ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಯ ಬರಹ

Last Updated 6 ಡಿಸೆಂಬರ್ 2012, 13:59 IST
ಅಕ್ಷರ ಗಾತ್ರ

ಹಣೆಬರಹದ ಬಗ್ಗೆ ನೆಚ್ಚು ಕಳೆದುಕೊಂಡಿರುವ ಹೊಸ ತಲೆಮಾರಿಗೆ `ಎದೆಯ ಬರಹ'ದ ಬಗ್ಗೆ ಒಲವು. ಯುವತಿಯರ ಟಿ-ಷರ್ಟ್ ಮೇಲಿನ ಒಕ್ಕಣೆಗಳಂತೂ ಅವರ ಸಿಟ್ಟುಸೆಡವು, ತುಂಟತನ, ಕೆಣಕುವಿಕೆ, ಪ್ರಬುದ್ಧತೆ, ಸಾಮಾಜಿಕ ಕಾಳಜಿ- ಏನೆಲ್ಲವನ್ನು ಕಾಣಿಸುವ ರಚನೆಗಳಂತಿವೆ.  

ಹೆಣ್ಣುಮಕ್ಕಳ ಎದೆಯನ್ನು ದಿಟ್ಟಿಸಿ ನೋಡುವ ಅಭ್ಯಾಸ ನನಗೆ ಶುರುವಾಗಿದ್ದು ಗೆಳತಿಯೊಬ್ಬಳ ಕೋರಿಕೆಯ ಮೇರೆಗೆ. `ಹುಡುಗಿಯರ ಟಿ-ಷರ್ಟ್‌ಗಳಲ್ಲಿ ಸ್ವಾರಸ್ಯಕರವಾದ ಬರಹಗಳಿರುತ್ತವೆ. ಅಂಥ ಬರಹಗಳು ಕಣ್ಣಿಗೆ ಬಿದ್ದರೆ ಮರೆಯದೆ ನನಗೆ ಹೇಳು' ಎನ್ನುವ ಅವಳ ಮಾತನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಲಿಲ್ಲವಾದರೂ, ಆಮೇಲೆ ಕೆಲವು ಹುಡುಗಿಯರ ಟಿ-ಷರ್ಟ್ ಬರಹಗಳು ಕಣ್ಣಿಗೆ ಬಿದ್ದಾಗಲೆಲ್ಲ ಗೆಳತಿಯ ಮಾತು ನೆನಪಾಗುತ್ತಿತ್ತು. ಕ್ರಮೇಣ ಆ ಬರಹಗಳ ಬಗ್ಗೆ ಕುತೂಹಲ ಹೆಚ್ಚಿತು. ಈಗಲೂ ಟಿ-ಷರ್ಟ್ ಧರಿಸಿದ ಯಾವುದಾದರೂ ಹುಡುಗಿ ಕಣ್ಣಿಗೆ ಬಿದ್ದರೆ, ಅದರ ಮೇಲೆ ಏನಾದರೂ ಬರೆದಿರಬಹುದೇ ಎಂದು ಕಣ್ಣಾಡಿಸುವುದು ಅಭ್ಯಾಸವಾಗಿದೆ.

ಈ `ಎದೆಬರಹ'ಗಳನ್ನು ಓದುವುದು ಸುಲಭವಲ್ಲ. ಎದೆಯ ಏರಿಳಿತದಲ್ಲಿ, ಇಳಿಬಿಟ್ಟ ಕೂದಲ ಹರಹಿನಲ್ಲಿ ಕಲಸಿಹೋದ ಅಕ್ಷರಗಳನ್ನು ಕೂಡಿಸಿಕೊಂಡು (ಕೆಲವೊಮ್ಮೆ ಕಲ್ಪಿಸಿಕೊಂಡು) ಓದುವುದು ಸಲೀಸೂ ಅಲ್ಲ. ಕೆಲವೊಮ್ಮೆ ಟಿ-ಷರ್ಟ್ ಬರಹ ಅಸ್ಪಷ್ಟವಾಗಿ ಕಾಣಿಸಿ, ಅದನ್ನು ಓದಿಯೇ ತೀರಲು ಹುಡುಗಿಯ ಸುತ್ತ ಪ್ರದಕ್ಷಿಣೆ ಹಾಕಿರುವುದೂ ಇದೆ. ಕೆಲವು ಬರಹಗಳಂತೂ ಚಂದ್ರಮತಿಯ ಕೊರಳ ತಾಳಿಯಂತೆ ಅದೃಶ್ಯವಾಗಿಯೇ ಉಳಿಯಲು ತವಕಿಸುತ್ತವೆ. `ಅದೇನು ಬರಹ?' ಎಂದು ಅದನ್ನು ಧರಿಸಿದವರನ್ನೇ ಕೇಳಿಬಿಡಬೇಕು ಅನ್ನಿಸಿದರೂ, ಹಾಗೆ ಕೇಳುವುದೇನು ಸುಲಭದ ಮಾತೇ? `ಕೆಂಪು ಗುಳ್ಳೆನರಿ, ನೀನು ಕೂಡ' (Red Fox, You too) ಎನ್ನುವ ಮಾತನ್ನು ನಾನು ಕೇಳಬಾರದಲ್ಲ?

ಬರಹಗಳಿಗಾಗಿ ಹುಡುಗಿಯರ ಎದೆಯನ್ನು ದಿಟ್ಟಿಸಿ ನೋಡುವುದು ವಿಪರೀತ ಮುಜುಗರದ ಕೆಲಸ. ಅದು ಸಭ್ಯತೆಯೂ ಅಲ್ಲ. ಆದರೂ ನನ್ನ ನೋಟ ಬದಲಾಗಿಲ್ಲ. ಇಂಥ ನೋಟದಲ್ಲಿ ಇರುವುದು ಕುತೂಹಲವೇ ಹೊರತು ಕೊಳಕಲ್ಲ ಎನ್ನುವುದು ನನಗೆ ನಾನೇ ಹೇಳಿಕೊಳ್ಳುವ ಸಮಾಧಾನ. ಟಿ-ಷರ್ಟ್ ಬರಹಗಳಿಗಾಗಿ ಹೆಣ್ಣುಮಕ್ಕಳ ಎದೆಯನ್ನು ದಿಟ್ಟಿಸಿನೋಡದೆ ಬೇರೆ ದಾರಿಯೂ ಇಲ್ಲ. ಹುಡುಗರಾದರೆ ಬೆನ್ನ ಮೇಲೂ ಏನೇನೋ ಲಿಪಿಗಳಿರುತ್ತವೆ. ಹುಡುಗಿಯರ ವಿಷಯ ಹಾಗಲ್ಲ, ಬೆನ್ನ ಹಿಂದಿನ ಮಾತು-ನಗು, ಮುಚ್ಚುಮರೆ ಈಗಿನ ಹುಡುಗಿಯರಿಗೆ ಬೇಕಿದ್ದಂತಿಲ್ಲ- ಅವರದೆಲ್ಲ ಖುಲ್ಲಂಖುಲ್ಲ!

ಮನುಷ್ಯನ ಹಣೆಯ ಮೇಲೆ ಅವನ ಬದುಕಿನ ದಾರಿಯನ್ನು ಸೃಷ್ಟಿಕರ್ತ ಬರೆಯುತ್ತಾನೆ ಎನ್ನುವುದೊಂದು ನಂಬಿಕೆ. ಆದರೆ, ಈ ತಲೆಮಾರಿನ ಹುಡುಗ ಹುಡುಗಿಯರು ಹಣೆಬರಹವನ್ನು ನೆಚ್ಚುವುದು ಕಡಿಮೆ. ಹುಡುಗಿಯರಂತೂ ಶತಶತಮಾನಗಳ ಲಿಖಿತ-ಅಲಿಖಿತ ರೂಢಿಗಳನ್ನೆಲ್ಲ ಬದಲಿಸಲು ಹೊರಟಿರುವ ಸಂಕ್ರಮಣ ಕಾಲವಿದು. ಈ ಸಂಕ್ರಮಣದ ಭಾಗವಾಗಿಯೇ `ಎದೆಯ ಬರಹ'ಗಳನ್ನು ನೋಡಬಹುದು. ಟಿ-ಷರ್ಟ್ ಮೇಲಿನ ಈ ಬರಹಗಳು ಈ ತಲೆಮಾರಿನ ಜಾಣೆಯರ ಜೀವನಶೈಲಿ, ಧೋರಣೆ ಹಾಗೂ ಬದುಕಿನ ಕುರಿತ ನಂಬಿಕೆಗಳಂತೆ ಕಾಣುತ್ತವೆ. ಹುಡುಗರ ಟಿ-ಷರ್ಟ್ ಮೇಲೆಯೂ ಬರಹಗಳಿರುತ್ತವೆ. 

ಆದರೆ ಅವುಗಳು ಅನಾಕರ್ಷಕವಾಗಿಯೂ ಅತಿರೇಕದಿಂದಲೂ ಕೆಲವೊಮ್ಮೆ ಅಶ್ಲೀಲತೆಯಿಂದಲೂ ಕೂಡಿರುತ್ತವೆ. ಪುರುಷಕುಲದ ಮರ್ಯಾದೆಯನ್ನು ಮೋರಿಪಾಲು ಮಾಡುವ ಬರಹಗಳೇ ಹೆಚ್ಚು. ಹಾಗಾಗಿ, ಹುಡುಗರ ಟಿ-ಷರ್ಟುಗಳ ಬಗ್ಗೆ ನನಗೆ ಕುತೂಹಲವಿಲ್ಲ. ಹುಡುಗಿಯರ ಟಿ-ಷರ್ಟ್ ಬರಹಗಳಲ್ಲೂ ತುಂಟತನ ಇರುತ್ತದೆ, ನಿಜ. ಅದು ನೋಡುಗರ ತುಟಿಯಲ್ಲೊಂದು ಕಿರುನಗೆಯನ್ನು, ಮನಸ್ಸಿನಲ್ಲಿ ರಮ್ಯ ಭಾವನೆಯನ್ನು ಉಂಟು ಮಾಡುಬಹುದೇ ಹೊರತು ಯಾರನ್ನು ಘಾಸಿಗೊಳಿಸುವುದಿಲ್ಲ, ಅಗೌರವದಿಂದ ನೋಡುವುದೂ ಇಲ್ಲ.

ಹೆಣ್ಣುಮಕ್ಕಳ ಬಗ್ಗೆ ಪ್ರಮೇಯ ಮಂಡಿಸುವ ಸಮಾಜ ಶಾಸ್ತ್ರಜ್ಞರ ಕಣ್ಣಿಗೆ ಅವರ `ಎದೆಯ ಬರಹ'ಗಳು ಈವರೆಗೆ ಯಾಕೆ ಕಣ್ಣಿಗೆ ಬಿದ್ದಿಲ್ಲವೋ ತಿಳಿಯದು.  ನನಗಂತೂ ಆಧುನಿಕ ಸ್ತ್ರೀವಾದವೊಂದನ್ನು ಮಂಡಿಸುವ ಅಸ್ಪಷ್ಟ ರೂಪಕಗಳಾಗಿ ಆ ರಚನೆಗಳು ಕಾಣಿಸುತ್ತವೆ. ಗುಂಡಿಯಿಲ್ಲದ ಅಂಗಿಯ ಮೇಲಿನ ಬರಹ ತನ್ನಷ್ಟಕ್ಕೆ ಸ್ವತಂತ್ರವೋ ಅಥವಾ ಅದನ್ನು ಧರಿಸಿದ ಹೆಣ್ಣುಮಗಳ ಮನಸ್ಸಿನ ಪ್ರತೀಕ ಅದಾಗಿದೆಯೋ ಎನ್ನುವ ಜಿಜ್ಞಾಸೆಯೂ ಇದೆ.

ಇಂಥ ಜಿಜ್ಞಾಸೆಯಲ್ಲೇ, ನನ್ನ ಕಣ್ಣಿಗೆ ಬಿದ್ದ ಕೆಲವು `ಎದೆಬರಹ'ಗಳ ಮೂಲಕ ಈ ತಲೆಮಾರಿನ ಜಾಣೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿರುವೆ- ಹೆಣ್ಣಿನ ಅಂತರಂಗ ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಪತ್ತೆ ಮಾಡಿದಂತೆ ಎನ್ನುವ ನೆನಪನ್ನು ಜಾಗತವಾಗಿ ಇರಿಸಿಕೊಂಡೇ! ಈ ಹಳೆಯ ಫಿಲಾಸಫಿಯನ್ನು, No machine can read this bar code ಎನ್ನುವ ಹುಡುಗಿಯೊಬ್ಬಳ ಎದೆಯ ಬರಹ ಹೊಸ ಭಾಷೆಯಲ್ಲಿ ಹೇಳುವಂತಿದೆ.

ಒಂದಷ್ಟು `ಎದೆಬರಹ'ಗಳನ್ನು ಕಲೆ ಹಾಕಿಕೊಂಡು ಒಟ್ಟಿಗೆ ನೋಡಿದರೆ- ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಹುಡುಗಿಯರು ಹುಡುಗರಿಗೆ ಎರಡನೆಯವರೇನಲ್ಲ ಎನ್ನುವುದು ಸ್ಪಷ್ಟ. ಆದರೆ, ಮೇಲ್ನೋಟಕ್ಕೆ ಬಿಡುಬೀಸಾಗಿ ಕಾಣಿಸುವ ಈದಿಟ್ಟೆಯರು ಅಂತರಂಗದಲ್ಲಿ ಮಾತ್ರ ಅದೇ ಮಿಡುಕುವ ದೇಸಿ ಕರುಳಿನ ಅಮ್ಮಂದಿರು! ಮೇಲ್ನೋಟದ ಈ ಪಲ್ಲಟವನ್ನು `ದೇಸಿ- ಇನ್‌ಸೈಡ್' ಎಂದು ಬರಹವೊಂದು ಬಣ್ಣಿಸುತ್ತದೆ. ಆಕೆ ತೊಟ್ಟಿರುವ ಬಟ್ಟೆ ಆಧುನಿಕವಾದದ್ದು, ಪಾಶ್ಚಾತ್ಯ ಸಂಸ್ಕೃತಿ ಪ್ರೇರಿತವಾದುದು. ಆ

ದರೆ ಬಟ್ಟೆಯೊಳಗಿನ ಮನಸು! ಆ ಒಳಗಿನದನ್ನೇ ಆಕೆ `ದೇಸಿ' ಎಂದು ದೊಡ್ಡದಾಗಿ ಬರೆದುಕೊಂಡಿದ್ದಾಳೆ. ಆದರೆ, ದೇಸಿ ಅಕ್ಷರದ ಗಾತ್ರಕ್ಕೆ ಹೋಲಿಸಿದರೆ `ಇನ್‌ಸೈಡ್' (ಒಳಮೈ) ಪದ ಸಣ್ಣದಾಗಿದೆ. ಈ ಗಾತ್ರದ ವ್ಯತ್ಯಾಸ ಮತ್ತು `ದೇಸಿ' ಎನ್ನುವ ವಿಶೇಷವನ್ನು ಅಂಗಸೌಷ್ಟವದ ಹಿನ್ನೆಲೆಯಲ್ಲೂ ಅರ್ಥೈಸಿಕೊಳ್ಳಬಹುದೇನೊ? ಹೀಗೆ, ಒಂದು ಮಾತಿನಲ್ಲಿ ಹಲವು ಧ್ವನಿಗಳನ್ನು ಹೊಮ್ಮಿಸುವಲ್ಲಿ ಹೆಣ್ಣುಮಕ್ಕಳಿಗೆ ಗಂಡು ಹೈಕಳು ಸಾಟಿಯಾಗುವುದು ಕಷ್ಟ. No silicone here / 100% All natural ಘೋಷಣೆಯಂತೂ ಅತ್ಯಂತ ಸ್ಪಷ್ಟವಾಗಿಯೇ ಎದೆಗಾರಿಕೆಯ ಬಗ್ಗೆ ಮಾತನಾಡುತ್ತಿದೆ.

ಕೆಲವು `ಎದೆಬರಹ'ಗಳಂತೂ ಗಂಡು ಹೈಕಳ ಕೆಣಕುವುದನ್ನು, ಛೇಡಿಸುವುದನ್ನು ತಮ್ಮ ಉದ್ದೇಶವನ್ನಾಗಿಸಿಕೊಂಡಂತೆ ಕಾಣುತ್ತದೆ. ವೈರುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಹೆಣೆದುಕೊಂಡ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಡಬ್ಬಗಳ ಮೇಲೆ `ಅಪಾಯ! ಎಚ್ಚರಿಕೆ' ಎನ್ನುವ ಘೋಷಣೆಯೂ, ಎಲುಬುಗಳನ್ನು ಬಾಳೆಕಂಬಗಳಂತೆ ಸಿಂಗರಿಸಿಕೊಂಡ ತಲೆಬುರುಡೆಯ ಚಿತ್ರಗಳೂ ಇರುತ್ತವಲ್ಲ, ಅದೇ ಮಾದರಿಯಲ್ಲಿದೆ-  `ಇದೋ ಅಪಾಯ' ಎನ್ನುವ `ಎದೆಬರಹ'ವೊಂದರ ಶಾಸನವಾಕ್ಯ (Here Comes Trouble). ವಿದ್ಯುತ್ ಸ್ಥಾವರಗಳ ಮೇಲೆ  `ನಿಷೇಧಿತ ವಲಯ' ಎನ್ನುವ ಎಚ್ಚರಿಕೆಯೂ ಇರುತ್ತದೆ. ಆ

ಎಚ್ಚರಿಕೆಯ (Prohibited territory) ಮಾತನ್ನು ಹೆಣ್ಣುಮಗಳೊಬ್ಬಳು ಎದೆಯ ಮೇಲೆ ಧರಿಸಬೇಕೆ? ಆಕೆಯನ್ನು ಕೆಣಕುವ ಧೈರ್ಯವಾದರೂ ಯಾರಿಗಿದೆ? ಹೆಣ್ಣು ಗಂಗೆಯ ರೂಪವಾದರೂ, ಭೋರ್ಗರೆವ ನೀರಲ್ಲಿ ವಿದ್ಯುತ್ತಿನ ಸುಳಿಯೂ ಇದೆ ಎನ್ನುವುದೇನು ಗಂಡು ಮಕ್ಕಳಿಗೆ ತಿಳಿಯದೆ? ಈ ತಿಳಿವಳಿಕೆಯನ್ನೇ ಯೋಗರಾಜ ಭಟ್ `ಹೆಣ್ ಮಕ್ಳೇ ಸ್ಟ್ರಾಂಗು ಗುರು' ಎಂದು ಸಿನಿಮಾ ಗೀತೆಯಾಗಿ ಬರೆದಿರುವುದು.

`ಮಹಿಳೆಯರು ಅಮೆಜಾನ್ ಕಾಡುಗಳಿಗೆ ಸೇರಿದವರು, ಅವರ ತಂಟೆಗೆ ಹೋಗಬೇಡಿ' (Women are from Amazon forest, so never try them) ಎನ್ನುವ ಬರಹದ ಹಿಂದೆ ಕಾಣುವುದು ಕಗ್ಗಾಡಿನಂಥ ಸ್ತ್ರೀ ಅಂತರಂಗವೇ ಆಗಿದೆ.
`ತಿಳಿಗೇಡಿತನ ಅಪರಾಧ ಏನಲ್ಲ' ಎನ್ನುವ ಒಂದು ಬರಹ, ನೀನು ಒಳಹೊಕ್ಕು ಆನಂದಿಸಲು ಮುಕ್ತ ಮುಕ್ತ ಎನ್ನುತ್ತದೆ (Stupidity is not a crime. U r free to go Injoy).`ಎಂಜಾಯ್' ಎನ್ನುವುದಿಲ್ಲಿ `ಇಂಜಾಯ್' ಆಗಿದೆ.

ಇನ್ನೊಬ್ಬಳು ಚೆಲುವೆಯ ಎದೆಯ ಮೇಲಿನ ಬರಹ, `ಪ್ಲೇ ಇಟ್ / ಕೂಲ್' ಎಂದು ಆಹ್ವಾನಿಸುತ್ತದೆ- ಆಡು, ಆಟ ಆಡು ಎಂದು ವೀಳ್ಯ ಕೊಡುವಂತೆ. Savor Enjoy, CHEW, Go ahead, Turn me on, Do it yourself `ಎದೆಬರಹ'ಗಳಲ್ಲಿ ಇಣುಕುವುದು ಕೂಡ ಕೆಣಕುವ ಆಹ್ವಾನವೇ.

ಸುಂದರಿಯ ಬಿಳಿ ಅಂಗಿಯ ಮೇಲೆ ಒಂದಷ್ಟು ಚಿತ್ರಗಳಿವೆ. ಏನೀ ಚಿತ್ರಗಳು ಎಂದು ಎವೆಯಿಕ್ಕದೆ ನೋಡಿದರೆ, ಬರೀ ಗಂಡಸರ ಮುಖಗಳು! ಆ ಮುಖಗಳ ಮೇಲೆ `ಫೇಸಸ್' ಎನ್ನುವ ತಲೆಬರಹ. ಇವರೆಲ್ಲ ನನ್ನ ಬದುಕಿನಲ್ಲಿ ಎಡತಾಕಿ ಹೋದವರು ಎನ್ನುವುದು ಆಕೆಯ ಇಂಗಿತ ಇದ್ದೀತೆ? (`ಆರು ಹಸ್ಬೆಂಡ್ಸು, ನೂರು ಬಾಯ್‌ಫ್ರೆಂಡ್ಸು ಕಯ್ಯ ಕೊಟ್ಟು ಹೋದ್ರು' ಎನ್ನುತ್ತಾಳೆ `ಪ್ರೇಮ್ ಅಡ್ಡಾ' ಚಿತ್ರದ ಬಸಂತಿ).

ಇರಬಹುದೇನೊ ಎನ್ನುವ ಧ್ವನಿ, `ನನಗೆ ನೀನೂ ಒಬ್ಬ' (U r the one for me) ಎನ್ನುವ ಮತ್ತೊಂದು ಬರಹದಲ್ಲಿದೆ. ಇದ್ದುದರಲ್ಲಿ ಈ ಹೆಣ್ಣುಮಕ್ಕಳೇ ವಾಸಿ. ಆದರೆ, ಒಬ್ಬ ಪುಣ್ಯಾತಗಿತ್ತಿಯ ಎದೆಯಂಗಳದಲ್ಲಿ ಕಾಲ್ತುಳಿತವೇ (Stampede) ಸಂಭವಿಸಿದೆ. ಮತೊಬ್ಬ ಚೆಲುವೆಗೆ `ಇಲ್ಲ' ಎನ್ನುವುದರಲ್ಲೇ ಸುಖ ಇದ್ದಂತಿದೆ. ಆಕೆಯ ಎದೆಯಿಂದ ಸೊಂಟದವರೆಗೂ `ನೋ, ನೋ' ಎನ್ನುವ ನಕಾರಾತ್ಮಕ ಪದಗಳ ಅನುರಣನ.

ಒಂದಂತೂ ನಿಜ, ಜನುಮಜನುಮಗಳ ಸಿಟ್ಟನ್ನು ಕಾರಿಕೊಳ್ಳುವಂತೆ ಎಷ್ಟು ರೀತಿಯಲ್ಲಿ ಗಂಡುಮಕ್ಕಳನ್ನು ಗೋಳು ಹೊಯ್ದುಕೊಂಡರೂ ಹೆಣ್ಣುಮಕ್ಕಳಿಗೆ ತೃಪ್ತಿಯಿಲ್ಲ. ಹೀಗೆ ನಕಾರಾತ್ಮಕ ಮಾತನಾಡುವ ಚೆಲುವೆಯ ಜೊತೆಗೇ, `ಒಂಟಿಯಾಗಲು ನಿರ್ಧರಿಸುವ ಮುನ್ನ ಇಲ್ಲಿ ನೋಡು' ಎನ್ನುವ ಉದಾರ ಹೃದಯಿಯೂ ಇದ್ದಾಳೆ.

`ಪರವಾಗಿಲ್ಲ, ಪ್ರತಿಯೊಬ್ಬರೂ ರಮ್ಯ-ರೋಚಕವಾಗಿ ಇರುವುದಿಲ್ಲ' (Its Ok, not everyone can be Awesome) ಎನ್ನುವ ಮಾತು ತೊಟ್ಟಿಲನ್ನು ತೂಗುತ್ತಲೇ ಚಿವುಟುವ ವಿಡಂಬಿನಿಯರಿಗೆ ಉದಾಹರಣೆ. ಇಂಥವರ ನಡುವೆ ಹುಡುಗರಿಂದ ಹುಳು- ಪ್ರೇಮದ ಹುಳು ಬಿಡಿಸಿಕೊಳ್ಳುವವರೂ (he bugs me) ಇದ್ದಾರೆ.

`ನೂರಕ್ಕೆ ನೂರು ಪ್ರದರ್ಶನ ಪ್ರಿಯತೆ'ಯ (100% show off) ಈ ಕಾಲದಲ್ಲಿ ನಮ್ಮ ಬಗ್ಗೆ ನಾವೇ ಒಳ್ಳೆಯ ಮಾತುಗಳನ್ನು ಹೇಳಿಕೊಳ್ಳುವುದು ಬಹುಮಂದಿಗೆ ಅಸಹಜ ಎನ್ನಿಸುವುದಿಲ್ಲ. (`ಮಸ್ಟ್ ಶೌಟ್' ಎನ್ನುತ್ತದೊಂದು ಬರಹ). ಹಾಗೆಂದು, ಆ ಪ್ರಶಂಸೆಯನ್ನು ಎದೆಯ ಮೇಲೆ ಬರೆದುಕೊಂಡು ಓಡಾಡಿದರೆ ಹೇಗೆ? `ಸ್ಪೈಸಿ, ಸೆನ್ಸೇಷನ್' ಎನ್ನುವ ಬರಹವನ್ನು ಹೇಗೆ ವಿಶ್ಲೇಷಿಸುವುದು- `ಕಮ್ಮಗೆ ಬಾಯಲ್ಲಿ ನೀರೂರಿಸುವ, ಉದ್ದೀಪಕ' ಎಂದೇ? `ನಾನು ಯಾವುದಕ್ಕೂ ಅರ್ಹಳಲ್ಲ; ಉತ್ಕೃಷ್ಟವಾದುದಕ್ಕೆ ಹೊರತುಪಡಿಸಿ' ಎನ್ನುವ ಮಾತಿನಲ್ಲಿ ಜಾಣತನವಿದೆ, ಹಮ್ಮೂ ಇದೆ.

`ಪ್ರೀತಿಪಾತ್ರ, ಅವಿಸ್ಮರಣೀಯ, ಸಪೂರ ಸುಂದರಿ, ಕ್ರಾಂತಿಕಾರಿ ತರುಣಿ' ಎಂದು ತನ್ನ ತಾನು ಬಣ್ಣಿಸಿಕೊಳ್ಳಲು ಹಿಂಜರಿಯದವರಿದ್ದಾರೆ. ಮತ್ತೊಬ್ಬಳು ಹುಡುಗಿಯ ಎದೆಯ ಮೇಲೆ `ಟೂ ಕ್ಯೂಟ್' (2 Cute) ಎನ್ನುವ ಮಾತಿದೆ. ಕ್ಯೂಟ್ ಎನ್ನುವುದನ್ನು ಆಕರ್ಷಕ ಎನ್ನಬಹುದು. ಅದರ ಜೊತೆಗಿರುವ `2'ನ್ನು ಸಂಖ್ಯೆಯ ರೀತಿಯಲ್ಲೂ, ಅತ್ಯಂತ ಎನ್ನುವ ಅರ್ಥದಲ್ಲೂ ಓದಿಕೊಳ್ಳಬಹುದು.

`ಹೇಗಾದರೂ ಓದಿಕೊ, ನಿನ್ನ ಕರ್ಮ' ಎನ್ನುವಂತೆ ಆಕೆ ಮುಂದೆ ಹೋಗುತ್ತಾಳೆ. ಎರಡರ ಸಹವಾಸವೇ ಬೇಡ ಎಂದು ನೋಟ ಬದಲಿಸಿದರೆ, `ಪ್ರೊಡಕ್ಟ್ ಆಫ್ ನೈಂಟೀನ್' ಎನ್ನುವ ಬರಹದ ದರ್ಶನ. ಹದಿಹರಯದ ಬಣ್ಣನೆಗೆ ಹದಿನಾರೂ ಹದಿನೆಂಟೂ ಬಳಸುವುದಿದೆ. ಈಕೆ ತನ್ನ ಪ್ರಾಯವನ್ನು ಒಂದು ವರ್ಷ ಹೆಚ್ಚಿಸಿಕೊಂಡಿದ್ದಾಳೆ. ಬಹುಶಃ ಆಕೆಯದು (ಹತ್ತೊಂಬತ್ತರ ಫಸಲು) ಕುದಿಹರಯ ಇರಬೇಕು. `ಕೆಲಸದ ಸಂದರ್ಭದಲ್ಲಿ ನಾನು ನಂ.1' (I give No.1 at work)  ಎನ್ನುವುದು ಆತ್ಮವಿಶ್ವಾಸದ ಮಾತೇ ಸರಿ! ಈ ಸಂಖ್ಯಾಸಂದರ್ಭದಲ್ಲೆ ಗಮನಿಸಬಹುದಾದ ಮತ್ತೊಂದು ಬರಹ- `U must be 21, To enjoy this ride’.

ಇಪ್ಪತ್ತೊಂದರ ವಯಸ್ಸನ್ನು ನೆನಪಿಸುವ ನೆಪದಲ್ಲಿ ಗಂಡುಮಕ್ಕಳ ಪ್ರಾಯದ ಕಾವಿನ ಬಗ್ಗೆ ಹೀಗೆ ಅಣಕವಾಡುವುದು ಸರಿಯೇ?
ಕೆಲವರಂತೂ ಸಿಕ್ಕಾಪಟ್ಟೆ ಲೆಕ್ಕಾಚಾರದ ಹೆಣ್ಣುಮಕ್ಕಳು. ಇವರ `ಎದೆಬರಹ'ಗಳು ಹಣಕ್ಕೂ ಪ್ರೇಮಕ್ಕೂ, ಹಣಕ್ಕೂ ಜೇನಿಗೂ, ಹಣಕ್ಕೂ ಅವಕಾಶಕ್ಕೂ (For Love and Money / No money No honey / No money, No chance) ಸಂಬಂಧ ಕಲ್ಪಿಸುತ್ತದೆ. ಇಲ್ಲಿನ ಪ್ರೇಮ, ಜೇನು ಮತ್ತು ಅವಕಾಶಗಳಿಗೆ ಭಾವಕ್ಕೆ ತಕ್ಕಂತೆ ಅರ್ಥ ಕಲ್ಪಿಸಿಕೊಳ್ಳಬಹುದು. ಈ ಮಾತುಗಳ ಹಿಂದಿನ ಕೀಟಲೆಯೂ ಧ್ವನಿಪೂರ್ಣ.

ಹೆಣ್ಣುಮಕ್ಕಳ ಬುದ್ಧಿವಂತಿಕೆ, ಬದುಕಿನ ಕುರಿತ ಧೋರಣೆಗಳ ರೂಪದಲ್ಲೂ ಕೆಲವು `ಎದೆಬರಹ'ಗಳನ್ನು ಓದಿಕೊಳ್ಳಬಹುದು. ಇನ್ನು ಕೆಲವು ಬರಹಗಳು ಮಾರ್ಮಿಕ ಹೇಳಿಕೆಗಳಾಗಿ ಗಮನಸೆಳೆಯುತ್ತವೆ. `ಡೋಂಟ್ ವರಿ, ಬಿ ಹ್ಯಾಪಿ' ಎನ್ನುವುದು ಹೆಣ್ಣುಮಗಳೊಬ್ಬಳು ಸಹೃದಯರಿಗೆ ಸಾರುವ ಸಾಂತ್ವನ. `ಬದುಕು ಕಂಪ್ಯೂಟರ್ ಕೀಲಿಮಣೆ ಇದ್ದಂತೆ, ಎಸ್ಕೇಪ್ ಒತ್ತುಗುಂಡಿಯ ಮೇಲೆ ಬೆರಳೊಂದು ಯಾವಾಗಲೂ ಇರಲಿ'  (On the Keyboard of Life, Always keep the one finger on escape) ಎನ್ನುವುದು ಸೈಬರ್ ಯುಗದ ತತ್ವಜ್ಞಾನ.

ಗುಂಪನ್ನು ಹಿಂಬಾಲಿಸಬೇಡ / ಗುಂಪು ನಿನ್ನನ್ನು ಹಿಂಬಾಲಿಸಲಿ' ಎನ್ನುವುದು ಉಪದೇಶಾಮೃತ. `ಪ್ರತಿಭಾವಂತಳಾದ್ದರಿಂದ ನನ್ನನ್ನು ದ್ವೇಷಿಸಬೇಡ. ಪ್ರತಿಭಾವಂತೆ ಎನ್ನುವುದು ನನಗೆ ತಿಳಿದಿರುವ ಕಾರಣಕ್ಕಾಗಿ ದ್ವೇಷಿಸು', `ನಾನೊಬ್ಬಳು ಕೊಳ್ಳುಬಾಕಿ. ಆದರೆ ಬದುಕಿಗೆ ಅಗತ್ಯವಾದುದನ್ನು ಮಾತ್ರ ಕೊಳ್ಳುವೆ' ಎನ್ನುವುದೆಲ್ಲ ಮಾರ್ಮಿಕ ನುಡಿಗಳು. `ವಿಷಾದ ಎಂದಿಗೂ ಇಲ್ಲ' (ನೆವರ್ ರಿಗ್ರೆಟ್) ಎನ್ನುವುದು ಸ್ಪಷ್ಟ ಬದುಕಿನ ರೀತಿ. `ನಾನು ಅಪ್ಪನ ಮಗಳು' ಎಂದೊಬ್ಬಳು ಹೆಮ್ಮೆಯಿಂದ ಹೇಳಿಕೊಂಡರೆ, ಬೇಕೆಂದಾಗಲೆಲ್ಲ ಹಣ ಉದುರಿಸುವ ಎಟಿಎಂ ಯಂತ್ರವನ್ನು ಅಪ್ಪನಲ್ಲಿ ಕಾಣುವ (My Dad is an ATM)ಮಗಳೂ ಇದ್ದಾಳೆ.

`ಎದೆಬರಹ'ಗಳಲ್ಲಿ ಸಾಮಾಜಿಕ ಕಾಳಜಿಗೂ, ಚಿಂತನೆಗೂ ಅವಕಾಶವಿದೆ. `ರಿಯಲಿ ಥಿಂಕಿಂಗ್' ಎನ್ನುತ್ತಾಳೆ ಓರ್ವ ಯುವತಿ. ಇನ್ನೊಬ್ಬ ಹೆಣ್ಣುಮಗಳು `ಭೂಮಿ ಉಳಿಸಿ' ಎನ್ನುವ ಸಂದೇಶವನ್ನು ನಡೆದುಹೋದಲ್ಲೆಲ್ಲ ಬಿತ್ತರಿಸುತ್ತಿದ್ದಾಳೆ. ಮತ್ತೊಬ್ಬ ಹುಡುಗಿಯ ಎದೆಯ ಹರಹಿನಲ್ಲಿ ಕುಂಡದ ಗಿಡವೊಂದಿದೆ.

ಆ ಗಿಡಕ್ಕೆ ಒಂದೇ ಎಲೆ! ಪ್ರತಿಯೊಬ್ಬರೂ ಒಂದಾದರೂ ಗಿಡ ನೆಡಿ ಎನ್ನುವುದು ಇದರ ಸಂದೇಶ ಇರಬಹುದೇ? ಎದೆಯೊಳಗೂ ಗಿಡದ ಹಸಿರು ಇರಬೇಕಾದುದು ಇಂದಿನ ತುರ್ತು ಎನ್ನುವ ಅರ್ಥವೂ ಇದೆಯೇ? ಒಂದು ಹೆಣ್ಣಿಗೊಂದು ಮಗು, ಒಂದೇ ಮಗು, ಎನ್ನುವುದನ್ನು ಒಂಟಿ ಎಲೆ ಸೂಚಿಸುತ್ತಿದೆಯೇ? ಅರ್ಥ ಏನೇ ಇದ್ದರೂ ಆ ಗಿಡದ ಚಿತ್ರ ತಾಯ್ತನದ ರೂಪಕವೇ. ಎದೆಯ ತುಂಬ ಹೂಗಳನ್ನು ಮುಡಿದಿರುವ ತುಂಡುಕೂದಲ ಚೆಲುವೆ Serene ಎಂದು ಪರಿಶುದ್ಧ ಸೌಂದರ್ಯವನ್ನು ಬಿಂಬಿಸುವಂತಿದ್ದಾಳೆ.

Expedition ಘೋಷಣೆ ಬದುಕಿನ ನಿರ್ದಿಷ್ಟ ಉದ್ದೇಶವನ್ನೋ ಸಂಘರ್ಷದ ಪಯಣವನ್ನೋ ಸೂಚಿಸುವಂತಿದೆ. `ಬೆಳಗಿನ ಹೊತ್ತು ಜೀವನ ತುಂಬಾ ಸಂಕೀರ್ಣ' ಎನ್ನುವ ಹೆಣ್ಣೊಬ್ಬಳ ಎದೆಯ ಮಾತಿನಲ್ಲಂತೂ ದುಡಿಯುವ ಮಹಿಳೆಯ ತಲ್ಲಣಗಳು ಕಾಣಿಸಿ ಮನಸ್ಸಿಗೆ ಪಿಚ್ಚೆನ್ನಿಸಿತು. ಮಕ್ಕಳು, ಅವರ ಶಾಲೆ, ಮನೆಮಂದಿಗೆ ತಿಂಡಿ ಊಟ, ಇದೆಲ್ಲ ಕೆಲಸಬೊಗಸೆಯ ನಡುವೆ ಕಚೇರಿಯ ಸೈರನ್ನು- ಬದುಕು ಸಂಕೀರ್ಣ ಅನ್ನಿಸಲು ಇನ್ನೇನು ಬೇಕು. ನನ್ನ ಅಮ್ಮ, ಅಕ್ಕ, ಗೆಳತಿ, ಸಂಗಾತಿಯ ಅನುದಿನದ ತಲ್ಲಣಗಳನ್ನು ಈ ತರುಣಿ ಎಷ್ಟು ಸುಲಭವಾಗಿ, ಬೀಜರೂಪದಲ್ಲಿ ಹಿಡಿದಿದ್ದಾಳೆ, ಅದನ್ನೇ ಎದೆಯ ಮೇಲೆ ಬರೆದುಕೊಂಡಿದ್ದಾಳೆ ಅನ್ನಿಸಿತು. ವಿಶಾಲಾರ್ಥದಲ್ಲಿ ಇದು ಹೆಣ್ಣನ್ನು ಮೀರಿ, ಮನುಜಕುಲದ ತಲ್ಲಣವೂ ಇರಬಹುದೇನೊ?

`ಸಂತೃಪ್ತ ವಿವಾಹಿತೆ' ಎನ್ನುವ `ಎದೆಬರಹ' ಚೆಲುವೆಯೊಬ್ಬಳು ಪಡೆದುಕೊಂಡ ಮುಂಗಡ ಜಾಮೀನೇ ಸರಿ. `ಬರೀ ಕಾದಾಟ, ದಿಂಬುಗಳು ಹಾಜರಿರಲಿಕ್ಕೆ ಹೇಳಿ' (Only fight. Ask the pillows are present)  ಎನ್ನುವ ಬರಹ ಸರಸ ವಿರಸದೊಳಗೋ ವಿರಸ ಸರಸದೊಳಗೋ ಎನ್ನುವಂತಿದೆ.

`ಹಗಲಿನಲ್ಲಿ ದೇವತೆ ಇರುಳಿನಲ್ಲಿ ದೆವ್ವ' (Angel by Day / Devil by night) `ಎದೆಬರಹ', ಸಂಗಾತಿಯ ಪಾಲಿಗೆ ಆ ಹೆಣ್ಣುಮಗಳು `ಮನೆಗೆ ಮಾರಿ ಪರರಿಗೆ ಉಪಕಾರಿ' ಎನ್ನುವುದನ್ನು ಹೇಳುತ್ತಿರಬಹುದು. `ನಾನು ಮೂರ್ಖನೊಂದಿಗೆ ಇರುವೆ' (I’m with stupid) ಎನ್ನುವುದು ಇನ್ನೊಂದು `ಎದೆಬರಹ'. ಅದೃಷ್ಟವಶಾತ್ ಆಕೆಯ ಜೊತೆಗೆ ಯಾವ ಗಂಡುಪ್ರಾಣಿಯೂ ಇರಲಿಲ್ಲ!

ಬರಹಗಳುಳ್ಳ ಟಿ-ಷರ್ಟ್ ಧರಿಸಲಿಕ್ಕೆ ನಿರ್ದಿಷ್ಟ ಉದ್ದೇಶವೇನಾದರೂ ಇದೆಯೇ ಎನ್ನುವುದಕ್ಕೆ ಉತ್ತರ ಎನ್ನುವಂತೆ- `ರಸಿಕ ಅಂಗಿಗಳನ್ನು ತೊಡುವ ಮೂಲಕ ನನ್ನ ವ್ಯಕ್ತಿತ್ವವನ್ನು ಪ್ರಶಂಸಿಸಿಕೊಳ್ಳುವೆ' (I Supplement my personality with witty shirts) ಎಂದು ತರುಣಿಯೊಬ್ಬಳು ಬರೆದುಕೊಂಡಿದ್ದಾಳೆ.

ಅಂದಹಾಗೆ, `ಎದೆಬರಹ'ಗಳ ಈ ನೋಟ ಎಂದಿಗೂ ಮುಗಿಯದ ಓದು. ಹೀಗೆ, ಮುಗಿಯದ ಓದಿನಲ್ಲಿ ಮುಳುಗಿರುವವನನ್ನು ಎಚ್ಚರಿಸಿದ್ದು `ಕಂಪ್ಯೂಟರ್ ನನಗೆ ಬಿಟ್ಟುಕೊಡು' ಎನ್ನುವ ಮಗಳ ಎಚ್ಚರಿಕೆ. ಅವಳನ್ನು ದುರುಗುಟ್ಟಿ ನೋಡಿದರೆ, ಅವಳ ಟಿ-ಷರ್ಟ್ ಮೇಲೂ ಒಂದು ಬರಹವಿದೆ- `ಈಗ ಸಂತೋಷಕೂಟ, ಆಮೇಲೆ ನಿದ್ದೆ' Party­ Now, Sleep Later).

ಈ ಬರಹ ನನ್ನ ಕಣ್ತಪ್ಪಿಸಿದ್ದು ಹೇಗೆ ಎಂದು ಯೋಚಿಸುತ್ತಿದ್ದವನನ್ನು ಮತ್ತೆ ಮಗಳೇ ತಿವಿದಳು- `ಅಪ್ಪಾ, ಯಾಕೆ ಹಾಗೆ ನೋಡ್ತಿದ್ದಿ?'. ಮಗಳ ಮಾತು ಕೇಳಿ ಮಂಕನಂತೆ ಪಿಳಿಪಿಳಿ ಕಣ್ಣುಬಿಟ್ಟೆ. `ಈಗ ಕಣ್ಣು ಮಿಟುಕಿಸು' (U can blink now) ಎನ್ನುವ `ಎದೆಬರಹ' ನೆನಪಿಸಿಕೊಂಡವನಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT