ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡೋ ಮಾರಿ: ಸರ್ಕಾರಕ್ಕೆ ನೋಟಿಸ್

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಎಂಡೋಸಲ್ಫಾನ್ ಕೀಟನಾಶಕ ಬಳಕೆಯಿಂದ ಆಗಿರುವ ಅನಾಹುತಗಳ ಕುರಿತು ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಬರೆದ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅರಣ್ಯ ಇಲಾಖೆಯ ಕಾರ್ಯದರ್ಶಿಗಳು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೂ ನೋಟಿಸ್ ಜಾರಿಗೆ ನ್ಯಾಯಪೀಠ ಶುಕ್ರವಾರ ಸೂಚನೆ ನೀಡಿದೆ.

ಪತ್ರದಲ್ಲಿ ಏನಿದೆ?: ಎಂಡೋಸಲ್ಫಾನ್ ಕೀಟನಾಶಕವನ್ನು ಪ್ರಪಂಚದ ಎಲ್ಲೆಡೆ ಹಂತಹಂತವಾಗಿ ನಿಷೇಧ ಮಾಡಲಾಗಿದೆ. ಕರ್ನಾಟಕದಲ್ಲೂ ಇದನ್ನು ನಿಷೇಧಿಸಲಾಗಿದೆ. ಇದರಿಂದ ಮುಂದೆ ಆಗಬಹುದಾದ ಅನಾಹುತ ತಡೆಯಬಹುದು. ಆದರೆ ಜನರ ಮೇಲೆ ಈಗಾಗಲೇ ಆಗಿರುವ ದುಷ್ಪರಿಣಾಮ ಸರಿಪಡಿಸಲು ಸಾಧ್ಯವಿಲ್ಲ.

ಎಂಡೋಸಲ್ಫಾನ್‌ನಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ ಆರ್ಥಿಕ ಸಹಾಯ, ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಮೂರ್ತಿ ಮಂಜುನಾಥ್ ಅವರು ಅ. 3ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿಉಲ್ಲೇಖಿಸ್ದ್ದಿದರು.

ಕೇರಳ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗೇರು ತೋಟಕ್ಕೆ ಈ ಕೀಟನಾಶಕವನ್ನು ಹೆಲಿಕಾಪ್ಟರ್ ಮೂಲಕ ಸಿಂಪಡಿಸಲಾಗುತ್ತಿತ್ತು. ಇದರಿಂದಾಗಿ ಕೃಷಿ ಭೂಮಿ ಮಾತ್ರವಲ್ಲದೆ, ನೀರಿನ ಮೂಲಗಳೂ ಕಲುಷಿತಗೊಂಡವು.

ಇದರ ಅರಿವಿರದೆ, ಅದೇ ನೀರು ಕುಡಿದ ಕಾರಣ ಕೆಲವರು ಶಾಶ್ವತ ಅಂಗವೈಕಲ್ಯ ಹಾಗೂ ಬುದ್ಧಿಮಾಂದ್ಯತೆಗೆ ತುತ್ತಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ ಮತ್ತು ಉಡುಪಿ ತಾಲ್ಲೂಕುಗಳಲ್ಲಿ ಸಮಸ್ಯೆ ತೀವ್ರವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.

ಅಂಗವೈಕಲ್ಯಕ್ಕೆ ಈಡಾಗಿರುವವರಲ್ಲಿ ಕೆಲವರು ಕುಟುಂಬಕ್ಕೆ ಆಧಾರವಾಗಿದ್ದವರು. ಈ ಕೀಟನಾಶಕದಿಂದಾಗಿ ಅನೇಕ ಕುಟುಂಬಗಳು ಜೀವನಾಧಾರವನ್ನೇ ಕಳೆದುಕೊಂಡಿವೆ. ಇಂಥ ಕುಟುಂಬಗಳ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದೂ ಪತ್ರದಲ್ಲಿ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT