ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಕೆ. - 47 ಒಂದು ರಕ್ತಸಿಕ್ತ ಕಥೆ...

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಎಕೆ-47~!
ಈ ಪದವೇ ಬೆಚ್ಚಿ ಬೀಳಿಸುವಂತಹದ್ದು. ಲಕ್ಷಾಂತರ ಬದುಕುಗಳನ್ನು ಬಲಿ ತೆಗೆದುಕೊಂಡು, ಅಸಂಖ್ಯ ಮಂದಿಯ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾದ ಶಸ್ತ್ರಾಸ್ತ್ರ ಇದು.

ಬಂಡುಕೋರರು, ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ವಿಚ್ಛಿದ್ರಕಾರಿ ಶಕ್ತಿಗಳು, ದೇಶವನ್ನು ಕಾಯುವ ಸೈನಿಕರು ಎಲ್ಲರಿಗೂ ಬೇಕಾದ ಬಂದೂಕು ಈ ಎಕೆ-47. ಬಾಳೆಹಣ್ಣಿನ ಆಕಾರದಲ್ಲಿರುವ ಇದರದ್ದು ಅಪರಾಧ ಜಗತ್ತಿನಲ್ಲಿ ದೊಡ್ಡ ಛಾಪು.

ಜಗತ್ತಿನ ಅತ್ಯಂತ ಜನಪ್ರಿಯ, ಕುಖ್ಯಾತ, ಅತಿ ಹೆಚ್ಚು ಮಾರಾಟವಾಗಿರುವ ಬಂದೂಕು ಇದು. ರಕ್ಷಣಾ ತಜ್ಞರ ಪ್ರಕಾರ 10 ಕೋಟಿಗೂ ಹೆಚ್ಚು ಎಕೆ-47 ಬಂದೂಕುಗಳು ವಿಶ್ವದೆಲ್ಲೆಡೆ ಚಲಾವಣೆಯಲ್ಲಿವೆ. ಅಸಲಿ ಶಸ್ತ್ರಾಸ್ತ್ರಕ್ಕಿಂತ ಚಾಲ್ತಿಯಲ್ಲಿರುವ ನಕಲಿಗಳೇ ಹೆಚ್ಚಂತೆ.
ಎಕೆ-47 ಯುದ್ಧಭೂಮಿಯ ಚಿತ್ರಣವನ್ನು ಬದಲಾಯಿಸಿದೆ.
 
ಕೇವಲ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಸಜ್ಜಿತ ಶಸ್ತ್ರಗಳಿಂದ ಶತ್ರುಗಳನ್ನು ಮಣಿಸಬಹುದು ಎಂಬ ನಂಬಿಕೆಯನ್ನು ಇದು ಸುಳ್ಳು ಮಾಡಿದೆ. ಅಷ್ಟೇಕೆ, ವಿಶ್ವದೆಲ್ಲೆಡೆ ಭಯೋತ್ಪಾದಕರ ಅಟ್ಟಹಾಸಕ್ಕೆ ಹೊಸ ಶಕ್ತಿ ತಂದಿರುವುದು ಇದೇ ಶಸ್ತ್ರ. 60 ವರ್ಷಗಳ ತನ್ನ ಇತಿಹಾಸದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರ ಪ್ರಾಣವನ್ನು ಇದು ಆಹುತಿ ಪಡೆದಿದೆ.

ಕಳೆದ ಎರಡು ದಶಕಗಳಲ್ಲಿ ನಡೆದಿರುವ 40ಕ್ಕೂ ಹೆಚ್ಚು ಯುದ್ಧಗಳಲ್ಲಿ ಬಳಕೆಯಾಗಿರುವುದು ಈ ಬಂದೂಕು ಸೈನಿಕರ ಪ್ರಮುಖ ಅಸ್ತ್ರವೆಂಬುದಕ್ಕೆ ಸಾಕ್ಷಿ.
ರಷ್ಯಾ ಸೈನ್ಯದ ಸೈನಿಕ ಮಿಖೈಲ್ ಟಿಮೋಫೆಯೆವಿಚ್ ಕಲಾಶ್ನಿಕೋವ್ ಈ ಭಯಂಕರ ಅಸ್ತ್ರವನ್ನು ಜಗತ್ತಿಗೆ ಪರಿಚಯಿಸಿದ. ರಷ್ಯಾ ಸೇನೆಯಲ್ಲಿ ಅವನು ಟ್ಯಾಂಕ್ ಕಮಾಂಡರ್.

ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿ ಸೇನೆಯ ದಾಳಿಗೆ ಪ್ರತ್ಯುತ್ತರ ನೀಡಲು ಅಗತ್ಯವಿದ್ದ ಮಷೀನ್ ಗನ್ ಇಲ್ಲದೆ ಹತರಾಗುತ್ತಿದ್ದ ತನ್ನ ದೇಶದ ಯೋಧರನ್ನು ಕಂಡು ಅವನಿಗೊಂದು ಬಯಕೆ ಚಿಗುರೊಡೆಯಿತು. ಅವರ ಕೈಗೆ ಪ್ರಬಲವಾದ ಶಸ್ತ್ರವನ್ನು ನೀಡಬೇಕು ಎಂಬ ದೇಶಾಭಿಮಾನವೇ ಭಯಾನಕ ಎಕೆ-47 ಸೃಷ್ಟಿಗೆ ಕಾರಣವಾಯಿತು.

ಎರಡನೇ ಮಹಾಯುದ್ಧದಲ್ಲಿ ಹಿಟ್ಲರನ ಸೇನೆಯು ರಷ್ಯಾ ಮೇಲೆ ಆಕ್ರಮಣ ಮಾಡಿತು. 1941 ಜೂನ್‌ನಲ್ಲಿ ಬ್ರಿಯ್ನಾಸ್ಕದಲ್ಲಿ ನಡೆದ ಯುದ್ಧದಲ್ಲಿ ಜರ್ಮನಿಯ ಸೇನೆಯು ರಷ್ಯಾ ಸೇನೆಯ ಮೇಲೆ ಬಹು ದೊಡ್ಡ ಪ್ರಮಾಣದ ದಾಳಿ ನಡೆಸಿತು.
 
ಕಲಾಶ್ನಿಕೋವ್ ನಡೆಸುತ್ತಿದ್ದ ಟ್ಯಾಂಕ್ ಶತ್ರುಗಳ ದಾಳಿಗೆ ಈಡಾಯಿತು. ಆತ ತೀವ್ರವಾಗಿ ಗಾಯಗೊಂಡ. ಕಣ್ಣೆದುರೇ ಪ್ರಾಣತೆತ್ತ ಸಂಗಾತಿಗಳನ್ನು ಅಸಹಾಯಕನಾಗಿ ನೋಡಿದ. ತೀವ್ರವಾಗಿ ಗಾಯಗೊಂಡಿದ್ದ ಕಲಾಶ್ನಿಕೋವ್ ಬದುಕಿದ್ದೇ ಪವಾಡ.

ರಷ್ಯಾದ ಅಂದಿನ ಮುಖ್ಯಸ್ಥ ಸ್ಟಾಲಿನ್ ತನ್ನ ಸೇನೆಯ ಉಪಯೋಗಕ್ಕೆ `ಅಸಾಲ್ಟ್ ರೈಫಲ್~ ಸೇರಿಸಲು ನಿರ್ಧರಿಸಿದ. ಇದಕ್ಕಾಗಿ ಹೊಸ ವಿನ್ಯಾಸದ ರೈಫಲ್ ರೂಪಿಸಲು ಮೂವರು ಹಿರಿಯ ಶಸ್ತ್ರ ತಜ್ಞ ಅಧಿಕಾರಿಗಳು ಕಾರ್ಯಪ್ರವೃತ್ತರಾದರು.

ಈ ಅವಕಾಶವನ್ನು ಬಳಸಿಕೊಳ್ಳಲು ಮಿಖೈಲ್ ಕೂಡ ನಿರ್ಧರಿಸಿದ. ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದ ಸಂದರ್ಭದಲ್ಲಿ ತನ್ನ ಸೈನಿಕರನ್ನು ಕಾಪಾಡುವ ಮಷೀನ್ ಗನ್ ತಯಾರು ಮಾಡುವ ಸಂಕಲ್ಪ ಮಾಡಿದ. ಅದು ಆತುರದ ನಿರ್ಧಾರವೇನೂ ಆಗಿರಲಿಲ್ಲ. ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡ ನಂತರ ಅವನ ದೈಹಿಕ ಶಕ್ತಿ ಕುಂದಿತ್ತು. ಅವನಿಗೆ ಗುಣಮುಖನಾಗಲು ಸೇನೆಯು ಆರು ತಿಂಗಳ ರಜೆ ನೀಡಿತು.
 
ಆ ಸಮಯವನ್ನೇ ಬಳಸಿ, `ಅಲ್ಮಾಆಟರ್ ಶಸ್ತ್ರ ತಯಾರಿಕಾ ಕಾರ್ಖಾನೆ~ಗೆ ಮರಳಿ ಬಂದು ತನ್ನ ಕನಸಿನ ಬಂದೂಕು ತಯಾರಿಸಲು ಸನ್ನದ್ಧನಾದ. ಈ ಘಟನೆಯು ಮುಂದಿನ ದಿನಗಳಲ್ಲಿ ವಿಶ್ವಯುದ್ಧದ ಚಿತ್ರಣವನ್ನೇ ಬದಲಾಯಿಸುತ್ತದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ!

ಕಲಾಶ್ನಿಕೋವ್ ಹುಟ್ಟಿದ್ದು ನವೆಂಬರ್ 10, 1919ರಲ್ಲಿ. ಸೈಬೀರಿಯಾ ಪ್ರಾಂತ್ಯದ ಕುರ್ಯಾ ಎಂಬ ಹಳ್ಳಿಯಲ್ಲಿ. ಇವನ ತಂದೆ ತಾಯಿಗೆ ಎರಡು ಹೆಣ್ಣು ಮತ್ತು ಆರು ಗಂಡು ಮಕ್ಕಳು. ಎರಡನೆಯವನೇ ಕಲಾಶ್ನಿಕೋವ್.

1932ರಲ್ಲಿ ರಷ್ಯಾದಲ್ಲಿ ಕ್ರಾಂತಿ ನಡೆದ ನಂತರ ಅಂದಿನ ಕಮ್ಯುನಿಸ್ಟ್ ಆಡಳಿತ ಇಡೀ `ಕುಲಕ್~ ಸಮುದಾಯವನ್ನು ನಾಮಾವಶೇಷ ಮಾಡುವ ಪ್ರಯತ್ನದಲ್ಲಿ ತೊಡಗಿತ್ತು. ಸಾವಿರಾರು ಕುಲಕ್ ಕುಟುಂಬಗಳು ಸಾವಿಗೀಡಾದಂತೆ ಇವರ ಕುಟುಂಬವು ಬಲಿಯಾಗದೆ ಅದೃಷ್ಟವಶಾತ್ ಗಡಿಪಾರಾಯಿತು.

ಬಾಲ್ಯದಲ್ಲೇ ಬಂದೂಕು ಪ್ರೀತಿ
ಕಲಾಶ್ನಿಕೋವ್ 15ನೆಯ ವಯಸ್ಸಿನಲ್ಲಿ ಕೆಲಸ ಹುಡುಕುತ್ತಾ ತನ್ನ ತಂಗಿಯ ಮನೆಯಲ್ಲಿ ಆಶ್ರಯ ಪಡೆದ. ಪರಾಶ್ರಯಕ್ಕಿಂತ ಸ್ವಂತ ಕಾಲ ಮೇಲೆ ನಿಲ್ಲುವುದು ಗೌರವ ಎಂಬ ಸತ್ಯದ ಅರಿವಾಗಿ ಮತ್ತೆ ತನ್ನ ಸ್ವಂತ ಊರಿಗೆ ಮರಳಿದ. ಮೊದಲಿನಿಂದಲೂ ಮಿಖೈಲ್‌ಗೆ ವಿವಿಧ ಉಪಕರಣಗಳೊಂದಿಗೆ ಆಟವಾಡುವ ಹುಚ್ಚು.
 
ಯಾವುದೇ ಉಪಕರಣ ದೊರೆತರೂ ಅದನ್ನು ಸಂಪೂರ್ಣವಾಗಿ ಕಳಚಿ ಮತ್ತೆ ಜೋಡಿಸುವುದು ಹವ್ಯಾಸ. ಉಪಕರಣಗಳ ತಾಂತ್ರಿಕ ವಿನ್ಯಾಸವನ್ನು ಗಮನಿಸುವುದು ಚಿಕ್ಕಂದಿನಿಂದಲೂ ಇದ್ದ ಗುಣ.

ಕಲಾಶ್ನಿಕೋವ್‌ಗೆ ಬಾಲ್ಯದಿಂದಲೂ ಬಂದೂಕಿನ ಹುಚ್ಚು. ಸ್ನೇಹಿತನೊಬ್ಬ ಅಮೆರಿಕನ್ ಬ್ರೌನಿಂಗ್ ಹೆಸರಿನ ಪಿಸ್ತೂಲನ್ನು ಬಳುವಳಿಯಾಗಿ ನೀಡಿದ್ದ. ಅವನ ಪಾಲಿಗದು ದೊಡ್ಡ ಆಸ್ತಿ. ಕಾಡಿಗೆ ಹೋಗಿ ಗುಟ್ಟಾಗಿ  ಪಿಸ್ತೂಲನ್ನು ಪದೇಪದೇ ಬಿಚ್ಚಿ ಜೋಡಿಸುವುದು, ಅದರ ತಾಂತ್ರಿಕ ಕೌಶಲ್ಯವನ್ನು ಅಧ್ಯಯನ ಮಾಡುವುದು ಮಾಮೂಲಾಗಿತ್ತು.

1937ರಲ್ಲಿ ಆಲ್ಮಾಅಟರ್ ನಗರಕ್ಕೆ ಕೆಲಸ ಹುಡುಕಿ ಹೋದ ಕಲಾಶ್ನಿಕೋವ್‌ಗೆ ಸೋವಿಯತ್ ದೇಶಕ್ಕೆ ಬಂದೂಕುಗಳನ್ನು ತಯಾರು ಮಾಡುವ ಕಾರ್ಖಾನೆಯ ಎಂಜಿನಿಯರಿಂಗ್ ಯಾರ್ಡ್‌ನಲ್ಲಿ ಕೆಲಸ ಸಿಕ್ಕಿತು. ಆಮೇಲಾದದ್ದೇ ಯುದ್ಧದ ದೊಡ್ಡ ಗಾಯ.
ಗಾಯಗೊಂಡ ನಂತರ ಅಲ್ಮಾಅಟರ್‌ಗೆ ಮರಳಿ ತನ್ನ ಕನಸಿನ ಗನ್ ತಯಾರಿಸಲು ಹಗಲು-ರಾತ್ರಿ ಶ್ರಮಿಸಿದ. ಸಣ್ಣ ತಂಡದ ಸಹಾಯದಿಂದ 1942-43ರಲ್ಲಿ ಒಂದು ವರ್ಷ ಸತತವಾಗಿ ಕೆಲಸ ಮಾಡಿ ಮಷೀನ್ ಗನ್ ತಯಾರಿಸಿ, ಅದರ ಮಾದರಿಯನ್ನು ಸೇನೆಯ ಪರೀಕ್ಷೆಗೆ ಒಳಪಡಿಸಿದ. ಪರೀಕ್ಷೆಯಲ್ಲಿ ಅದನ್ನು ತಿರಸ್ಕರಿಸಿದರು.

ಕಲಾಶ್ನಿಕೋವ್ ಎಂಜಿನಿಯರ್ ಅಲ್ಲ. ಶಸ್ತ್ರಾಸ್ತ್ರ ರಿಪೇರಿ ಮಾಡುವುದು ಗೊತ್ತಿರಲಿಲ್ಲ. ಲೋಹ ವಿಜ್ಞಾನಿಯೂ ಆಗಿರಲಿಲ್ಲ. 15ನೇ ವಯಸ್ಸಿಗೇ ಓದಿಗೆ ವಿದಾಯ ಹೇಳಿದ್ದವನು.
ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳದ ಅವನು ಮತ್ತೆ ಸತತ ಎರಡು ವರ್ಷ ಬಂದೂಕು ಸುಧಾರಣೆಯಲ್ಲಿ ತೊಡಗಿದ.
 
ಈ ಬಾರಿ ಮಾಸ್ಕೋ ಸಮೀಪವಿದ್ದ `ಏವಿಯೇಷನ್ ಇನ್‌ಸ್ಟಿಟ್ಯೂಟ್~ನಲ್ಲಿ ತನ್ನ ಮರು ಪ್ರಯತ್ನ ಆರಂಭಿಸಿದ. ಘೆಐಖ್ಖ ಎಂಬ ರಕ್ಷಣಾ ಇಲಾಖೆಗೆ ಸೇರಿದ ಸಂಸ್ಥೆಯಲ್ಲಿ ಎಕೆ-47 ಅಂತಿಮವಾಗಿ ರೂಪುಗೊಂಡಿತು.

ಜರ್ಮನಿಯ ಮಷೀನ್ ಗನ್‌ಗೆ ಉತ್ತರ ರೂಪದಲ್ಲಿ ಸೋವಿಯತ್ ಸೇನೆಗಾಗಿ ಆಕ್ರಮಣಕಾರಿ ಶಸ್ತ್ರಾಸ್ತ್ರ (ಅಸಾಲ್ಟ್ ರೈಫಲ್) ಕಂಡುಹಿಡಿಯಲು ಮೂವರು ಸೇನಾಧಿಕಾರಿಗಳಿಗೆ ಆಹ್ವಾನ ನೀಡಲಾಗಿತ್ತು. ನಾಲ್ಕನೆಯವನಾಗಿ ಕಲಾಶ್ನಿಕೋವ್ ಕೂಡ ತನ್ನ ಕನಸಿನ ಬಂದೂಕು ಸಿದ್ಧಪಡಿಸಿದ.

1946ರಲ್ಲಿ ಕಲಾಶ್ನಿಕೋವ್ ಬಂದೂಕು ಸೋವಿಯತ್ ಸೇನೆಯ ಅತಿರಥ ಮಹಾರಥರ ಗನ್‌ಗಳನ್ನು ಮೀರಿಸಿ ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಆಯ್ಕೆಯಾಯಿತು. 1947ರಲ್ಲಿ ಎಕೆ-47 ಹೆಸರಿನೊಂದಿಗೆ ಸೋವಿಯತ್ ಸೇನೆಯ ಅವಿಭಾಜ್ಯ ಅಂಗವಾಗಿ ಸೇರ್ಪಡೆಯಾಯಿತು.

ಯಾಕೆ ಈ ಹೆಸರು?
`ಆಟೊಮ್ಯಾಟ್~ ಅಂದರೆ ಸ್ವಯಂಚಾಲಿತ. ಅದರ ಸಂಕ್ಷಿಪ್ತ ರೂಪ- `ಎ~. ಸೃಷ್ಟಿಕರ್ತ ಕಲಾಶ್ನಿಕೋವ್. ಅವರ ಹೆಸರಿನ ಮೊದಲ ಅಕ್ಷರ- `ಕೆ~. 1947ನೇ ಇಸವಿಯಲ್ಲಿ ಬಂದೂಕು ಸೇವೆಗೆ ಆಯ್ಕೆಯಾದದ್ದರ ಸಂಕೇತ `47~. ಎಲ್ಲವೂ ಸೇರಿದರೆ ಎಕೆ-47.
ರಷ್ಯಾದ ಉದಮರ್ಟ್ ಪ್ರಾಂತ್ಯಕ್ಕೆ ಸೇರಿದ ಇಜೆವೆಸ್ತಾ ನಗರ 1760ರಲ್ಲಿ ನಿರ್ಮಾಣವಾಯಿತು.
 
ಆರಂಭದಿಂದಲೂ ಈ ನಗರ ಯುದ್ಧ ಸಾಮಗ್ರಿಗಳ ಉತ್ಪಾದನೆಗೆ ಖ್ಯಾತಿ ಪಡೆದಿದೆ. ರಷ್ಯಾದ ಮೊದಲನೇ ಜಾರ್ ಅಲೆಕ್ಸಾಂಡರ್, 1807ರಲ್ಲಿ `ಇಜ್ಷ್‌ಮೆಶ್~ ಎಂಬ ಆಯುಧ ತಯಾರು ಮಾಡುವ ಕಾರ್ಖಾನೆ ಆರಂಭಿಸಿದ. ಎಕೆ-47 ಬಂದೂಕುಗಳನ್ನು ಇಂದಿಗೂ ಅಲ್ಲೇ ಉತ್ಪಾದಿಸಲಾಗುತ್ತಿದೆ.

ಇಜೆವೆಸ್ತಾ ನಗರದಲ್ಲಿ ರಕ್ಷಣಾ ಇಲಾಖೆಗೆ ಸರಬರಾಜು ಮಾಡುವ ವಿವಿಧ ಶಸ್ತ್ರಾಸ್ತ್ರಗಳ ಉತ್ಪಾದನಾ ಕಾರ್ಖಾನೆಗಳು ಇದ್ದ ಕಾರಣ ವಿದೇಶಿಯರು ಈ ನಗರವನ್ನು ಪ್ರವೇಶಿಸಲು ನಿಷೇಧವಿತ್ತು. 1991ರಲ್ಲಿ ಸೋವಿಯತ್ ಒಕ್ಕೂಟವು ಛಿದ್ರವಾದ ಮೇಲೆ ಈ ನಿರ್ಬಂಧವನ್ನು ಸಡಿಲಿಸಲಾಯಿತು.

ಸರಳತೆಯೇ ವ್ಯಾಪಕತೆಗೆ ಕಾರಣ
ವಿಶ್ವದಲ್ಲಿ ಹಲವಾರು ಮಾದರಿಯ ಆಧುನಿಕ ಶಸ್ತ್ರಾಸ್ತ್ರಗಳು ಲಭ್ಯ. ಉದಾಹರಣೆಗೆ ಅಮೆರಿಕಾದ `ಎಂ-16~, ಇಸ್ರೇಲ್‌ನ `ಊಜಿ ಮಷೀನ್ ಗನ್~ ಮುಂತಾದವು. ಆದರೆ, ಇವೆಲ್ಲವನ್ನು ಹಿಂದೆ ಹಾಕಿ ಎಕೆ-47 ಹೆಚ್ಚು ಜನಪ್ರಿಯವಾಗಿದೆ. ಅದರ ಸರಳತೆಯೇ ಈ ಜನಪ್ರಿಯತೆಗೆ ಕಾರಣ.

ಇಡೀ ಬಂದೂಕಿನಲ್ಲಿ ಕೇವಲ ಎಂಟು ಚಲನಶೀಲ ಬಿಡಿಭಾಗಗಳನ್ನು ಮಾತ್ರ ಅಳವಡಿಸಲಾಗಿದೆ. ಹಾಗಾಗಿ ಬಳಸಲು ಅತ್ಯಂತ ಸುಲಭ. ಒಂದೇ ನಿಮಿಷದಲ್ಲಿ ಬಂದೂಕನ್ನು ಬೇರ್ಪಡಿಸಿ ಸಲೀಸಾಗಿ ಜೋಡಿಸಬಹುದು. ಉತ್ಪಾದನಾ ವೆಚ್ಚವೂ ಕಡಿಮೆ.
ಒಮ್ಮೆ ಬಂದೂಕಿನ ನಳಿಕೆಯನ್ನು ಒತ್ತಿದರೆ ಸತತವಾಗಿ 650 ಸುತ್ತು ಗುಂಡನ್ನು ಕಾರುವ ಇದರಿಂದ 350 ಮೀಟರ್ ದೂರದವರೆಗೂ ಗುರಿ ಇಡಬಹುದು.

ಈ ಬಂದೂಕನ್ನು ಎಂತಹ ಹವಾಮಾನದಲ್ಲಿಯೂ ಬಳಸಬಹುದು. ಹಲವಾರು ದಿನಗಳ ಕಾಲ ಸ್ವಚ್ಛಗೊಳಿಸದೆ ಇದ್ದರೂ ಇನ್ನಿತರ ಸಮಾನಾಂತರ ಬಂದೂಕುಗಳಿಂತಲೂ ತೀಕ್ಷ್ಣವಾಗಿ ಕೆಲಸಮಾಡುವ ಸಾಮರ್ಥ್ಯವಿದೆ.

ಜಗತ್ತಿನ 51 ದೇಶಗಳ ಸೈನ್ಯಗಳು ಎಕೆ-47 ಬಂದೂಕನ್ನು ಸೈನಿಕರಿಗೆ ನೀಡಿವೆ. ಭಾರತ ಒಳಗೊಂಡಂತೆ ಹಲವಾರು ದೇಶಗಳು ಇದನ್ನು ತಯಾರಿಸಲು ಪರವಾನಗಿ ಹೊಂದಿವೆ.
ಮೊಜಾಂಬಿಕ್ ದೇಶದ ಬಾವುಟದ ಮೇಲೆ ಇದೇ ಬಂದೂಕಿನ ಚಿಹ್ನೆಯನ್ನು ಹಾಕಲಾಗಿದೆ.

ನಿಕರಾಗೋವಾ ರಾಜಧಾನಿ ಮನಾಗೂವಾದಲ್ಲಿ ಸ್ವಾತಂತ್ರ ಯೋಧನೊಬ್ಬ ಆಕಾಶಕ್ಕೆ ಗುರಿಯಿಟ್ಟು ಈ ಬಂದೂಕು ಹಿಡಿದು ನಿಂತಿರುವ ಪ್ರತಿಮೆ ಸ್ಥಾಪಿಸಲಾಗಿದೆ. ಕೆಲವು ದೇಶಗಳ ನಾಣ್ಯಗಳ ಮೇಲೂ ಎಕೆ-47 ಚಿತ್ರವನ್ನು ಅಚ್ಚು ಹಾಕಿಸಲಾಗಿದೆ.

ಸೋಮಾಲಿಯಾ, ಸಿರಿಯಾ, ರವಾಂಡ, ಮೊಜಾಂಬಿಕ್ ಸಿಯಾರ ಲಿಯೋನ್ ಗಾಜಾ ಪ್ರದೇಶ, ಆಫ್ಘಾನಿಸ್ತಾನ ಮುಂತಾದ ರಾಷ್ಟ್ರಗಳ ಭವಿಷ್ಯವನ್ನು ಎಕೆ-47 ಪುನರ್‌ರೂಪಿಸಿದೆ. ಇದು ಜಿಹಾದಿಗಳ ಹೋರಾಟದ ಸಂಕೇತ, ಪಾಶ್ಚಿಮಾತ್ಯ ರಾಷ್ಟ್ರ ವಿರೋಧಿ ಸಂಕೇತವೂ ಹೌದು.

ಪಿಂಚಣಿಯೇ ಸಾಕೆಂದ...
ಜಗತ್ತಿನಾದ್ಯಂತ ಕೋಟ್ಯಂತರ ಎಕೆ-47 ಬಂದೂಕು ಮಾರಾಟವಾಗಿದ್ದರೂ ಇದನ್ನು ಕಂಡುಹಿಡಿದ ಮಿಖೈಲ್ ಕಲಾಶ್ನಿಕೋವ್ ಇಂದಿಗೂ ಸರ್ಕಾರದ ಪಿಂಚಣಿ ಹಣದಲ್ಲಿ ಬದುಕುತ್ತಿದ್ದಾನೆ. ಎಕೆ-47 ಮಾರಾಟದ ಗೌರವಧನವು ರಷ್ಯಾ ಸರ್ಕಾರದ ಬೊಕ್ಕಸ ಸೇರುತ್ತದೆ. ಎಕೆ-47 ಹೆಸರಿನಲ್ಲಿ ತಯಾರಾಗಿರುವ ವೋಡ್ಕ ಪೇಯದ ಮಾರಾಟದ ಜಾಹೀರಾತಿನಲ್ಲಿ ಕಾಣಿಸಿಕೊಂಡು ಕಲಾಶ್ನಿಕೋವ್ ಒಂದಿಷ್ಟು ಹಣ ಸಂಪಾದನೆ ಮಾಡುತ್ತಿದ್ದಾರಷ್ಟೇ.

ಎಕೆ-47ರ ಪ್ರತಿಸ್ಪರ್ಧಿ ಎಂದೇ ಪರಿಗಣಿತವಾಗಿರುವ ಅಮೆರಿಕನ್ ಬಂದೂಕು ಎಂ-16 ಕಂಡುಹಿಡಿದ ಇಗ್ಯೋನೆ ಸ್ಟೋನರ್ ಲಕ್ಷಾಂತರ ಡಾಲರ್ ರಾಜಧನ ಪಡೆದು ಐಷಾರಾಮಿ ಬದುಕು ನಡೆಸುತ್ತಿದ್ದಾನೆ. ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ರಾಷ್ಟ್ರದ ಆರ್ಥಿಕ ದೃಷ್ಟಿಕೋನಕ್ಕೆ ಇದೊಂದು ಉತ್ತಮ ಉದಾಹರಣೆ.

ಸೋವಿಯತ್ ಒಕ್ಕೂಟವು 1954ರಲ್ಲಿ ಕಮ್ಯುನಿಸ್ಟ್ ಹಿಡಿತವನ್ನು ಬಲಪಡಿಸಿಕೊಳ್ಳಲು ತನ್ನ ಮಿತ್ರರಾಷ್ಟ್ರಗಳಿಗೆ ಎಕೆ-47 ಬಂದೂಕುಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಸರಬರಾಜು  ಮಾಡಿತು. ಎಲ್ಲೇ ಬಂಡಾಯವೆದ್ದರೂ ಅದನ್ನು ಅಡಗಿಸಲು ಆ ಬಂದೂಕನ್ನು ಬಳಸಲಾಯಿತು.

ವಿಶ್ವದ ಎರಡು `ಸೂಪರ್ ಪವರ್~ಗಳ ಮೇಲಾಟದಲ್ಲಿ ಸೋವಿಯತ್ ಒಕ್ಕೂಟ ತನ್ನ ಮಿತ್ರ ರಾಷ್ಟ್ರಗಳಿಗೆ  ಸಹಸ್ರಾರು ಎಕೆ-47 ಬಂದೂಕುಗಳನ್ನು ಉಚಿತವಾಗಿ ಹಂಚಿತ್ತು. ಇನ್ನು ಕೆಲವು ರಾಷ್ಟ್ರಗಳಿಗೆ 100 ವರ್ಷಗಳ ದೀರ್ಘಾವಧಿ ಸಾಲದ ಮೇಲೆ ಸರಬರಾಜು ಮಾಡಿತು.

ತನ್ನ ಪರಮಾಪ್ತ ರಾಷ್ಟ್ರಗಳಿಗೆ ಆಯಾ ದೇಶಗಳಲ್ಲಿ ಎಕೆ-47 ಉತ್ಪಾದನೆ ಮಾಡಿಕೊಳ್ಳಲು ತಂತ್ರಜ್ಞಾನವನ್ನು ಹಸ್ತಾಂತರಿಸಿತು. ಈ ಎಲ್ಲಾ ಕಾರಣಗಳಿಂದ ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಜಗತ್ತಿನಾದ್ಯಂತ ಎಕೆ-47 ಹರದಾಡುವಂತಾಗಿದೆ.

ನಿರಂತರ ಬದಲಾವಣೆ
ಕಾಲಕಾಲಕ್ಕೆ ಬಂದೂಕಿನ ಸ್ವರೂಪದಲ್ಲೂ ಮಾರ್ಪಾಟಾಗಿದೆ. 1974ರಲ್ಲಿ ಬಳಸಲಾಗುತ್ತಿದ್ದ ಗುಂಡಿನ ಗಾತ್ರದಲ್ಲಿ ಬದಲಾವಣೆಯಾಯಿತು. ಮ್ಯಾಗಜೀನ್ ಆಕಾರವನ್ನು ಬದಲಾಯಿಸಲಾಯಿತು. ಹೊಸ ಮಾದರಿಯ ಬಂದೂಕುಗಳನ್ನು ಎಕೆ-74 ಹೆಸರಿನಲ್ಲಿ ಕರೆಯತೊಡಗಿದರು. ಆದರೆ ಬದಲಾದ ಹೆಸರು ಕಾಗದಕ್ಕೆ ಸಿಮೀತವಾಯಿತೇ ವಿನಾ ಎಕೆ-47 ಎಂದು ಕರೆಯುವುದು ಮಾತ್ರ ಮುಂದುವರಿದಿದೆ.

ರಷ್ಯಾಗೆ ಇದೇ ಬಂದೂಕು ತಿರುಗುಬಾಣವಾಗಿ ಪರಿವರ್ತಿತವಾಗಿರುವುದು ವಿಪರ‌್ಯಾಸ. ಆಫ್ಘಾನಿಸ್ತಾನ ಯುದ್ಧದಲ್ಲಿ ಆಫ್ಘನ್ ಸೈನಿಕರು ಸೋವಿಯತ್ ದೇಶದ ಸೈನಿಕರನ್ನು ಕೊಲ್ಲಲು ಉಪಯೋಗಿಸಿದ ಬಂದೂಕು ಇದೇ. ಕನಿಷ್ಠ 22 ಸಾವಿರ ಸೋವಿಯತ್ ದೇಶದ ಯೋಧರು ಈ ಯುದ್ಧದಲ್ಲಿ ಮೃತಪಟ್ಟರು. 90 ಸಾವಿರ ಆಫ್ಘನ್ನರು ಕೂಡ ಬಲಿಯಾದರು.

ಚೆಚನ್ಯಾ ಬಂಡುಕೋರರು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಾಗಿ ಮತ್ತು ರಷ್ಯಾ ಸೈನಿಕರ ವಿರುದ್ಧ ಹೋರಾಟಕ್ಕೆ ಬಳಸುತ್ತಿರುವುದು ಇದೇ ಬಂದೂಕನ್ನು.

ವಿಶ್ವದ ಬಲಾಢ್ಯ ದೇಶಗಳಾದ ಸೋವಿಯತ್ ರಷ್ಯಾ ಮತ್ತು ಅಮೆರಿಕದ ದುಡುಕುನೀತಿಯ ಫಲವಾಗಿ ಇಂದು ಲೆಕ್ಕವಿಲ್ಲದಷ್ಟು ಎಕೆ-47 ಗನ್‌ಗಳು ವಿಶ್ವದೆಲ್ಲೆಡೆ ಹರಿದಾಡುತ್ತಿವೆ.

ಸೋವಿಯತ್ ಸೈನಿಕರನ್ನು ಆಫ್ಘಾನಿಸ್ತಾನದಿಂದ ಹೊರದೋಡಿಸಲು ಆಫ್ಘನ್ ಬಂಡುಕೋರರಿಗೆ ಅಮೆರಿಕದ ಸಿಐಎ ಗುಪ್ತಚರ ಸಂಸ್ಥೆಯು ಪಾಕಿಸ್ತಾನದ ಮೂಲಕ ಸಾವಿರಾರು ಎಕೆ-47 ಗನ್‌ಗಳನ್ನು ಹಂಚುವ ವ್ಯವಸ್ಥೆ ಮಾಡಿತ್ತು.
 
ಇದಕ್ಕಾಗಿ 22 ಕೋಟಿ ಡಾಲರ್‌ಗಳನ್ನು ಖರ್ಚು ಮಾಡಲಾಯಿತು. ಈ ಹಣದಲ್ಲಿ ಖರೀದಿಸಿದ ಎಕೆ-47 ಬಂದೂಕುಗಳಲ್ಲಿ ಸೈನಿಕರ ಕೈ ಸೇರಿದ್ದೆಷ್ಟು, ಅನ್ಯರ ಪಾಲಾದದ್ದೆಷ್ಟು ಎಂಬುದರ ಲೆಕ್ಕವೇ ಸಿಕ್ಕಿಲ್ಲ!

ಹಲವಾರು ಬಾರಿ ಪಾಕಿಸ್ತಾನದ ಮೂಲಕ ಆಫ್‌ಘಾನಿಸ್ತಾನಕ್ಕೆ ತಲುಪಬೇಕಿದ್ದ ಬಂದೂಕುಗಳು ದಲ್ಲಾಳಿಗಳ ಕೈಸೇರಿ ಮತ್ತೇ ಅವನ್ನೇ ಅಮೆರಿಕ ಖರೀದಿಸಿ ಪಾಕಿಸ್ತಾನಕ್ಕೆ ರವಾನಿಸಿದ ಪ್ರಕರಣಗಳೂ ವರದಿಯಾಗಿವೆ. ಈ ಎಲ್ಲಾ ಸಂಗತಿಗಳು ಅಮೆರಿಕದ ಸೆನೆಟ್ ಸಮಿತಿಯ ಮುಂದೆ ಚರ್ಚೆಗೊಳಗಾಗಿವೆ.

ಈ ಹಿಂದೆ ಅಮೆರಿಕಾ ಸರ್ಕಾರವು ಪಾಕಿಸ್ತಾನದ ಮೂಲಕ ಆಫ್ಘನ್ ಮುಜಾಹಿದೀನ್‌ಗಳಿಗೆ  ಸೋವಿಯತ್ ಸೇನೆಯೊಡನೆ ಹೋರಾಡಲು ನೀಡಿದ ಎಕೆ-47 ಬಂದೂಕುಗಳು ಇಂದು ಆಫ್ಘನ್ ಬಂಡುಕೋರರ ಮತ್ತು ಆಲ್ ಖೈದಾ ಭಯೋತ್ಪಾದಕರ ಕೈಸೇರಿ ಅಮೆರಿಕ ಸೈನಿಕರನ್ನು ಹತ್ಯೆಗೈಯ್ಯಲು ಬಳಕೆಯಾಗುತ್ತಿವೆ.ಇದು ಇತಿಹಾಸದ ಘೋರ ವ್ಯಂಗ್ಯ.

ಒಸಾಮಾ ಬಿನ್ ಲಾಡೆನ್ ಎಂದೊಡನೆ ನೆನಪಾಗುವುದು ಆತ ಎಕೆ-47 ಹಿಡಿದು ಮಂಡಿಯೂರಿ ಗುರಿ ಇಟ್ಟ ದೃಶ್ಯ. ಮಾಧ್ಯಮದಲ್ಲಿ ಹೆಚ್ಚಾಗಿ ಕಂಡ ಚಿತ್ರವಿದು. ಅಲ್‌ಖೈದಾ ಭಯೋತ್ಪಾದಕರು ಇಂದಿಗೂ ತಮ್ಮ ಪಾಶವೀ ಕೃತ್ಯವನ್ನು ಕೈಗೊಳ್ಳಲು ಬಳಕೆ ಮಾಡುತ್ತಿರುವುದು ಇದೇ ಬಂದೂಕುಗಳನ್ನು.

ಕೇವಲ 20 ಸಾವಿರ ರೂಪಾಯಿಗಳಿಗೆ ದೊರೆಯುವ ಈ ಬಂದೂಕು ಲಕ್ಷಾಂತರ ಜನರ ಪ್ರಾಣ ತೆಗೆಯುವ ಸುಲಭ ಸಾಧನವಾಗಿರುವುದು ಇತಿಹಾಸದ ದುರಂತವೇ ಸರಿ.
ಸಂದರ್ಶನವೊಂದರಲ್ಲಿ ಕಲಾಶ್ನಿಕೋವ್ ಅವರನ್ನು ಈ ಕುರಿತು ಪ್ರಶ್ನಿಸಿದಾಗ, ಅವರು ಹೇಳಿದ್ದು: `ನಾನು ಸೃಷ್ಟಿಸಿರುವ ಬಂದೂಕಿನ ಬಗ್ಗೆ ಹೆಮ್ಮೆ ಇದೆ.
 
ಆದರೆ ಇದನ್ನು ಭಯೋತ್ಪಾದಕರು ಬಳಸುತ್ತಿರುವುದು ಅತ್ಯಂತ ನೋವಿನ ವಿಚಾರ. ನನಗೆ ಆಯ್ಕೆ ಇದ್ದಿದ್ದರೆ ಹೆಚ್ಚು ಜನ ಉಪಯೋಗಿಸುವ ಉಪಕರಣ ಕಂಡುಹಿಡಿಯುತ್ತಿದ್ದೆ. ಉದಾಹರಣೆಗೆ ರೈತರು ಬಳಸುವ ನೇಗಿಲು!~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT