ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಚಿರತೆ ಸಾವು; ವಿಷಪ್ರಾಶನ ಶಂಕೆ

ವಿಷ ಸಿಂಪಡಿಸಿದ್ದ ನಾಯಿ ದೇಹ ತಿಂದು ದುರ್ಘಟನೆ
Last Updated 12 ಜುಲೈ 2016, 19:30 IST
ಅಕ್ಷರ ಗಾತ್ರ

ನಂಜನಗೂಡು:  ಅಪರೂಪದ ಬ್ಲ್ಯಾಕ್‌ ಪ್ಯಾಂಥರ್‌ ಸೇರಿದಂತೆ ಎರಡು ಚಿರತೆಗಳು ತಾಲ್ಲೂಕಿನ ಓಂಕಾರ ಅರಣ್ಯ ವ್ಯಾಪ್ತಿಯ ಹೊಲವೊಂದರಲ್ಲಿ ಸಾವನ್ನಪ್ಪಿವೆ. ತಾಲ್ಲೂಕಿನ ಹಂಚಿಪುರ ಗ್ರಾಮದ ಶಿವನಂಜಪ್ಪ ಎಂಬುವರ ಹತ್ತಿ ಹೊಲದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ವಿಷ ಪ್ರಾಶನ ಶಂಕೆ ವ್ಯಕ್ತವಾಗಿದೆ. ನಾಯಿ ದೇಹಕ್ಕೆ ವಿಷ ಸಿಂಪಡಣೆ ಮಾಡಿದ್ದು, ಅದನ್ನು ತಿಂದು ಸಾವನ್ನಪ್ಪಿರಬಹುದು ಎನ್ನಲಾಗಿದೆ.

‘ನಾಯಿ ದೇಹ ತಿಂದ ಚಿರತೆಗಳು ಅಸ್ವಸ್ಥಗೊಂಡಿದ್ದವು. ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಬರುವಷ್ಟರಲ್ಲಿ ಗಂಡು ಬ್ಲ್ಯಾಕ್‌ ಪ್ಯಾಂಥರ್‌ ಸಾವನ್ನಪ್ಪಿತ್ತು. ಒದ್ದಾಡುತ್ತಿದ್ದ ಹೆಣ್ಣು ಚಿರತೆಯನ್ನು ಚಿಕಿತ್ಸೆಗಾಗಿ ಕೊಂಡೊಯ್ಯುವಾಗ ಅಸುನೀಗಿತು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ತಿಳಿಸಿದರು.

‘ಚಿರತೆಗಳನ್ನು ಕೊಲ್ಲಲು ಕಿಡಿಗೇಡಿಗಳು ನಡೆಸಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ತನಿಖೆ ನಡೆಸಿ ದುಷ್ಕರ್ಮಿಗಳ ಮೇಲೆ ಕ್ರಮ ಜರುಗಿಸಲಾಗುವುದು’ ಎಂದರು.

‘ರಾಣಾ’ ಎಂಬ ಶ್ವಾನವನ್ನು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಕರೆತಂದಿದ್ದರು. ಜಮೀನಿನಲ್ಲಿ ಸುತ್ತಾಡಿದ ಆ ಶ್ವಾನ ವಿಷದ ಖಾಲಿ ಸೀಸೆಯೊಂದನ್ನು ಕಚ್ಚಿತಂದಿತು. ಅಲ್ಲದೆ, ಗ್ರಾಮದ ಟೈಲರ್ ಕುಮಾರ್ ಎಂಬುವರ ಮನೆಗೆ ನುಗ್ಗಿತು. ಇದರಿಂದ ಗಲಿಬಿಲಿಗೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದರು.

‘ಕಾಡು ಪ್ರಾಣಿಗಳು ಸತ್ತರೆ ತಕ್ಷಣವೇ ಬರುತ್ತೀರಿ. ಆದರೆ, ಕಾಡು ಪ್ರಾಣಿಗಳ ದಾಳಿಯಿಂದ ರೈತರು ಹಾಗೂ ಜಾನುವಾರುಗಳು ಮೃತಪಟ್ಟಾಗ ನಿರ್ಲಕ್ಷ್ಯ ಧೋರಣೆ ತೋರುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ‘ಚಿರತೆಗಳ ಮರಣೋತ್ತರ ಪರೀಕ್ಷೆಯನ್ನು ವನ್ಯಜೀವಿ ವೈದ್ಯ ನಾಗರಾಜ್ ನಡೆಸಿದ್ದಾರೆ. ಸೇವಿಸಿದ ಆಹಾರದ ಮಾದರಿ ಮತ್ತು ಚಿರತೆಗಳ ದೇಹದ ಯಕೃತ್‌ ಹಾಗೂ ಮೂತ್ರಕೋಶ ಮಾದರಿ ಸಂಗ್ರಹಿಸಿದ್ದು, ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು’ ಎಂದರು.

‘ಕೆಲದಿನಗಳ ಹಿಂದೆ ಸಮೀಪದ ಕೊತ್ತನಹಳ್ಳಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಬೋನು ಇಟ್ಟು ಬಂಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಹೀಗಾಗಿ, ಬೋನು ತಂದು ಇರಿಸಿದ್ದೆವು. ಈಗ ಈ ದುರ್ಘಟನೆ ಸಂಭವಿಸಿದೆ. ವನ್ಯಜೀವಿಗಳ ಮೇಲೆ ಜನರಿಗೆ ಕರುಣೆಯೇ ಇಲ್ಲ’ ಎಂದು ಹೇಳಿದರು. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT