ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಷ್ಣ ವಿದ್ಯುತ್ ಸ್ಥಾವರ ವಿರುದ್ಧ ಹೋರಾಟ: ಪೇಜಾವರ ಶ್ರೀ

Last Updated 2 ಮೇ 2012, 19:30 IST
ಅಕ್ಷರ ಗಾತ್ರ

ಉಡುಪಿ: `ಉಡುಪಿ ಉಷ್ಣ ವಿದ್ಯುತ್ ಸ್ಥಾವರದಿಂದ (ಯುಪಿಸಿಎಲ್) ಪರಿಸರದ ಮೇಲೆ ಹಾನಿಯಾಗಿರುವ ಬಗ್ಗೆ ತಜ್ಞರ ಸಮಿತಿ ವರದಿ ನೀಡಿರುವುದರಿಂದ ಪರಿಸರ ರಕ್ಷಿಸಿ ಜನರ ಜೀವ ಉಳಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ~ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪರಿಸರ ಮತ್ತು ಜನ ಜೀವನದ ಮೇಲೆ ಉಷ್ಣ ವಿದ್ಯುತ್ ಸ್ಥಾವರದ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚಿಸಿದ್ದೆವು. ಆರು ಮಂದಿ ಮಂದಿ ತಜ್ಞರ ತಂಡ ವರದಿ ನೀಡಿದೆ. ಪರಿಸರಕ್ಕೆ ಧಕ್ಕೆ, ಕುಡಿಯುವ ನೀರು ಕಲುಷಿತ, ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ, ಅನಾರೋಗ್ಯ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಿದೆ.

ಎರಡು ದಿನಗಳ ಹಿಂದೆ ಈ ವರದಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ~ ಎಂದರು.ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಸರ ಪ್ರಿಯರು, ಹೋರಾಟಗಾರರು ಮತ್ತು ಸ್ಥಳೀಯರ ಜತೆ ಸೇರಿ ಹೋರಾಟದ ಬಗ್ಗೆ ಚಿಂತನೆ ನಡೆಸಲಾಗುತ್ತದೆ  ಎಂದು   ಎಚ್ಚರಿಕೆ ನೀಡಿದರು.

ಹೋರಾಟದ ತೀವ್ರತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಯಾವುದೇ ಹೋರಾಟಕ್ಕೆ ಸ್ಥಳೀಯರ ಬೆಂಬಲ ಅಗತ್ಯವಾಗಿರುತ್ತದೆ. ಕಳೆದ ಬಾರಿ ನಾನು ಎರಡು ದಿನಗಳ ಕಾಲ ಉಪವಾಸ ಮಾಡಿದ್ದಾಗ ಐವತ್ತರಿಂದ ನೂರು ಮಂದಿ ಜನರು ಇದ್ದರು. ಜನ ಬೆಂಬಲದ ಮೇಲೆ ಹೋರಾಟ ನಿರ್ಧಾರವಾಗುತ್ತದೆ~ ಎಂದು ಹೇಳಿದರು. ವಿದ್ಯುತ್ ಸ್ಥಾವರದಿಂದ ಆಗುತ್ತಿರುವ ಪರಿಣಾಮ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಸಹ ಒಂದು ಸಮಿತಿ  ರಚಿಸಿದೆ. ಆದರೆ ಆ ಸಮಿತಿ ಇನ್ನೂ ವರದಿ ನೀಡಿಲ್ಲ ಎಂದರು.

ಮಡೆಸ್ನಾನ: `ಮಡೆಸ್ನಾನ ನಿಲ್ಲಿಸುವುದರಿಂದ ಧರ್ಮಕ್ಕೆ ಧಕ್ಕೆ ಇಲ್ಲ ಎಂಬುದು ನನ್ನ ಅಭಿಪ್ರಾಯ. ಪೂಜಾ ಕೈಂಕರ್ಯಗಳು, ಬ್ರಹ್ಮಕಲಶೋತ್ಸವ ನಡೆದರೆ ಸಾಕು ಎನಿಸುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯದ ಜನರೊಂದಿಗೆ ಇದೇ 10ರಂದು ಚರ್ಚೆ ನಡೆಸುತ್ತೇನೆ ಎಂದರು.

 ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. ಮಡೆಸ್ನಾನದಿಂದ ಬ್ರಾಹ್ಮಣರ ಮೇಲೆ ಆಪಾದನೆಗಳು ಬರುತ್ತಿವೆ. ಅದ್ದರಿಂದ ಬ್ರಾಹ್ಮಣರೇ ಇದನ್ನು ನಿಲ್ಲಿಸುವ ಬಗ್ಗೆ ತೀರ್ಮಾನ ಕೈಗೊಂಡರೆ ಇನ್ನೂ ಒಳ್ಳೆಯದು. ಎಂಜಲು ಎಲೆ ಮೇಲೆ ಉರುಳುವ ಬದಲು ಅಂಗಪ್ರದಕ್ಷಿಣೆ (ಉರುಳು ಸೇವೆ) ಮಾಡಬಹುದು. ಇದರಿಂದ ಯಾರಿಗೂ ನೋವಾಗುವುದಿಲ್ಲ. ಕೃಷ್ಣ ಮಠದಲ್ಲಿ ಮಡೆಸ್ನಾನ ನಿಲ್ಲಿಸುವ ಬಗ್ಗೆ ಪರ್ಯಾಯ ಮಠದವರು ತೀರ್ಮಾನಿಸಬೇಕು~ ಎಂದು  ಸ್ಪಷ್ಟಪಡಿಸಿದರು.

`ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಆದ್ದರಿಂದ ಪಾವಗಡ, ಮಧುಗಿರಿ ಮುಂತಾದೆಡೆ ಮಠದ ವತಿಯಿಂದ ಮೇವು ಪೂರೈಕೆ ಮಾಡಲಾಗುತ್ತಿದೆ. ನಕ್ಸಲ್ ಸಮಸ್ಯೆ ಇರುವ ಕಡೆ ಸೌಲಭ್ಯ ನೀಡುವ ಕೆಲಸ ಮುಂದುವರೆಸಲಾಗುತ್ತದೆ. ಈ ಬಾರಿ ಬೆಳ್ತಂಗಡಿಯ ಕುತ್ಲೂರಿಗೆ ಕೆಲ ಸೌಲಭ್ಯ ನೀಡಲಾಗುತ್ತದೆ. ಮೇ 10 ಹತ್ತು 11ರಂದು ಅಲ್ಲಿಗೆ ತೆರಳುತ್ತೇನೆ~ ಎಂದು ಸ್ವಾಮೀಜಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT