ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ಪೀಡಿತನ ಸಾಹಸ: ಒತ್ತುವರಿ ತೆರವು

Last Updated 14 ಸೆಪ್ಟೆಂಬರ್ 2013, 6:17 IST
ಅಕ್ಷರ ಗಾತ್ರ

ತುರುವೇಕೆರೆ: ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬನ ಜೀವ­ನ್ಮುಖಿ ನಿಲುವು ಮತ್ತು ಛಲದಿಂದ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮದ ಗೋಮಾಳ ಮತ್ತು ಗುಂಡುತೋಪು ಒತ್ತುವರಿ ತೆರವುಗೊಂಡಿದೆ.

ಗ್ರಾಮದ ಯುವಕ ಸತೀಶ್ ಕಳೆದ 12 ವರ್ಷಗಳಿಂದ ಎಚ್‌ಐವಿ ಸೋಂಕಿ­ನಿಂದ ಬಳಲುತ್ತಿದ್ದಾರೆ. ತಮ್ಮ ಬದುಕು ನೀರ ಮೇಲಣ ಗುಳ್ಳೆ ಎನಿಸಿದ ನಂತರ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾದರು.

ಗ್ರಾಮದ 15 ಮಂದಿ ಕಳೆದ 60 ವರ್ಷಗಳಿಂದ ಒತ್ತುವರಿ ಮಾಡಿ­ಕೊಂಡು ಅನುಭವಿಸುತ್ತಿದ್ದ 7.21 ಎಕರೆ ಗುಂಡುತೋಪು ಮತ್ತು ಗೋಮಾಳ ತೆರವುಗೊಳಿಸಲು ಯತ್ನಿಸಿ­ದರು. ಮನವೊಲಿಕೆ ವಿಫಲವಾದಾಗ ತಹಶೀಲ್ದಾರ್‌ಗೆ ದೂರು ನೀಡಿದರು. ಆದರೆ ತಹಶೀಲ್ದಾರ್ ಕೂಡ ಕೈ ಚೆಲ್ಲಿದ್ದರು.

ಆದರೂ ಸತೀಶ್‌ ಪಟ್ಟುಬಿಡದೇ ಲೋಕಾಯುಕ್ತ ಅಧಿಕಾರಿಗಳಿಗೆ ಕಳೆದ ವರ್ಷ ದೂರು ಸಲ್ಲಿಸಿದ್ದರು. ಆದರೂಪ್ರಯೋಜನವಾಗಲಿಲ್ಲ. ಈಚೆಗೆ ತಿಪಟೂರಿಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ಸುಭಾಷ್ ಅಡಿ ಅವರಿಗೂ ದೂರು ನೀಡಿದ್ದರು. ಮನವಿಗೆ ಸ್ಪಂದಿಸಿದ ಉಪ ಲೋಕಾಯುಕ್ತರು ತೆರವು ಕಾರ್ಯಾ­ಚರ­ಣೆಗೆ ಅಗತ್ಯ ಹಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.

ಅದರಂತೆ ಜಿಲ್ಲಾಡಳಿತ ರೂ 1.25 ಲಕ್ಷ ಹಣ ಬಿಡುಗಡೆ ಮಾಡಿತು. ತಹಶೀಲ್ದಾರ್ ನಂಜಪ್ಪ ನೇತೃತ್ವದಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಗೋಮಾಳ ಹಾಗೂ ಗುಂಡುತೋಪನ್ನು ಅನು­ಭವಿಸು­ತ್ತಿದ್ದ ಒತ್ತುವರಿದಾರರೂ ಸತೀಶ್ ಸಮಾಜಮುಖಿ ನಿಲುವಿಗೆ ಮನ­ಸೋತು ಯಾವುದೇ ತಂಟೆ ತಕಾರಿರಲ್ಲದೆ ಒತ್ತುವರಿ ತೆರವಿಗೆ ಸಹಕರಿಸಿದರು.

ಈ ಬಗ್ಗೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ಸತೀಶ್, ‘ನನ್ನ ಸಂಕಲ್ಪ ಈಡೇರಿದ್ದು ಖುಷಿ ತಂದಿದೆ. 2.26 ಎಕರೆ ಗೋಮಾಳದಲ್ಲಿ 15 ಗುಂಟೆ ಸ್ಮಶಾನಕ್ಕೆ ಮೀಸಲಾಗಿತ್ತು. ಒತ್ತುವರಿ ತೆರವುಗೊಳಿಸುತ್ತಿರುವುದರಿಂದ ಗ್ರಾಮಕ್ಕೆ ಅಗತ್ಯವಾಗಿದ್ದ ಸ್ಮಶಾನ ಸಿಗಲಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಮ್ಮ ಸ್ವಂತ ಹಣ ಹಾಗೂ ಊರವರ ಸಹಾಯದಿಂದ ಗ್ರಾಮ­ದಲ್ಲೊಂದು ಕಟ್ಟೆ ನಿರ್ಮಿಸುವುದು ನನ್ನ ಮುಂದಿನ ಗುರಿ ಎಂದು ಸತೀಶ್ ಹೊಸ ಕನಸನ್ನು ಬಿಡಿಸಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT