ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳ್ಳು ಮಾತಾಡುತಾವೆ...

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಅಲ್ಲೊಂದು ಮರ. ಮೈ ತುಂಬಾ ಎಳೆಚಿಗುರುಗಳ ಶೃಂಗಾರ. ಅದರಾಚೆ, ನೂರು ಮೀಟರ್ ಆಚೆ ಇನ್ನೊಂದು-ಎಲೆಗಳೇ ಇಲ್ಲ- ನಿರಾಭರಣ ಸುಂದರ! ದೂರದಲ್ಲೊಂದು ಹೂಗಿಡ. ಎಲೆಯಿಲ್ಲ, ರೆಂಬೆಕೊಂಬೆಗಳೂ ಕಾಣಿಸಲೊಲ್ಲ... ಹೂಗಳೇ ಆಭರಣ...

ಸುತ್ತಮುತ್ತ ಎಲ್ಲೆಂದರಲ್ಲಿ ವಿಕಲಾಂಗ ಚೇತನಗಳು. ಹಸಿರೂ, ಜೀವಂತಿಕೆಯೂ ಇಲ್ಲ... ಸಿಲಿಕಾನ್ ಸಿಟಿಯ ಅಭಿವೃದ್ಧಿಗಾಗಿ `ತಲೆಕೊಟ್ಟ~ ಆ ಮರಗಳಿಗೂ ಒಂದು ಇತಿಹಾಸವಿತ್ತು. ಈಗ ಬರಿಯ ಬೊಡ್ಡೆ... ಕಾಲಚಕ್ರ ಉರುಳುತ್ತಿದೆ... ಅದರ ಬೇರೆಂಬ ನರನಾಡಿಗಳನ್ನು ಕಿತ್ತೆಸೆದು `ಪೋಸ್ಟ್‌ಮಾರ್ಟಮ್~ ಮಾಡುವ ಕ್ಷಣವೂ ಸಮೀಪಿಸುತ್ತಿದೆ.

ಸಂಕ್ರಾಂತಿಗೆ ಮುಖಾಮುಖಿಯಾಗುವ ಹೊತ್ತು ಪ್ರಕೃತಿಯೆಂಬೊ ಕ್ಯಾನ್ವಾಸ್‌ನಲ್ಲಿ ಕಂಡುಬಂದ `ಚಿತ್ತಾರ~ಗಳು...

ಖರನಾಮ ಸಂವತ್ಸರದ ಉತ್ತರಾಯಣಕ್ಕೆ ನೇಸರ ಸಜ್ಜಾಗುತ್ತಿದ್ದಾನೆ. ನಮ್ಮ ದೇಹದ ಒಳ-ಹೊರಗಿನ ಶಾಖವನ್ನು ತಹಬಂದಿಗೆ ತರಲು ಎಳ್ಳು-ಬೆಲ್ಲದ ಸಮಪಾಕ, ಅದಕ್ಕೊಂದು ಚೂರು ಕಬ್ಬು, ಒಣಕೊಬ್ಬರಿ ಸೇರಿಸಿ ಸವಿದ ನೆನಪಿಗೇ ಬಾಯಿಯಲ್ಲಿ ರಸೋತ್ಪತ್ತಿ. ಹೌದಲ್ಲ? ಪ್ರಕೃತಿ ಹೇಳಿಕೊಡುವ ಚಿಕಿತ್ಸೆ ಎಂತಹುದು ನೋಡಿ. ಎಳ್ಳಿನ ಜಿಡ್ಡು ಚರ್ಮದ ಆಳದಿಂದಲೇ ತೇವವನ್ನು ಸಹಜ ಸ್ಥಿತಿಗೆ ತಂದರೆ, ಅದು ಬಡಿದೆಬ್ಬಿಸುವ ಪಿತ್ಥಕ್ಕೆ ಬೆಲ್ಲ ಕಡಿವಾಣ ಹಾಕುತ್ತದೆ. ಜತೆಗೆ ಕಡ್ಲೆಪುಡಿ, ಪುಟಾಣಿ, ಸಕ್ಕರೆ ಅಚ್ಚು... ಹಬ್ಬದ ನೆಪದಲ್ಲಿ ಪ್ರಕೃತಿ ಚಿಕಿತ್ಸೆ. ಜೊತೆಗೆ ಮನುಷ್ಯ ಮನುಷ್ಯನ ನಡುವಿನ ದ್ವೇಷ, ಅಸೂಯೆಯಂತಹ ತಾಮಸ ಗುಣಗಳಿಗೆ ಕಡಿವಾಣ ಹಾಕಿ `ಎಳ್ಳು ಕೊಟ್ಟು ಬೆಲ್ಲದ ಮಾತನಾಡು~ ಎಂಬ ಸಂದೇಶವಾಹಕವೂ ಹೌದು.

ಇದೇ ನೆಪದಲ್ಲಿ ಮಾರುಕಟ್ಟೆಯತ್ತ ಒಮ್ಮೆ ಹೆಜ್ಜೆ ಹಾಕೋಣ. ಸಣ್ಣಪುಟ್ಟ ಗೂಡಂಗಡಿಗಳಿಂದ ಹಿಡಿದು ಬಿಗ್ ಬಿಗ್ ಬಜಾರ್‌ಗಳಲ್ಲೂ ಎಳ್ಳು ಬೆಲ್ಲದ ಪೊಟ್ಟಣಗಳು. ಬೆಂಗಳೂರಿನ ಹಳೆಯ ಪಳೆಯುಳಿಕೆ ಎಂಬ ಹೆಗ್ಗಳಿಕೆಯೊಂದಿಗೇ ಅಭಿವೃದ್ಧಿಶೀಲ ಬೆಂಗಳೂರಿಗೂ ತೆರೆದುಕೊಂಡಿರುವ ಗಾಂಧಿಬಜಾರು, ಬಸವನಗುಡಿ, ಮಲ್ಲೇಶ್ವರ, ವಿಜಯನಗರದ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಅದಾಗಲೇ ಮುನ್ನುಡಿ ಬರೆದಾಗಿದೆ.

ನಗರದ ಎಲ್ಲೆಡೆ ಎಳ್ಳುಬೆಲ್ಲದ ಪೊಟ್ಟಣಗಳದ್ದೇ ಸದ್ದು.ಎಳ್ಳು ಬೆಲ್ಲದ್ದು ಸೀಸನಲ್ ಬೇಡಿಕೆ. ದಂಡಿದಂಡಿಯಾಗಿ ಮಾರುಕಟ್ಟೆಗೆ ಲಗ್ಗೆಯಿಡುವ ಈ ಪೊಟ್ಟಣಗಳು ಸಾವಿರಾರು ಕೈಗಳಿಗೆ ಉದ್ಯೋಗ ನೀಡುತ್ತವೆ, ಸಾವಿರಾರು ಕುಟುಂಬಗಳಿಗೆ ತುತ್ತು ನೀಡುವ ಬಾಬತ್ತುಗಳಾಗುತ್ತಿವೆ ಎಂಬುದೂ ಸತ್ಯ. ಹಬ್ಬ ಸ್ವಲ್ಪ ದೂರವಿದೆ ಅನ್ನುವಾಗ ಪೊಟ್ಟಣಗಳಲ್ಲೂ, ಅದರೊಳಗಿನ ಸಾಮಗ್ರಿಗಳಲ್ಲೂ ಗುಣಮಟ್ಟವಿರುತ್ತದೆ, ಹಬ್ಬದ ಹಿಂದಿನ ದಿನವಾಗಲಿ, ಅದೇ ದಿನವಾಗಲಿ ಖರೀದಿಸಿದರೆ ಪೊಟ್ಟಣ ಕಳಪೆ ಪ್ಲಾಸಿಕ್‌ನದ್ದಾದರೆ, ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಅಲಂಕಾರಕ್ಕೆ ಸೇರಿಸುವ ಜೀರಿಗೆ ಮಿಠಾಯಿ ಇತ್ಯಾದಿ ಎಲ್ಲವೂ ಕಡಿಮೆ ಗುಣಮಟ್ಟದ್ದಾಗಿರುತ್ತವೆ ಎಂಬುದು ಗ್ರಾಹಕರ ದೂರು. ಮಾರುಕಟ್ಟೆಯೆಂದರೆ ಹಾಗೇ ತಾನೆ? ಬೇಡಿಕೆ ಹೆಚ್ಚಿದಾಗ ಮೊದಲ ದರ್ಜೆಯ ವಸ್ತುಗಳೊಂದಿಗೆ ಕಳಪೆಯವೂ ಬಿಕರಿಯಾಗುವುದೇ ಅಲ್ಲಿನ ಒಳಗುಟ್ಟು.

ವಿಜಯನಗರ ಸರಸ್ವತಿನಗರದ ಪದ್ಮಾವತಮ್ಮ ಕಳೆದ ಒಂಬತ್ತು ವರ್ಷದಿಂದ ಎಳ್ಳು ಬೆಲ್ಲ ವ್ಯಾಪಾರಿಯಾಗಿ ಹೆಸರುವಾಸಿಯಾಗಿದ್ದಾರೆ. ಕೇವಲ 25 ಪೊಟ್ಟಣಗಳನ್ನು ಕೈಚೀಲದಲ್ಲಿ ಹಾಕಿಕೊಂಡು ವಿಜಯನಗರದ ಹಳೆ ಬಸ್ ನಿಲ್ದಾಣದ ಬಳಿ ಅವರಿವರನ್ನು ಕಾಡಿಬೇಡಿ ಮಾರಾಟ ಮಾಡಲು ಶುರು ಮಾಡಿದಾಗ ಇಪ್ಪತ್ತೈದು, ಐನೂರರ ಗಡಿ ದಾಟೀತು ಅಂತ ಊಹೆನೂ ಮಾಡಿರಲಿಲ್ಲವಂತೆ. `ಈಗ ಹಬ್ಬಕ್ಕೆ ವಾರವಿದೆ ಅನ್ನುವಾಗಲೇ 100 ಗ್ರಾಂ.ನಿಂದ ಹಿಡಿದು ಒಂದು ಕೆ.ಜಿ.ವರೆಗಿನ ಪೊಟ್ಟಣಗಳನ್ನು ತಂದುಬಿಡ್ತೀನಿ. ಮಾರುಕಟ್ಟೆಯ ಇತರ ವ್ಯಾಪಾರಿಗಳ ಜತೆ ನಾನು ಸೇರಲ್ಲ. ಇತರ ದಿನಗಳಲ್ಲಿ ಹಪ್ಪಳ ಸಂಡಿಗೆ ಮಾಡಿ ಮಾರಾಟ ಮಾಡುತ್ತೇನೆ. ಇದು ಸೀಸನಲ್ ಮಾರ್ಕೆಟ್. ಪರಿಚಯಸ್ಥರು ನನಗಾಗೇ ಕಾದು ಎಳ್ಳು ಬೆಲ್ಲ ಪೊಟ್ಟಣ ಖರೀದಿಸ್ತಾರೆ~ ಎಂದು ಇಷ್ಟಗಲ ನಗುತ್ತಾರೆ ಪದ್ಮಾವತಮ್ಮ.

ಇದೇ ಮಾರುಕಟ್ಟೆಯ ಹೇರ್‌ಪಿನ್, ಸೇಫ್ಟಿ ಪಿನ್, ಬಿಂದಿ ಮಾರುವ ಕೈಗಾಡಿ, ಪ್ಲಾಸ್ಟಿಕ್ ಸಾಮಗ್ರಿಯ ಫುಟ್‌ಪಾತ್ ವ್ಯಾಪಾರಿ ಬಳಿಯೂ ಎಳ್ಳು ಬೆಲ್ಲದ ಪೊಟ್ಟಣಗಳದೇ ಸಾಮ್ರಾಜ್ಯ.

ಬೆಂಗಳೂರಿನಲ್ಲಿ ಸಂಪ್ರದಾಯಸ್ಥರ ವಿರಾಟ್ ಸ್ವರೂಪ ಬದಲಾಗುವುದೇ ಹಬ್ಬಗಳು ಹೊಸ್ತಿಲಿಗೆ ಬಂದಾಗ. ಗಲ್ಲಿಯಲ್ಲೊಂದು ತಗಡಿನ ಸಾಲು ಸೂರು, ನಾಲ್ಕು ಗೋಡೆಗಳೇ ಅವಳ `ಬಂಗಲೆ~ಗೆ ಬೇಲಿ. ಹಬ್ಬ ತರುವ ಉಲ್ಲಾಸವನ್ನು ಬಿತ್ತಲು ಯಾರೂ ಇಲ್ಲ ಎಂದು ಕೊರಗುವುದಿಲ್ಲ ಆಕೆ. ಮನದ ಸಂಭ್ರಮವನ್ನೆಲ್ಲ ರಂಗೋಲಿಯ ಬಣ್ಣಗಳಾಗಿ, ಚುಕ್ಕೆಗಳಾಗಿ ಬಾಗಿಲ ಮುಂದಿನ ಬೀದಿಯಲ್ಲಿ ಚಿತ್ರಿಸುತ್ತಾಳೆ.

ಸಂಕ್ರಮಣದ ಸಂಭ್ರಮ ನಮ್ಮಳಗನ್ನು ಆವರಿಸಿಕೊಳ್ಳಲು ಎಷ್ಟು ಹೊತ್ತು? ರಂಗೋಲಿ ಪುಡಿಯ ಮೂಟೆಯೊಂದಿಗೆ ಸಣ್ಣ ಕೈಚೀಲದಲ್ಲಿ ಅದರ ಅಚ್ಚನ್ನೂ ಮಾರುವ ಸೀನಪ್ಪಯ್ಯನಿಗೆ, ಚುಕ್ಕಿಯಿಡಲೂ ಗೊತ್ತಿರದ ಹೆಣ್ಣುಮಕ್ಕಳದೇ ಒಂದು ಗ್ರಾಹಕ ದಂಡು ಇದೆ. ರಂಗೋಲಿ ಪುಡಿ, ರಂಗೋಲಿ ಅಚ್ಚು ಅಂತ ಕೂಗಿದನೆಂದರೆ ಹತ್ತಾರು ಮನೆಯಿಂದ ಘಲ್‌ಘಲ್ ಗೆಜ್ಜೆಯ ಹೆಜ್ಜೆಯೂರಿಕೊಂಡು ಓಡೋಡಿ ಬರುತ್ತಾರೆ!

ಗೇಟಿನ ಬಳಿ ಸೆಗಣಿ ಸಾರಿಸಿ, ಸಣ್ಣದೊಂದು ಚಪ್ಪರ ಹಾಕಿಯೇ ರಂಗವಲ್ಲಿ ಬಿಡಿಸಬೇಕು ಎಂಬ ಸಂಪ್ರದಾಯ ಶರಣೆ ಅಲಮೇಲಮ್ಮ, ತನ್ನ ಬಾಡಿಗೆ ಮನೆಯವರಿಗೂ ಮನೆಯ ಒಳ-ಹೊರಗೆ ಪುಷ್ಪಾಲಂಕಾರ ಕಡ್ಡಾಯ ಎಂದು ಕಟ್ಟಪ್ಪಣೆ ಮಾಡಿಬಿಟ್ಟಿದ್ದಾರೆ. ಮನೆ ಮುಂದೆ ಬರುವ ಹೂವಮ್ಮ ಒಳಗೊಳಗೇ ಮುಸಿಮುಸಿ ನಗುತ್ತಾಳೆ. ಮೊಳಕ್ಕೆ ಹತ್ತು ರೂಪಾಯಿ ಏರಿಸಿದರೂ ಚೌಕಾಶಿ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರೆ ಕಾಯಂ ಗಿರಾಕಿಗಳೂ ತುಟಿ ಪಿಟಕ್ಕೆನ್ನದೆ ಕಾಸು ಕೈಗಿಡಬೇಕು. ಬಾಳೆ, ಹೂವು ಬೆಳೆಯುವ ರೈತರ ಪಾಲಿಗೆ ವಾರ್ಷಿಕ `ಸುಗ್ಗಿ~ಗೆ ಮಕರ ಸಂಕ್ರಮಣವೇ ನಾಂದಿ. ಅಷ್ಟಿಷ್ಟು ಅವರೆ ಬೆಳೆದವರೂ ಇಡಿಯಾಗಿ, ಹಿಚುಕಿ, ಬೇಳೆ ತೆಗೆದು ಮಾರುಕಟ್ಟೆಯಲ್ಲಿ ಮಾತ್ರೆ ಸಮೇತ ಕೂತರೆಂದರೆ ಗಂಟೆಯೊಳಗೆ ಪಾತ್ರೆ ಖಾಲಿ. ಹಬ್ಬದ ಹಿಂದಣ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದರ ಸಮರ ಸಾಮಾನ್ಯ. ಹೀಗಾಗಿ ಹಬ್ಬಕ್ಕೆರಡು ದಿನವಿದೆ ಅನ್ನುವಾಗ ಶಾಪಿಂಗ್ ಮುಗಿಸುವ ಜಾಣರು ನಾವು.

ಮಕರ ಸಂಕ್ರಮಣವೆಂದರೆ ಶಬರಿಮಲೆಯಲ್ಲಿ `ಜ್ಯೋತಿ~ ದರ್ಶನ, ತಮಿಳರಿಗೆ ಪೊಂಗಲ್ ಸಂಭ್ರಮ, ಗಾಳಿಪಟ ಹಾರಿಸುವ ಖುಷಿ ಇತ್ಯಾದಿ ರಂಗುಗಳಿದ್ದವು. ಈಗ ಸಂಕ್ರಮಣಕ್ಕೂ ಯುಗಾದಿ, ದೀಪಾವಳಿಯದೇ ತೂಕ ಬಂದಿದೆ. ಕೊಳ್ಳುಬಾಕರನ್ನು ಬಾಚಿಕೊಳ್ಳಲು ಮಾರುಕಟ್ಟೆಯಲ್ಲಿ ರಿಯಾಯಿತಿ ದರ ಮತ್ತು ಉಚಿತ ಕೊಡುಗೆಗಳ ಮೇಲಾಟವೇ ನಡೆದಿದೆ.

ಹಬ್ಬದ ಖದರು ಹೀಗೆ ಮನೆಯೊಳಗಿಂದ, ಮನೆಯಂಗಳದಿಂದ ಶುರುವಾಗುವ ಬಗೆಯೇ ಚಂದ. ಹಬ್ಬದ ಸೊಬಗು ಹಬ್ಬುವುದೂ ಹೀಗೇ ಅಲ್ಲವೇ... ಮನದೊಳಗೂ ಹೊರಗೂ...!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT