ತಿತರ ವಲಯಗಳಲ್ಲಿ ಬಂಡವಾಳ ಆಕರ್ಷಿಸಲು ಈ ಸಮಾವೇಶದಲ್ಲಿ ಆದ್ಯತೆ ನೀಡಲಾಗುವುದು ಎಂದರು.

ವೆಬ್‌ಸೈಟ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು, `ಕೈಗಾರಿಕಾ ಇಲಾಖೆಯು ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ. ಈಗ ಏಕಕಾಲಕ್ಕೆ ಮೂರು ವೆಬ್‌ಸೈಟ್‌ಗಳಿಗೆ ಚಾಲನೆ ನೀಡಿರುವುದು ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಕನ್ನಡಿ ಹಿಡಿಯುತ್ತದೆ. ಈ ವೆಬ್‌ಸೈಟ್‌ಗಳು ಬಂಡವಾಳ ಆಕರ್ಷಣೆ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿವೆ~ ಎಂದರು.

ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ.ಕೆ.ವಿ.ರಾಜು, ಶಾಸಕ ಸಿ.ಟಿ.ರವಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಜೋತಿರಾಮಲಿಂಗಂ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಿ.ದ್ಯಾಬೇರಿ ಮತ್ತಿತರರು ಉಪಸ್ಥಿತರಿದ್ದರು.

 ಕೈಗಾರಿಕಾ ಪ್ರದೇಶಗಳ ಸಮಗ್ರ ವಿವರವುಳ್ಳ `ಕೈಗಾರಿಕಾ ಭೂಮಿ~, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಿರ್ಮಾಣವಾಗುತ್ತಿರುವ ಏರೋಸ್ಪೇಸ್ ವಿಶೇಷ ಆರ್ಥಿಕ ವಲಯದ ವಿವರ ನೀಡುವ www.­ba­n­galo­reaerospace.com ಮತ್ತು ವಿಶ್ವ ಹೂಡಿಕೆದಾರರ ಸಮಾವೇಶದ ಸಿದ್ಧತೆ, ಆದ್ಯತಾ ವಲಯಗಳು, ಹೂಡಿಕೆ ಅವಕಾಶಗಳು ಮತ್ತಿತರ ಮಾಹಿತಿ ಒದಗಿಸುವ www.advant­agekarnata­ka.com ವೆಬ್‌ಸೈಟ್‌ಗಳಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT