ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಕೃಷ್ಣಪ್ಪಗೆ ಟಿಕೆಟ್:ಯಾದವರ ಪ್ರತಿಭಟನೆ

Last Updated 8 ಏಪ್ರಿಲ್ 2013, 20:08 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗದ ಯಾದವ ಮಠದ ಯಾದವಾನಂದ ಸ್ವಾಮೀಜಿ ಮತ್ತು ಕರ್ನಾಟಕ ರಾಜ್ಯ ಯಾದವ ಸಂಘದ ಪದಾಧಿಕಾರಿಗಳು ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎ.ಕೃಷ್ಣಪ್ಪ ಅವರಿಗೆ ಪಕ್ಷದ ಟಿಕೆಟ್ ನೀಡುವಂತೆ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ನಿಯೋಗ, `ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣಪ್ಪ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂಬ ಸುದ್ದಿ ಹಬ್ಬಿದೆ. ಯಾದವ ಸಮುದಾಯದ ಹಿರಿಯ ಮುಖಂಡರಾದ ಅವರಿಗೆ ತಕ್ಷಣವೇ ಟಿಕೆಟ್ ಖಾತರಿಪಡಿಸಬೇಕು' ಎಂಬ ಮನವಿಯನ್ನು ಸಲ್ಲಿಸಿತು. ರಾಜ್ಯ ಯಾದವ ಸಂಘದ ಅಧ್ಯಕ್ಷ ಬಿ.ಎಸ್.ಲಕ್ಷ್ಮೀಪತಿ ಸೇರಿದಂತೆ ಹಲವು ಪದಾಧಿಕಾರಿಗಳು ನಿಯೋಗದಲ್ಲಿದ್ದರು.

`ರಾಜ್ಯದ ಹಲವು ಕ್ಷೇತ್ರಗಳಲ್ಲಿ ಯಾದವ ಜನಾಂಗದ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಿದ್ದರೂ ಟಿಕೆಟ್ ಹಂಚಿಕೆಯಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರಕಿಲ್ಲ. ಕೃಷ್ಣಪ್ಪ ಅವರಿಗೆ ಟಿಕೆಟ್ ನಿರಾಕರಿಸಿದರೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ' ಎಂದು ನಿಯೋಗದ ಸದಸ್ಯರು ಹೇಳಿದರು.

ಬಳಿಕ ಪ್ರತಿಕ್ರಿಯಿಸಿದ ಪರಮೇಶ್ವರ್, `ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಇನ್ನು ನಮ್ಮ ಪಾತ್ರ ಬಹಳ ಕಡಿಮೆ ಇದೆ. ಅವರು ಕೋರಿದ ಮಾಹಿತಿಯನ್ನು ಒದಗಿಸುವುದಷ್ಟೇ ನಮ್ಮ ಕರ್ತವ್ಯ. ನಿಮ್ಮ ಮನವಿಯನ್ನೂ ಸೋನಿಯಾ ಗಮನಕ್ಕೆ ತರುತ್ತೇನೆ' ಎಂದು ಭರವಸೆ ನೀಡಿದರು.

ಕಾರಿಗೆ ಮುತ್ತಿಗೆ: ಯಾದವ ಸಂಘದ ನಿಯೋಗದ ಜೊತೆ ರಾಜ್ಯದ ವಿವಿಧ ಕಡೆಗಳಿಂದ ನೂರಾರು ಜನರು ಬಂದಿದ್ದರು. ಅವರೆಲ್ಲರೂ ಕೆಪಿಸಿಸಿ ಕಚೇರಿ ಎದುರು ಪ್ರದರ್ಶನ ನಡೆಸಿ ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು. ಪಕ್ಷದ ಕಚೇರಿಯ ಒಳಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಪರಮೇಶ್ವರ್ ಅವರು ಕೆಪಿಸಿಸಿ ಕಚೇರಿಯಿಂದ ನಿರ್ಗಮಿಸುತ್ತಿದ್ದ ವೇಳೆ ಅವರ ಕಾರಿಗೆ ಮುತ್ತಿಗೆ ಹಾಕಿದರು. ಬಲಪ್ರಯೋಗಿಸಿ ಎಲ್ಲರನ್ನೂ ದೂರ ಸರಿಸಿದ ಪೊಲೀಸರು ಕೆಪಿಸಿಸಿ ಅಧ್ಯಕ್ಷರ ಕಾರು ಮುಂದಕ್ಕೆ ಹೋಗಲು ಅವಕಾಶ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT