ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ತಾಯಿಯಿಂದ ಮಾತ್ರ ಮಕ್ಕಳಿಗೆ ಲೋಕ ನೋಡುವ ದೃಷ್ಟಿ ದೊರಕಲು ಸಾಧ್ಯ. ವಸ್ತುಗಳನ್ನು ನಿಜರೂಪದಲ್ಲಿ ಪ್ರತ್ಯಕ್ಷಗೊಳಿಸುವ ಶಕ್ತಿ ಮಾತೃಭಾಷೆಗೆ ಇದೆ. ಈ ನಿಟ್ಟಿನಲ್ಲಿ ಒಂದರಿಂದ ಎಸ್ಸೆಸ್ಸೆಲ್ಸಿವರೆಗೆ ಮಾತೃಭಾಷೆಯಲ್ಲೇ ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕು~ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು. 

ಭಾರತೀಯ ಸ್ಟೇಟ್ ಬ್ಯಾಂಕಿನ ಕನ್ನಡ ಸಂಘದ ಆಶ್ರಯದಲ್ಲಿ ಬ್ಯಾಂಕಿನ ಸ್ಥಳೀಯ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ `ತಿಂಗಳ ಬೆಳಕು~ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಉಪನ್ಯಾಸ ನೀಡಿದರು.
`ದೇಶದಲ್ಲಿ 1400 ಮಾತೃಭಾಷೆಗಳಿವೆ. ಪ್ರತಿ ತಿಂಗಳು ಎರಡರಿಂದ ಮೂರರಷ್ಟು ಭಾಷೆಗಳು ನಾಶ ಹೊಂದುತ್ತಿವೆ. ಇಂಗ್ಲಿಷ್ ಹಾವಳಿಯಿಂದ ದೇಶದ ಎಲ್ಲ ಭಾಷೆಗಳು ಅಪಾಯದ ಅಂಚಿನಲ್ಲಿವೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.

`ಪೋಷಕರು, ಶಿಕ್ಷಕರು ಹಾಗೂ ಮಕ್ಕಳ ಮನಸ್ಸಿನಲ್ಲಿ ಇಂಗ್ಲಿಷ್ ದೇವಭಾಷೆ ಎಂಬ ಭಾವನೆ ಇದೆ. ಈಗಿನ ಮಕ್ಕಳಿಗೆ ಕನ್ನಡ ಪ್ರಾಣಿ, ಪಕ್ಷಿಗಳು ಹಾಗೂ ಮರಗಳ ಹೆಸರು ಗೊತ್ತಿಲ್ಲ. ಹುಟ್ಟಿದ ನಾಡಿಗೆ ಪರಕೀಯರಾಗಿ ಇನ್ನೊಂದು ಭಾಷೆಯ ಮೂಲಕ ನಾಡನ್ನು ನೋಡುತ್ತಿದ್ದೇವೆ~ ಎಂದು ಬೇಸರ ವ್ಯಕ್ತಪಡಿಸಿದರು.

`ಪ್ರತಿವರ್ಷ 50 ಲಕ್ಷ ಹುಡುಗರು ಶಿಕ್ಷಣ ಪಡೆದು ಹೊರಬರುತ್ತಿದ್ದಾರೆ. ಐಟಿ ಬಿಟಿ ಕಂಪೆನಿಗಳಿಗೆ ರಾಜ್ಯ ಸರ್ಕಾರ ಸಾವಿರಾರು ಎಕರೆ ಜಮೀನು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ. ಆದರೆ, ನೆಲದ ಮಕ್ಕಳಿಗೆ ಈ ಕಂಪೆನಿಗಳಲ್ಲಿ ಉದ್ಯೋಗ ನೀಡಬೇಕು ಎಂದು ಎಲ್ಲಿಯೂ ಹೇಳುತ್ತಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು. 

`ಭವಿಷ್ಯದಲ್ಲಿ ಜಾನಪದ ಉಳಿಯುವುದಿಲ್ಲ. ಮುಂದಿನ ದಿನಗಳಲ್ಲಿ ಜನಪದ ನೃತ್ಯ ಹಾಗೂ ಆಚರಣೆಗಳು ಉಳಿಯಬಹುದು. ಓದು ಬರಹ ಇಲ್ಲದ ಜನರು ತಮ್ಮ ತಿಳಿವಳಿಕೆಯನ್ನು ಜಾನಪದದ ಮೂಲಕ ಮುಂದಿನ ತಲೆಮಾರಿಗೆ ತಲುಪಿಸಿದರು.

ಶಾಲೆಗಳಲ್ಲಿ ಕಲಿತ ಬಳಿಕ ಜನರು ತಮ್ಮ ತಿಳಿವಳಿಕೆಯನ್ನು ಬರವಣಿಗೆ ಮೂಲಕ ಮುಂದಿನ ತಲೆಮಾರಿಗೆ ತಲುಪಿಸುತ್ತಿದ್ದಾರೆ. ಒಂದು ಸಮುದಾಯವನ್ನು ತಮಾಷೆ ಮಾಡುವ ಅಶ್ಲೀಲವಾದ ಜನಪದ ಹಾಡುಗಳು ನನಗೆ ಇಷ್ಟ ಆಗುವುದಿಲ್ಲ. ಅಂತಹ ಹಾಡುಗಳು ನಾಶ ಆಗಬೇಕು~ ಎಂದರು.  ಕಂಬಾರ ಅವರನ್ನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕೃಷ್ಣಮೋಹನ ತ್ರಿವೇದಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT