ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನವನ್ನು ಹುಡುಕಿಕೊಡಿ ಇಲ್ಲಿ..!

Last Updated 5 ಜನವರಿ 2012, 20:05 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನ ಎಂದರೆ ಆಕರ್ಷಕ ಹೂಗಿಡಗಳು, ಮರಗಳಿರುವುದು ಸಹಜ. ಆದರೆ ಇಲ್ಲೊಂದು ಉದ್ಯಾನದಲ್ಲಿ ಸುಂದರ ಹೂಗಳಿಲ್ಲ. ಬದಲಿಗೆ ಮಾಂಸಾಹಾರ ಸಿದ್ಧಪಡಿಸುವ ಅಡುಗೆ ಕೋಣೆ ಇದೆ. ಹತ್ತಾರು ಗಂಟೆ ಕಾಲ ನಿರಂತರವಾಗಿ ಆಹಾರ ಮಾರಾಟ ನಡೆಯುತ್ತದೆ. ಸುತ್ತಲೂ ಕಸದ ರಾಶಿಯಿದೆ. ಒಂದು ವರ್ಷದಲ್ಲಿ ಉದ್ಯಾನದ ಸ್ವರೂಪವೂ ಕಾಣದಷ್ಟು ಹಾಳಾಗಿದೆ. ಇಷ್ಟಾದರೂ ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ!

ಉದ್ಯಾನದ ಲಕ್ಷಣವನ್ನು ಸಂಪೂರ್ಣ ಕಳೆದುಕೊಂಡಿರುವ ಈ ಸ್ಥಳವಿರುವುದು ನಗರದ ಹೃದಯ ಭಾಗದಲ್ಲಿರುವ ಮಾಧವನಗರದಲ್ಲಿ. ರೇಸ್‌ಕೋರ್ಸ್ ರಸ್ತೆಯ ರೇಸ್‌ವ್ಯೆ ವೃತ್ತದಲ್ಲಿ ಅಂದರೆ, ಜೆಡಿಎಸ್ ಪಕ್ಷದ ಕಚೇರಿ ಸಮೀಪ ತ್ರಿಕೋನಾಕಾರದಲ್ಲಿರುವ ಈ ಸ್ಥಳ ಸಂಪೂರ್ಣ ಹಾಳಾಗಿದೆ.

ಈ ಸ್ಥಳದಲ್ಲಿ ಒಂದು ವರ್ಷದ ಹಿಂದಿನವರೆಗೂ ಸುಂದರ ಉದ್ಯಾನವಿತ್ತು. ಹಾಪ್‌ಕಾಮ್ಸ ಮತ್ತು ನಂದಿನಿ ಹಾಲಿನ ಕೇಂದ್ರ ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಹಸಿರು ವಲಯವಿತ್ತು. ಆದರೆ ವರ್ಷದಿಂದೀಚೆಗೆ ಉದ್ಯಾನದ ಸ್ವರೂಪವೇ ಬದಲಾಗಿದೆ.

ಉದ್ಯಾನದ ಮಧ್ಯ ಭಾಗದಲ್ಲಿ ಮೀನಿನ ಆಹಾರ ಮಾರಾಟ ಮಳಿಗೆ ತೆರೆಯಲು ಮೀನುಗಾರಿಕೆ ಇಲಾಖೆ ಅನುಮತಿ ನೀಡಿದೆ. ಆದರೆ ಅಲ್ಲಿ ಮೀನಿನ ಆಹಾರ ಮಾರಾಟದ ಬದಲಿಗೆ ಮಾಂಸಾಹಾರ ಮಾರಾಟ ಮಾಡಲಾಗುತ್ತಿದೆ.
 
ಇದನ್ನು ಅಕ್ರಮವಾಗಿ ನಡೆಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೂ ಆಹಾರ ಮಾರಾಟವಿರುವುದರಿಂದ ಬಹುಪಾಲು ಸಂದರ್ಭದಲ್ಲಿ ಇಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ತ್ಯಾಜ್ಯವನ್ನು ರಸ್ತೆ ಬಳಿಯೇ ಸುರಿಯುವುದರಿಂದ ಬೀದಿನಾಯಿಗಳ ಹಾವಳಿ ತೀವ್ರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಉದ್ಯಾನದ ಪ್ರದೇಶ ಮಾತ್ರವಲ್ಲದೆ ಪಾದಚಾರಿ ಮಾರ್ಗ ಕೂಡ ಒತ್ತುವರಿಯಾಗಿದೆ. ಒಂದೆಡೆ ಪಾದಚಾರಿ ಮಾರ್ಗವನ್ನು ಎಳನೀರು ಮಾರಾಟಗಾರರು ಆಕ್ರಮಿಸಿಕೊಂಡಿದ್ದರೆ, ಇನ್ನೊಂದೆಡೆ ಸಿಗರೇಟು, ಗುಟ್ಕಾ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜನತೆ ರಸ್ತೆಯಲ್ಲಿ ನಡೆದಾಡುವಂತಾಗಿದೆ.

`ಸುಮಾರು 32 ವರ್ಷಗಳಿಂದ ಇಲ್ಲಿ ಮಳಿಗೆ ನಡೆಸಲಾಗುತ್ತಿದೆ. ಮಳಿಗೆಯ ಹಿಂಭಾಗದಲ್ಲಿ ಸುಂದರ ಉದ್ಯಾನವಿತ್ತು. ಆದರೆ ಮೀನುಗಾರಿಕೆ ಇಲಾಖೆಯಿಂದ ಮಂಜೂರಾಗಿರುವ ಮಳಿಗೆಯಿಂದಾಗಿ ಉದ್ಯಾನ ಹಾಳಾಯಿತು. ಕೆಲ ವಾರಗಳ ಹಿಂದೆ ನಂದಿನಿ ಹಾಲಿನ ಕೇಂದ್ರದ ಗೋಡೆಗೆ ಹೊಂದಿಕೊಂಡಂತೆ ಅಕ್ರಮವಾಗಿ ಗೋಡೆ ನಿರ್ಮಿಸಲಾಗಿದೆ. ಈ ಸಂಬಂಧ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ~ ಎಂದು ನಂದಿನಿ ಹಾಲಿನ ಕೇಂದ್ರದ ಮಾಲೀಕ ಆರ್. ವೆಂಕಟರಾಮಯ್ಯ ದೂರಿದರು.

ನಾಯಿಗಳ ಹಾವಳಿ:`ಉದ್ಯಾನನಗರಿ ಎಂಬ ಹೆಗ್ಗಳಿಕೆಯಿರುವ ಬೆಂಗಳೂರಿನ ಕೇಂದ್ರ ಭಾಗದಲ್ಲೇ ಉದ್ಯಾನವೊಂದನ್ನು ಹಾಳು ಮಾಡಿರುವುದು ವಿಪರ್ಯಾಸ. ಉದ್ಯಾನದಲ್ಲಿ ಅಕ್ರಮವಾಗಿ ಮಾಂಸಾಹಾರ ಮಾರಾಟ ಮಾಡಲಾಗುತ್ತಿದೆ. ತ್ಯಾಜ್ಯವನ್ನು ಅಲ್ಲಿಯೇ ಸುರಿಯುವುದರಿಂದ ರಾತ್ರಿ ವೇಳೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಇಲಿ, ಹೆಗ್ಗಣಗಳ ಹಾವಳಿ ಕೂಡ ತೀವ್ರವಾಗಿದೆ~ ಎಂದು ಸ್ಥಳೀಯ ನಿವಾಸಿ ಗಾಯಿತ್ರಿ ರವಿಶಂಕರ್ ಹೇಳಿದರು.

`ಸಂಜೆಯಾಗುತ್ತಿದ್ದಂತೆ ತಳ್ಳುಗಾಡಿಯಲ್ಲಿ ಆಹಾರ ಮಾರಾಟ ಆರಂಭವಾಗುತ್ತದೆ. ಇದರಿಂದ ಸಾಕಷ್ಟು ಮಂದಿ ಗುಂಪುಗೂಡಿ ನಿಲ್ಲುತ್ತಾರೆ. ಮಹಿಳೆಯರು, ಮಕ್ಕಳು ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ರಾತ್ರಿ 1 ಗಂಟೆಯವರೆಗೂ ಆಹಾರ ವಿತರಿಸಲಾಗುತ್ತದೆ. ಉದ್ಯಾನದಲ್ಲಿ ಇತರೆ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇಷ್ಟಾದರೂ ಪೊಲೀಸರಾಗಲಿ, ಪಾಲಿಕೆಯ ಅಧಿಕಾರಿಗಳಾಗಲಿ ಕ್ರಮ ಕೈಗೊಂಡಿಲ್ಲ~ ಎಂದು ಆರೋಪಿಸಿದರು.

`ಒಂದು ವರ್ಷದ ಹಿಂದೆ ಉದ್ಯಾನ ಸುಸ್ಥಿತಿಯಲ್ಲಿತ್ತು. ಆದರೆ ಮಾಂಸಾಹಾರ ಮಾರಾಟ ಆರಂಭವಾದ ಬಳಿಕ ಉದ್ಯಾನದ ಸ್ವರೂಪವೇ ಬದಲಾಗಿದೆ. ನಾಯಿ ಹಾವಳಿ ಹೆಚ್ಚಾಗಿದೆ. ಮಾರಾಟಗಾರರು ನೈರ್ಮಲ್ಯ ಕಾಪಾಡಿದರೆ ತೊಂದರೆಯಾಗುವುದಿಲ್ಲ. ನಗರದ ಕೇಂದ್ರ ಭಾಗದಲ್ಲೇ ಈ ಉದ್ಯಾನ ಹಾಳಾಗಿರುವುದು ವಿಪರ್ಯಾಸ~ ಎಂದು ನಿವಾಸಿ ಬಿ.ಎಂ. ಮೃತ್ಯುಂಜಯ ವಿಷಾದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT