ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೆಲ್ಲ ಎಳ್ಳು ಬೆಲ್ಲ...

Last Updated 13 ಜನವರಿ 2011, 10:55 IST
ಅಕ್ಷರ ಗಾತ್ರ


‘ಎಳ್ಳು ಕೊಟ್ಟು ಒಳ್ಳೆಯ ಮಾತನಾಡುವ’ ಹಬ್ಬ  ಸಂಕ್ರಾಂತಿ ಮತ್ತೆ ಬಂದಿದೆ.ಚಳಿನಿರೋಧಕ ವಸ್ತ್ರಗಳಿಗೂ ಕ್ಯಾರೇ ಅನ್ನದೆ ಕಚಗುಳಿಯಿಡುವ ಕುಳಿರ್ಗಾಳಿ, ಸೋರುವ ಮೂಗು, ಬಿಟ್ಟೂ ಬಿಡದಂತೆ ಕಾಡುವ ಮೈಗ್ರೇನ್, ಸೈನಸೈಟಿಸ್ ಶೂಲೆ, ಚೌಕಾಬಾರದ ಕೋರ್ಟಿನಂತೆ ಬಿರುಕುಬಿಟ್ಟ ಚರ್ಮ, ಒಡೆದ ತುಟಿ, ಜಡವಾದ ಮೈಮನ... ಬರಡಾಗಿದ್ದ ಮರ, ಪುಕ್ಕದೊಳಗೆ ಕತ್ತು ತೂರಿ ಕೊರೆಯುವ ಗಾಳಿಯಿಂದ ರಕ್ಷಣೆ ಪಡೆದಿದ್ದ ಪಕ್ಕಿಗಳು... ಎಲ್ಲವೂ  ಚೈತನ್ಯದ ಚಿಲುಮೆಯಾಗಿ ಪುಟಿಯುವ ಸಂಕ್ರಮಣ ಕಾಲ. ಜೀವಜಾಲಕ್ಕೇ ಜಡತ್ವ ತುಂಬಿ ಏಕಚಕ್ರಾಧಿಪತ್ಯ ಮೆರೆದಿದ್ದ ಚಳಿರಾಯ ಸಂಕ್ರಾಂತಿಯೊಂದಿಗೆ ಶಿಶಿರನ ಆಗಮನದ ಸುಳಿವು ಸಿಗುತ್ತಲೇ ಕಾಲ್ಕೀಳುತ್ತಾನೆ.

ಇಂದು, ಗುರುವಾರ ಇದ್ದಂತೆ ಶನಿವಾರದ ವಾತಾವರಣ ಇರದು. ಈ ಜಗದ ನಿಯಮದಿಂದ ಪ್ರಕೃತಿಯೂ ಹೊರತಾಗಿಲ್ಲ. ಹಸಿರುಡುಗೆ ಉಟ್ಟರೂ ಜೀವಕಳೆಯಿಲ್ಲದೆ ಮಂಕಾಗಿದ್ದ ಗಿಡಮರಗಳನ್ನು ಶಿಶಿರದಲ್ಲಿ ನೋಡಬೇಕು. ಸಂಕ್ರಾಂತಿಯಿಂದ ಇಷ್ಟೆಲ್ಲ ಬದಲಾವಣೆಗೆ ಕಾರಣವಾಗುವ ರಿಂಗ್‌ಮಾಸ್ಟರ್ ನೇಸರ. ರಾತ್ರಿ ಹಗಲಾಗುವುದರೊಳಗೆ ಬೆಂಗಳೂರಿನ ದ್ವಿಮುಖ ರಸ್ತೆಗಳು ಏಕಮುಖವಾಗಿ ಬದಲಾಗುವಂತೆ ನೇಸರನೂ ತನ್ನ ಚಲನೆಯನ್ನು ಉತ್ತರಾಭಿಮುಖವಾಗಿ ಆರಂಭಿಸುವ ಪರ್ವಕಾಲವಿದು. ಶರಮಂಚದಲ್ಲಿ ಪವಡಿಸಿ ಬಾಳಯಾತ್ರೆಯ ಅಂತಿಮಕ್ಷಣಗಳನ್ನು ಎಣಿಸುತ್ತಿದ್ದ ಭೀಷ್ಮ ಮಹಾರಾಜ ಪ್ರಾಣತ್ಯಾಗಕ್ಕೆ ಕಾದಿದ್ದು ಇದೇ ಉತ್ತರಾಯಣ ಪ್ರವೇಶದ ಘಳಿಗೆಯನ್ನು. 

ಶಿಶಿರ, ವಸಂತ ಹಾಗೂ ಗ್ರೀಷ್ಮ ಋತುಗಳನ್ನು ಒಳಗೊಳ್ಳುವ ಈ ಉತ್ತರಾಯಣದುದ್ದಕ್ಕೂ ಪ್ರಕೃತಿ ನವನವೋನ್ಮೇಷಶಾಲಿನಿಯಾಗಿ ನರ್ತಿಸುತ್ತಾಳೆ. ಪ್ರಕೃತಿ ನಕ್ಕರೆ ಜಗದ ಮಕ್ಕಳಿಗೂ ನಗೆಮೊಗ! ಹೀಗೆ, ಉತ್ತರಾಯಣದಲ್ಲಿ ನೇಸರನ ದಾರಿ ದೀರ್ಘ. ಅರ್ಥಾತ್, ಹಗಲು ಉದ್ದ. ಹೇಳಿಕೇಳಿ ಬಿಸಿಲು ಚುರುಕುಗೊಳ್ಳುವ ಸಮಯ. ಸೂರ್ಯನ ಕೈಯಲ್ಲಿ ಬಿಸಿಲುಕೋಲು!

ಸಂಕ್ರಾಂತಿ ಅಕ್ಷರಶಃ ರೈತಾಪಿವರ್ಗದ ಹಬ್ಬ. ಕೃಷಿ, ಕುಲಕಸುಬುಗಳನ್ನು ಆಧುನೀಕರಣದ ತೆಕ್ಕೆಗೆ ತಳ್ಳಿರುವ ಈ ಸಂಕ್ರಮಣ ಕಾಲದಲ್ಲಿ ರೈತರ ಹಬ್ಬವೆನ್ನುವುದೇ ಕ್ಲೀಷೆ. ಅಲ್ಲಿಷ್ಟು ಇಲ್ಲಿಷ್ಟು ಎಂದು ಉಳಿದಿರುವ ರೈತರು, ಕೃಷಿಕರು, ಕೃಷಿ ಭೂಮಿಯಲ್ಲಿ ಸಂಕ್ರಾಂತಿಯನ್ನು ತಮ್ಮ ಹಬ್ಬವನ್ನಾಗಿ ಆಚರಿಸುತ್ತಾರೆನ್ನಿ.

ಸಿಲಿಕಾನ್ ಸಿಟಿಗೆ ವಲಸೆ ಬಂದಿರುವ ರೈತರಿಗೆ, ನಾಲ್ಕಾಣೆ ಬೆಂಗಳೂರಿಗರಿಗೆ ಸಂಕ್ರಾಂತಿಯ ಹೆಗ್ಗಳಿಕೆ ಪರಿಚಯಿಸಲೆಂದೇ ಅಲ್ಲಲ್ಲಿ ಜಾನಪದ ಜಾತ್ರೆಗಳು ಏರ್ಪಾಡಾಗಿದ್ದಾವೆನ್ನಿ.ಆದರೂ ಎಲ್ಲಾ ಹಬ್ಬಗಳಿಗೆ ಬಗೆಬಗೆಯಾಗಿ ಸಜ್ಜಾಗುವ ಬೆಂಗಳೂರು ಸಂಕ್ರಾಂತಿಯನ್ನು ಬರಮಾಡಿಕೊಳ್ಳುವ ಬಗೆಯೂ ಚಂದವೇ. ತಮ್ಮ ಪಾಲಿನ ಮಹತ್ವದ ‘ಪೊಂಗಲ್’ ಎಂಬ ಮೂರು ದಿನಗಳ ಹಬ್ಬಕ್ಕಾಗಿ ಸಡಗರಪಡುತ್ತಿದ್ದಾರೆ ತಮಿಳರು. ‘ಭೋಗಿ ಪೊಂಗಲ್’,  ‘ಸೂರ್ಯ ಪೊಂಗಲ್’ ಹಾಗೂ  ಕೊನೆಯ ದಿನ ಗೋ ಪೂಜೆ.

ಆಂಧ್ರದವರಿಗೆ ಭೋಗಿ ಪಂಡುಗ, ಪೆದ್ದ ಪಂಡುಗ, ಕನುಮಾ ಪಂಡುಗ, ಮುಕ್ಕನುಮ ಪಂಡುಗ ಎಂದು ಮೂರು ದಿನದ ಹಬ್ಬವಿದು.ಮಹಾರಾಷ್ಟ್ರದ ಮಂದಿಗೆ ‘ತಿಳಚಿ ಲಡ್ಡು’ ತಯಾರಿ ಸಡಗರ. ತಮ್ಮೂರಿನಲ್ಲಿ ನಡೆಯುವ ‘ಗಾಳಿಪಟ ಉತ್ಸವ’ (ಕೈಟ್ ಫೆಸ್ಟಿವಲ್)ದಲ್ಲಿ ಭಾಗಿಯಾಗಲು ಕೆಲವರು ಊರದಾರಿ ಹಿಡಿದಿದ್ದಾರೆ. ಗಾಳಿಪಟದ ದಾರ (‘ಮಂಜ’)ವನ್ನು ಹಿಡಿದು ಓಡೋಡುತ್ತಾ ಕೇಕೆ ಹಾಕಿ ನಲಿದು ಮಕ್ಕಳಾಗುವ ಅವಕಾಶವನ್ನು ಅವರು ತಪ್ಪಿಸಿಕೊಳ್ಳುವವರಲ್ಲ. ಹೀಗೆ, ದಿನವಿಡೀ ಹೊರ ಆವರಣದಲ್ಲಿ ಕಳೆಯುವ ಮೂಲಕ ಉತ್ತರಾಯಣದ ಶುಭಪರ್ವದಲ್ಲಿ ಸೂರ್ಯಸ್ನಾನ/ ಪಾನ ಮಾಡುತ್ತಾರೆ ಅವರು.

ಇನ್ನು, ಉತ್ತರ ಭಾರತದ ಮಂದಿಯ ಹಬ್ಬದ ಸ್ಪೆಷಲ್ ‘ಕಿಚಡಿ’ಗಾಗಿ ಸಾಮಗ್ರಿ ಜೋಡಿಸಿಟ್ಟಿದ್ದಾರೆ. ಕರಾವಳಿ ಮಂದಿಗೆ ಸಂಕ್ರಾಂತಿಯ ವಿಶೇಷ ಅಡುಗೆ ಎಂದೇನೂ ಇಲ್ಲದ ಕಾರಣ ಸಿಹಿ ಅಡುಗೆ ಉಂಡು ನಕ್ಕುನಲಿಯುತ್ತಾರೆ. ಅವರಿಗೆ ತಮ್ಮ ತಾಯ್ನೆಲದಲ್ಲಿ ಜಾನುವಾರಗಳ ಅಲಂಕಾರ,  ಆದರೆ, ಈ ಬಾರಿಯ ಏರುಬೆಲೆಗಳ ದೆಸೆಯಿಂದ ಯಾವ ಹಬ್ಬವನ್ನಾದರೂ ಹೇಗೆ ಮಾಡಲಿ ಎಂದು ಅಸಹಾಯಕವಾಗಿದೆ ದುಡಿಯುವ ವರ್ಗ. ಬೆಲ್ಲ, ಸಕ್ಕರೆ, ಬೇಳೆಕಾಳು, ಧಾನ್ಯ, ಅಕ್ಕಿ, ಸೊಪ್ಪು, ತರಕಾರಿ, ಹೂ-ಹಣ್ಣು... ಎಲ್ಲವೂ ತುಟ್ಟಿಯೇ.  ಹಬ್ಬದ ಖರೀದಿ ಎಂದು ಮಾರ್ಕೆಟ್ ಸುತ್ತುತ್ತಿದ್ದವರು ತುಟಿ ಪಿಟಕ್ಕೆನ್ನುತ್ತಿಲ್ಲ.

ತಟ್ಟೆ ತುಂಬುವ ಐಟಂಗಳಲ್ಲೇನೊ ಚೌಕಾಸಿ ಮಾಡಬಹುದು. ಆದರೆ ಎಳ್ಳು-ಬೆಲ್ಲ ಬೀರದೆ ಸಂಕ್ರಾಂತಿ ಆಚರಿಸಲಾದೀತೆ? ಅಂಗಡಿ ಮುಂಗಟ್ಟು, ರಸ್ತೆ ಬದಿ ವ್ಯಾಪಾರಿ, ಹೂ-ಹಣ್ಣು ವ್ಯಾಪಾರಿ ಹೀಗೆ ಎಲ್ಲೆಲ್ಲೂ ಎಳ್ಳುಬೆಲ್ಲದ ಪ್ಲಾಸ್ಟಿಕ್ ಪ್ಯಾಕೆಟ್ಟುಗಳದ್ದೇ ಮೇಲುಗೈ. ಚಳಿಗೆ ಒಡೆದ ಮೈ, ವೈಮನಸ್ಸಿಗೆ ಘಾಸಿಗೊಂಡ ಹೃದಯಕ್ಕೆ ‘ತೇಪೆ’ ಹಚ್ಚುವ ಮಧ್ಯವರ್ತಿ ಎಳ್ಳು- ಬೆಲ್ಲ. ಕೊಬ್ಬರಿ ತುಂಡು ಇಟ್ಟರೆ ಪಿತ್ತಹಾರಿ, ಉಷ್ಣಹಾರಿ ಸಮಪಾಕ! ನಗರದಲ್ಲಿ ಅಳಿದುಳಿದ ಗಿಡಮರಗಳಲ್ಲಿ ಹೂ-ಚಿಗುರು, ಎಳೆಗಾಯಿಗಳ ತೋರಣ... ಮನೆಮುಂದಿನ ರಸ್ತೆಗಳಲ್ಲೂ ಹೆಂಗಳೆಯರಿಟ್ಟ ರಂಗೋಲಿಗಳ ಚಿತ್ತಾರ... ಎಲ್ಲೆಲ್ಲೂ ಸಂತಸದ ಅನುರಣನ... ಆಗಲೇ ಬದುಕು ಚೇತೋಹಾರಿ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT