ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಏಷ್ಯಾ: ಯಶೋಗಾಥೆ

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

`ನಂಬಲಾಗದ್ದನ್ನು ನಂಬುವುದು, ಅಸಾಧ್ಯವಾದುದನ್ನು ಕನಸು ಕಾಣುವುದು ಮತ್ತು ಉತ್ತರಿಸಲು ಯಾವತ್ತೂ ಇಲ್ಲ ಎನ್ನದಿರುವುದು~...ಇದು ಮಲೇಷ್ಯಾ ಮೂಲದ ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಟೋನಿ ಫರ್ನಾಂಡಿಸ್ (47) ಅವರು ಬದುಕಿನಲ್ಲಿ ಅಳವಡಿಸಿಕೊಂಡಿರುವ ವೈಯಕ್ತಿಕ ಧೋರಣೆ.

ಇದರಿಂದಾಗಿಯೇ ಅವರು ದಕ್ಷಿಣ ಏಷ್ಯಾ ಪ್ರದೇಶದ ಅಗ್ಗದ ವಿಮಾನ ಯಾನ ಕ್ಷೇತ್ರದಲ್ಲಿ  ಅಚ್ಚರಿದಾಯಕ ಯಶಸ್ಸು ಸಾಧಿಸಿದ್ದಾರೆ.ಒಂದು ದಶಕದ ಅವಧಿಯಲ್ಲಿ `ಏರ್ ಏಷ್ಯಾ~ ಸಂಸ್ಥೆಯನ್ನು ಜಾಗತಿಕ ಮನ್ನಣೆಯ ಬ್ರಾಂಡ್ ಆಗಿ ಅಭಿವೃದ್ಧಿಪಡಿಸುವಲ್ಲಿ ಟೋನಿ ಅವರ ಕನಸುಗಾರಿಕೆ, ಕಸುಬುದಾರಿಕೆಯು ಮಹತ್ವದ ಪಾತ್ರ ನಿರ್ವಹಿಸಿದೆ.

2009ರಲ್ಲಿ `ವಿಶ್ವದ ಅತ್ಯುತ್ತಮ ಅಗ್ಗದ ವಿಮಾನ ಯಾನ ಸಂಸ್ಥೆ~ ಪ್ರಶಸ್ತಿಗೆ ಭಾಜನವಾಗಿರುವುದು ಇದರ ಯಶೋಗಾಥೆಗೆ ಸಾಕ್ಷಿಯಾಗಿದೆ. ಈ ಸಂಸ್ಥೆಯು ಮಲೇಷ್ಯಾದ ಆರ್ಥಿಕ ಅಭ್ಯುದಯದ  ಅವಿಭಾಜ್ಯ ಭಾಗವೂ ಆಗಿದೆ.

2001ರಲ್ಲಿ ನಷ್ಟದಿಂದಾಗಿ ಮುಚ್ಚುವ ಭೀತಿ ಎದುರಿಸುತ್ತಿದ್ದ, ಮಲೇಷ್ಯಾ ಸರ್ಕಾರಿ ಸ್ವಾಮ್ಯದ ಆರ್ಥಿಕ ಒಕ್ಕೂಟದ ಮಾಲೀಕನಿಂದ  `ಏರ್ ಏಷ್ಯಾ~ ವಿಮಾನ ಯಾನ ಸಂಸ್ಥೆಯನ್ನು ಟೋನಿ ಮತ್ತವರ ಗೆಳೆಯರ ಬಳಗವು ಖರೀದಿಸಿದಾಗ ಅವರ ಬಳಿ ಅಗತ್ಯವಾದ ಹಣ ಇದ್ದಿರಲಿಲ್ಲ. ಕನಸುಗಳು ಮಾತ್ರ ಭರಪೂರವಾಗಿದ್ದವು.

ಸಾಂಕೇತಿಕವಾಗಿ 1 ರಿಂಗೆಟ್ಸ್ (ರೂ 15) ಪಾವತಿಸಿ, ಸಂಸ್ಥೆಯ 40 ದಶಲಕ್ಷದ ಸಾಲದ ಹೊರೆಯನ್ನೂ ಟೋನಿ ಬಳಗ ಹೊತ್ತುಕೊಂಡಿತ್ತು. ಎರಡು ವರ್ಷಗಳಲ್ಲಿಯೇ ಸಾಲ ತೀರಿಸಲಾಯಿತು, ಅಮೆರಿಕ ಮೇಲಿನ ಸೆಪ್ಟೆಂಬರ್ 11ರ ದಾಳಿ ನಂತರ ಜಾಗತಿಕ ವಿಮಾನ ಯಾನ ಎದುರಿಸಿದ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಸಂಸ್ಥೆಯನ್ನು ಲಾಭದತ್ತ ಮುನ್ನಡೆಸುವಲ್ಲಿ ಟೋನಿ ಬಳಗ ಯಶಸ್ವಿಯಾಯಿತು.

ಸಂಕಲ್ಪ ಬಲ ಮತ್ತು ದೂರದೃಷ್ಟಿ ಜತೆಗೆ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದಿರುವ ಬದುಕಿನ ಧ್ಯೇಯ ಈ  ಸಾಧನೆಗೆ ನೆರವಾಗಿವೆ. ಉಳ್ಳವರ ಸೊತ್ತಾಗಿದ್ದ ವಿಮಾನ ಯಾನವನ್ನು ಜನಸಾಮಾನ್ಯರಿಗೂ ಒದಗಿಸುವಂತೆ ಮಾಡುವಲ್ಲಿ ಟೋನಿ ಈಗ ಬಹು ದೂರ ಸಾಗಿದ್ದಾರೆ.

` ಅಗ್ಗದ ದರ, ಗರಿಷ್ಠ ಗುಣಮಟ್ಟ~- ಇದು ಏರ್ ಏಷ್ಯಾದ ಮೂಲ ಮಂತ್ರ. ಹೀಗಾಗಿ, ವಿಮಾನ ಯಾನ ಸಂಸ್ಥೆಗಳ ದುಬಾರಿ ದರ, ಅಹಂಕಾರ, ಏಕಸ್ವಾಮ್ಯದ ನಡವಳಿಕೆಯಿಂದ ಬೇಸತ್ತ ಪ್ರಯಾಣಿಕರು ಸಹಜವಾಗಿಯೇ ಈ ಸಂಸ್ಥೆಯತ್ತ ಒಲವು ರೂಢಿಸಿಕೊಂಡರು.

ದಕ್ಷಿಣ ಏಷ್ಯಾದ ವಿಭಿನ್ನ ಸಂಸ್ಕೃತಿಗಳ ದೇಶಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಏರ್ ಏಷ್ಯಾ, ಈ ವಲಯದ ಆರ್ಥಿಕ ಉನ್ನತಿಗೆ ಗಮನಾರ್ಹ ಕೊಡುಗೆಯನ್ನೂ ನೀಡುತ್ತಿದೆ.  ಹೊಸ ಬಗೆಯ ಮತ್ತು ಸೃಜನಾತ್ಮಕ ಮಾರುಕಟ್ಟೆ ನೀತಿಯೂ ಸಂಸ್ಥೆಯ ಕೈ ಹಿಡಿದಿದೆ.

10 ವರ್ಷಗಳ ಅವಧಿಯಲ್ಲಿ ಕೇವಲ 2 ವಿಮಾನ, 2000 ಪ್ರಯಾಣಿಕರಿಂದ ಆರಂಭವಾದ ಭಾರತೀಯ ಸಂಜಾತ (ತಂದೆ ಗೋವಾ ಮೂಲದವರು, ಟೋನಿ ಜನಿಸಿದ್ದು ಲಂಡನ್‌ನಲ್ಲಿ) ಟೋನಿ ಫರ್ನಾಂಡಿಸ್ ನೇತೃತ್ವದ ಅಗ್ಗದ ವಿಮಾನ ಯಾನ ಸಂಸ್ಥೆ `ಏರ್ ಏಷ್ಯಾ~ ಈಗ ವರ್ಷಕ್ಕೆ 20 ಲಕ್ಷ ಪ್ರಯಾಣಿಕರನ್ನು ಸಾಗಿಸುವ 100 ವಿಮಾನಗಳನ್ನು ಹೊಂದಿರುವ ಸಂಸ್ಥೆಯಾಗಿ ಬೆಳೆದಿದೆ. 

ವಾರ್ಷಿಕ ವಹಿವಾಟು 400 ದಶಲಕ್ಷ ಡಾಲರ್ (44 ಕೋಟಿ ಡಾಲರ್) ರೂ1980 ಕೋಟಿಗಳ ವಹಿವಾಟಿನ ಸಂಸ್ಥೆಯಾಗಿ ಬೆಳೆದಿದೆ. ಪ್ರಾದೇಶಿಕ ವಿಮಾನ ಯಾನ ಸಂಸ್ಥೆಯ ಸಾಧನೆಯಿಂದ ತೃಪ್ತಿಗೊಳ್ಳದ ಟೋನಿ, ಅಂತರರಾಷ್ಟ್ರೀಯ ಸೇವೆ ಆರಂಭಿಸಲು 2007ರಲ್ಲಿ `ಏರ್ ಏಷ್ಯಾ  ಎಕ್ಸ್~ ಹೆಸರಿನ  ಪ್ರತ್ಯೇಕ ಸಂಸ್ಥೆಯನ್ನೂ ಆರಂಭಿಸಿದರು.  ಆಸ್ಟ್ರೇಲಿಯಾ, ಏಷ್ಯಾ ಮತ್ತು ಯೂರೋಪ್ ಖಂಡಗಳಲ್ಲಿನ ಪ್ರಮುಖ ಪಟ್ಟಣಗಳಿಗೆ ಸೇವೆ ಒದಗಿಸಲಾಗುತ್ತಿದೆ.

ಈ ಅಂತರರಾಷ್ಟ್ರೀಯ ವಿಮಾನ ಯಾನ ದರಗಳೂ ಇತರ ಸಂಸ್ಥೆಗಳ ದರಗಳಿಗೆ ಹೋಲಿಸಿದರೆ ಶೇ 50ರಷ್ಟು ಅಗ್ಗವಾಗಿವೆ.ಯಶಸ್ವಿ ವಿಮಾನ ಯಾನ ಸಂಸ್ಥೆ ಕಟ್ಟಿ ಬೆಳೆಸುವ ಪ್ರಕ್ರಿಯೆಯಲ್ಲಿ ಟೋನಿ ಫರ್ನಾಂಡೀಸ್, `ಕೌಟುಂಬಿಕ ತತ್ವ~ಗಳಿಗೆ ಮಹತ್ವ ನೀಡಿದ್ದಾರೆ. ಕಚೇರಿಯಲ್ಲಿ ಪ್ರತಿಯೊಬ್ಬರೂ ಸಮಾನರು. ವಯಸ್ಸು, ಲಿಂಗ, ಜಾತಿ - ಜನಾಂಗದ ವಿಷಯದಲ್ಲಿ ತಾರತಮ್ಯ ಇಲ್ಲವೇ ಇಲ್ಲ.

ಕ್ವಾಲಾಲಂಪುರದ ಅಗ್ಗದ ವಿಮಾನ ಯಾನ ಟರ್ಮಿನಲ್‌ನಲ್ಲಿ (ಔಇಇ)  ಇರುವ ಸಂಸ್ಥೆಯ ಕಚೇರಿಯಲ್ಲಿಯೂ ಮುಕ್ತ ವಾತಾವರಣ ಇದೆ. ಸಿಇಒ ಟೋನಿ ಅವರ ಕಚೇರಿ ಪರಿಕಲ್ಪನೆಯು ತೆರೆದ ಮನಸ್ಸಿನ ಮುಕ್ತ ತತ್ವಗಳಿಗೆ ಅನುಗುಣವಾಗಿಯೇ ಇದೆ.

 ಅವರ ಚೇಂಬರ್‌ಗೆ ಬಾಗಿಲು - ಗೋಡೆಗಳೇ ಇಲ್ಲ. ಸಿಬ್ಬಂದಿಯಲ್ಲಿ ಯಾರುಬೇಕಾದರೂ, ಯಾವುದೇ ಹೊತ್ತಿನಲ್ಲಿ ಅವರನ್ನು ಭೇಟಿಯಾಗಿ ಸಂಸ್ಥೆಯ ಹಿತಾಸಕ್ತಿ ಬಗ್ಗೆ ಚರ್ಚಿಸಬಹುದು. ಇದು ಏರ್ ಏಷ್ಯಾದ ಯಶಸ್ಸಿನ ಮೂಲ ಮಂತ್ರವೂ ಹೌದು.
ಕ್ವಾಲಾಲಂಪುರಕ್ಕೆ ತೆರಳಿದ್ದ ಭಾರತದ ಪತ್ರಕರ್ತರ ಜತೆ ಟೋನಿ ಅವರು ನಡೆಸಿದ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

* ನಿಮ್ಮ ಯಶಸ್ಸಿನ ಗುಟ್ಟೇನು?
ಇದೊಂದು ತುಂಬ ಸವಾಲಿನ ಉದ್ದಿಮೆ. ಸಣ್ಣ, ಪುಟ್ಟ ಸಂಗತಿಗಳಿಗೂ ಗಮನ ನೀಡಬೇಕಾಗುತ್ತದೆ. ಇದಕ್ಕೆಲ್ಲ ಸಂಸ್ಥೆಯ ಸಿಬ್ಬಂದಿಯ ದಕ್ಷತೆ, ಬದ್ಧತೆ, ನಿಷ್ಪೃಹ ಸೇವೆ ಕಾರಣ. ಸಿಬ್ಬಂದಿ ಸಂಖ್ಯೆ 9000ದಷ್ಟಿದೆ.


ಆದರೆ, ನಮ್ಮಲ್ಲಿ ಕಾರ್ಮಿಕ ಸಂಘಟನೆ ಇಲ್ಲ. ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

* ಸಂಸ್ಥೆಯ ವಿಸ್ತರಣೆ ಕಾರ್ಯಕ್ರಮಗಳೇನು?
ಹೊಸದಾಗಿ 25 ವಿಮಾನಗಳನ್ನು ಖರೀದಿಸಿದ್ದು, ಅವುಗಳಲ್ಲಿ 6 ವಿಮಾನಗಳನ್ನು ಭಾರತದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸಲು ಬಳಸಲಾಗುತ್ತಿದೆ. ಸದ್ಯದಲ್ಲಿಯೇ ಅಮೃತಸರ್‌ದಿಂದ  ಸೇವೆ ಆರಂಭಿಸಲಾಗುವುದು. ಪಂಜಾಬಿಗಳು ಮಲೇಷ್ಯಾದತ್ತ ಹೆಚ್ಚು ಆಕರ್ಷಿತರಾಗುತ್ತಿರುವುದೇ ಇದಕ್ಕೆ ಕಾರಣ.


* ವಹಿವಾಟಿನಲ್ಲಿ ಭಾರತದ ಪಾತ್ರ ಏನಿದೆ?
- `ಏರ್ ಏಷ್ಯಾ~ ಪಾಲಿಗೆ ಭಾರತ,ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳು ಅತಿದೊಡ್ಡ ಮಾರುಕಟ್ಟೆಯಾಗಿದೆ.  ಭಾರತೀಯರು ಪ್ರವಾಸ ಪ್ರಿಯರು. ಅವರನ್ನು ಮಲೇಷ್ಯಾದತ್ತ ಇನ್ನಷ್ಟು ಆಕರ್ಷಿರಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ.

* ಹಲವು ಪ್ರತಿಕೂಲತೆಗಳ ಮಧ್ಯೆ ಯಶಸ್ಸು ಸಾಧಿಸಿರುವ ಗುಟ್ಟು ಏನು?
ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವುದಕ್ಕೆ ನೀಡಿದ ಗಮನ, ಸಂಸ್ಥೆ ಅನುಸರಿಸುವ ಧೋರಣೆಯಲ್ಲಿ ಯಾವತ್ತೂ ಬದಲಿಸದಿರುವುದು, ದೃಢವಾದ ಪ್ರಯತ್ನವೇ ಕಾರಣ.

* ಭವಿಷ್ಯದ ರೂಪುರೇಷೆಗಳು ಏನಿವೆ?
ಕೆಲವೇ ವರ್ಷಗಳಲ್ಲಿ ನಮ್ಮ ವಿಮಾನಗಳ ಸಂಖ್ಯೆಯನ್ನು  500ಕ್ಕೆ ಹೆಚ್ಚಿಸಲಾಗುವುದು.  2020ರಷ್ಟೊತ್ತಿಗೆ ನಮಗೆ 680 ವಿಮಾನಗಳ ಅಗತ್ಯ ಇದೆ ಎಂದು ಅಂದಾಜು ಮಾಡಲಾಗಿದೆ.  10 ವರ್ಷಗಳಲ್ಲಿ ಹಳೆಯ ವಿಮಾನಗಳ ಬದಲಿಸಿ ಹೊಸ ವಿಮಾನಗಳನ್ನು ಸೇರ್ಪಡೆ ಮಾಡಲಾಗುವುದು.
 
* ಹೈದರಾಬಾದ್‌ನಿಂದ ವಿಮಾನ ಸೇವೆ ಕೈ ಬಿಡಲು ಕಾರಣ ಏನು?
-ದುಬಾರಿ ವಿಮಾನ ನಿಲ್ದಾಣ ಶುಲ್ಕದ ಕಾರಣಕ್ಕೆ ಹೈದರಾಬಾದ್ ವಿಮಾನ ಸೇವೆ ಕೈಬಿಡಲಾಗಿದೆ. ಭಾರತದಲ್ಲಿನ ವಿಮಾನ ನಿಲ್ದಾಣಗಳಲ್ಲಿನ ದುಬಾರಿ ಶುಲ್ಕವು ಅಗ್ಗದ ವಿಮಾನ ಯಾನ ಸಂಸ್ಥೆಗಳ ಪಾಲಿಗೆ ದೊಡ್ಡ ಹೊರೆಯಾಗಿದೆ.
 
ಪ್ರಯಾಣ ದರಕ್ಕಿಂತ ನಿಲ್ದಾಣಗಳ ಶುಲ್ಕವೇ ಹೆಚ್ಚಿಗೆ ಇದೆ. ಹೈದರಾಬಾದ್ ವಿಮಾನ ನಿಲ್ದಾಣ ನಿರ್ವಹಿಸುವ  `ಜಿಎಂಆರ್~ ಸಂಸ್ಥೆ ವಿಧಿಸುವ ನಿಲ್ದಾಣ ಬಳಕೆ ಶುಲ್ಕ ಶೇ 100ರಷ್ಟು ದುಬಾರಿಯಾಗಿದೆ. ಭಾರತ ಸರ್ಕಾರ ಅಥವಾ ವಿಮಾನ ನಿಲ್ದಾಣ ನಿರ್ಮಿಸಿ ನಿರ್ವಹಿಸುವ ಖಾಸಗಿ ಸಂಸ್ಥೆಗಳು ನ್ಯಾನೊ ಕಾರು ಮತ್ತು ವಿಲಾಸಿ ಬಿಎಂಡಬ್ಲ್ಯು ಕಾರು ಮಾರುಕಟ್ಟೆಯ ಮಧ್ಯೆ ಇರುವ ಅಂತರವನ್ನು ಅರ್ಥ ಮಾಡಿಕೊಳ್ಳಬೇಕು.

* ನಿಮ್ಮ ಮುಖ್ಯ ಕಾಳಜಿ ಯಾವುದು?
-ಪ್ರತಿಯೊಬ್ಬರಿಗೂ ವಿಮಾನ ಯಾನ ಸೇವೆ ಕೈಗೆಟುಕುವಂತೆ ಮಾಡಬೇಕು ಎನ್ನುವುದೇ ನಮ್ಮ ನಿಜವಾದ ಕಾಳಜಿ. ಅಗ್ಗದ ದರದ ವಿಮಾನ ಯಾನ ಸೇವೆಗೆ ಸರ್ಕಾರಗಳು ಉತ್ತೇಜನ ನೀಡಿದರೆ ಅದರಿಂದ ಪ್ರವಾಸೋದ್ಯಮವೂ ಬೆಳೆಯುತ್ತದೆ.

* ವಿಮಾನ ರಂಗಕ್ಕೆ ಸಂಬಂಧಿಸಿದ ಭಾರತ ಸರ್ಕಾರದ ಧೋರಣೆ ಬಗ್ಗೆ ಏನು ಹೇಳುವಿರಿ?
-ಭಾರತದಲ್ಲಿ ವಿಮಾನ ಯಾನ ರಂಗವನ್ನು ಅತಿಯಾಗಿ ರಕ್ಷಿಸುವ ಧೋರಣೆ ಅನುಸರಿಸಲಾಗುತ್ತಿದೆ. ಭಾರತವು ವಿಮಾನ ಯಾನ ರಂಗವನ್ನು ಇನ್ನೂ ವಿದೇಶಿ ವಿಮಾನ ಯಾನ ಸಂಸ್ಥೆಗಳಿಗಾಗಿ ಮುಕ್ತಗೊಳಿಸಿಲ್ಲ.
 
ಸರ್ಕಾರದ `ಆಕಾಶ ನೀತಿ~ ಬದಲಾಗಬೇಕು. ಹಾಗೆ ಮಾಡದಿದ್ದರೆ ದೇಶದ ಅರ್ಥ ವ್ಯವಸ್ಥೆಗೆ ಒಳಿತಿಗಿಂತ ಕೆಡುಕೇ ಜಾಸ್ತಿ.ಅವಕಾಶ ದೊರೆತರೆ ಭಾರತದಲ್ಲಿಯೂ ಹೊಸ ಸಂಸ್ಥೆ ಹುಟ್ಟುಹಾಕುವೆ.

*ಭಾರತೀಯರು ಮಲೇಷ್ಯಾಕ್ಕೆ ಬಂದಿಳಿಯುತ್ತಿದ್ದಂತೆ ವೀಸಾ ನೀಡುವ ಸೌಲಭ್ಯ ಜಾರಿಗೆ ಪ್ರಯತ್ನಿಸುತ್ತೀದ್ದೀರಾ?
 ಹೌದು. ಈ ಬಗ್ಗೆ ಎರಡೂ ದೇಶಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿವೆ. ನಾವು ಕೂಡ ಇಂತಹ ಅನುಕೂಲ ಒದಗಿಸುವುದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದೇವೆ. ಇದರಿಂದ ಭಾರತದ ಪ್ರವಾಸಿಗರಿಗೆ ಹೆಚ್ಚು ಪ್ರಯೋಜನ ಲಭಿಸಲಿದೆ.
 
* ಭಾರತದಲ್ಲಿ ನಕಲಿ ಪೈಲಟ್‌ಗಳು ಪತ್ತೆಯಾಗಿರುವ ಬಗ್ಗೆ..
ಆ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ.ನಮ್ಮಲ್ಲಿ ಸರ್ಕಾರಿ ಸ್ವಾಮ್ಯದ `ಏರ್ ಇಂಡಿಯಾ~ ನಷ್ಟಪೀಡಿತವಾಗಿದ್ದರೆ, ಅಗ್ಗದ ವಿಮಾನ ಯಾನ ಸಂಸ್ಥೆಗಳು ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು ಬಿಡುತ್ತಿವೆ. ಇವೆಲ್ಲ `ಏರ್ ಏಷ್ಯಾ~ದ ಯಶೋಗಾಥೆಯಿಂದ ಕಲಿಯುವುದು ಸಾಕಷ್ಟಿದೆ.
 
 



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT