ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐನಿಂದ ದೇಶದ ಆರ್ಥಿಕತೆ ಹಾಳು

ಆರ್ಥಿಕ ತಜ್ಞ ಡಾ.ವೆಂಕಟೇಶ್ ಆತ್ರೇಯ ಆತಂಕ
Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ಬೆಂಗಳೂರು: `ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ದೇಶದ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಲಿದೆ' ಎಂದು ಆರ್ಥಿಕ ತಜ್ಞ ಡಾ.ವೆಂಕಟೇಶ್ ಆತ್ರೇಯ ಆತಂಕ ವ್ಯಕ್ತಪಡಿಸಿದರು.

ವಿಮಾ ಕಾರ್ಪೊರೇಷನ್ ನೌಕರರ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ `ಹಣಕಾಸು ವಲಯದ ಉದಾರೀಕರಣ ಮತ್ತು ಭಾರತದ ಆರ್ಥಿಕತೆಯ ಮೇಲೆ ಅದರ ಪರಿಣಾಮ' ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಎಫ್‌ಡಿಐನಿಂದ ಚಿಲ್ಲರೆ ವ್ಯಾಪಾರಿ ಕ್ಷೇತ್ರದ ಮೇಲೆ ಮಾತ್ರವೇ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ ದೇಶದ ಇಡೀ ಆರ್ಥಿಕ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳಲಿದೆ. ಬಹುರಾಷ್ಟ್ರೀಯ ಕಂಪೆನಿಗಳು ಯಾವುದೇ ನಿರ್ಬಂಧವಿಲ್ಲದೇ ದೇಶದಲ್ಲಿ ತಮ್ಮ ವಸಾಹತು ಆರಂಭಿಸಲು ಎಫ್‌ಡಿಐ ನಾಂದಿ ಆಡಲಿದೆ. ಇದು ಮುಂದೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಅಧೋಗತಿಗೆ ತಳ್ಳಲಿದೆ' ಎಂದರು.

`ಸಮಾಜವಾದಿ ಎಂದು ಹೇಳಿಕೊಳ್ಳುವ ಪಕ್ಷಗಳು ಸಂಸತ್ತಿನಲ್ಲಿದ್ದರೂ ಎಫ್‌ಡಿಐ ಮಸೂದೆ ಅಂಗೀಕಾರವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಎಫ್‌ಡಿಐಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ, ಈ ಬಾರಿಯ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗಿರುವುದನ್ನು ಗಮನಿಸಿದರೆ ಎಡ ಪಕ್ಷಗಳು ನಿರ್ವಹಿಸುತ್ತಿರುವ ಜವಾಬ್ದಾರಿ ಏಂಥದ್ದು ಎಂಬುದು ಅರಿವಾಗುತ್ತದೆ' ಎಂದು ಹೇಳಿದರು.

`ಕಳೆದ ಇಪ್ಪತ್ತು ವರ್ಷಗಳಲ್ಲಿ ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಂತ ಹಂತವಾಗಿ ದುರ್ಬಲಗೊಳಿಸಲಾಗುತ್ತಿದೆ. 1991ರ ನಂತರವಂತೂ ಅಮೆರಿಕ ಮತ್ತು ಇಂಗ್ಲೆಂಡ್‌ಗಳು ತಿರಸ್ಕರಿಸಿದ ಆರ್ಥಿಕ ನೀತಿಯನ್ನು ನಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳುಮಾಡಿದ ಕೀರ್ತಿ ಯುಪಿಎ ಸರ್ಕಾರಕ್ಕೆ ಸಲ್ಲುತ್ತದೆ' ಎಂದು ಅವರು ವ್ಯಂಗ್ಯವಾಡಿದರು.

`ಬಂಡವಾಳಶಾಹಿ ರಾಷ್ಟ್ರಗಳು ಜಗತ್ತಿನ ಯಾವುದೇ ಭಾಗದಲ್ಲಿ ತಮ್ಮ ಕೆಲಸವನ್ನು ಸಾಧಿಸಿಕೊಳ್ಳಬಲ್ಲವು ಎಂಬುದಕ್ಕೆ ಸಂಸತ್ತಿನಲ್ಲಿ ಎಫ್‌ಡಿಐ ಅಂಗೀಕಾರವಾಗಿದ್ದೇ ಉತ್ತಮ ಉದಾಹರಣೆ. ಯಾವುದೇ ನೆಲದಲ್ಲಿ ಬಂಡವಾಳ ಹೂಡಿ ಲಾಭ ಮಾಡಿಕೊಳ್ಳುವುದಷ್ಟೇ ಈ ರಾಷ್ಟ್ರಗಳ ಉದ್ದೇಶ. ಇಂತಹ ಹೂಡಿಕೆಯಿಂದ ಭಾರತಕ್ಕೆ ಯಾವುದೇ ಪ್ರಯೋಜನವಿಲ್ಲ. ಆದರೆ, ಎಫ್‌ಡಿಐನಿಂದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆಯ ಕಾರಣವನ್ನು ಸರ್ಕಾರ ನೀಡುತ್ತಿದೆ. ಇದೊಂದು ಕೆಟ್ಟ ಬೆಳವಣಿಗೆ' ಎಂದರು.

`ಭಾರತದ ಕಂಪೆನಿಗಳು ಬಂಡವಾಳಶಾಹಿ ರಾಷ್ಟ್ರಗಳಲ್ಲಿ ತಮ್ಮ ವಸಾಹತು ಸ್ಥಾಪಿಸುವುದು ಕಷ್ಟ ಸಾಧ್ಯ. ಭಾರತದ ರೂಪಾಯಿ ಮೌಲ್ಯವು ಡಾಲರ್ ಎದುರು ಕುಗ್ಗುವುದೇ ಇದಕ್ಕೆ ಮುಖ್ಯ ಕಾರಣ. ಪರಿಸ್ಥಿತಿ ಹೀಗಿದ್ದರೂ ನಮ್ಮ ದೇಶದ ಆರ್ಥಿಕ ಸಚಿವರು ವಿದೇಶಿ ಬಂಡವಾಳದ ಮೇಲೆಯೇ ಹೆಚ್ಚು ಆಸ್ತಕರಾಗಿದ್ದಾರೆ. ಪ್ರತಿ ಬಜೆಟ್ ಭಾಷಣದಲ್ಲೂ ವಿದೇಶಿ ಬಂಡವಾಳವನ್ನು ಸ್ವಾಗತಿಸುವ ಮಾತು ಇದ್ದೇ ಇರುತ್ತದೆ' ಎಂದು ಅವರು ವಿಷಾದಿಸಿದರು.

`ಜಾಹೀರಾತು ಲೋಕ ಇಂದು ಮಾಧ್ಯಮಗಳನ್ನು ಆಳುತ್ತಿದೆ. ಸುದ್ದಿಗಿಂತ ಹೆಚ್ಚು ಪ್ರಾಶಸ್ತ್ಯವನ್ನು ಮಾಧ್ಯಮಗಳು ಜಾಹೀರಾತಿಗೆ ನೀಡುತ್ತಿವೆ. ಇಂದು ಇಡೀ ಮಾರುಕಟ್ಟೆ ವ್ಯವಸ್ಥೆಯನ್ನು ಜಾಹೀರಾತು ನಿಯಂತ್ರಿಸುತ್ತಿದೆ. ಜಾಗತೀಕರಣ ತಂದ ದೊಡ್ಡ ಆಪತ್ತು ಇದು' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT