ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಲ್‌ಪಿಎಲ್: ಭಾರತದ ಆಟಗಾರರಿಗೆ ಅನುಮತಿ ಇಲ್ಲ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಮುಂಬೈ/ ಕೊಲಂಬೊ (ಪಿಟಿಐ):  ಶ್ರೀಲಂಕಾ ಪ್ರೀಮಿಯರ್ ಲೀಗ್ (ಎಸ್‌ಎಲ್‌ಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಆಟಗಾರರು ಪಾಲ್ಗೊಳ್ಳಬಾರದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ. ಬಿಸಿಸಿಐನ ನಿರ್ಧಾರ `ಅಚ್ಚರಿ ಹಾಗೂ ನೋವುಂಟುಮಾಡಿದೆ~ ಎಂದು ಲಂಕಾ ಕ್ರಿಕೆಟ್ ಮಂಡಳಿ ಪ್ರತಿಕ್ರಿಯಿಸಿದೆ.

ಎಸ್‌ಎಲ್‌ಪಿಎಲ್‌ನ್ನು ಲಂಕಾ ಮಂಡಳಿಯ ಬದಲು `ಖಾಸಗಿ ಕಂಪೆನಿ~ ಆಯೋಜಿಸುತ್ತಿದೆ ಎಂಬ ಕಾರಣ ನೀಡಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಲೀಗ್‌ನಲ್ಲಿ ಪಾಲ್ಗೊಳ್ಳಲು ಭಾರತದ ಆಟಗಾರರಿಗೆ ಅನುಮತಿ ನೀಡಲು ಭಾರತ ನಿರ್ಧರಿಸಿತ್ತು.

ಆದರೆ ಇದೀಗ ಲೀಗ್‌ನ ಎಲ್ಲ ಹಕ್ಕುಗಳನ್ನು ಸಿಂಗಪುರದ ಕಂಪೆನಿ ತನ್ನದಾಗಿಸಿಕೊಂಡಿರುವುದು ಗಮನಕ್ಕೆ ಬಂದ ಕಾರಣ ತೀರ್ಮಾನ ಬದಲಿಸಿದೆ. ಲೀಗ್‌ನಲ್ಲಿ ಪಾಲ್ಗೊಳ್ಳಲು ಭಾರತದ ಆಟಗಾರರಿಗೆ `ನಿರಾಕ್ಷೇಪಣಾ ಪತ್ರ~ ನೀಡುವುದಿಲ್ಲ ಎಂದು ಬಿಸಿಸಿಐ ಭಾನುವಾರ ಪ್ರಕಟಿಸಿತು.

`ಸಿಂಗಪುರ ಮೂಲದ ಖಾಸಗಿ ಕಂಪೆನಿಯೊಂದು ಈ ಲೀಗ್‌ನ್ನು ನಡೆಸುತ್ತಿದೆ ಎಂಬ ಕಾರಣ ಭಾರತದ ಆಟಗಾರರಿಗೆ ಅನುಮತಿ ನೀಡಬಾರದು ಎಂದು ನಿರ್ಧರಿಸಿದ್ದೇವೆ. ಖಾಸಗಿಯವರು ನಡೆಸುವ ಟೂರ್ನಿಗಳಲ್ಲಿ ಭಾರತದ ಆಟಗಾರರು ಪಾಲ್ಗೊಳ್ಳಬಾರದು ಎಂಬುದು ಮಂಡಳಿಯ ನಿಲವು~ ಎಂದು ಬಿಸಿಸಿಐ ಕಾರ್ಯದರ್ಶಿ ಶಶಾಂಕ್ ಮನೋಹರ್ ಹೇಳಿದ್ದಾರೆ.

ಚೊಚ್ಚಲ ಎಸ್‌ಎಲ್‌ಪಿಎಲ್ ಜುಲೈ 19 ರಿಂದ ಆಗಸ್ಟ್ 4ರ ವರೆಗೆ ನಡೆಯಲಿದೆ. ಪ್ರವೀಣ್    ಕುಮಾರ್, ಮುನಾಫ್ ಪಟೇಲ್ ಮತ್ತು ಆರ್. ಅಶ್ವಿನ್ ಒಳಗೊಂಡಂತೆ ಭಾರತದ 12 ಆಟಗಾರರು ಲೀಗ್‌ನಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದರು. 

ನೋವುಂಟಾಗಿದೆ: ಬಿಸಿಸಿಐ ಕ್ರಮದಿಂದ ನಮಗೆ ಬಹಳ ನೋವುಂಟಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ನಿಶಾಂತ ರಣತುಂಗ ಹೇಳಿದ್ದಾರೆ. ಎಸ್‌ಎಲ್‌ಪಿಎಲ್‌ನ್ನು ಲಂಕಾ ಮಂಡಳಿಯೇ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

`ಈ ಲೀಗ್‌ನ್ನು ಲಂಕಾ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿದೆ. ಸಾಮರ್ಸೆಟ್ ಎಂಬ ಕಂಪೆನಿ ಟೆಂಡರ್‌ನಲ್ಲಿ ಲೀಗ್‌ನ ಮಾರುಕಟ್ಟೆ ಹಕ್ಕು ಪಡೆದುಕೊಂಡಿದೆ. ಈ ಲೀಗ್‌ನ್ನು ಸಾಮರ್ಸೆಟ್ ಆಯೋಜಿಸುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ~ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT