ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಕು ಸಂಗ್ರಹ: ಗ್ರಾಮಸ್ಥರ ವಿರೋಧ

Last Updated 19 ಜನವರಿ 2012, 7:50 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ಈಗಾಗಲೇ ಹಾಳು ಬಿದ್ದಿರುವ ರಾಟಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಉಸುಕು ಸಂಗ್ರಹಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಕೊರ್ಲಹಳ್ಳಿ ಗ್ರಾಮಸ್ಥರು ಬುಧವಾರ ತಹಸೀಲ್ದಾರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಮುಂಜಾನೆ ಕೊರ್ಲಹಳ್ಳಿ ಗ್ರಾಮದಿಂದ 3-4ಟ್ರಾಕ್ಟರ್‌ಗಳ ಮೂಲಕ ಮುಂಡರಗಿಗೆ ಆಗಮಿಸಿದ ಗ್ರಾಮಸ್ಥರು ಕೆಪಿಟಿಸಿಎಲ್ ಕಚೇರಿಯಿಂದ ಪಟ್ಟಣದ ವಿವಿಧ ರಸ್ತೆಗಳ ಮಾರ್ಗವಾಗಿ ತಹಸೀಲ್ದಾರ ಕಚೇರಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ `ವಿಜಯನಗರದ ಕಾಲದಲ್ಲಿ ಹೆಸರುವಾಸಿಯಾಗಿದ್ದ ರಾಟಿ ಗ್ರಾಮವನ್ನು ಕಂದಾಯ ಇಲಾಖೆಯು ಉಸುಕು ಸಂಗ್ರಹಿಸಲು ಬಳಸಿ ಕೊಳ್ಳುತ್ತಿರುವುದು ಅಸಮಂಜಸ ವಾಗಿದ್ದು, ತಕ್ಷಣ ಅಲ್ಲಿ ಉಸುಕು ಸಂಗ್ರಹವನ್ನು ಕೈಬಿಡಬೇಕು ಮತ್ತು ರಾಟಿ ಗ್ರಾಮವನ್ನು ಕೊರ್ಲಹಳ್ಳಿ ಗ್ರಾಮ ಪಂಚಾಯ್ತಿಗೆ ಬಿಟ್ಟುಕೊಡಬೇಕು~ ಎಂದು ಆಗ್ರಹಿಸಿದರು.

`ಸುಮಾರು 23ಎಕರೆ ವಿಸ್ತಾರವಾದ ಹಳೆಯ ರಾಟಿ ಗ್ರಾಮದಲ್ಲಿ ಸಮೂದಾಯ ಭವನ, ಶಾಲೆ, ಉದ್ಯಾನವನಗಳನ್ನು ಒಳಗೊಂಡಂತೆ ಸುಸಜ್ಜಿತವಾದ ನವಗ್ರಾಮವನ್ನು ನಿರ್ಮಾಣ ಮಾಡಬೇಕು. ಈಗಾಗಲೇ ಅವಸಾನದ ಅಂಚಿನಲ್ಲಿರುವ ರಾಟಿ ಗ್ರಾಮದ ಗುಂಡಿ ಗುಂಡಾರಗಳನ್ನು, ಬಾವಿ, ಕಲ್ಯಾಣಿಗಳನ್ನು, ಐತಿಹಾಸಿಕ ಪಳೆಯುಳಿಕೆಗಳನ್ನು ರಕ್ಷಸಬೇಕು~ ಎಂದು ಅವರು ಒತ್ತಾಯಿಸಿದರು.

`ರಾಟಿ ಗ್ರಾಮವು ತಾಲ್ಲೂಕಿನ ಮುಖ್ಯ ರಸ್ತೆಗೆ ಅಂಟಿಕೊಂಡಿದ್ದು, ಅಕ್ಕಪಕ್ಕದಲ್ಲಿ ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ದೊರೆಯುತ್ತಿದೆ. ಅಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿದರೆ ಸಾರ್ವಜನಿಕರಿಗೆ ಎಲ್ಲ ರೀತಿಯ ಅನುಕೂಲತೆಗಳು ಅಭ್ಯವಾಗಲಿವೆ. ಆದ್ದರಿಂದ ಅಲ್ಲಿ ಉಸುಕು ಸಂಗ್ರಹಿಸುವುದನ್ನು ಸ್ಥಗಿತಗೊಳಿಸಿ ಸಾರ್ವಜನಿಕರ ಬಳಕೆಗೆ ಅದನ್ನು ಬಿಟ್ಟುಕೊಡಬೇಕು~ ಎಂದು ಅವರು ಮನವಿ ಮಾಡಿಕೊಂಡರು.

`ಐತಿಹಾಸಿಕ ಮಹತ್ವವನ್ನು ಹೊಂದಿದ್ದ ತಾಲ್ಲೂಕಿನ ಹಲವಾರು ಗ್ರಾಮಗಳು ಈಗಾಗಲೇ ಕಾಲಗರ್ಭದಲ್ಲಿ ಹೂತು ಹೋಗಿದ್ದು, ಸರಕಾರ ಅವುಗಳ ಕುರಿತು ವಿಶೇಷ ಸಂಶೋಧನೆ ಕೈಗೊಳ್ಳಬೇಕು ಮತ್ತು ಅವುಗಳ ಸಂರಕ್ಷಣೆಗೆ ವಿಶೇಷ ಗಮನ ಹರಿಸಬೇಕು~  ಅವರು ಆಗ್ರಹಿಸಿದ್ದಾರೆ.

ಕೊರ್ಲಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮದನಸಾಬ್, ಎಪಿಎಂಸಿ ಸದಸ್ಯ ಶಾಸ್ತ್ರಿ, ಎಪಿಎಂಸಿ ಮಾಜಿ ಸದಸ್ಯ ಕೊಟ್ರಗೌಡ ಪಾಟೀಲ, ರಂಗಪ್ಪ ಹಿರೇಕುರುಬರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ ರಮೇಶ ಕೋನರಡ್ಡಿ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT