ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ದಂಪತಿ ಇಂದು ಕೋರ್ಟ್‌ಗೆ ಹಾಜರಿ ಸಂಭವ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಅತ್ತ ದರಿ, ಇತ್ತ ಪುಲಿ~. ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪರಿಸ್ಥಿತಿ!

 

ಮಾಜಿ ಸಿ.ಎಂಗಳ ಮುಖಾಮುಖಿ
ಲೋಕಾಯುಕ್ತ ವಿಶೇಷ ಕೋರ್ಟ್ ಬುಧವಾರ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಸಮ್ಮಿಶ್ರ ಸರ್ಕಾರದಲ್ಲಿ ಜೊತೆಯಾಗಿ ಆಡಳಿತ ನಡೆಸಿ ಕೊನೆಗೆ ರಾಜಕೀಯ ವೈರಿಗಳಾಗಿ, ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿರುವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ. ಎಸ್.ಯಡಿಯೂರಪ್ಪ ಇಬ್ಬರೂ ಕೋರ್ಟ್ ಮುಂದೆ ಹಾಜರಿ ಇರಬೇಕಾಗಿದೆ. ಇವರಿಬ್ಬರ ವಿಚಾರಣೆಯೂ ಬುಧವಾರ ನಡೆಯಲಿರುವ ಕಾರಣ, ಖುದ್ದು ಹಾಜರಿಗೆ ಕೋರ್ಟ್ ಆದೇಶಿಸಿದೆ.

ಒಂದೆಡೆ, ಹೈಕೋರ್ಟ್‌ನಿಂದ ಮಂಗಳವಾರ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲಾರದೆ ಪರದಾಟ, ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ಪಡೆದುಕೊಳ್ಳಲೂ ಆಗದ ಪರಿಸ್ಥಿತಿ- ಇನ್ನೊಂದೆಡೆ ವಿಶೇಷ ಕೋರ್ಟ್ ಮುಂದೆ ಬುಧವಾರ ಹಾಜರಾಗಲೇಬೇಕಾದ ಅನಿವಾರ್ಯತೆ.

ಜಂತಕಲ್ ಗಣಿ ಕಂಪೆನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನೀಡಲು ಶಿಫಾರಸು ಮಾಡಿರುವುದು ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಈ ದಂಪತಿ ಒಟ್ಟಿನಲ್ಲಿ ಈಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಮಾನ್ಯವಾಗದ ವಾದ: ವಿಶೇಷ ಕೋರ್ಟ್‌ನ ವಿಚಾರಣೆಗೆ ತಡೆ ನೀಡುವಂತೆ ಕೋರಿದ್ದ ಅರ್ಜಿಯನ್ನು ಬೆಳಿಗ್ಗೆ 10.30ಕ್ಕೆ ದಂಪತಿ ಪರ ವಕೀಲ ಹಸ್ಮತ್ ಪಾಷಾ ಅವರು  ಹೈಕೋರ್ಟ್ ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ಅವರ ಮುಂದೆ ಇಟ್ಟರು.

ಈ ಅರ್ಜಿಯ ವಿಚಾರಣೆಯು ತುರ್ತಾಗಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ಮಂಗಳವಾರವೇ ಅದರ ವಿಚಾರಣೆ ನಡೆಸುವಂತೆ ವಕೀಲರು ಕೋರಿಕೊಂಡರು. `ನಾಳೆ ಲೋಕಾಯುಕ್ತ ಕೋರ್ಟ್‌ನಲ್ಲಿ ವಿಚಾರಣೆ ಇದೆ. ಇಂದು ಇಲ್ಲಿ ಕೋರ್ಟ್ ಪ್ರಕ್ರಿಯೆಗೆ ತಡೆ ನೀಡದೆ ಹೋದಲ್ಲಿ ನನ್ನ ಕಕ್ಷಿದಾರರಿಗೆ ಬಹಳ ಅನ್ಯಾಯ ಆಗುತ್ತದೆ~ ಎಂದು ಪಾಷಾ ಮನವಿ ಮಾಡಿದರು.

ಅದಕ್ಕೆ ಒಪ್ಪದ ನ್ಯಾಯಮೂರ್ತಿಗಳು, `ಇವತ್ತು ಎಷ್ಟೊಂದು ಅರ್ಜಿಗಳ ವಿಚಾರಣೆ ನಡೆಸಬೇಕಿದೆ. ಅವೆಲ್ಲವುಗಳನ್ನು ಬಿಟ್ಟು ಈ ಅರ್ಜಿಯ ವಿಚಾರಣೆಯನ್ನು ಮೊದಲೆ ನಡೆಸಬೇಕು ಎಂದರೆ ಹೇಗೆ, ಅದು ಸಾಧ್ಯವಿಲ್ಲ. ಹೀಗೆ ಮಾಡಿದರೆ ಅದು ಜನರಲ್ಲಿ ಬೇರೆ ಅಭಿಪ್ರಾಯ ಮೂಡಿಸುತ್ತದೆ. ಕ್ರಮ ಸಂಖ್ಯೆಗೆ ಅನುಗುಣವಾಗಿ ವಿಚಾರಣೆ ನಡೆಸಲಾಗುವುದು~ ಎಂದರು.

ವಿಚಾರಣೆ ಮುಂದಕ್ಕೆ: ಇನ್ನೊಂದೆಡೆ, ನಿರೀಕ್ಷಣಾ ಜಾಮೀನು ಕೋರಿದ್ದ ದಂಪತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರು ಬುಧವಾರಕ್ಕೆ ಮುಂದೂಡಿದರು. `ದಂಪತಿ ವಿರುದ್ಧ ರಾಜಕೀಯ ದುರುದ್ದೇಶದಿಂದ ವಕೀಲ ವಿನೋದ್ ಕುಮಾರ್ ದೂರು ದಾಖಲು ಮಾಡಿದ್ದಾರೆ. ಆರೋಪದಲ್ಲಿ ಯಾವುದೇ ಹುರುಳು ಇಲ್ಲ. ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡದೆ ಹೋದರೆ ವಿಶೇಷ ಕೋರ್ಟ್‌ನಿಂದ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ಯಾವುದೇ ತಪ್ಪು ಎಸಗದಿದ್ದರೂ ದಂಪತಿಯನ್ನು ಬಂಧಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ನಿರೀಕ್ಷಣಾ ಜಾಮೀನು ನೀಡಿ~ ಎಂದು ವಕೀಲರು ಪರಿಪರಿಯಾಗಿ ಕೋರಿದರು. ಆದರೆ ನ್ಯಾಯಮೂರ್ತಿಗಳು ಅದಕ್ಕೆ ಒಪ್ಪದೆ ಬುಧವಾರ ವಿಚಾರಣೆ ನಡೆಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT