ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳಿಬಿದ್ದ ಕಳಸ ಭಕ್ತಸಮೂಹದಲ್ಲಿ ಆತಂಕ

Last Updated 26 ಫೆಬ್ರುವರಿ 2013, 9:40 IST
ಅಕ್ಷರ ಗಾತ್ರ

ಕುಷ್ಟಗಿ: ಭಾರತ ಹುಣ್ಣಿಮೆಯ ದಿನವಾದ ಸೋಮವಾರ ಸಂಜೆ ಪಡುವಣದ ಕೆಂಪಡರಿದ ಬಾನಂಗಳದಲ್ಲಿ ಮಂದ ಸೂರ್ಯರಶ್ಮಿ ಸೋಕುತ್ತಿದ್ದಂತೆ ಗೋಧೂಳಿ ಸಮಯದಲ್ಲಿ ಇಲ್ಲಿಯ ಧಾರ್ಮಿಕ, ಪೌರಾಣಿಕ ಪ್ರಸಿದ್ಧ ಬುತ್ತಿಬಸವೇಶ್ವರ ರಥೋತ್ಸವ ಸಂಭ್ರಮ ಸಡಗರದಿಂದ ನೆರವೇರಿತು. ಆದರೆ ಕೊನೆ ಘಳಿಗೆಯಲ್ಲಿ ರಥದ ಮೇಲಿನ ಕಬ್ಬಿಣದ ಗುಮ್ಮಟ ಕಳಸ ಸಮೇತ ನೆಲಕ್ಕೆ ಉರುಳಿಬಿದ್ದುದರಿಂದ ಭಕ್ತ ಸಮೂಹದ ಮೇಲೆ ಕರಾಳ ಛಾಯೆ ಆವರಿಸುವಂತಾಯಿತು.

ಸರಿಯಾದ ಸಮಯಕ್ಕೆ ರಥ ಸಾಗಿತ್ತು, ಪಾದಗಟ್ಟೆ ತಲುಪುವಾಗ ಭಕ್ತರು ಉತ್ಸಾಹದಿಂದಲೇ ರಥ ಎಳೆದು, ಉತ್ತತ್ತಿ ಎಸೆದು ಪುನೀತರಾದರು. ಆದರೆ ಆ ಸಂಭ್ರಮ ಬಹಳಹೊತ್ತು ಉಳಿಯಲಿಲ್ಲ. ರಸ್ತೆಯಲ್ಲಿನ ಗುಂಡಿಗೆ ರಥದ ಗಾಲಿ ಇಳಿಯುತ್ತಿದ್ದಂತೆ ಮೇಲಿನ ಕಳಸ ಇಡಲಾಗಿದ್ದ ಕಬ್ಬಿಣದ ಗುಮ್ಮಟ ವಾಲಿ ನಿಧಾನಗತಿಯಲ್ಲಿ ನೆಲದತ್ತ ಮುಖಮಾಡಿತು. ಕಳಸ ಉರುಳುತ್ತಿದ್ದಂತೆ ಅದನ್ನು ಹಿಡಿದಿದ್ದರಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ಸಬ್ ಇನ್ಸ್‌ಪೆಕ್ಟರ್ ಮಹದೇವ ಪಂಚಮುಖಿ ಹೇಳಿದರು. ಆದರೆ ಭಾವನೆಗಳಿಗೆ ಸಾಕಷ್ಟು ಪೆಟ್ಟಾಯಿತು ಎಂದು ನೆರೆದ ಭಕ್ತರು ಖೇದ ವ್ಯಕ್ತಪಡಿಸಿದರು.

ರಥಬೀದಿ ಅಭಿವೃದ್ಧಿಗೆ ಪುರಸಭೆ ರೂ 10 ಲಕ್ಷ ಖರ್ಚು ಮಾಡಿದ್ದರೂ ರಥ ಎಳೆಯುವುದಕ್ಕೆ ರಸ್ತೆ ಸೂಕ್ತವಾಗಿಲ್ಲ, ಎಲ್ಲೆಂದರಲ್ಲಿ ಕಲ್ಲುಗಳು ಎದ್ದಿವೆ, ಗುಂಡಿಗಳು ಬಿದ್ದಿವೆ, ಇಂಥ ದಾರಿಯಲ್ಲಿ ರಥ ಸುಗಮವಾಗಿ ಚಲಿಸಲು ಹೇಗೆ ಸಾಧ್ಯ? ಎಂದು ರಥ ಎಳೆಯುತ್ತಿದ್ದ ಜನ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರಥ ಕಬ್ಬಿಣದ್ದಾಗಿದೆ, ಗುಮ್ಮಟದ ನಟ್ಟು ಬೋಲ್ಟುಗಳು ಸಡಿಲವಾಗಿದ್ದನ್ನು ಮೊದಲೇ ಗಮನಿಸಿದ್ದರೆ ಇಂಥ ಅವಘಡ ತಪ್ಪಿಸಬಹುದಿತ್ತು. ಇದರಲ್ಲಿ ಜಾತ್ರಾ ಸಮಿತಿಯವರ ನಿರ್ಲಕ್ಷ್ಯವೂ ಎದ್ದುಕಾಣುತ್ತದೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದರು.  ರಥೋತ್ಸವದ ಸಂದರ್ಭದಲ್ಲಿ ನಿಡಶೇಸಿಯ ಚನ್ನಬಸವಸ್ವಾಮೀಜಿ, ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT