ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಬಿಲ್ ಸ್ವಗತ......

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೂರು ವಾರಗಳಿಂದ ವಿಶ್ರಾಂತಿಯೇ ಇರಲಿಲ್ಲ. ದೆಹಲಿ. ಲಖನೌ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್ ಹೀಗೆ ಊರಿಂದ ಊರಿಗೆ ಅಲೆದಾಡಿದೆ. ಯಾವುದೇ ಊರಿಗೆ ಹೋದರೂ ಕಿಂಚಿತ್ತೂ ಬೇಸರವಾಗಲಿಲ್ಲ. ಪ್ರತಿ ಊರಿನಲ್ಲಿಯೂ ಭರ್ಜರಿ ಸ್ವಾಗತ ಸಿಕ್ಕಿದೆ. ಬ್ಯಾಡ್ಮಿಂಟನ್ ಪ್ರಿಯರು ನನಗೆ ಪ್ರೀತಿ ನೀಡಿ ಆರಾಧಿಸಿದ್ದಾರೆ. ಅಪ್ಪಿಕೊಂಡು ಸಂಭ್ರಮಿಸಿದ್ದಾರೆ. ನನ್ನ ಈ ವರ್ಷದ ಸುತ್ತಾಟಕ್ಕೆ ವಿದಾಯ ಹೇಳುವ ಹೊತ್ತು ಬಂದಿದೆ. ಆದರೆ, ಮೊದಲ ವರ್ಷ ಕಟ್ಟಿಕೊಂಡ ನೆನಪುಗಳ ಬುತ್ತಿ ಮನದಲ್ಲಿ ಶಾಶ್ವತ.


ಮಲೇಷ್ಯಾ, ಜರ್ಮನಿ, ಡೆನ್ಮಾರ್ಕ್, ರಷ್ಯಾ, ಥಾಯ್ಲೆಂಡ್, ಚೀನಾ, ಇಂಡೋನೇಷ್ಯಾ, ಹಾಂಕಾಂಗ್, ಸ್ಪೇನ್, ವಿಯೆಟ್ನಾಂ ದೇಶದ ಸ್ಪರ್ಧಿಗಳು ನನ್ನಲ್ಲಿ ಪಾಲ್ಗೊಂಡಿದ್ದರು. ಅವರು ಭಾರತದ ಬ್ಯಾಡ್ಮಿಂಟನ್ ಅಭಿಮಾನಿಗಳ ಮನಗೆದ್ದರು. `ಐಬಿಎಲ್' ಎನ್ನುವ ಹೊಸ ರೂಪದೊಂದಿಗೆ ಜನ್ಮ ತಾಳಿದ್ದೇನಲ್ಲಾ, ಆದ್ದರಿಂದ ನನಗೂ ಆರಂಭದಲ್ಲಿ ಆತಂಕವಿತ್ತು. ಬ್ಯಾಡ್ಮಿಂಟನ್ ಪ್ರಿಯರು ನನ್ನನ್ನು ಹೇಗೆ ಸ್ವೀಕರಿಸುತ್ತಾರೋ ಎನ್ನುವ ಕುತೂಹಲವಿತ್ತು.

ಈ ಮೊದಲು ಸಾಕಷ್ಟು ಲೀಗ್‌ಗಳು ನಡೆದಿದ್ದರೂ, ಅವು ಇಂಡಿಯನ್ ಪ್ರೀಮಿಯರ್ ಲೀಗ್‌ನಷ್ಟು ಖ್ಯಾತಿ ಗಳಿಸಿರಲಿಲ್ಲ. ಆದರೆ, ನಾನೀಗ ಪೂರ್ತಿ ನಿರಾಳ. ಬ್ಯಾಡ್ಮಿಂಟನ್ ಅಭಿಮಾನಿಗಳು ನೀಡಿದ ಪ್ರೋತ್ಸಾಹಕ್ಕೆ ಸಂತೃಪ್ತ. ಮೊದಲ ವರ್ಷವೇ ನನ್ನ ಖ್ಯಾತಿ ಉತ್ತುಂಗಕ್ಕೆ ಏರಲಿಲ್ಲವಾದರೂ, ಪ್ರಥಮ ಹೆಜ್ಜೆಗೆ ಸಿಕ್ಕ ಸ್ಪಂದನೆ ಖುಷಿ ನೀಡಿದೆ. ಮತ್ತಷ್ಟು ಹೊಸ ಭರವಸೆಗಳನ್ನು ಹುಟ್ಟು ಹಾಕಿದೆ. 18 ದಿನ ನಡೆದ ಟೂರ್ನಿಯಲ್ಲಿ 23 ವಿದೇಶಿ, 42 ಸ್ವದೇಶಿ ಆಟಗಾರರು ಪಾಲ್ಗೊಂಡು ತಮ್ಮ ಪ್ರತಿಭೆ ಮೆರೆದರು.

ಯುವ ಸ್ಪರ್ಧಿಗಳಾದ ಸಿಕಿ ರೆಡ್ಡಿ, ಪಿ.ಸಿ. ತುಳಸಿ, ಸುಮಿತ್ ರೆಡ್ಡಿ, ಅರವಿಂದ್ ಭಟ್, ಅರುಂಧತಿ ಪಂತವಾನೆ ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲವಾದರೂ, ಬೇಸರವಂತೂ ಆಗಲಿಲ್ಲ. ನನ್ನಲ್ಲಿ ಹರಿದಾಡಿದ ಹಣ ಬ್ಯಾಡ್ಮಿಂಟನ್ ಆಟಗಾರರಿಗೆ ಖುಷಿ ನೀಡಿದೆ. ಆದ್ದರಿಂದ ಯುವ ಆಟಗಾರರ ಹುಮ್ಮಸ್ಸೂ ಹೆಚ್ಚಾಗಿದೆ. ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತ ತನ್ನ ಪ್ರಾಬಲ್ಯ ಮೆರೆಯಲು ಶುರುವಾದಾಗಿನಿಂದ ರ್‍ಯಾಯಾಕೆಟ್ ಹಿಡಿಯುವ ಕೈಗಳ ಸಂಖ್ಯೆಯೂ ಹೆಚ್ಚಾಗಿದೆ.

ಪೋಷಕರೇ ತಮ್ಮ ಮಕ್ಕಳಿಗೆ ರ್‍ಯಾಯಾಕೆಟ್ ಹಿಡಿಯುವಂತೆ ಪ್ರೇರೇಪಿಸುತ್ತಿದ್ದಾರೆ. ನನ್ನಲ್ಲಿ ಆರಂಭದಲ್ಲಿ ಸಿಕ್ಕ ಬೆಂಬಲವೂ ಇದಕ್ಕೆ ಕಾರಣ. ಪಂದ್ಯಗಳು ರಾತ್ರಿಯ ವೇಳೆ ಆರಂಭವಾಗುತ್ತಿದ್ದ ಕಾರಣ ಸಾಕಷ್ಟು ರೋಚಕತೆಯೂ ಇರುತ್ತಿತ್ತು. ಕ್ಯಾರೋಲಿನ್ ಮರೀನ್, ಲೀ ಚೊಂಗ್ ವೀ, ಸಿಂಧು, ಮಾರ್ಕಿಸ್ ಕಿಡೊ, ಸೈನಾ ನೆಹ್ವಾಲ್ ಅವರ ಹೋರಾಟವನ್ನು ಕಣ್ತುಂಬಿಕೊಳ್ಳಲು ಎಲ್ಲೆಡೆಯೂ ಕಾತರದಿಂದ ಕಾದಿರುತ್ತಿದ್ದರು. ಕಿಡೊ, ಚೊಂಗ್ ವಿದೇಶಿ ಆಟಗಾರರಾದರೂ ಅವರು ನಮ್ಮ ದೇಶದ ಬ್ಯಾಡ್ಮಿಂಟನ್ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಆದ್ದರಿಂದಲೇ ವಿಶ್ವ ರ‍್ಯಾಂಕ್ ನ ಅಗ್ರ ಆಟಗಾರ ಚೊಂಗ್ ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನನ್ನಿಂದ ವಿದೇಶಿ ಆಟಗಾರರ ತಂತ್ರ ಕಲಿಯಲು  ಭಾರತದ ಸ್ಪರ್ಧಿಗಳಿಗೆ ಅನುಕೂಲವಾಯಿತು. ಅದರ ಜೊತೆಗೆ ವಿದೇಶಿ ಸ್ಪರ್ಧಿಗಳಿಗೆ ಭಾರತವೆಂದರೆ ಆಪ್ತಭಾವ ಮೂಡಿಸಲೂ ಸಾಧ್ಯವಾಯಿತು. ಹಾಂಕಾಂಗ್‌ನ ಯೂ ಯಾನ್, ಚೀನಾದ ತೈ ಜೂ ಯಿಂಗ್, ಸ್ಪೇನ್‌ನ ಮರೀನ್, ಡೆನ್ಮಾರ್ಕ್‌ನ ಕಾರ್ಸ್ಟೊನ್ ಮಾರ್ಗನ್‌ಸನ್ ಅವರು ಬೆಂಗಳೂರು, ಹೈದರಾಬಾದ್, ಮುಂಬೈ ನಗರಗಳಲ್ಲಿ ಅಡ್ಡಾಡಿ ಬಂದು ಸಂಭ್ರಮಪಟ್ಟರು. ಇದರ ಜೊತೆಗೆ ಸಾಕಷ್ಟು ಕ್ರಿಕೆಟ್ ತಾರೆಯರು ಬ್ಯಾಡ್ಮಿಂಟನ್ ವೀಕ್ಷಿಸಿ ರಂಗು ಹೆಚ್ಚಿಸಿದರು.  
 
ಈ ಎಲ್ಲಾ ಸಂಭ್ರಮದ ನಡುವೆಯೂ ಕೆಲ ಬೇಸರದ ಸಂಗತಿಗಳೂ ಘಟಿಸಿದವು. ಟೂರ್ನಿ ಆರಂಭಕ್ಕೆ ಮುನ್ನ ಹಲವು ವಿವಾದಗಳು ನನ್ನನ್ನು ಮುತ್ತಿಕೊಂಡವು. ಆಟಗಾರರ ಹರಾಜು ವಿವಾದವೂ ಕಾಡಿತು. ಕೆಲ ಆಟಗಾರರು ಬಹಿರಂಗವಾಗಿ ಕಿಡಿಕಿಡಿಯಾದರು. ವಿದೇಶಿ ಆಟಗಾರರಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದವು. ಈ ಸಣ್ಣ ಪುಟ್ಟ ಬೇಸರಗಳೇನೇ ಇದ್ದರೂ ಅವುಗಳಲ್ಲಿ ಯಾವುದೂ ನನಗೆ ಹಿನ್ನಡೆ ಉಂಟು ಮಾಡಲಿಲ್ಲ.

ಏಕೆಂದರೆ, ಮಗು ಅಂಬೆಗಾಲು ಇಡುವುದನ್ನು ಕಲಿಯುವಾಗ ಎಡವಿ ಬೀಳುವುದು ಸಹಜ ತಾನೆ? ಅದೇ ರೀತಿ ಕೆಲ ವಿಷಯಗಳಲ್ಲಿ ನಾನೂ ಎಡವಿರಬಹುದು. ಅವುಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಮುಂದಿನ ವರ್ಷ ಮತ್ತಷ್ಟು ಬದಲಾವಣೆ ಮತ್ತು ಹುರುಪಿನೊಂದಿಗೆ ಎರಡನೇ ಆವೃತ್ತಿಯಾಗಿ ನಿಮ್ಮ ಮುಂದೆ ಬರುತ್ತೇನೆ. ಮೊದಲ ವರ್ಷ ನೀಡಿದ ಬೆಂಬಲದಂತೆ ಮುಂದಿನ ವರ್ಷವೂ ಬೆನ್ನು ತಟ್ಟಿ.

ಮೂರು ವಾರಗಳಲ್ಲಿ ಅನುಭವಿಸಿದ ಸಿಹಿ-ಕಹಿ ನೆನಪುಗಳನ್ನು ಎಂದಿಗೂ ಮರೆಯಲಾರೆ. ವಿದೇಶಿ ಆಟಗಾರರಿಗೂ ಇಲ್ಲಿ ಸಿಕ್ಕ ಬೆಂಬಲ ನನಗೆ ಖುಷಿ ನೀಡಿದೆ. ವಿಶ್ವ ಬ್ಯಾಡ್ಮಿಂಟನ್ ಜಗತ್ತಿನ ಕಣ್ಣು ನನ್ನ ಮೇಲೆ ಬಿದ್ದಿದೆ. ಜಾಗತಿಕ ಬ್ಯಾಡ್ಮಿಂಟನ್‌ನಲ್ಲಿ `ದೊಡ್ಡಣ್ಣ' ಎನಿಸಿಕೊಳ್ಳುತ್ತಿರುವ ಚೀನಾ ಮತ್ತು ಮಲೇಷ್ಯಾ ಸಹ ಭಾರತದತ್ತ ಮುಖ ಮಾಡಿವೆ.

ಮುಂದಿನ ವರ್ಷಗಳಲ್ಲಿ ನಾನು ಇನ್ನಷ್ಟು ಖ್ಯಾತಿ ಗಳಿಸಲಿದ್ದೇನೆ ಎನ್ನುವ ಭರವಸೆಗೆ ಇದು ಆಧಾರವಾಗಿದೆ. ಇಷ್ಟು ದಿನ ನೀವು ತೋರಿದ ಪ್ರೀತಿ, ನೀಡಿದ ಬೆಂಬಲವನ್ನು ಹೇಗೆ ಮರೆಯಲಿ? ನನಗೀಗ ಮೊದಲ ಆವೃತ್ತಿಗೆ ವಿದಾಯ ಹೇಳುವ ಹೊತ್ತು ಬಂದಿದೆ.
-ಇಂತಿ ನಿಮ್ಮ ಪ್ರೀತಿಯ ಐಬಿಎಲ್.

ಐಬಿಎಲ್ ತಂಡಗಳು
ಹೈದರಾಬಾದ್ ಹಾಟ್‌ಷಾಟ್ಸ್
ಅವಧ್ ವಾರಿಯರ್ಸ್
ಪುಣೆ ಪಿಸ್ಟನ್ಸ್
ಮುಂಬೈ ಮಾಸ್ಟರ್ಸ್‌
ದೆಹಲಿ ಸ್ಮ್ಯಾಷರ್ಸ್‌
ಬೆಂಗಾ ಬೀಟ್ಸ್

ಐಬಿಎಲ್ ಪಂದ್ಯಗಳನ್ನು ನೋಡಿ ಸಾಕಷ್ಟು ಖುಷಿ ಪಟ್ಟಿದ್ದೇನೆ. ಬ್ಯಾಡ್ಮಿಂಟನ್‌ಗೂ ಉತ್ತಮ ಬೆಂಬಲ ಸಿಗುತ್ತಿರುವುದರಿಂದ ತುಂಬಾ ಸಂತೋಷವಾಗುತ್ತಿದೆ. ಇದೇ ರೀತಿಯ ಪ್ರೋತ್ಸಾಹ ಮುಂದುವರಿಯಲಿ.
-ಆರ್. ಅಶ್ವಿನ್, ಕ್ರಿಕೆಟಿಗ.

ಐಬಿಎಲ್ ಉತ್ತಮ ಆರಂಭ ಪಡೆಯುವುದು ಮುಖ್ಯವಾಗಿತ್ತು. ನಿರೀಕ್ಷೆಯಂತೆ ಉತ್ತಮ ಪ್ರಾರಂಭ ಸಿಕ್ಕಿದೆ. ಬ್ಯಾಡ್ಮಿಂಟನ್‌ಗೆ ನಗರ ಪ್ರದೇಶಗಳಲ್ಲಿ ಹೆಚ್ಚು ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕಿದೆ.
-ಪುಲ್ಲೇಲ ಗೋಪಿಚಂದ್.

ಚೊಚ್ಚಲ ಐಬಿಎಲ್‌ನಲ್ಲಿ ನಮ್ಮ ತಂಡ ತೋರಿದ ಪ್ರದರ್ಶನ ತೃಪ್ತಿ ನೀಡಿದೆ. ಗಾಯದ ಸಮಸ್ಯೆ ಸಾಕಷ್ಟು ಕಾಡಿದ್ದರಿಂದ ಸೆಮಿಫೈನಲ್‌ವರೆಗೆ ಸಾಗಲು ಸಾಧ್ಯವಾಗಲಿಲ್ಲ. ಮೊದಲ ವರ್ಷದ ಟೂರ್ನಿಯಲ್ಲಿ ಬಹಳಷ್ಟು ವಿಷಯಗಳನ್ನು ಕಲಿತಿದ್ದೇವೆ.
- ವಿಮಲ್ ಕುಮಾರ್, ಬೆಂಗಾ ಬೀಟ್ಸ್ ತಂಡದ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT