ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್, ಐಪಿಎಸ್‌ ಅಧಿಕಾರಿಗಳ ಮೇಲೆ ಖಟ್ಲೆ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ರಾಜ್ಯದ ೧೦ ಐಎಎಸ್ ಅಧಿಕಾರಿಗಳ ವಿರುದ್ಧ ೧೧ ಕ್ರಿಮಿನಲ್ ಮೊಕದ್ದಮೆ ಗಳು ದಾಖಲಾಗಿವೆ ಎಂದು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ. ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ.ಬಾಬುರಾವ್ ಮುಡಬಿ, ಡಾ.ವಿ. ಚಂದ್ರಶೇಖರ್, ಸಿದ್ದಯ್ಯ, ಮೊಹ ಮ್ಮದ್ ಸಾದಿಕ್, ಸೈಯದ್ ಜಮೀರ್ಪಾಷಾ, ರಮೇಶ್ ಬಿಂದುರಾವ್ ಝಳಕಿ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖ ಲಾಗಿವೆ. ಈ ಎಲ್ಲರ ವಿರುದ್ಧ ಲೋಕಾಯುಕ್ತರು ದಾಳಿ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದಿದ್ದಾರೆ.

ಐಎಎಸ್ ಅಧಿಕಾರಿ ಡಾ.ಶಮ್ಲಾ ಇಕ್ಬಾಲ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪವಿದೆ. ಲೋಕಾ ಯುಕ್ತ ದಾಳಿಯೂ ನಡೆದಿದೆ. ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅವ್ಯವಹಾರದಲ್ಲಿಯೂ ಇವರ ಮೇಲೆ ಆರೋಪಗಳಿವೆ. ಈ ಬಗ್ಗೆ ಲೋಕಾ ಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು ಅಂತಿಮ ತನಿಖಾ ವರದಿಯನ್ನೂ ಸರ್ಕಾರ ಸ್ವೀಕರಿಸಿದೆ.

ಇನ್ನೊಬ್ಬ ಐಎಎಸ್ ಅಧಿಕಾರಿ ಡಾ.ರಾಮೇಗೌಡ ಅವರ ವಿರುದ್ಧ ಭೂಪರಿವರ್ತನೆಗೆ ಸಂಬಂಧಿಸಿದ ಲೋಕಾಯುಕ್ತ ಪ್ರಕರಣವಿದೆ. ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಅವರು ತಿಳಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಈ. ಶಿವಲಿಂಗ ಮೂರ್ತಿ ವಿರುದ್ಧ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಇವರ ವಿರುದ್ಧ ಸಿಬಿಐ ದೋಷಾರೋಪಣೆ ಪಟ್ಟಿಯನ್ನೂ ಸಲ್ಲಿಸಿದೆ.

ಐಎಎಸ್ ಅಧಿಕಾರಿಗಳಾದ ಎ.ಕೆ. ಮೊಣ್ಣಪ್ಪ ವಿರುದ್ಧ ೧೯೯೮ನೇ ಸಾಲಿನ ಕೆಎಎಸ್ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಸಿಐಡಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯ ದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಅದೇ ರೀತಿ ಇನ್ನೊಬ್ಬ ಐಎಎಸ್ ಅಧಿಕಾರಿ ಕೆ.ಆರ್. ಸುಂದರ್ ಅವರ ವಿರುದ್ಧ ೨೦೧೧ನೇ ಸಾಲಿನ ಕೆಪಿಎಸ್ಸಿ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾ ಗಿದ್ದು ಸಿಐಡಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಅನುಮತಿ ಕೋರಿದೆ ಎಂದು ಅವರು ತಿಳಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಗಳಾದ ಟಿ. ಮುಕ್ತಾಂಬಾ, ಬಿ. ಭೀಮಯ್ಯ, ಕೆ.ಎಸ್. ಪ್ರಭಾಕರ್, ಶಿವಲಿಂಗಮೂರ್ತಿ ಅವರ ವಿರುದ್ಧ ಇಲಾಖಾ ತನಿಖೆ ಕೂಡ ನಡೆಯುತ್ತಿವೆ.

ಕರ್ನಾಟಕ ರಾಜ್ಯ ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ನಿವೇಶನಗಳ ಅಕ್ರಮ ಹಂಚಿಕೆಗೆ ಸಂಬಂಧಿಸಿದಂತೆ ಮುಕ್ತಾಂಬಾ ಅವರ ವಿರುದ್ಧ ಆರೋಪಗಳಿದ್ದು ದಂಡನೆ ವಿಧಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಪರಿಶೀ ಲನೆಯಲ್ಲಿದೆ. ವೈದ್ಯಕೀಯ ಸೀಟು ಕೊಡಿಸುವುದಕ್ಕೆ ಸಂಬಂಧಿಸಿದ ಪ್ರಕರಣ ಬಿ. ಭೀಮಯ್ಯ ಅವರ ವಿರುದ್ಧ ಇದ್ದು ದಂಡನೆ ವಿಧಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ.

೧೯೯೮ರ ಕೆಪಿಎಸ್ಸಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿ ಸಿದಂತೆ ಮೊಣ್ಣಪ್ಪ ಅವರ ವಿರುದ್ಧದ ಇಲಾಖಾ ತನಿಖೆ ಪೂರ್ಣ ವಾಗಿದ್ದು ಸರ್ಕಾರದ ಪರಿಶೀಲನೆ ಯಲ್ಲಿದೆ. ಮೈಸೂರು ಸಕ್ಕರೆ ಕಂಪೆನಿಯಲ್ಲಿ ವ್ಯವಸ್ಥಾ ಪಕ ನಿರ್ದೇಶಕರಾಗಿದ್ದ ಎಂ.ಎಸ್. ರವಿಶಂಕರ್ ಅವರು ಸಕ್ಕರೆ ರಫ್ತು ವಿಷಯದಲ್ಲಿ ಕಂಪೆನಿಗೆ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪವಿದ್ದು ಈ ಬಗ್ಗೆ ವಿಚಾರಣೆಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ತಡೆಯಾಜ್ಞೆ ನೀಡಿದೆ.

ದುರ್ನಡತೆಗೆ ಸಂಬಂಧಿಸಿದಂತೆ ಐಎ ಎಸ್ ಅಧಿಕಾರಿ ಎಂ.ಎನ್. ವಿಜಯಕುಮಾರ್ ವಿರುದ್ಧ ಇಲಾಖಾ ತನಿಖೆ ಪೂರ್ಣಗೊಂಡಿದ್ದು ದಂಡನೆ ವಿಧಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆ ಯಲ್ಲಿದೆ. ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರ ವಿರುದ್ಧ ಕೂಡ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಐಪಿಎಸ್ ಅಧಿಕಾರಿಗಳು: ಐಪಿಎಸ್ ಅಧಿಕಾರಿಗಳಾದ ಬಿ.ಶ್ರೀಕಂಠಪ್ಪ, ಕೆ.ಪಿ. ಪುಟ್ಟಸ್ವಾಮಿ ಅವರ ವಿರುದ್ಧ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣಗಳಿವೆ. ಮನೆ ಕಟ್ಟಲು ಅಕ್ರಮವಾಗಿ ಪೊಲೀಸರನ್ನು ಬಳಸಿಕೊಂಡ ಬಗ್ಗೆ ಎಂ. ನಂಜುಂಡಸ್ವಾಮಿ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿದೆ.

ಕೆಜಿಎಫ್‌ನಲ್ಲಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪ ಹಾಗೂ ಹರಪನಹಳ್ಳಿ ಡಿವೈಎಸ್ಪಿ ಅನಿತಾ ಹದ್ದಣ್ಣವರ ಅವರಿಗೆ ಕಿರು ಕುಳ ನೀಡಿದ ಆರೋಪದ ಬಗ್ಗೆ ಎಚ್.ಎಸ್. ವೆಂಕಟೇಶ್ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ. ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡ ಬಗ್ಗೆ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಎಸ್.ಎನ್. ಚಿಕ್ಕೆ ರೂರ್, ಅನಂತ್ ಶೆಣೈ ಎಂಬುವವರಿಂದ `೧೮ ಲಕ್ಷ  ಚೆಕ್ ಪಡೆದು ದಿನಾಂಕ ತಿದ್ದಿ ಬ್ಯಾಂಕ್ ಗೆ ಸಲ್ಲಿಸಿದ ಆರೋಪ ಎದುರಿಸುತ್ತಿರುವ ನಿವೃತ್ತ ಐಪಿಎಸ್ ಅಧಿ ಕಾರಿ ಜಯಪ್ರಕಾಶ್ ನಾಯಕ್ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಐಎಫ್ಎಸ್ ಅಧಿಕಾರಿಗಳು: ಲೋಕಾ ಯುಕ್ತ ಬಲೆಗೆ ಬಿದ್ದ ಐಎಫ್ಎಸ್ ಅಧಿಕಾರಿಗಳಾದ ಕೆ.ಎಂ. ನಾರಾ ಯಣ ಸ್ವಾಮಿ, ಎಚ್.ಸಿ.ಕಾಂತರಾಜು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಮುತ್ತಯ್ಯ, ಮನೋಜ್ ಕುಮಾರ್ ಶುಕ್ಲ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ. ಕೊಪ್ಪ ವಿಭಾಗದಲ್ಲಿ ಚಿರತೆ ಸಾವಿಗೆ ಸಂಬಂಧಿಸಿದಂತೆ ಪುನೀತ್ ಪಾಠಕ್ ವಿರುದ್ಧ ವಿಚಾರಣೆ ಪೂರ್ಣಗೊಂಡಿದ್ದು ಕೇಂದ್ರ ಸರ್ಕಾರ ದಂಡನೆ ವಿಧಿಸಿ ಆದೇಶ ಹೊರಡಿಸಿದೆ.

ಕೊಡಗು ವಿಭಾಗದಲ್ಲಿ ಕ್ರಿಟಿಕಲ್ ವೈಲ್ಡ್‌ಲೈಫ್ ಹ್ಯಾಬಿಟ್ಯಾಟ್ ಗುರುತಿಸಲು ವಿಫಲರಾದ ಜಿ.ಎ. ಸುದರ್ಶನ್ ವಿರುದ್ಧ ವಿಚಾರಣೆ ನಡೆಯುತ್ತಿದೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಮರ ಕಡಿದ ಆರೋಪ ಕೂಡ ಇವರ ಮೇಲಿದ್ದು ವಿಚಾರಣೆ ಮುಗಿ ದಿದೆ. ದಂಡನೆ ವಿಧಿಸಲು ಕೇಂದ್ರ ಲೋಕಸೇವಾ ಆಯೋಗವನ್ನು ಕೋರಲಾಗುತ್ತಿದೆ. ಎಸ್.ಡಿ.ಪಾಠಕ್ ಅವರ ವಿರುದ್ಧ ಕೂಡ ಇದೇ ಆರೋಪವಿದೆ. ಎಸ್. ವೇಣುಗೋಪಾಲ್, ಎಸ್. ರಾಜೇಂದ್ರನ್ ವಿರುದ್ಧ ಅವ್ಯವಹಾರ ನಡೆಸಿದ ಆರೋಪದ ಬಗ್ಗೆ ವಿಚಾರಣೆ ನಡೆಯುತ್ತಿದೆ. 

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅರಣ್ಯಭೂಮಿ ನೀಡಿದ ಸಂಬಂಧ ಕರ್ತವ್ಯ ಚ್ಯುತಿ ಬಗ್ಗೆ ಎನ್.ಎಲ್. ಶಾಂತಕುಮಾರ್ ವಿರುದ್ಧ ವಿಚಾರಣೆ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಹೊಗರೆ ಗ್ರಾಮದ ೧೨.೧೦ ಎಕರೆ ಜಮೀನು ಅರಣ್ಯ ಭೂಮಿ ಅಲ್ಲ ಎಂದು ಹಾಗೂ ಪಶ್ಚಿಮಘಟ್ಟಕ್ಕೆ ಸೇರಿಲ್ಲ ಎಂದು ಪತ್ರ ಹೊರಡಿಸಿದ್ದ ಆರೋಪದ ಬಗ್ಗೆ ಎಚ್.ಸಿ. ಕಾಂತರಾಜು ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT