ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಪ್ರಕರಣ: ಇಬ್ಬರ ಆತ್ಮಹತ್ಯೆ

Last Updated 1 ಜನವರಿ 2012, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೆಗ್ಗನಹಳ್ಳಿ ಮತ್ತು ಕುಮಾರಸ್ವಾಮಿಲೇಔಟ್‌ನಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಸಮೀಪದ ಹೆಗ್ಗನಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಹೆಗ್ಗನಹಳ್ಳಿ ಎರಡನೇ ಅಡ್ಡರಸ್ತೆ ನಿವಾಸಿ ಮಧುಸೂದನ್ ಎಂಬುವರ ಪತ್ನಿ ಕವಿತಾ (27) ಆತ್ಮಹತ್ಯೆ ಮಾಡಿಕೊಂಡವರು. ಆಂಧ್ರಪ್ರದೇಶ ಮೂಲದ ಮಧುಸೂದನ್ ಮತ್ತು ಕವಿತಾ ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕವಿತಾ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಆಂಧ್ರಪ್ರದೇಶದಲ್ಲಿರುವ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಅವರು ನಗರಕ್ಕೆ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ: ಕುಮಾರಸ್ವಾಮಿಲೇಔಟ್ 17ನೇ ಅಡ್ಡರಸ್ತೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ರೀತು (22) ಎಂಬುವರು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಿಯಕರ ಚಾರು ಎಂಬುವರ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಕೆಲಸ ಹುಡುಕುತ್ತಿದ್ದರು. ಅಸ್ಸಾಂ ಮೂಲದ ಚಾರು ಖಾಸಗಿ ಕಂಪೆನಿ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಬ್ಬರೂ ಸ್ನೇಹಿತರ ಜತೆ ರಾತ್ರಿ ಹೊಸ ವರ್ಷ ಆಚರಿಸಿದ್ದರು. ಬಳಿಕ ಚಾರು ಅವರು ಸ್ನೇಹಿತರನ್ನು ಮನೆಗೆ ಕಳುಹಿಸಲು ಹೊರಗೆ ಹೋಗಿದ್ದಾಗ ರೀತು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕುಮಾರಸ್ವಾಮಿಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಅಗ್ನಿ ಅನಾಹುತ
ಸುಬ್ರಹ್ಮಣ್ಯನಗರ ಸಮೀಪದ ಗಾಯಿತ್ರಿನಗರ `ಬಿ~ ಬ್ಲಾಕ್‌ನ ಎರಡನೇ ಅಡ್ಡರಸ್ತೆಯಲ್ಲಿ ಅಗ್ನಿ ಅನಾಹುತ ನಡೆದಿದ್ದು, ರವಿಕುಮಾರ್ ಎಂಬುವರ ಕಾರು ಸುಟ್ಟು ಹೋಗಿದೆ. ಸುಬ್ರಹ್ಮಣ್ಯನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಅಪಘಾತ: ಬೈಕ್‌ಗಳು ಜಖಂ
ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಎರಡು ಬೈಕ್‌ಗಳು ಮತ್ತು ಕಾರು ಜಖಂಗೊಂಡಿರುವ ಘಟನೆ ನಂದಿನಿಲೇಔಟ್ ನಾಲ್ಕನೇ ಹಂತದಲ್ಲಿ ಭಾನುವಾರ ಸಂಜೆ ನಡೆದಿದೆ.

ನಂದಿನಿಲೇಔಟ್ ನಿವಾಸಿ ಉಮೇಶ್‌ಗೌಡ ಎಂಬುವರ ಮಗ ಪವನ್‌ಕುಮಾರ್ (16) ಎಂಬಾತ ಈ ಕೃತ್ಯ ಎಸಗಿದ್ದು, ಆತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಪವನ್ ಜತೆ ಆತನ ಸ್ನೇಹಿತನೊಬ್ಬ ಕಾರಿನಲ್ಲೇ ಇದ್ದ ಎಂದು ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಂದೆಯ ಕಾರನ್ನು ಚಾಲನೆ ಮಾಡಿಕೊಂಡು ನಂದಿನಿಲೇಔಟ್ ಒಂಬತ್ತನೇ ಅಡ್ಡರಸ್ತೆಗೆ ಬಂದ ಆತನಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಕಾರು ಅಡ್ಡಾದಿಡ್ಡಿ ಚಲಿಸಿ, ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಗುದ್ದಿ ನಿಂತಿದೆ. ಘಟನೆಯಲ್ಲಿ ಎರಡು ಬೈಕ್‌ಗಳಿಗೆ ಮತ್ತು ಕಾರಿಗೆ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆತನಿಗೆ ಸರಿಯಾಗಿ ಕಾರು ಚಾಲನೆ ಮಾಡಲು ಬರುತ್ತಿರಲಿಲ್ಲ ಮತ್ತು ಆತನ ಬಳಿ ಚಾಲನಾ ಪರವಾನಗಿಯೂ ಇರಲಿಲ್ಲ. ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT